ವಿ. ಡಿ. ಪಲುಸ್ಕರ್
ವಿಷ್ಣು ದಿಗಂಬರ ಪಲುಸ್ಕರ್
ವಿಷ್ಣು ದಿಗಂಬರ ಪಲುಸ್ಕರ್ ಕಲಾತಪಸ್ವಿ, ಗಾನಗಂಧರ್ವ, ಗಾಯನಾಚಾರ್ಯ ಎಂದು ವಿಖ್ಯಾತರಾದವರು. ಅವರು ತಮ್ಮ ಗಾಯನದ ಮೂಲಕ ಸ್ವಾತಂತ್ರ್ಯ ಚಳವಳಿಗೂ ತೇಜಸ್ಸನ್ನು ತಂದರು.
ವಿಷ್ಣು ದಿಗಂಬರ ಪಲುಸ್ಕರ್ 1872ರ
ಆಗಸ್ಟ್ 18ರಂದು ದಕ್ಷಿಣ ಮಹಾರಾಷ್ಟ್ರದ ಕುರುಂದವಾಡ ಎಂಬಲ್ಲಿ ಜನಿಸಿದರು. ವಿಷ್ಣು ಇನ್ನೂ ಹುಡುಗನಾಗಿದ್ದಾಗಲೇ ಅವನ ಕಂಠ ಬಹು ಇಂಪಾಗಿತ್ತು.
ವಿಷ್ಣು ವಿದ್ಯಾಭ್ಯಾಸವನ್ನು ಮುಗಿಸಿ, ಆನಂತರ ಎಲ್ಲಿಯಾದರೂ ಗುಮಾಸ್ತೆಯ ಕೆಲಸಕ್ಕೆ ಸೇರಬೇಕು ಎಂದು ಯೋಚಿಸುತ್ತಿರದ್ದರು. ಅಷ್ಟರಲ್ಲಿ ಆಕಸ್ಮಿಕ ಒಂದರಲ್ಲಿ ಅವರ ಕಣ್ಣುಗಳಿಗೆ ಘಾತವಾಗಿ ಕಣ್ಣಿಗೆ ಚಿಕಿತ್ಸೆಯಾಗಬೇಕಾಯಿತು. ಕುರಂದವಾಡವನ್ನು ಬಿಟ್ಟು ಮೀರಜಿಗೆ ಹೋದರು. ಅಲ್ಲಿ ಕಣ್ಣು ಚಿಕಿತ್ಸೆ ಮಾಡುತ್ತಿದ್ದ ಡಾ. ಭಡಭಡೆಯವರು ಬಾಲಕ ವಿಷ್ಣುವಿನ ಸಂಗೀತವನ್ನು ಕೇಳಿ ಸಂಗೀತ ಶಿಕ್ಷಣ ಪಡೆಯಲು ಸಲಹೆ ಕೊಟ್ಟರು. ಜೊತೆಗೆ ಮೀರಜ್‍ನ ಮಹಾರಾಜರಿಗೆ ವೈದ್ಯರಾಗಿದ್ದ ಅವರು ಮಹಾರಾಜರಿಗೆ ಈ ಪ್ರತಿಭಾವಂತ ಹುಡುಗನ ವಿಷಯ ಹೇಳಿದರು. ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ಬಾಲಕೃಷ್ಣ ಬುವಾ ಎಂಬ ಶ್ರೇಷ್ಠ ಗಾಯಕರು ವಿಷ್ಣುವಿಗೆ ಸಂಗೀತ ಹೇಳಿ ಕೊಡುವಂತೆ ಏರ್ಪಾಟು ಮಾಡಿದರು.
ವಿಷ್ಣು ಹನ್ನೆರಡು ವರ್ಷಗಳ ಕಾಲ ಗ್ವಾಲಿಯರ‍್ ಘರಾನಾ ಶೈಲಿಯಲ್ಲಿ ಬಾಲಕೃಷ್ಣ ಬುವಾ ಅವರಲ್ಲಿ ಕಟ್ಟುನಿಟ್ಟಿನ ಸಂಗೀತ ಸಾಧನೆ ನಡೆಸಿ ಬಹು ಶ್ರೇಷ್ಠ ಸಂಗೀತಗಾರರಾದರು. ಆದರೆ ಸಂಗೀತ ಕಲಿಯುತ್ತಲೇ ತನ್ನ ಗುರುಗಳಂತಹ ಶ್ರೇಷ್ಠ ಸಂಗೀತಗಾರರಿಗೂ ನಾಲ್ಕು ಜನರ ಮಧ್ಯೆ ಗೌರವವಿಲ್ಲ ಎಂಬುದನ್ನು ಪಲುಸ್ಕರ್ ಕಂಡುಕೊಂಡರು. ಸಂಗೀತವೆನ್ನುವುದು ಶ್ರೀಮಂತರ ಮರ್ಜಿಗೆ ಸಿಲುಕಿದ್ದೇ ಇದಕ್ಕೆ ಕಾರಣ ಎಂದು ಅರಿತ ಅವರು 1896ರಲ್ಲಿ ಮೀರಜನ್ನು ಬಿಟ್ಟು ದೇಶ ಪರ್ಯಟನೆ ಕೈಕೊಂಡರು.
ಸೌರಾಷ್ಟ್ರದ ಪ್ರವಾಸದಲ್ಲಿದ್ದಾಗ ನಡೆದ ಘಟನೆಯೊಂದು ಪಲುಸ್ಕರರ ಜೀವನದ ದಿಕ್ಕನ್ನೇ ಬದಲಿಸಿತು. ಒಂದು ದಿನ ಪಲುಸ್ಕರರು ಜುನಾಗಡದ ಗಿರಿನಾರ ಪರ್ವತದ ಮೇಲಿರುವ ಭಗವತಿಯ ದರ್ಶನಕ್ಕೆ ಹೊರಟಿದ್ದರು. ಅವರ ಜೊತೆ ಅನೇಕ ಮಂದಿ ಶಿಷ್ಯರು. ಸುತ್ತಲಿನ ನಿಸರ್ಗದ ಚೆಲುವು ಪಲುಸ್ಕರರ ಮನಸ್ಸನ್ನು ಸೂರೆಗೊಂಡಿತು. ಶಿಷ್ಯರಿಗೆ ಮುಂದಕ್ಕೆ ಹೋಗುವಂತೆ ಹೇಳಿ, ತಾವು ಸೃಷ್ಟಿಯ ಸೊಬಗನ್ನು ಸವಿಯುತ್ತ ನಿಂತರು. ದೃಶ್ಯವನ್ನು ನೋಡುತ್ತ ಅವರು ಮೈಮರೆತರು. ಅವರ ಬಾಯಿಂದ ಗಾನಧಾರೆಯು ತಾನೇ ತಾನಾಗಿ ಪ್ರವಹಿಸಿತು. ಹೀಗೆಯೇ ಎಷ್ಟು ಹೊತ್ತು ಹಾಡುತ್ತಿದ್ದರೋ ಏನೋ! ’ಭಲೇ ಭೇಷ್’ ಎಂಬ ಮೆಚ್ಚಿಕೆಯ ಮಾತು ಕೇಳಿಸಿತು. ಪಲುಸ್ಕರರು ಹಾಡುವುದನ್ನು ನಿಲ್ಲಿಸಿ ಹಿಂದಿರುಗಿ ನೋಡಿದರು. ಸನ್ಯಾಸಿಯೊಬ್ಬರು ಹಿಂದೆ ನಿಂತಿದ್ದರು.
ಸನ್ಯಾಸಿಯೊಬ್ಬ ತಮ್ಮ ಸಂಗೀತಕ್ಕೆ ಬೆಲೆ ಕಟ್ಟುವುದೆ? ಅವರಿಗೆ ಸ್ವಲ್ಪ ಸಿಟ್ಟು ಬಂತು. ’ನಿನಗೆ ಸಂಗೀತದ ಗಂಧವಾದರೂ ಗೊತ್ತಿದೆಯೇ?’ ಎಂದು ಕೇಳಿದರು.
’ಅಲ್ಪ ಸ್ವಲ್ಪ ಉಂಟು’.
’ಹಾಗಾದರೆ ನನ್ನ ಸಂಗೀತದ ಬಗ್ಗೆ ನಿನಗೆ ಏನು ಅನಿಸುತ್ತದೆ?’
’ಒಟ್ಟಿನ ಮೇಲೆ ನಿನ್ನ ಹಾಡುಗಾರಿಕೆ ಸರಿಯಾಗಿದೆಯೆಂದೇ ಹೇಳಬಹುದು. ಆದರೂ ಅದರಲ್ಲಿ ಒಂದು ದೋಷ ಉಳಿದಿದೆ.’.
ತಮ್ಮ ಸಂಗೀತದಲ್ಲಿ ಯಃಕಶ್ಚಿತ್ ಸಾಧುವೊಬ್ಬನು ದೋಷವಿದೆಯೆಂದು ಹೇಳಿದ್ದನ್ನು ಕೇಳಿ ಪಲುಸ್ಕರರು ಅಚ್ಚರಿಗೊಂಡರು. ’ನನ್ನ ಸಂಗೀತದಲ್ಲಿ ದೋಷ ಇದೆ ಎಂದೆಯಲ್ಲ? ಏನು ದೋಷ ಇದೆ, ದೋಷ ಇಲ್ಲದೆ ಹಾಡುವುದು ಹೇಗೆ? ನೀನೇ ಹಾಡಿ ತೋರಿಸು ನೋಡೋಣ’ ಎಂದರು.
ಆಗ ಆ ಸಾಧು ’ನೀನು ಹೇಳಿದಾಗ ನಾನು ಹಾಡುವುದಿಲ್ಲ. ನನಗೆ ಇಷ್ಟ ಬಂದಾಗ ಹಾಡುವೆ. ನಿನಗೆ ಲಭ್ಯವಿದ್ದರೆ ಕೇಳಲು ಸಿಗುವುದು’ ಎಂದು ಬಿರುಸಾಗಿ ನುಡಿದು ಕ್ಷಣಾರ್ಧದಲ್ಲಿ ಅಲ್ಲಿಂದ ಅದೃಶ್ಯರಾಗಿ ಹೋದರು.
ಪಲುಸ್ಕರರಿಗೆ ಬೆರಗಾಯಿತು. ತಮ್ಮ ಕಲೆಯಲ್ಲಿ ಏನು ದೋಷವಿರಬಹುದು? ಆ ಸನ್ಯಾಸಿಗೆ ನಿಜವಾಗಿ ಹಾಡಲು ಬರುತ್ತದೆಯೆ? ಒಂದು ಕ್ಷಣ ನಂಬಿಕೆ ಬರಲೊಲ್ಲದು, ಇನ್ನೊಂದು ಕ್ಷಣ, ’ಇರಬಹುದೇನೋ! ’ಎನ್ನಿಸುವುದು. ಆತನ ಸಂಗೀತ ಕೇಳುವ ಅವಕಾಶ ಸಿಕ್ಕುವುದೇ ಎಂಬ ಪ್ರಶ್ನೆ ಮನಸ್ಸನ್ನು ಕಾಡುವುದು. ಅಂತೂ ಅವರ ಮಾತುಗಳನ್ನೇ ಮೆಲುಕು ಹಾಕುತ್ತ ಮುಂದಕ್ಕೆ ನಡೆದರು.
ಇದ್ದಕ್ಕಿದ್ದ ಹಾಗೇ ಬೆಟ್ಟದ ಇನ್ನೊಂದು ದಿಕ್ಕಿನಿಂದ ಸುಮಧುರ ಕರ್ಣರಸಾಯನವಾದ ಹಾಡು ಕೇಳಿ ಬಂತು. ಎಷ್ಟು ಇಂಪಾದ ಧ್ವನಿ! ಆಶ್ಚರ್ಯದಿಂದ, ಸಂತೋಷದಿಂದ ಸರಸರನೆ ಮುಂದಕ್ಕೆ ಹೆಜ್ಜೆ ಹಾಕಿದರು. ಅಲ್ಲಿ ಹೋಗಿ ನೋಡಿದರೆ ತಮಗೆ ಮೊದಲು ಭೇಟಿಯಾದ ಸನ್ಯಾಸಿಯೇ ದೇವಿಯ ಮೂರ್ತಿಯ ಎದುರು ಕುಳಿತು ಪರವಶರಾಗಿ ಹಾಡುತ್ತಿದ್ದಾರೆ! ಈ ಸಂಗೀತ ಮನುಷ್ಯರ ಲೋಕದ ಸಂಗೀತವಲ್ಲ ಎನ್ನುವಷ್ಟು ಮಧುರ ಅದು. ಆ ಅಲೌಕಿಕ, ಅದ್ಭುತ ಗಾನವನ್ನು ಕೇಳಿ ತಮ್ಮ ಉದ್ಧಟ ವರ್ತನೆಗೆ ಪಶ್ಚಾತ್ತಾಪ ಪಟ್ಟು ಪಲುಸ್ಕರರು ಅ ಸನ್ಯಾಸಿಯ ಕಾಲಿಗೆರಗಿದರು. ಸಂಗೀತದಲ್ಲಿ ಇಂತಹ ಅದ್ಭುತ ಸಿದ್ಧಿ ಹೇಗೆ ಪ್ರಾಪ್ತವಾಯಿತೆಂಬುದನ್ನು ತಿಳಿಸಲು ಬಿನ್ನವಿಸಿಕೊಂಡರು. ಆಗ ಸನ್ಯಾಸಿಯು ’ಆಡಂಬರದ ವಸ್ತ್ರಗಳನ್ನು ಧರಿಸಿ ಗರ್ವದಿಂದ ತಮ್ಮ ಕಲೆಯನ್ನು ಮೆರೆಯುವ ಜನರಿಗೆ ಸಂಗೀತ ಸಿದ್ಧಿಸುವುದಿಲ್ಲ. ನಾನು ದೋಷವೆಂದು ಹೇಳಿದ್ದು ನಿನ್ನ ಗಾಯನದಲ್ಲಿ ಅಲ್ಲ, ನಿನ್ನ ಆಚರಣೆಯಲ್ಲಿ’ ಎಂದು ಸ್ಪಷ್ಟತೆಯಿಂದ ನುಡಿದರು.
ಮರುಕ್ಷಣವೇ ಪಲುಸ್ಕರರು ತಮ್ಮ ಮೈಮೇಲಿನ ಬೆಲೆ ಬಾಳುವ ವಸ್ತ್ರಗಳನ್ನೆಲ್ಲ ಕಳಚಿ ಬಿಸಾಡಿ ತಮ್ಮನ್ನು ಶಿಷ್ಯನನ್ನಾಗಿ ಮಾಡಿಕೊಳ್ಳಲು ಪ್ರಾರ್ಥಿಸಿದರು. ಸನ್ಯಾಸಿಯು, ’ನಿನಗೆ ಸನ್ಯಾಸಿಯಾಗುವ ಯೋಗವಿಲ್ಲ. ಆಚರಣೆಯಲ್ಲಿ ನಮ್ರತೆಯನ್ನು ಬೆಳೆಸಿಕೋ. ಜನರ ಬೆಂಬಲ ಮತ್ತು ಪುರಸ್ಕಾರ ಸಿಗುತ್ತದೆ. ಉತ್ತರ ದಿಕ್ಕಿಗೆ ಪಂಜಾಬಿನ ಕಡೆ ಹೋಗು. ಅಲ್ಲಿ ನಿನಗೆ ಎಲ್ಲವೂ ಅನುಕೂಲವಾಗುವುದು’ ಎಂದು ಹೇಳಿ ಹರಸಿದರು.
ಸನ್ಯಾಸಿಯ ಮಾತು ಪಲುಸ್ಕರರಿಗೆ ಸ್ಫೂರ್ತಿಯನ್ನು ಕೊಟ್ಟಿತು. ಅವರು ಉತ್ತರ ಭಾರತದ ಪರ್ಯಟನೆ ಕೈಗೊಂಡರು. ಗ್ವಾಲಿಯರ‍್ ಆಗ ಸಂಗೀತಗಾರರ ಕಾಶಿ ಎಂದು ಪ್ರಸಿದ್ಧವಾಗಿತ್ತು. ಅಲ್ಲಿಗೆ ಬರುವ ಹೊತ್ತಿಗೆ ಪಲುಸ್ಕರರು ಹುಟ್ಟು ಗಾಯಕರು ಎಂದು ಕೀರ್ತಿ ಪಡೆದಿದ್ದರು. ಗ್ವಾಲಿಯರಿನಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿದರು. ಆಪ್ಟೆ ಗುರೂಜಿ, ಬಾಬಾ ಗುರೂಜಿ, ಶಂಕರ ಪಂಡಿತ, ಅಮೀನಖಾನ ಮೊದಲಾದವರು ಆಗ ಸಂಗೀತ ಕಲೆಯಲ್ಲಿ ಬಹು ಕೀರ್ತಿವಂತರು. ಅವರೆಲ್ಲ ಪಲುಸ್ಕರರ ಗಾನಕಲೆಯನ್ನು ಬಹುವಾಗಿ ಮೆಚ್ಚಿಕೊಂಡರು. ಮಹಾರಾಜ ಮಾಧವರಾವ ಸಿಂಧಿಯಾ ಅವರು ಪಲುಸ್ಕರರನ್ನು ಆಮಂತ್ರಿಸಿ ಅವರ ಸಂಗೀತ ಕಛೇರಿಯನ್ನೇರ್ಪಡಿಸಿ ಗೌರವಿಸಿದರು.
ಈಗ ಪಲುಸ್ಕರರಿಗೆ ಸನ್ಯಾಸಿಯ ಆದೇಶದಂತೆ ಪಂಜಾಬಿಗೆ ಹೋಗುವ ಯೋಚನೆ. ಅಷ್ಟು ಹೊತ್ತಿಗೆ ಜಲಂಧರಿನಲ್ಲಿ ಸಂತ ಹರಿವಲ್ಲಭ ಸ್ವಾಮಿಗಳ ಪುಣ್ಯ ತಿಥಿ ಸಮಾರಂಭಕ್ಕೆ ಪಲುಸ್ಕರರನ್ನು ಆಮಂತ್ರಿಸಲು ಸಮಾರಂಭದ ಪ್ರಧಾನ ವ್ಯವಸ್ಥಾಪಕರಾದ ಲೋಲಾರಾಮರು ಬಂದರು. ಜಲಂಧರಿನಲ್ಲಿ 1898ರಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಪಲುಸ್ಕರರು ವಿಜಯ ದುಂದುಭಿಯನ್ನು ಮೊಳಗಿಸಿದರು. ತಮ್ಮ ಭವ್ಯ ಆಕಾರ, ವಿನಮ್ರ ವ್ಯವಹಾರ, ಗಾಯನ ಪಟುತ್ವ ಮತ್ತು ಮಧುರ ಶಾರೀರದಿಂದ ಎಲ್ಲರನ್ನೂ ಪ್ರಭಾವಿತಗೊಳಿಸಿದರು.
ಓಕಾರಾದ ಬಾಬಾ ಖೇಮಸಿಂಗ ಬೇಡಿ ಎಂಬುವರು ಪಂಜಾಬಿನಲ್ಲಿಯೇ ಅತಿ ಧನವಂತ ವ್ಯಕ್ತಿಯೆಂದು ಹೆಸರಾದವರು. ತಮ್ಮ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡಲು ಪಲುಸ್ಕರರನ್ನು ಅವರು ಆಮಂತ್ರಿಸಿದರು. ನೂರಾರು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಶಿಕ್ಷಣವನ್ನು ಕೊಡುವ ಸಂಗೀತ ಮಹಾವಿದ್ಯಾಲಯವೊಂದನ್ನು ಪ್ರಾರಂಭಿಸಬೇಕು ಎಂದು ಅವರು ತೀರ್ಮಾನಿಸಿದರು. ಓಕಾರಾದಿಂದ ಹೊರಟು ಲಾಹೋರಿಗೆ ಬಂದರು. ಅಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳೊಡನೆ ಭೇಟಿ ಮಾಡಿದರು. 1901ನೇ ಇಸವಿ ಮೇ 5ರಂದು ಗಂಧರ್ವ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.
ಸಾರ್ವಜನಿಕರ ಸಹಾಯದ ಮೇಲೆ ನಿಂತ ಮೊಟ್ಟಮೊದಲನೆಯ ಸಂಗೀತ ಸಂಸ್ಥೆ ಇದು.
ಗಂಧರ್ವ ಮಹಾವಿದ್ಯಾಲಯ ಪ್ರಾರಂಭವಾದಾಗ ಕೇವಲ ಹದಿನೈದು ವಿದ್ಯಾರ್ಥಿಗಳಿದ್ದರು. ಆದರೆ ಬಹು ಬೇಗ ಆದರೆ ಕೀರ್ತಿ ಬೆಳೆಯಿತು. ಆರೇಳು ವರ್ಷಗಳ ಕಾಲಾವಧಿಯಲ್ಲಿ ಐದು ನೂರು ವಿದ್ಯಾರ್ಥಿಗಳನ್ನೊಳಗೊಂಡ ಮಹಾ ವಿದ್ಯಾಲಯವಾಯಿತು. ಸಂಗೀತದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವಂತೆ ಪುಸ್ತಕಗಳು ಪ್ರಕಟವಾಗಲು ಏರ್ಪಾಟು ಮಾಡಿದರು. ಸಂಗೀತದ ಪಠ್ಯಪುಸ್ತಕಗಳನ್ನು ಪ್ರಕಟಿಸಲು ಮುದ್ರಣಾಲಯವನ್ನು ಸ್ಥಾಪಿಸಲಾಯಿತು. ಈ ವಿದ್ಯಾಲಯದಿಂದಲೇ ’ಸಂಗೀತಾಮೃತ ಪ್ರವಾಹ' ಎಂಬ ಮಾಸ ಪತ್ರಿಕೆಯನ್ನು ಹೊರಡಿಸಲಾಯಿತು. ಈ ಪತ್ರಿಕೆಯಲ್ಲಿ ಜನಪ್ರಿಯವಾದ ದೇಶಭಕ್ತಿ ಗೀತೆಗಳಿಗೆ ರಾಗ ಪ್ರಸ್ತಾರಗಳನ್ನು ಹಾಕಿ ಅವುಗಳನ್ನು ಪ್ರಚುರಗೊಳಿಸಿದರು. ಗೋಪಾಲಕೃಷ್ಣ ಗೋಖಲೆ ಮೊದಲಾದ ರಾಷ್ಟ್ರೀಯ ನಾಯಕರು ವಿದ್ಯಾಲಯಕ್ಕೆ ಭೇಟಿಕೊಟ್ಟು ಪಲುಸ್ಕರರ ಶ್ರೇಷ್ಠ ಕಾರ್ಯವನ್ನು ಮೆಚ್ಚಿ ಹೊಗಳಿದರು. ಶ್ರೀಮತಿ ಅನಿಬೆಸೆಂಟರು ಕಾಶಿಯ ಹಿಂದೂ ಕಾಲೇಜಿಗೆ ಗಂಧರ್ವ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ ಸಂಗೀತಗಾರರನ್ನೇ ಕಳಿಸಿಕೊಡಲು ಪಲುಸ್ಕರರಿಗೆ ಕೇಳಿಕೊಂಡರು. ಲಾಹೋರಿಗಿಂತ ಭಾರತದಲ್ಲಿ ಮಧ್ಯ ಸ್ಥಳದಲ್ಲಿರುವ ದೊಡ್ಡ ನಗರ ಒಂದರಲ್ಲಿ ಇಂತಹ ಶಿಕ್ಷಣ ಕೊಡಲು ಸಂಸ್ಥೆ ಇರಬೇಕು ಅನಿಸಿ ಮುಂಬಯಿಯಲ್ಲಿ ಒಂದು ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನ ಮಾಡಿದರು. 1908ರಲ್ಲಿ ದಸರೆಯ ಶುಭ ಕಾಲದಲ್ಲಿ ಗಂಧರ್ವ ಮಹಾವಿದ್ಯಾಲಯದ ಪ್ರಾರಂಭೋತ್ಸವವು ನಡೆಯಿತು. ಯಾರೇ ಆದರೂ ಹಣ ಕೊಟ್ಟು ಟಿಕೆಟ್ ಕೊಂಡು ಒಳ್ಳೆಯ ಸಂಗೀತಗಾರರ ಕಛೇರಿ ಕೇಳಲು ಸಾಧ್ಯವಾಗುವ ಹಾಗೆ ಮಾಡಿದವರು ಪಲುಸ್ಕರರು. ಶಾಸ್ತ್ರೀಯ ಸಂಗೀತ ಅರಮನೆಗಳಿಂದ ಜನಸಾಮಾನ್ಯರಿಗೆ ಬಂದ ಹಾಗಾಯಿತು. ದೇಶದಲ್ಲಿ ಸಂಚಾರ ಕೈಗೊಂಡರು, ಊರೂರುಗಳಲ್ಲಿ ಕಛೇರಿ ಮಾಡಿ ಹಣ ಸಂಪಾದಿಸಿದರು, ಅದನ್ನೆಲ್ಲ ತಾವು ಕಟ್ಟಿದ ಸಂಗೀತ ವಿದ್ಯಾಲಯಕ್ಕಾಗಿ ಮಾಡಿದ ಸಾಲಕ್ಕೆ ಕಟ್ಟಿದರು. ಅವರು ಸಾಯುವ ಹೊತ್ತಿಗೆ ಅವರ ಸಾಲ ಪೂರ್ತಿ ತೀರಿ ಹೋಗಿತ್ತು.
ವಿಷ್ಣು ದಿಗಂಬರ ಪಲುಸ್ಕರರು ತಮ್ಮ ನಾಡು ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯಲಿಲ್ಲ. ರಾಷ್ಟ್ರೀಯ ಚಟುವಟಿಕೆಗಳಿಂದ ದೂರ ಉಳಿದಿರಲಿಲ್ಲ. ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಉಗ್ರ ರಾಷ್ಟ್ರೀಯ ವಿಚಾರಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ಪಲುಸ್ಕರರಷ್ಟು ಬೇರೆ ಯಾವ ಸಂಗೀತಗಾರರೂ ನೇರವಾಗಿ ಸ್ವಾತಂತ್ರ‍್ಯದ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಎಂದೇ ಹೇಳಬಹುದು. ಲಾಹೋರಿನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದ ಮೂಲಕ ಜನತೆಯಲ್ಲಿ ರಾಷ್ಟ್ರೀಯ ಭಾವನೆಯನ್ನು ಕೆರಳುವಂತೆ ಮಾಡಿದರು.
’ಭಾರತ್ ಹಮಾರಾ ದೇಶ್ ಹೈ’, ’ವಂದೇಮಾತರಂ’ ಮೊದಲಾದ ಪ್ರಸಿದ್ಧ ದೇಶಭಕ್ತಿ ಗೀತೆಗಳನ್ನು ಹಾಡಲು ಸುಲಭವಾಗಿರುವಂತಹ ಹಾಗೂ ಮನಸ್ಸನ್ನು ಸೆಳೆಯುವಂತಹ ಹೊಸ ರಾಗಗಳಿಗೆ ಹೊಂದಿಸಿದರು. ಹಾಡಲು ಅನುಕೂಲವಾಗಿರುವಂತೆ ತಮ್ಮ ’ಸಂಗೀತಾಮೃತ ಪ್ರವಾಹ’ ಪತ್ರಿಕೆಯಲ್ಲಿ ಅಚ್ಚು ಮಾಡಿದರು. ಆ ಗೀತೆಗಳು ಅತ್ಯಂತ ಜನಪ್ರಿಯವಾದುವು. ಎಲ್ಲರೂ ಅವನ್ನು ಹಾಡುವವರೇ!
ಪಲುಸ್ಕರರು ಸಾರ್ವಜನಿಕ ಕಾರ್ಯಕ್ರಮಗಳ ಪ್ರಾರಂಭದಲ್ಲಿ ದೇಶಭಕ್ತಿಯ ಗೀತೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಹಾಕಿದರು. ಸಾರ್ವಜನಿಕ ಸಮಾರಂಭಗಳಲ್ಲಿ ’ವಂದೇಮಾತರಂ' ಗೀತೆಯನ್ನು ಹಾಡುವ ಪದ್ಧತಿಯನ್ನು ಪ್ರಾರಂಭಿಸಿದರು. 1915ರಿಂದ ಮೊದಲುಗೊಂಡು ಮುಂದಿನ ಎಲ್ಲ ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇಮಾತರಂ ರಾಷ್ಟ್ರಗೀತೆಯನ್ನು ಹಾಡಲು ತಪ್ಪದೆ ಪಲುಸ್ಕರರನ್ನು ಆಮಂತ್ರಿಸಲಾಗುತ್ತಿತ್ತು. 1923ರ ಕಾಕಿನಾಡ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಒಂದು ಧಾರ್ಮಿಕ ಭಾವನೆಯನ್ನು ಹಾಡಬಾರದು ಎಂಬ ಅಧ್ಯಕ್ಷರ ಆಜ್ಞೆಯನ್ನು ಮೀರಿ ವಂದೇಮಾತರಂ ಹಾಡಿ ತಮ್ಮ ಆಪ್ರತಿಮ ಧೈರ್ಯ, ಸ್ವಾಭಿಮಾನ ಮತ್ತು ಪ್ರಖರ ರಾಷ್ಟ್ರಾಭಿಮಾನವನ್ನು ಪ್ರಕಟಪಡಿಸಿದರು.
ಪಲುಸ್ಕರರು ತುಳಸಿರಾಮಾಯಣದ ಅನೇಕ ಚೌಪಾಯಿ, ದೋಹಾ ರೀತಿಯ ಪದ್ಯಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದರು. ಪಲುಸ್ಕರರು ಹಾಡಿದ ತುಳಸಿದಾಸರ ಜಬ ಜಾನಕಿನಾಥ ಸಹಾಯ ಕರೆ ಮತ್ತು ಸಂತ ಸೂರದಾಸರ ನಿರ್ಬಲತೆ ಬಲರಾಮ ಎಂಬ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ. ”ರಘುಪತಿ, ರಾಘವ ರಾಜಾರಂ, ಪತಿತ ಪಾವನ ಸೀತಾರಾಂ" ಎಂಬ ಭಜನೆಯನ್ನು ಜನಪ್ರಿಯ ಗೊಳಿಸಿದರು.
1931ರ ಆಗಸ್ಟ್ 21ರಂದು ’ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಜಪದ ನಿನಾದದ ಮಧ್ಯೆ ಶ್ರೀರಾಮಚಂದ್ರನ ಪರಮಭಕ್ತರಾದ ಪಲುಸ್ಕರರ ಪ್ರಾಣಪಕ್ಷಿಯು ಹಾರಿಹೋಯಿತು.
ವಿಷ್ಣು ದಿಗಂಬರ ಪಲುಸ್ಕರರಿಗೆ ಸಂಗೀತವು ಜೀವನದ ತಿರುಳಾಗಿತ್ತು. ಅದೇ ತಪಸ್ಸಾಗಿತ್ತು. ದೇಶಸೇವೆಗೆ ಭಗವಂತನ ಸೇವೆಗೆ ಅದೇ ಸಾಧನವಾಗಿತ್ತು.
On the birth anniversary of great musician Pandit Vishnu Digambar Paluskar
ಕಾಮೆಂಟ್‌ಗಳು