ಸಚ್ಚಿದಾನಂದ ರೌತ್ರೆ
ಸಚ್ಚಿದಾನಂದ ರೌತ್ರೆ
ಸಚ್ಚಿದಾನಂದ ರೌತ್ರೆ ಜ್ಞಾನಪೀಠ ಪುರಸ್ಕೃತ ಒಡಿಯಾ ಭಾಷಾ ಸಾಹಿತಿ.
ಸಚ್ಚಿದಾನಂದ ರೌತ್ರೆ 1916ರ ಮೇ 13ರಂದು ಖುರ್ದಾ ಬಳಿಯ ಗುರುಜಾಂಗ್‌ನಲ್ಲಿ ಜನಿಸಿದರು. ಅವರು ಬಂಗಾಳದಲ್ಲಿ ಬೆಳೆದು ಶಿಕ್ಷಣ ಪಡೆದರು. ಅವರು ಗೋಲಪಲ್ಲಿಯ ತೆಲುಗು ರಾಜಮನೆತನದ ರಾಜಕುಮಾರಿಯನ್ನು ವಿವಾಹವಾದರು.
ಸಚ್ಚಿದಾನಂದ ರೌತ್ರೆ ಕಳೆದ ಶತಮಾನದ ಅತ್ಯಂತ ಶಕ್ತರಾದ ಕವಿ. 1925ರಲ್ಲಿ ಈತ ಕವಿತೆಯನ್ನು ಬರೆಯಲು ತೊಡಗಿದರು. ಎಳೆತನದಲ್ಲಿ ಪ್ರಣಯ ಕವಿತೆಗಳನ್ನು ಬರೆದರು. 1931ರಿಂದ ಮೊದಲ್ಗೊಂಡು ಈತ ಕ್ರಾಂತಿಕಾರಕ ಕವಿತೆಗಳನ್ನು ಬರೆಯತೊಡಗಿದರು. 1932ರಲ್ಲಿ ಪ್ರಕಟಗೊಂಡ 'ಪಥೇಯ' ಅವರ ಪ್ರಮುಖ ಮೈಲುಗಲ್ಲು. ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳಿಗೂ ಇರುವ ಅಸಮಾನತೆಯನ್ನು ಈತ ಖಂಡಿಸುತ್ತ ಬಂದರು. ಮಾನವ ಪ್ರಕೃತಿಯ ವಿಷಯದಲ್ಲಿ ಇವರ ಭಾವನೆಗಳನ್ನು 'ಪಾಂಡುಲಿಪಿ' ಎಂಬ ಗ್ರಂಥ ತೋರಿಸುತ್ತದೆ. ಇವರ 'ಭಾನುಮತಿರ ದೇಶ' ಎಂಬ ಕವಿತೆ ಸರಳ ರಗಳೆಯಲ್ಲಿ ರಚಿತವಾಗಿರುವ ಬಹುಶ್ರೇಷ್ಠ ಕವಿತೆ. ಇದು ಇವರಿಗೆ ಒಡಿಯಾ ಸಾಹಿತ್ಯದಲ್ಲಿ ಉನ್ನತ ಸ್ಥಾನ ಗಳಿಸಿಕೊಟ್ಟಿತು. 'ಬಾಜಿ ರೌತ್' ಎಂಬುದು ಒಂದು ಶ್ರೇಷ್ಠ ಪದ್ಯವೆನಿಸಿದೆ. ಧೆಂಕನಾಳ್ ರಾಜ್ಯದಲ್ಲಿ ನಡೆದ ಉತ್ಕ್ರಾಂತಿಯಲ್ಲಿ ಬಾಜಿ ರೌತನ ಮರಣವೇ ಇದರ ವಸ್ತು. ಬಾಜಿ ರೌತ ಧೆಂಕನಾಳಿನ ಒಬ್ಬ ಚಿಕ್ಕ ಹುಡುಗ. ತನ್ನನ್ನು ಬ್ರಾಹ್ಮಣಿ ನದಿಯನ್ನು ದಾಟಲು ದೋಣಿಯಲ್ಲಿ ಕೂರಿಸಿಕೊಂಡು ಹೋಗದಿದ್ದುದಕ್ಕಾಗಿ ಪೊಲೀಸಿನವನು ಇವನನ್ನು ಗುಂಡಿಕ್ಕಿ ಕೊಂದ. ಈ ಕವಿತೆ ಇಂಗ್ಲಿಷ್ ಮತ್ತು ಇತರ ಯುರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿದೆ (ದಿ ಬೋಟ್ಮನ್ ಬಾಯ್ ಅಂಡ್ ಫಾರ್ಟಿ ಅದರ್ ಪೊಯೆಮ್ಸ್). ಸಮೃದ್ಧ ಕವಿಯಾದ ಇವರು ಇಪ್ಪತ್ತು ಸಂಕಲನಗಳನ್ನು ಪ್ರಕಟಿಸಿದರು. ಒಡಿಶಾದ ಹಳ್ಳಿಯ ಜೀವನದೊಂದಿಗೆ ಬೆಸೆದುಕೊಂಡಿರುವ ಅವರ 'ಪಲ್ಲಿಶ್ರೀ' ಪ್ರಖ್ಯಾತವಾದುದು. ‘ಪ್ರತಿಮಾ ನಾಯಕ್' ನಗರದ ಹುಡುಗಿಯ ಬದುಕಿನ ಕಷ್ಟಗಳು ಮತ್ತು ತಲ್ಲಣಗಳನ್ನು ಚಿತ್ರಿಸುತ್ತದೆ. ಅವರು ತಮ್ಮನ್ನು 'ಜನರ ಕವಿಗಳು' ಎಂದು ಕರೆದುಕೊಳ್ಳುವ ಬರಹಗಾರರ ಗುಂಪಿಗೆ ಸೇರಿದವರು. ರೌತ್ರೇ ಅವರು ಧರ್ಮದ ವಿಚಾರನ್ನು ಆಧರಿಸಿದ ಕೆಲವು ಕವಿತೆಗಳನ್ನೂ ಪ್ರಕಟಿಸಿದರು. ಅವರ "ಛೋಟಾ ಮೋರಾ ಗನ್ ತಿ" ಮತ್ತೊಂದು ಜನಪ್ರಿಯ ರಚನೆ.
ಸಚ್ಚಿದಾನಂದ ರೌತ್ರೆ ಅವರಿಗೆ ಪದ್ಮಶ್ರೀ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ
ಗೌರವಗಳು ಸಂದಿದ್ದವು.
ಸಚ್ಚಿದಾನಂದ ರೌತ್ರೆ ಅವರು 2004ರ ಆಗಸ್ಟ್ 21ರಂದು ಕಟಕ್‌ನಲ್ಲಿ ನಿಧನರಾದರು.
On the birth anniversary of great Odia poet Sachidananda Routray
ಕಾಮೆಂಟ್‌ಗಳು