ಆಸ್ಟಲಿ ಕೂಪರ್
ಸರ್ ಆಸ್ಟಲಿ ಪ್ಯಾಸ್‍ಟನ್ ಕೂಪರ್
ಸರ್ ಆಸ್ಟಲಿ ಪ್ಯಾಸ್‍ಟನ್ ಕೂಪರ್ ಪ್ರಸಿದ್ಧ ಇಂಗ್ಲಿಷ್ ಶಸ್ತ್ರವೈದ್ಯರು.
ಕೂಪರ್ 1768ನೆಯ ಇಸವಿ ಆಗಸ್ಟ್ 23 ರಂದು ನಾರ್ಫೋಕಿನಲ್ಲಿ ಅಲ್ಲಿಯ ಪಾದ್ರಿಯ ನಾಲ್ಕನೆಯ ಮಗನಾಗಿ ಜನಿಸಿದರು. ಈತ ಚಿಕ್ಕಂದಿನಲ್ಲಿ ಸ್ವೇಚ್ಛಾಪ್ರವೃತ್ತಿಯವನಾಗಿದ್ದ. ಆದರೆ ಬುದ್ಧಿ ಬಂದಾಗ ಶ್ರದ್ಧಾವಂತನಾದ.
ಕೂಪರ್ ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಹೆನ್ರಿಕ್ಲೈನ್ ಎಂಬವರ ಕೈಕೆಳಗೂ ಎಡಿನ್‍ಬರೋ ನಗರದ ಜಾನ್ ಹಂಟರ್ ನೇತೃತ್ವದಲ್ಲಿಯೂ ವ್ಯಾಸಂಗ ಮಾಡಿ (1787-88), ಮುಂದೆ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಉಪಾಧ್ಯಾಯರಗಿ ನೇಮಕಗೊಂಡರು (1789). 1791 ರಿಂದ 1800ರ ವರೆಗೆ ಲಂಡನ್ನಿನ ಪ್ರಸಿದ್ಧವಾದ ಗೈ ಆಸ್ಪತ್ರೆಯಲ್ಲಿ ಅಂಗರಚನಾಶಾಸ್ತ್ರ ಮತ್ತು ಶಸ್ತ್ರವೈದ್ಯದ ಸಹಾಧ್ಯಾಪಕರಾಗಿ ಕ್ಲೈನ್ ಜೊತೆಗೆ ಕೆಲಸ ಮಾಡಿದರು. ಈ ಮಧ್ಯೆ 1793 ರಿಂದ 1796ರ ವರೆಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‍ನಲ್ಲಿ ಅಂಗರಚನಾಶಾಸ್ತ್ರದ ಅಧ್ಯಾಪಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರಯ. 1813ರಲ್ಲಿ ರಾಯಲ್ ಕಾಲೇಜಿನಲ್ಲಿ ತುಲನಾತ್ಮಕ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು.
ಕೂಪರ್ ಅವರಿಗೆ 1802ರಲ್ಲಿ ರಾಯಲ್ ಸೊಸೈಟಿಯ ಕೋಪ್ಲಿ ಪಾರಿತೋಷಕ ಪ್ರಾಪ್ತಿಯಾಯಿತು. 1827ರಲ್ಲಿ ಮತ್ತೆ 1836ರಲ್ಲಿ ರಾಯಲ್ ಕಾಲೇಜಿನ ಅಧ್ಯಕ್ಷತೆ ವಹಿಸಿಕೊಂಡರು. 1820-21ರಲ್ಲಿ ಬೇರೋನೆಟ್ ಬಿರುದು ಪ್ರಾಪ್ತಿಯಾಯಿತು. 1828ರಲ್ಲಿ ಇಂಗ್ಲೆಂಡಿನ ದೊರೆಗೆ ಶಸ್ತ್ರಕ್ರಿಯಾತಜ್ಞರಾಗಿ ನೇಮಕಗೊಂಡರು. 1830ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಉಪಾಧ್ಯಕ್ಷತೆ ಸಂದಿತು.
ಕೂಪರ್ ಪ್ರಾಮಾಣಿಕವಾಗಿ ಮೇಲ್ತರಗತಿಯ ಕೆಲಸ ಮಾಡುತ್ತಿದ್ದುದರ ಜೊತೆಗೆ ಅದೃಷ್ಟಶಾಲಿಯೂ ಆಗಿದ್ದುದರಿಂದ ಶಸ್ತ್ರವೈದ್ಯರಾಗಿ ಬಹು ಪ್ರಸಿದ್ಧಿ ಪಡೆದರು. ದೇಹದ ಮುಖ್ಯ ಶುದ್ಧ ರಕ್ತನಾಳವಾದ ಅಪಧಮನಿಯನ್ನು ಕಟ್ಟಿ ಅಯೋರ್ಟಿಕ್ ಅನ್ಯೂರಿಸಂ ಎಂಬ ರೋಗಕ್ಕೆ ಚಿಕಿತ್ಸೆ ಮಾಡಲು ಮೊತ್ತಮೊದಲು ಪ್ರಯತ್ನಮಾಡಿದ್ದು (1817) ಇವರಿಗೆ ಲೋಕಪ್ರಸಿದ್ಧಿಯನ್ನು ತಂದಿತು. ಈ ಕಾರ್ಯ ವಿಷಾಣುನಿರೋಧ ಮತ್ತು ಸಂವೇದನಾನಾಶಗಳ ಸಿದ್ಧಿ ಸಾಧಿಸುವುದಕ್ಕೆ ಬಹು ಮುಂಚೆಯೇ ಮಾಡಿದ್ದು ಎನ್ನುವುದನ್ನು ನೆನೆದರೆ ಕೂಪರ್ ಅವರ ಚಿಕಿತ್ಸಾಕ್ರಮದ ವೈಶಿಷ್ಟ್ಯವನ್ನು ಅರಿಯಬಹುದು. ಇಂಗ್ಲೆಂಡಿನ ರಾಜ ನಾಲ್ಕನೆಯ ಜಾರ್ಜನ ತಲೆಯ ಮೇಲಿದ್ದ ದುರ್ಮಾಂಸವನ್ನು ಕೂಪರ್ ಶಸ್ತ್ರಚಿಕಿತ್ಸೆಯಿಂದ ಕೊಯ್ದು ತೆಗೆದಾಗ (1820-21) ಯಾವ ಪ್ರಮಾದವಾದ ಅನ್ಯರೋಗವೂ ಉಂಟಾಗದೆ ಚಿಕಿತ್ಸೆ ತೃಪ್ತಿಕರವಾಗಿ ಪರಿಣಮಿಸಿತು. ಈ ಸಣ್ಣ ಶಸ್ತ್ರಚಿಕಿತ್ಸೆಯಿಂದಲೇ ಕೂಪರ್ ಅವರಿಗೆ ಬೇರೋನೆಟ್ ಪದವಿ ಲಭಿಸಿತು. ಹರ್ನಿಯ ಮತ್ತು ಅದರ ಚಿಕಿತ್ಸೆಯ ವಿಷಯವಾಗಿ ಇವರು ಬರೆದ ಪುಸ್ತಕ (1804-1807) ಬಹು ಪ್ರಸಿದ್ಧಿ ಪಡೆದಿದೆ. ಎಲುಬು ಮತ್ತು ಕೀಲುಗಳ ಘಾತುಗಳ ವಿಷಯವಾಗಿ ಸ್ತನ ರೋಗಗಳು, ವೃಷಣರೋಗಗಳು ಮುಂತಾದುವನ್ನು ಕುರಿತು ಕೂಪರ್ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಅಂಗರಚನೆಯಲ್ಲಿ ತೋರಿಸಿಕೊಟ್ಟ ಅಂಗಾಂಶಗಳಿಗೆ ಇವರ ಹೆಸರನ್ನೇ ಇಟ್ಟು ಗೌರವಿಸಿದ್ದಾರೆ. ಅಂಗರಚನಾಶಾಸ್ತ್ರದ ಪಾಠ ಹೇಳುವುದರಲ್ಲಿಯೂ ಇವರು ಹೆಸರುವಾಸಿಯಾಗಿದ್ದರು.
ಕೂಪರ್ 1841ರ ಫೆಬ್ರುವರಿ 12ರಂದು ನಿಧನರಾದರು.
On the birth anniversary of great surgeon Astley Paston Cooper
ಕಾಮೆಂಟ್‌ಗಳು