ಭೈರವಿ ಕೆಂಪೇಗೌಡರು
ಭೈರವಿ ಕೆಂಪೇಗೌಡರು
ಭೈರವಿ ಕೆಂಪೇಗೌಡರು ಮಹಾನ್ ಸಂಗೀತಗಾರರಾಗಿ ಪ್ರಸಿದ್ಧರಾಗಿದ್ದವರು.
ಇವರ ಜನನ ಮರಣಗಳ ಬಗ್ಗೆ ಯಾವ ಖಚಿತ ವಿವರವೂ ಸ್ಪಷ್ಟವಿಲ್ಲ. ಭೈರವಿ ರಾಗವನ್ನು ಆಲಾಪನೆ ಮಾಡುವುದರಲ್ಲಿಯೂ, ಆ ರಾಗದಲ್ಲಿ ಪಲ್ಲವಿ ಮತ್ತು ಕೀರ್ತನೆಗಳನ್ನು ಹಾಡುವುದರಲ್ಲಿಯೂ ಅದ್ವಿತೀಯರಾಗಿದ್ದುದರಿಂದ ಇವರಿಗೆ ಭೈರವಿ ಕೆಂಪೇಗೌಡರು ಎಂದೇ ಹೆಸರು ಬಂತು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಬೇವೂರು ಗೌಡರ ಜನ್ಮಸ್ಥಳ. ಅಪ್ಪಟ ಬೇಸಾಯಗಾರ ಕುಟುಂಬದವರಾದ ಕೆಂಪೇಗೌಡರಿಗೆ ಸಂಗೀತ ದೈವದತ್ತ ಕಲೆಯಾಗಿ ಬಂದಂತೆ ಕಾಣುತ್ತದೆ.
ಪ್ರಾರಂಭದಲ್ಲಿ ಕೆಂಪೇಗೌಡರು ಹಳ್ಳಿಯ ಹಾಡುಗಳನ್ನು ರಾಗವಾಗಿ ಹಾಡುತ್ತಿದ್ದರಂತೆ. ಅಭಿಮಾನಿಯೊಬ್ಬರ ಸಲಹೆಯ ಮೇರೆಗೆ ಗೌಡರು ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣ ಮಾಡಿ ಅಲ್ಲಿದ್ದ ತಮ್ಮ ಬಂಧುಗಳೊಡನೆ ಸಮಾಲೋಚನೆ ನಡೆಸಿ ಪಟ್ಟಂ ಸುಬ್ರಹ್ಮಣ್ಯ ಅಯ್ಯರ್ ಅವರ ಶಿಷ್ಯರಾದರು.
ತ್ಯಾಗರಾಜರ ಜನ್ಮಸ್ಥಳವಾದ ತಿರುವಾಯೂರಿನಲ್ಲಿ ಪಟ್ಟಂ ಅವರಂಥ ಗುರುಗಳು ದೊರೆತುದು ಕೆಂಪೇಗೌಡರ ಭಾಗ್ಯ. ಗೌಡರ ಜೊತೆಯಲ್ಲಿಯೇ ವಾಸುದೇವಾಚಾರ್ಯರೂ ಅಯ್ಯರ್ ಅವರಲ್ಲಿ ಸಂಗೀತ ಕಲಿತರೆಂದೂ ಅನಂತರ ಚಾಮರಾಜ ಒಡೆಯರ ಆಳ್ವಿಕೆಯ ಕಡೆಯ ದಿನಗಳಲ್ಲಿ ಆಸ್ಥಾನ ವಿದ್ವಾಂಸರಾಗಿ ಅರಮನೆ ಸೇರಿದರೆಂದೂ ತಿಳಿದುಬರುತ್ತದೆ. ಶಿಷ್ಯನ ಪಾತ್ರಾಪಾತ್ರತೆಯನ್ನು ತಿಳಿಯುವ ಸಲುವಾಗಿ ಗುರುಗಳು ಗೌಡರಿಗೆ ತಮ್ಮ ಹಸುಕಾಯುವ ಕೆಲಸ ವಹಿಸಿದರಂತೆ. ಸದಾ ಘನ ವಿದ್ವಾಂಸರಿಂದ ತುಂಬಿರುತ್ತಿದ್ದ ಗುರುಗೃಹದಲ್ಲಿ ಅಪೂರ್ವ ರಾಗಸಂಯೋಜನೆ, ಚರ್ಚೆ ಮತ್ತು ಕಛೇರಿಗಳು ನಿರಂತರವಾಗಿ ನಡೆಯುತ್ತಿದ್ದುವಾದ್ದರಿಂದ ಈ ಎಲ್ಲವನ್ನೂ ಹೊರನಿಂತು ಕೇಳುವ ಅವಕಾಶ ಗೌಡರಿಗೆ ದೊರೆತುದೊಂದು ಅಪೂರ್ವ ಸಂಗತಿ. ಇದನ್ನು ಅವರು ತಮ್ಮ ಭಾಗ್ಯವೆಂದೇ ತಿಳಿದರಂತೆ.
ಒಂದು ದಿನ ರಾತ್ರಿ ಅಯ್ಯರ್ ಅವರ ಮಹಡಿಯಲ್ಲಿ ದೊಡ್ಡ ದೊಡ್ಡ ಸಂಗೀತಗಾರರೆಲ್ಲ ಸೇರಿದ್ದರು. ಅಯ್ಯರ್ ಅವರು ತಮಗೆ ಬಹು ಪ್ರಿಯವಾದ ಭೈರವಿಯನ್ನು ಆರಂಭಿಸಿದ್ದರು. ಅದು ಎಷ್ಟು ಹೊತ್ತಾದರೂ ಮುಗಿಯುವಂತಿರಲಿಲ್ಲ. ರಾತ್ರಿ ಊಟದ ಸಮಯ ಮೀರುತ್ತಿತ್ತು. ಊಟ ಮಾಡಿ ಅನಂತರ ಕಚೇರಿಯನ್ನು ಮುಂದುವರಿಸುವಂತೆ ಗುರುಗಳಿಗೆ ಸೂಚನೆ ಕೊಡುವಂತೆ ಗುರುಪತ್ನಿ ಗೌಡರಿಗೆ ಬಿನ್ನೈಸಿಕೊಂಡರಂತೆ. ಗೌಡರಾದರೋ ಹೆದಹೆದರುತ್ತ, ಸಮಯ ಕಾದು ಗುರುಗಳ ಕಿವಿಯಲ್ಲಿ ವಿಷಯವನ್ನು ಹಾಕಿದರಲ್ಲದೆ ಗುರುಗಳು ಊಟ ಮುಗಿಸಿ ಬರುವವರೆಗೆ ತಾವು ಕಚೇರಿ ಮುಂದುವರಿಸುವುದಾಗಿ ಹೇಳಿದರು. ಈ ಮಾತುಗಳನ್ನು ಕೇಳಿದ ಗುರುಗಳಿಗೆ ಅಸಾಧ್ಯ ಕೋಪ ಬಂದರೂ ಶಿಷ್ಯನನ್ನು ಪರೀಕ್ಷಿಸಿಯೇ ಬಿಡುವ ತೀರ್ಮಾನಕ್ಕೆ ಬಂದು ಶಿಷ್ಯನಿಗೆ ಕಚೇರಿ ವಹಿಸಿ ತಾವು ಊಟಕ್ಕೆ ಎದ್ದರು. ಗೌಡರು ಕಚೇರಿಯನ್ನು ಮುಂದುವರಿಸಿದರು. ಶಿಷ್ಯನ ಕಚೇರಿ ಮುಗಿಯುವ ಹೊತ್ತಿಗೆ ಗುರುಗಳಿಗೆ ಬಹಳ ಸಂತೋಷವಾಗಿತ್ತು. ತಾವು ಹೊದ್ದಿದ್ದ ಜರತಾರಿಯ ಶಾಲನ್ನೇ ತಮ್ಮ ಶಿಷ್ಯನಿಗೆ ಹೊದಿಸಿ ಸನ್ಮಾನಿಸಿ ಅವನನ್ನು ಅಪ್ಪಿಕೊಂಡರಂತೆ. ಅಲ್ಲಿಂದ ಮುಂದೆ ಗೌಡರಿಗೆ ಕ್ರಮವಾಗಿ ಪಾಠ ಆರಂಭವಾಯಿತು. ಗೌಡರಿಗೆ ಗುರುಕರುಣೆ ಮತ್ತು ಆಶೀರ್ವಾದಗಳು ಸಂಪೂರ್ಣವಾಗಿದ್ದವು. ದೈವದತ್ತವಾಗಿ ಬಂದ ಅಪಾರ ಪ್ರತಿಭೆಯಿತ್ತು. 'ಕೆಂಪೇಗೌಡ, ಭೈರವಿಯಲ್ಲಿ ನಿನ್ನ ಮೀರಿಸುವವರು ಮತ್ತೊಬ್ಬರಿಲ್ಲ, ಮತ್ತೆ ಬರಲಾರರು' ಎಂದು ಗುರುಗಳೇ ಹೊಗಳಿದ್ದುಂಟು. ಇದರಿಂದ ಎಂದೂ ಕೆಂಪೇಗೌಡರು ಅಹಂಕಾರ ಪಟ್ಟವರಲ್ಲ. ಅವರದು ತುಂಬಾ ಸರಳ ಮತ್ತು ವಿನೀತ ವ್ಯಕ್ತಿತ್ವವೆಂದು ಅವರನ್ನು ಕಂಡವರೆಲ್ಲ ಹೇಳುತ್ತಾರೆ. ಇಷ್ಟಾದರೂ ಅವರ ಜೀವನ ಮಾತ್ರ ಅವರು ಸಂಗೀತದಲ್ಲಿ ಮೇಲೇರಿದಂತೆಲ್ಲ ದುರಂತದತ್ತ ಜರುಗುತ್ತಿದ್ದಂತೆ ಕಂಡುಬರುತ್ತದೆ.
ಗೌಡರು ಆಗಿನ ಕಾಲಪದ್ಧತಿಯಂತೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಸಂಗೀತ ಅಭ್ಯಾಸಕ್ಕೆ ಹೊರಡುವ ಕಾಲಕ್ಕೆ ಅವರಿಗೆ ಒಂದು ಗಂಡು ಮಗು ಇತ್ತು. ಗೌಡರು ತಿರುವಾಯೂರಿನಲ್ಲಿ ಸಂಗೀತ ಅಭ್ಯಾಸವನ್ನು ಭರದಿಂದ ನಡೆಸಿದ್ದ ಕಾಲದಲ್ಲಿಯೆ ಅವರ ಪತ್ನಿ ತಮ್ಮ ಪುತ್ರನನ್ನು ಬಿಟ್ಟು ಅಕಾಲ ಮರಣಕ್ಕೆ ತುತ್ತಾದರು. ಈ ಘಟನೆ ಕೆಂಪೇಗೌಡರ ಬದುಕಿನ ಮೇಲೆ ಮಹತ್ತರವಾದ ಪರಿಣಾಮವನ್ನುಂಟುಮಾಡಿತು. ಹೆಂಡತಿಯ ಮುಖ ನೋಡಲು ಕಾತರರಾಗಿ ಊರಿಗೆ ಹಿಂತಿರುಗಿದ ಗೌಡರು ಕೆಲವು ದಿನಗಳ ಕಾಲ ಮಗುವಿನೊಂದಿಗೆ ತಮ್ಮ ಹಳ್ಳಿಯಲ್ಲಿಯೇ ಇದ್ದುಬಿಟ್ಟರು.
ಈ ಹೊತ್ತಿಗಾಗಲೇ ಗೌಡರ ಕೀರ್ತಿ ಕನ್ನಡ ನಾಡಿಗೆಲ್ಲ ಹರಡಿತ್ತು. ಅವರಿಗೆ ಅರಮನೆಯಿಂದ ಆಹ್ವಾನ ಬಂತು. ದುಃಖಭಾರದಲ್ಲಿದ್ದ ಗೌಡರು ಅದನ್ನು ನಿರಾಕರಿಸಲು ಯೋಚಿಸಿದ್ದರಂತೆ. ಆದರೆ ಹಿರಿಯರನೇಕರು ಅರಮನೆಯ ಕರೆಯನ್ನು ನಿರಾಕರಿಸಬಾರದೆಂದೂ ದುಃಖವನ್ನು ಮರೆಯಲು ಮತ್ತು ಸಂಗೀತವನ್ನು ಮತ್ತೂ ಅಭಿವೃದ್ಧಿಪಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವೆಂದೂ ಒತ್ತಾಯಿಸಿದುದರಿಂದ ಗೌಡರು ಅರಮನೆಯ ಕರೆಯನ್ನು ಒಪ್ಪಿ ಮೈಸೂರಿಗೆ ಬಂದರು. ಚಾಮರಾಜ ಒಡೆಯರ್ ಪ್ರಭುಗಳ ಎದುರಿಗೆ ಕೆಂಪೇಗೌಡರ ಕಚೇರಿ ನಡೆಯಿತು. ಗೌಡರ ಸಂಗೀತವನ್ನು ಬಹಳವಾಗಿ ಮೆಚ್ಚಿಕೊಂಡ ಪ್ರಭುಗಳು ಅವರನ್ನು ಆಸ್ಥಾನವಿದ್ವಾಂಸರನ್ನಾಗಿ ನೇಮಿಸಿ ಸತ್ಕರಿಸಿದರು.
ಮುಂದೆ ಗೌಡರ ಬದುಕಿನ ಏಕಮಾತ್ರ ಆಶೆಯಾಗಿದ್ದ ಅವರ ಮಗ ತೀರಿಕೊಂಡ. ಅನಂತರ ಗೌಡರ ಬದುಕು ಶೂನ್ಯಮಯವಾಗತೊಡಗಿತು. ಯಾವುದರಲ್ಲಿಯೂ ಆಸಕ್ತಿ ಉಳಿಯಲಿಲ್ಲ.
ಕೆಂಪೇಗೌಡರು ಮನಸ್ಸು ಬಂದ ಗಿರಾಕಿಯಂತೆ. ಮನಸ್ಸಿಗೆ ಬಂದರೆ ದಿನವೆಲ್ಲಾ ಹಾಡುತ್ತಿದ್ದರು. ಇಲ್ಲದಿದ್ದರೆ ಲಕ್ಷ ವರಹ ಕೊಟ್ಟರೂ ಬಾಯಿ ತೆರೆಯುತ್ತಿರಲಿಲ್ಲ. ಹಾಡುವುದಕ್ಕೆ ಸಮಯ ಸಂದರ್ಭಗಳ ನಿಯಮವೇನೂ ಅವರಿಗೆ ಇರಲಿಲ್ಲ. ಒಂದು ಮಧ್ಯಾಹ್ನ ಅಂಗಡಿಯ ಮುಂಗಟ್ಟಿನಲ್ಲಿ ಕುಳಿತುಕೊಂಡು ಮೊಸರು ಬೇಕೇ ಮೊಸರು ಎಂಬ ಪಲ್ಲವಿಯನ್ನು ಪಲುಕುತ್ತಿದ್ದುದನ್ನು ತಾವು ಕಣ್ಣಾರೆ ನೋಡಿದುದಾಗಿ ಮೈಸೂರು ವಾಸುದೇವಾಚಾರ್ಯರು ಬರೆದಿದ್ದಾರೆ.
ಡಿವಿಜಿ ಅವರೂ ಕೆಂಪೇಗೌಡರ ಗಾನಮಾಧುರ್ಯವನ್ನು ತಮ್ಮ ಬಂಧುಗಳ ಮನೆಯಲ್ಲಿದ್ದಾಗ ರಾತ್ರಿ ದಿಢೀರನೆ ಬಂದು ಎಂಟಾಣೆ ಸಾಲ ಕೇಳಿ ಪುನಃ ಬಂದು ಮಧ್ಯರಾತ್ರಿ ದಾಟುವವರೆಗೆ ಆನಂದಭೈರವಿ ಹಾಡಿದ ಬಗೆ ಹೇಳಿದ್ದಾರೆ. ಅಂತಹ ಗಾನ ಕೇಳೇ ಇಲ್ಲ ಎಂದು ತಮ್ಮ ಅನುಭವವನ್ನು ಡಿವಿಜಿ ಬಣ್ಣಿಸಿದ್ದಾರೆ. ತಮ್ಮ ಜ್ಞಾಪಕ ಶಾಲೆಯಲ್ಲಿ ಡಿವಿಜಿ ಅವರು ಹೇಳಿರುವ ಮತ್ತೊಂದು ಪ್ರಸಂಗ ಮನಸೆಳೆಯುತ್ತದೆ.
ಒಂದು ದಿನ ಬೆಳಗ್ಗೆ ಕೆಂಪೇಗೌಡರು ಏನೋ ಕೊಳ್ಳಲು ತಮ್ಮ ಸ್ನೇಹಿತನ ಅಂಗಡಿಗೆ ಹೋದರು. ಆಗ ಅಂಗಡಿಯಾತ "ಕೆಂಪೇಗೌಡರೆ ನಿಮ್ಮ ಸಂಗೀತ ಕೇಳುವ ಸುಯೋಗ ನನಗಿಲ್ಲ ನೋಡಿ. ನಿಮ್ಮ ಕಛೇರಿಗಳೆಲ್ಲ ಸಂಜೆ ಹೊತ್ತು. ಆಗಲೇ ನನ್ನ ವ್ಯಾಪಾರದ ಹೊತ್ತು” ಎಂದು ವಿಷಾದಿಸಿದ.
ಆ ಮಾತನ್ನು ಕೇಳಿ ಗೌಡರು "ನೀನು ಯಾಕಯ್ಯಾ ಅಲ್ಲಿಗೆ ಬರಬೇಕು. ನಾನೇ ಇಲ್ಲಿಗೆ ಬಂದಿದ್ದೇನಲ್ಲಾ ಏನು ಬೇಕು ಕೇಳು" ಎಂದು ಅಲ್ಲೇ ಒಂದು ಧಾನ್ಯದ ಮೂಟೆ ಮೇಲೆ ಕುಳಿತು ಒಂದೂವರೆ ಘಂಟೆ ಕಾಲ ಸಾವೇರಿ ರಾಗದಲ್ಲಿ ಹಾಡಿದರು. ಗೌಡರ ಸಂಗೀತ ಕೇಳಲು ಬೀದಿಯಲ್ಲಿ ಜನ ಗುಂಪು ಸೇರಿದರು. "ಆ ಹೊತ್ತು ಗೌಡರ ಗಾನವನ್ನು ಕೇಳಲು ನಾನು ಧಾವಿಸಿ ಬಂದರೂ ಪ್ರಯೋಜನವಾಗಲಿಲ್ಲ. ನಿಜಕ್ಕೂ ನಾನು ದುರದೃಷ್ಟಶಾಲಿ ಎಂದುಕೊಂಡೆ" ಎನ್ನುತ್ತಾರೆ ಡಿವಿಜಿ.
ಕೆಂಪೇಗೌಡರು ತಮ್ಮ ಬದುಕಿನಲ್ಲಿ ನಡೆಯಿತೆನ್ನಲಾದ ಘಟನೆಗಳಿಂದ ಮನನೊಂದು ಮುಂದೆ ಮನುಷ್ಯರ ಮುಂದೆ ಹಾಡುವುದಿಲ್ಲ ಎಂದು ಶಪಥ ಮಾಡಿ, ದೇಶಾಂತರ ಹೊರಟರಂತೆ. ಅವರಿಗೆ ಹಾಡಬೇಕೆನಿಸಿದರೆ ಯಾವುದಾದರೂ ದೇವಾಲಯದಲ್ಲಿ ದೇವರ ಎದುರಿಗೆ ಕುಳಿತು ಹಾಡುತ್ತಿದ್ದರಂತೆ. ಕೆಲವು ಸಾರಿ ಆಪ್ತರೆಂದು ತಿಳಿದವರ ಎದುರಿಗೆ ಮಾತ್ರ ಹಾಡುತ್ತಿದ್ದರಂತೆ.
ಆ ಕಾಲದಲ್ಲಿ ಶ್ರೀಮಂತ ರಸಿಕರು ಗೌಡರ ಭೈರವಿಯನ್ನು ಒತ್ತೆಯಿಟ್ಟುಕೊಂಡು ಸಾವಿರಾರು ರೂಪಾಯಿ ಸಾಲ ಕೊಡುತ್ತಿದ್ದರಂತೆ. ಒಮ್ಮೆ ಬಡವನೊಬ್ಬನಿಗೆ ಸಹಾಯ ಮಾಡಲು ಗೌಡರು ಸೇಲುಮಿನ ಚಿಟ್ಟಿಯಾರ್ ಒಬ್ಬನಲ್ಲಿ ಮೂರು ಸಾವಿರ ರೂಪಾಯಿ ಸಾಲ ಮಾಡಿದರಂತೆ. ಅದೇ ಸಮಯದಲ್ಲಿ ಕಂಚಿಯಲ್ಲಿ ಅವರು ಹಾಡುತ್ತಿದ್ದ ಕಚೇರಿಯೊಂದರಲ್ಲಿ ಭೈರವಿ ಹಾಡುವಂತೆ ಕೋರಿಕೆ ಬಂದಾಗ ತಾವು ಏಕೆ ಅದನ್ನು ಹಾಡುವುದಿಲ್ಲವೆಂಬ ನಿಜಸಂಗತಿಯನ್ನು ಸಭೆಗೆ ತಿಳಿಸಲಾಗಿ ಸಾಹುಕಾರರೊಬ್ಬರು ಮೂರು ಸಾವಿರ ತಂದು ದೇವರೆದುರಿಗಿಟ್ಟು ಭೈರವಿ ಹಾಡುವಂತೆ ಪ್ರಾರ್ಥಿಸಿದರಂತೆ. ಗೌಡರು ಆ ಹಣವನ್ನು ಸೇಲಂ ಚೆಟ್ಟಿಯಾರರಿಗೆ ಮನಿಆರ್ಡರ್ ಮಾಡಿಸಿ ಭೈರವಿ ಹಾಡಿ ಸಭಿಕರನ್ನು ಸಂತುಷ್ಟಿಗೊಳಿಸಿದರಂತೆ. ಕೆಂಪೇಗೌಡರ ಬಗ್ಗೆ ಇಂಥ ಅನೇಕ ಘಟನೆಗಳ ಉಲ್ಲೇಖವಿದೆ.
ಅರಮನೆಯನ್ನು ಬಿಟ್ಟು ಹೊರಟ ಕೆಂಪೇಗೌಡರು ಮೈಸೂರು ಮತ್ತು ತಮಿಳುನಾಡಿನ ಅನೇಕ ಕಡೆ ಸುತ್ತಿದರೆಂದು ತಿಳಿದುಬರುತ್ತದೆ. ಕಾಲಕಾಲಕ್ಕೆ ಊಟ ನಿದ್ರೆಗಳಿಲ್ಲದೆ ಅಲೆದುದರಿಂದ ಅವರ ದೇಹಶಕ್ತಿ ಕುಂದುತ್ತ ಬಂತು. ಇದರ ಜೊತೆಗೆ ಅಪಾರವಾದ ಮದ್ಯಸೇವನೆಯೂ ಅವರ ಆಯುಷ್ಯವನ್ನು ಕ್ಷೀಣಿಸುತ್ತಿತ್ತು. ಅಂಥ ಕಾಲದಲ್ಲಿ ಎಚ್.ಕೆ.ವೀರಣ್ಣಗೌಡರು ಕೆಂಪೇಗೌಡರನ್ನು ಬಹಳ ಒತ್ತಾಯ ಮಾಡಿ ತಮ್ಮ ಜೊತೆಯಲ್ಲಿರಿಸಿಕೊಂಡಿದ್ದರಂತೆ. ಚನ್ನಪಟ್ಟಣದಲ್ಲಿದ್ದ ವೀರಣ್ಣಗೌಡರ ಕೊಟಡಿಯಲ್ಲಿ ಗೌಡರು ಐದಾರು ತಿಂಗಳಿದ್ದರಂತೆ.
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಅಸ್ಸಾಮಿನ ಗಿರಿ ಕಂದರಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಕೆಂಪೇಗೌಡರು ಅವರೊಂದಿಗೆ ಕೆಲವು ಕಾಲ ಸಂಚಾರ ಮಾಡುತ್ತ ತಮ್ಮ ಸಂಗೀತ ಸುಧೆಯಿಂದ ಸ್ವಾಮಿಜಿಯವರನ್ನು ತೃಪ್ತಿಪಡಿಸಿದರಂತೆ. ಅದರ ನೆನಪಾಗಿ ವಿವೇಕಾನಂದರು ಗೌಡರಿಗೆ ತಮ್ಮ ನಿಲುವಂಗಿಯೊಂದನ್ನು ದಯಪಾಲಿಸಿದರೆಂದೂ ಗೌಡರು ಅದನ್ನು ಕಡೆಯವರೆಗೂ ಪೂಜ್ಯಭಾವನೆಯಿಂದ ತಮ್ಮ ಬಳಿ ಇಟ್ಟುಕೊಂಡಿದ್ದರೆಂದೂ ಪ್ರತೀತಿ.
'ಗೌಡರು ಘನ ವಿದ್ವಾಂಸರು; ಎಂದೂ ಯಾವ ಹಂಗಿಗೂ ಒಳಪಟ್ಟವರಲ್ಲ. ಎತ್ತರದ ಆಳು. ತೇಜಸ್ವಿಯಾದ ಮುಖ. ಅವರು ಕೆಲವು ಕಾಲ ನನ್ನ ಜೊತೆಗಿದ್ದು ನನ್ನ ಅಲ್ಪ ಸೇವೆ ಸ್ವೀಕರಿಸಿದ್ದು ನನ್ನ ಪುಣ್ಯ'ಎಂದು ವೀರಣ್ಣಗೌಡರು ಕೃತಜ್ಞತಾಪೂರ್ವಕವಾಗಿ ಕೆಂಪೇಗೌಡರನ್ನು ನೆನೆದಿದ್ದಾರೆ.
ಚನ್ನಪಟ್ಟಣಕ್ಕೆ ಬರುವ ಹೊತ್ತಿಗೆ ಗೌಡರಿಗೆ ಹಲ್ಲು ಬಿದ್ದುಹೋಗಿದ್ದುವಂತೆ. ಹಲ್ಲು ಕಟ್ಟಿಸಿಕೊಳ್ಳುವಂತೆ ಅನೇಕರು ಒತ್ತಾಯಿಸಿದರೂ ಅವರು ಒಪ್ಪುತ್ತಿರಲಿಲ್ಲವಂತೆ. ಕಡೆಗೆ ವೀರಣ್ಣ ಗೌಡರ ಒತ್ತಾಯಕ್ಕೆ ಮಣಿದು ಅದಕ್ಜಾಗಿ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಗೌಡರು ಬೆಂಗಳೂರು ರೈಲು ಹತ್ತಿದರು. ಆದರೆ ಮತ್ತೆ ಚನ್ನಪಟ್ಟಣಕ್ಕೆ ಹಿಂತಿರುಗಲಿಲ್ಲ. ಅವರಿಗಾಗಿ ವೀರಣ್ಣಗೌಡರು ಬೆಂಗಳೂರೆಲ್ಲ ಅಲೆದರಂತೆ. ಆದರೆ ಹಿಂತಿರುಗಲಿಲ್ಲ. ಮತ್ತೆ ಅವರನ್ನು ಕಂಡವರು ಯಾರೂ ಇಲ್ಲ.
ಮುಖಚಿತ್ರ ಕೃಪೆ: Veeranna Chikrudrappa Sir 🌷🙏🌷
Great singer Bhairavi Kempegowda
ಕಾಮೆಂಟ್‌ಗಳು