ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಲದೀಪ್ ನಯ್ಯರ್


 ಕುಲದೀಪ್ ನಯ್ಯರ್ 


ಕುಲದೀಪ್ ನಯ್ಯರ್ ಪ್ರಖ್ಯಾತ ಲೇಖಕ, ಪತ್ರಕರ್ತ, ರಾಯಭಾರಿ, ಮಾನವ ಹಕ್ಕುಗಳ ಪ್ರತಿಪಾದಕ.     

ಕುಲದೀಪ್ ನಯ್ಯರ್ 1923ರ  ಆಗಸ್ಟ್ 14ರಂದು ಈಗಿನ ಪಾಕಿಸ್ತಾನದ ಭಾಗವಾದ ಸಿಯಾಲ್‍ಕೋಟ್ನಲ್ಲಿ ಜನಿಸಿದರು.  ತಂದೆ ಗುರುಬಕ್ಷ್ ಸಿಂಗ್.  ತಾಯಿ ಪೂರಣ್ ದೇವಿ.  ಲಾಹೋರ್‍ನಲ್ಲಿ ಬಿ.ಎ ಮತ್ತು ಕಾನೂನು ಪದವಿ ಪಡೆದ ಅವರು  1952ರಲ್ಲಿ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದರು.  

ದಕ್ಷ  ಅಧಿಕಾರಿಗಳಾಗಿದ್ದ ಚಿರಂಜೀವಿ ಸಿಂಗ್ ಒಮ್ಮೆ ಕುಲದೀಪ್ ನಯ್ಯರ್ ಅವರನ್ನು ‘ಕಾಲಕ್ಕೆ ಕನ್ನಡಿ’ ಎಂದು ಬಣ್ಣಿಸಿದ್ದರು.  ಈ ಮಹನೀಯರದ್ದು ಅಂತಹ ಮಹತ್ವದ ಬದುಕು.   

ಅದು ಆಗಸ್ಟ್‌ 15ಕ್ಕೆ ಸಜ್ಜಾಗುತ್ತಿರುವ ರಾತ್ರಿ. ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಗಾಢ ಕತ್ತಲು. ಆ ಕತ್ತಲನ್ನು ಹೊಡೆದೋಡಿಸಿ ದಶಮಾನಗಳ ಅಪನಂಬಿಕೆಯನ್ನು ಬಗೆಹರಿಸುವಂತೆ ಸಹಸ್ರಾರು ಮೋಂಬತ್ತಿಗಳನ್ನು ಒಬ್ಬೊಬ್ಬರೂ ಹಚ್ಚುತ್ತಾ ಸಾಗಿದ್ದಾರೆ. ಅದರಲ್ಲಿ ಈ ಕಡೆಯಿಂದ ಭಾರತೀಯರು, ಆ ಕಡೆಯಿಂದ ಪಾಕಿಸ್ತಾನೀಯರೂ ಇದ್ದಾರೆ. ಕತ್ತಲ ನಡುವೆ ಒಂದು ಬೆಳಕಿನ ದೀಪ ಹಚ್ಚಲು ಕಾರಣರಾದವರು ಕುಲದೀಪ್‌ ನಯ್ಯರ್‌. ಕುಲದೀಪ್‌ ಸಿಂಗ್‌ ದೇಶ ಎರಡಾದದ್ದರ ಪರಿಣಾಮವನ್ನು ಕಣ್ಣೆದುರು ಕಂಡವರು. ಅದರ ಬಿಸಿಯನ್ನು ಉಂಡವರು. 

ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿ, ನಂತರದ ವಲಸೆ, ಜನ ಹತ್ಯೆ, ನೆಹರೂ ಯುಗ, ನೆಹರೂ ಅವರಿಗೆ ಅವರ ಸಂಪುಟದಲ್ಲಿಯೇ ಸರ್ದಾರ್‌ ವಲ್ಲಭಬಾಯಿ ಪಟೇಲ್ ಹಾಗೂ ಬಾಬು ರಾಜೇಂದ್ರ ಪ್ರಸಾದ್‌ ಅವರ ವಿರೋಧ, ಗಾಂಧಿ ಹಿಂದೂ ಮುಸ್ಲಿಮರು ನನ್ನ ಎರಡು ಕಣ್ಣುಗಳು ಎಂದದ್ದು, ಕುರಾನ್‌ ಪಠಣಕ್ಕೆ ವಿರೋಧ ಬಂದಾಗ ತಮ್ಮ ಪ್ರಾರ್ಥನೆಯನ್ನೇ ಸ್ಥಗಿತಗೊಳಿಸಿದ್ದು, ಜಿನ್ನಾ 'ವಂದೇ ಮಾತರಂ'ಗೆ ವಿರೋಧ ವ್ಯಕ್ತಪಡಿಸಿದ್ದು, ಎರಡೂ ದೇಶಗಳ ನಡುವೆ ಇರುವೆಗಳ ರೀತಿಯಲ್ಲಿ ಜನ ಪ್ರವಾಹ ಹರಿದದ್ದನ್ನು ನೋಡಿ ತಲೆ ಮೇಲೆ ಕೈ ಹೊತ್ತುಕೊಂಡದ್ದು, ಲಾಲ್ ಬಹದ್ದೂರ್‌ ಶಾಸ್ತ್ರಿ ಅವರ ಸಾವಿನ ಹಿಂದಿನ ಅನುಮಾನಗಳು, ದೇಶದೊಳಗೆ ಉಂಟಾದ ಗಡಿಯ ಗಡಿಬಿಡಿ, ಮಹಾರಾಷ್ಟ್ರಕ್ಕೆ ಕರ್ನಾಟಕದ ಇನ್ನಷ್ಟು ಭಾಗ ಬೇಕು ಎನ್ನುವ ಹಂಬಲ ಇದ್ದದ್ದು, ಕಾಂಗ್ರೆಸ್‌ ಎರಡಾಗಲು ಕರ್ನಾಟಕ ನೆಲ ಒದಗಿಸಿದ್ದು, ಎಸ್‌. ನಿಜಲಿಂಗಪ್ಪ ಅವರ ನಡೆನುಡಿ, ಅವರು ಮಾಡುತ್ತಿದ್ದ ಟಿಪ್ಪಣಿ, ಇಂದಿರಾ ಯುಗ, ಅಲಹಾಬಾದ್‌ ತೀರ್ಪಿನ ನಂತರ ಚುನಾವಣೆಗೆ ಇಂದಿರಾ ಒಲವು ತೋರಿದ್ದು , ಆದರೆ ಸಂಜಯ ಗಾಂಧಿ ಹಾಗೂ ಸಿದ್ಧಾರ್ಥ ಶಂಕರ ರೇ ಇಂದಿರಾ ಅವರನ್ನು ದಾರಿ ತಪ್ಪಿಸಿ ತುರ್ತು ಪರಿಸ್ಥಿತಿ ಹೇರುವಂತೆ ಮಾಡಿದ್ದು, ತುರ್ತು ಪರಿಸ್ಥಿತಿಯಿಂದಾಗಿ ಕುಲದೀಪ್‌ ನಯ್ಯರ್‌ ಸಹಾ ಜೈಲು ಸೇರಬೇಕಾಗಿ ಬಂದದ್ದು, ಬಾಂಗ್ಲಾ ದೇಶದ ವಿಮೋಚನೆ, ಭಿಂದ್ರನ್‌ ವಾಲೆ, ಖಾಲಿಸ್ತಾನ, ಆಪರೇಶನ್‌ ಬ್ಲೂ ಸ್ಟಾರ್‌, ಇಂದಿರಾ ಗಾಂಧಿ ಹತ್ಯೆ, ರಾಜೀವ್‌ ಗಾಂಧಿಯ ಹತ್ಯೆಯೂ ನಡೆದು ಹೋದದ್ದು, ಕೇಂದ್ರದಲ್ಲಿ ಆರಂಭವಾದ ಸಮ್ಮಿಶ್ರ ಸರ್ಕಾರಗಳ ಸರಮಾಲೆ, ಇದರ ಪರಿಣಾಮ, ಅಯೋಧ್ಯೆಯಲ್ಲಿ ಉರುಳಿದ ಮಸೀದಿ, ಆ ನಂತರದ ಬೆಳವಣಿಗೆಗಳು, ಅಣ್ಣಾ ಹಜಾರೆ ಅವರ ಭ್ರಷ್ಟಾಚಾರದ ವಿರುದ್ಧದ ಹೋರಾಟ, ನರೇಂದ್ರ ಮೋದಿ ಯುಗ  ಈ ಎಲ್ಲಕ್ಕೂ ಕುಲದೀಪ್‌ ನಯ್ಯರ್‌ ಪ್ರತ್ಯಕ್ಷ ಸಾಕ್ಷಿ.   ಪಾಕಿಸ್ಥಾನದ ಪರಮಾಣು ವಿಜ್ಞಾನಿ ಅಬ್ದುಲ್ ಖದೀರ್ ಖಾನ್ ಅವರನ್ನು ಸಂದರ್ಶಿಸಿದ್ದ ಕುಲದೀಪ್ ನಯ್ಯರ್, ಆ ದೇಶವು ಹೊರವಿಶ್ವಕ್ಕೆ ಗೊತ್ತಾಗುವ ಬಹಳಷ್ಟು ವರ್ಷಗಳ ಹಿಂದೆಯೇ ಪರಮಾಣು ಬಾಂಬು ಹೊಂದಿತ್ತು ಎಂಬುದನ್ನು ತಮ್ಮ (2012ರಲ್ಲಿ ಪ್ರಕಟಗೊಂಡ ‘ಬಿಯಾಂಡ್ ದಿ ಲೈನ್ಸ್’)  ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸಿದ್ದಾರೆ.  

1940ರಲ್ಲಿ ಪಾಕಿಸ್ತಾನ ನಿರ್ಣಯ ಅಂಗೀಕಾರವಾದಾಗ, ಕುಲದೀಪ್‌ ನಯ್ಯರ್‌ ಅವರಿಗೆ ಇನ್ನೂ 17 ವರ್ಷ.  ಅವರ ಬದುಕಿನಲ್ಲಿ ತಲ್ಲಣಗಳ ಮಳೆ ಸುರಿಯಲು ಶುರುವಾಗಿದ್ದು ಅಲ್ಲಿಂದ.  ಸಿಯಾಲಕೋಟ್ನಲ್ಲಿ ವೈದ್ಯರಾಗಿದ್ದ ತಂದೆ ಆಗ ತಾನೇ ಹೊಸ ಮನೆ ಖರೀದಿಸಿದ್ದರು. ಕ್ಲಿನಿಕ್‌ ತೆರೆದಿದ್ದರು. ಅಂಗಡಿ ಸಾಲುಗಳನ್ನು ನಿರ್ಮಿಸಿದ್ದರು. ಆ ವೇಳೆಗೆ ಎಲ್ಲವನ್ನೂ ತೊರೆದು ಹೋಗಬೇಕಾದ ಸನ್ನಿವೇಶ ಉಂಟಾಯಿತು. ಭಾರತ ಎರಡಾಗಿತ್ತು. ಭಾರತಕ್ಕೆ ತೆರಳುತ್ತಿದ್ದ ಗೆಳೆಯರ ಜೀಪಿನಲ್ಲಿ ಉಳಿದಿದ್ದ ಒಂದೇ ಸೀಟಿನಲ್ಲಿ ಯಾರು ಹೋಗಬೇಕು ಎಂಬ ಪ್ರಶ್ನೆ ಬಂದಾಗ ಮನೆಯವರೆಲ್ಲರೂ ಚೀಟಿ ಎತ್ತುತ್ತಾರೆ. ಕುಲದೀಪ್‌ ನಯ್ಯರ್‌ ಹೆಸರು ಬರುತ್ತದೆ. ಒಂದಿಷ್ಟು ಅಂಗುಲ ಜಾಗದಲ್ಲಿಯೇ ಮುದುಡಿ ಕುಳಿತು ಭಾರತದ ಕಡೆಗೆ ಹೊರಟ ನಯ್ಯರ್‌ ಕಂಡದ್ದು ಕಥೆಯಲ್ಲ, ಜೀವನ.  ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಸಾವು, ಕೊಲೆ, ಸುಲಿಗೆ, ದ್ವೇಷ ದಳ್ಳುರಿ, ಜೀಪಿನಲ್ಲಿ ಹೋಗುತ್ತಿದ್ದಾಗ ಇದ್ದ ಒಂದು ಮಗುವನ್ನೇ ಜೀಪಿನಲ್ಲಿ ಕರೆದುಕೊಂಡು ಹೋಗಿಬಿಡಿ, ನಮ್ಮ ಕುಟುಂಬದಲ್ಲಿ ಒಂದು ಜೀವವಾದರೂ ಬದುಕಿ ಉಳಿಯಲಿ ಎಂದು ಗೋಗರೆಯುವವರು, ಭಾರತಕ್ಕೆ ಬಂದ ನಂತರ ಕಂಡ ಇನ್ನೊಂದು ರೀತಿಯ ಮಾರಣಹೋಮ ಎಲ್ಲವೂ ಒಬ್ಬ ಕುಲದೀಪ್‌ ನಯ್ಯರ್‌ ಅವರನ್ನು ರೂಪಿಸಿತ್ತು.

ಮೊದಲು ಉರ್ದು ಪತ್ರಿಕೆಯ ವರದಿಗಾರರಾಗಿದ್ದ  ಕುಲದೀಪ್ ನಯ್ಯರ್ ಮುಂದೆ ದೆಹಲಿಯಿಂದ ಪ್ರಕಟಗೊಳ್ಳುತ್ತಿದ್ದ ‘ಸ್ಟೇಟ್ಸ್ಮನ್’ ಪತ್ರಿಕೆಯ ವರದಿಗಾರರಾಗಿ  ಕಾರ್ಯನಿರ್ವಹಿಸಿದ್ದರು.   1975-77 ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರ ಅವರನ್ನು ಬಂಧನಕ್ಕೆ ತಳ್ಳಿತು.  "ತುರ್ತು ಪರಿಸ್ಥಿತಿಯಲ್ಲಿ ನಡೆದ ನನ್ನ ಬಂಧನ ನನ್ನ ಜೀವನದ ನಿರ್ಣಾಯಕ ತಿರುವಿನ ಗಳಿಗೆ.  ಅದು ನನ್ನ ನಿರಪರಾಧಿ, ನಿರ್ದೋಷಿ ನಡವಳಿಕೆಯ ಮೇಲೆ ನಡೆದ ದೌರ್ಜನ್ಯವಾಗಿತ್ತು. ಸಿಯಾಲಕೋಟ್ನಿಂದ ಹೊರಡುವಾಗ ನನ್ನ ತಾಯಿ ಕೊಟ್ಟಿದ್ದ 120 ರೂಪಾಯಿಗಳೊಂದಿಗೆ ಭಾರತದಲ್ಲಿ ನಾನು ಜೀವನ ಆರಂಭಿಸಿದೆ. ವಿಭಜನೆಯಿಂದಾಗಿ ಹೊಸದಾಗಿ ಬದುಕು ಆರಂಭಿಸಬೇಕಾಗಿದ್ದರೂ ನನಗಾಗ ತುಂಬಾ ಚಿಕ್ಕ ವಯಸ್ಸು. ಏನು ಬಂದರೂ, ಏನು ನಡೆದರೂ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಆಬಾಧಿತವಾಗಿ ಸಾಗುತ್ತಿದ್ದ ನನ್ನ ಜೀವನವನ್ನು ತುರ್ತು ಪರಿಸ್ಥಿತಿ ಹಿಡಿದು ಅಲುಗಾಡಿಸಿಬಿಟ್ಟಿತು. ರಾಜಕೀಯ, ಪೂರ್ವಾಗ್ರಹ ಮತ್ತು ಶಿಕ್ಷೆ ಎಲ್ಲದರ ಕಟುವಾಸ್ತವವನ್ನು ಎದುರಿಸುವ ಅನಿವಾರ್ಯತೆ ನನಗೆ ಎದುರಾಯಿತು.  ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ನಾನು ತೀವ್ರವಾಗಿ ಚಿಂತಿಸಲು ಶುರು ಮಾಡಿದ್ದು ಆಗಿನಿಂದಲೇ. ತಮ್ಮದೇನೂ ತಪ್ಪಿಲ್ಲದೆಯೂ ಸೆರೆಮನೆಗೆ ತಳ್ಳಿಸಿಕೊಂಡು ಅಲ್ಲಿ ಬಂಧನದಲ್ಲಿದ್ದ ರಾಜಕಾರಣಿಗಳ ಸೇವೆಗೆ ನಿಲ್ಲುವಂತಾದ ಸಣ್ಣ ಹುಡುಗರ ಸ್ಥಿತಿ ನನ್ನ ಅಂತಸಾಕ್ಷಿಯನ್ನೇ ಇನ್ನಿಲ್ಲದಂತೆ ಕಲಕಿಬಿಟ್ಟಿತು. ವ್ಯವಸ್ಥೆಯಲ್ಲಿ ನನಗಿದ್ದ ನಂಬಿಕೆಯನ್ನೇ ಅದು ಕಡಿಮೆ ಮಾಡಿತು. ಮಾನವ ಜೀವ ಅಥವಾ ವ್ಯಕ್ತಿಗಳ ಹಕ್ಕುಗಳಿಗೆ ಹೇಗೂ ಗೌರವ ನೀಡದ ದುಷ್ಟ ಮಾಫಿಯಾಗಳು ಬಿಡಿ, ನಮ್ಮ ರಾಜಕೀಯ ಮುಖಂಡರು ಕೂಡಾ ಅವುಗಳನ್ನು ಹೇಗೆ ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ನಾನು ನೋಡಿದೆ”  ಎಂದು  ತಮ್ಮ ಹೃದಯವನ್ನು ತೆರೆದಿಟ್ಟುಕೊಂಡಿದ್ದರು.  ಹದಿನಾಲ್ಕು ಭಾಷೆಗಳ 80 ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಖ್ಯಾತಿಗೊಂಡಿದ್ದವು.  ಅವುಗಳಲ್ಲಿ ದಿ ಸ್ಟೇಟ್ಸ್ಮನ್,  ಡೆಕ್ಕನ್ ಹೆರಾಲ್ಡ್, ದಿ ಡೈಲಿ ಸ್ಟಾರ್, ದಿ ಸಂಡೇ ಗಾರ್ಡಿಯನ್, ದಿ ನ್ಯೂಸ್ ಮುಂತಾದವುಗಳಲ್ಲದೆ  ಪಾಕಿಸ್ಥಾನದ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್, ಡಾನ್ ಕೂಡಾ ಸೇರಿದ್ದವು.  

1990ರ ಅವಧಿಯಲ್ಲಿ ಗ್ರೇಟ್ ಬ್ರಿಟನ್ನಿಗೆ ಭಾರತದ ರಾಯಭಾರಿಗಳಾಗಿ ನಿಯೋಜಿತರಾಗಿದ್ದ ಕುಲದೀಪ್ ನಯ್ಯರ್, 1996ರಲ್ಲಿ ವಿಶ್ವಸಂಸ್ಥೆಗೆ ಭೇಟಿ ನೀಡಿದ ಶಾಂತಿ ಪ್ರತಿನಿಧಿಗಳಾಗಿ,  1997ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಹೀಗೆ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.  2000ವರ್ಷದಿಂದ ಈಚೆಗೆ  ಪ್ರತಿವರ್ಷ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ ಗಡಿಪ್ರದೇಶದಲ್ಲಿ ಶಾಂತಿಪ್ರವರ್ತಕರಲ್ಲೊಬ್ಬರಾಗಿ  ದೀಪಜ್ಯೋತಿ ಕೊಂಡೊಯ್ಯುವ  ಕೆಲಸ ಮಾಡುತ್ತಿದ್ದರು.  ಅಣ್ಣಾ ಹಜಾರೆ ಅವರು ನಡೆಸಿದ  ಭ್ರಷ್ಟಾಚಾರ ಆಂದೋಲನಕ್ಕೆ ಸಮರ್ಥಕರಾಗಿ ಬೆಂಬಲ ನೀಡಿದ್ದರು.  

ಬಿಯಾಂಡ್ ದಿ ಲೈನ್ಸ್, ದಿ ಕ್ರಿಟಿಕಲ್ ಇಯರ್ಸ್, ಡಿಸ್ಟ್ಯಾಂಟ್ ನೈಬರ್ಸ್, ಸಪ್ರೆಶನ್ ಆಫ್ ಜಡ್ಜಸ್, ಇಂಡಿಯಾ ಆಫ್ಟರ್ ನೆಹರು, ದಿ ಜಡ್ಜ್ಮೆಂಟ್, ಇನ್ ಜೈಲ್, ರಿಪೋರ್ಟ್ ಆನ್ ಆಫ್ಘಾನಿಸ್ಥಾನ್, ಖುಷ್ವಂತ್ ಸಿಂಗ್ ಅವರೊಡನೆ ‘ಟ್ರಾಜಿಡಿ ಆಫ್ ಪಂಜಾಬ್’, ಇಂಡಿಯಾ ಹೌಸ್, ದಿ ಮಾರ್ಟಿರ್: ಭಗತ್ ಸಿಂಗ್ ಎಕ್ಸ್ಪೆರಿಮೆಂಟ್ಸ್ ಇನ್ ರೆವಲ್ಯೂಶನ್, ವಾಲ್ ಅಟ್ ವಾಗ್ಹಾ – ಇಂಡಿಯಾ ಪಾಕಿಸ್ಥಾನ್ ರಿಲೇಶನ್ಸ್ , ಸ್ಕೂಪ್ – ಇನ್ಸೈಡ್ ಸ್ಟೋರೀಸ್ ಫ್ರಮ್ ಪಾರ್ಟಿಶನ್ ಟು ದಿ ಪ್ರೆಸೆಂಟ್,  ವಿತೌಟ್ ಫಿಯರ್ -  ದಿ ಲೈಫ್ ಅಂಡ್ ಟ್ರಯಲ್ ಆಫ್ ಭಗತ್ ಸಿಂಗ್, ಟೇಲ್ಸ್ ಆಫ್ ಟೂ ಸಿಟೀಸ್  ಮುಂತಾದವು ಅವರ ಪ್ರಕಟಿತ ಕೃತಿಗಳು.  2012ರಲ್ಲಿ ಅವರ ಆತ್ಮಚರಿತ್ರೆ ‘ಬಿಯಾಂಡ್ ದಿ ಲೈನ್ಸ್’ ಪ್ರಕಟಗೊಂಡಿತ್ತು.  ಇದನ್ನು ‘ಒಂದು ಜೀವನ ಸಾಲದು’ ಎಂಬ ಶೀರ್ಷಿಕೆಯಲ್ಲಿ ನವಕರ್ನಾಟಕ ಸಂಸ್ಥೆಯ ಮೂಲಕ ಆರ್. ಪೂರ್ಣಿಮಾ Poornima Rajarao ಕನ್ನಡಕ್ಕೆ ತಂದಿದ್ದಾರೆ.

ಕುಲದೀಪ್ ನಯ್ಯರ್ ಆಗಸ್ಟ್ 2018ರ  ಆಗಸ್ಟ್ 23ರಂದು ತಮ್ಮ 95 ಚರಿತ್ರಾರ್ಹ ವರ್ಷಗಳ ಬದುಕಿಗೆ ವಿದಾಯ ಹೇಳಿದರು. ಭಾರತೀಯ ಬದುಕಿನ ಪ್ರಮುಖ ದೃಷ್ಟಾರರೊಬ್ಬರು ಕಣ್ಮರೆಯಾದಂತಾಯಿತು. 

On the birth anniversary of great journalist and writer Kuldip Nayyar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ