ವಿಮಲಾ ನಾವಡ
ವಿಮಲಾ ನಾವಡ
ಆತ್ಮೀಯ ಹಿರಿಯರಾದ ವಿಮಲಾ ನಾವಡ ಅವರು ಸಾಹಿತ್ಯಾಸಕ್ತಿಯ ಸೌರಭವನ್ನು ಆಪ್ತವಾಗಿ ಪೋಷಿಸಿಕೊಂಡು ಬಂದವರು.
ವಿಮಲಾ ಅವರು 1952ರ ಅಕ್ಟೋಬರ್ 6ರಂದು ಅವಿಭಜಿತ ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಕೊರವಡಿ ಗ್ರಾಮದಲ್ಲಿ, ಮಂಜುನಾಥ ಹತ್ವಾರ್ ಮತ್ತು ಇಂದಿರಾ ದಂಪತಿಗಳ ಮೊದಲ ಪುತ್ರಿಯಾಗಿ, ತುಂಬು ಕುಟುಂಬದಲ್ಲಿ ಜನಿಸಿ, ಕುಟುಂಬದ ಹಿರಿಯ ಮಗಳಾಗಿ ಬೆಳೆದರು. ಅವರ ಪ್ರಾಥಮಿಕ ಶಿಕ್ಷಣ ಹೊಸಪೇಟೆಯ ಶಾಲೆಯಲ್ಲಿ ಆಯಿತು. ಬೆಂಗಳೂರಿನ ಶೇಷಾದ್ರಿಪುರದ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ 1969ರಿ೦ದ 1972ರ ತನಕ ಜೀವಶಾಸ್ತ್ರದಲ್ಲಿ ಬಿ.ಎಸ್‌ಸಿ (ಆನರ್ಸ್) ಪದವಿಯನ್ನು ಪಡೆದರು. ಮುಂದೆ ಡಾ. ರಾಮಕೃಷ್ಣ ನಾವಡ ಅವರ ಪತ್ನಿಯಾಗಿ ಗೃಹಿಣಿಯಾಗಿ ಗೃಹಸ್ಥ ಜೀವನ ನಡೆಸಿದ್ದು ಕುಂದಾಪುರದಲ್ಲಿ.
ವಿಮಲಾ ನಾವಡ ಅವರಿಗೆ ಕನ್ನಡ ಸಾಹಿತ್ಯದ ಓದಿನ ಗೀಳು ಚಿಕ್ಕಂದಿನಿಂದಲೂ ಇತ್ತು. ಬರವಣಿಗೆಯನ್ನು ತಮ್ಮ ಹವ್ಯಾಸವಾಗಿ, ಮನಸ್ಸಿನ ದುಗುಡವನ್ನು ಹೊರದೂಡುವ ಚಟುವಟಿಕೆಯಾಗಿ ಇಟ್ಟುಕೊಂಡಿದ್ದರು. ಪತ್ರಿಕೆಗಳಿಗೆ ಪ್ರತಿಕ್ರಿಯೆಗಳನ್ನು ಆಗಾಗ ಬರೆಯುತ್ತಿದ್ದರು. ಓದಿದ ಪುಸ್ತಕಗಳ ವಿಮರ್ಶೆಗಳನ್ನು ಕಳುಹಿಸುವುದು ಇವರ
ಅಚ್ಚುಮೆಚ್ಚಿನ ಚಟುವಟಿಕೆ. ಅನೇಕ ಪತ್ರಿಕೆಗಳಲ್ಲಿ, ಮಯೂರ ಮಾಸಪತ್ರಿಕೆಯ “ಕಲ್ಪನೆ" ವಿಭಾಗದಲ್ಲಿ ಇವರ ಕವನಗಳು, ಲೇಖನಗಳು ಆಗಾಗ ಪ್ರಕಟವಾಗಿವೆ. ಮನೆಯ ಯಾವುದೇ ಶುಭ ಸಂದರ್ಭಕ್ಕೆ, ಯಾರಿಗಾದರೂ ಹಾರೈಕೆ ಮಾಡಬೇಕು ಎಂದಾಗ ಆ ಸಂದರ್ಭಕ್ಕೆ ಸರಿಯಾಗಿ ಕವನಗಳನ್ನು ರಚಿಸುವ ಕೌಶಲ ಇವರದ್ದು. ಇವರ ಆಪ್ತರು ಇವರ ಕವನಗಳನ್ನೆಲ್ಲ 'ಪಯಣ'ಎಂಬ ಸಂಕಲನದಲ್ಲಿ ಒಟ್ಟುಗೂಡಿಸಿದ್ದಾರೆ. ಅವರು ತಮ್ಮ ಬದುಕಿನ ಬಹುಮುಖಿ ಅನುಭವಗಳು ಮತ್ತು ಕಾಣ್ಕೆಗಳನ್ನು ಇಲ್ಲಿ ಮನೋಜ್ಞವಾಗಿ ತೆರೆದಿಟ್ಟಿದ್ದಾರೆ.
ವಿಮಲಾ ಅವರು ಬದುಕಿನ ಸೊಬಗನ್ನು ಕಾಣುವ ಪರಿಯನ್ನು ಈ ಎರಡು ಕವಿತೆಗಳು ಕಾಣಿಸುತ್ತವೆ:
ಎಲ್ಲೆಲ್ಲೂ ನೀನೆ
ಎಲ್ಲೆಲ್ಲೂ ನೀನೇ ಕಾಣುತಿಹೆ ನನಗಿಲ್ಲಿ
ಬೋಳು ಬೆಟ್ಟಗಳ ಬೆಡಗಿನಲ್ಲಿ
ನೀಲ ಸಮುದ್ರದ ತೆರೆಗಳಲಿ
ರವಿಕಿರಣದ ಸ್ವರ್ಣಲೇಪಗೊಂಡಿಹ
ಬೆಟ್ಟಗುಡ್ಡಗಳ ನೆತ್ತಿಯಲಿ
ಬಿಸಿಲ ರಜತ ಸ್ಪರ್ಶದಿ
ಹೊಳೆವ ದಿಬ್ಬದ ಮೇಲೆ
ನಾಚಿ ಕರಿಮುಸುಕು ಹೊದ್ದಂತಿಹ
ಕಿರುಗುಡ್ಡಗಳ ಮರೆಯಲಿ
ಮೌನವೇ ರಾಗವಾಗಿಹ
ನಿಶೆಯ ನೀರವತೆಯಲಿ
ಸನಿಹದಿ ಬೆರಗುಗೊಳಿಸಿ
ದೂರ ಸರಿದು ಚಿನ್ನಾಟವಾಡಿದಂತಿಹ
ಬೆಟ್ಟಸಾಲುಗಳಲಿ
ಆಧುನಿಕತೆಯತ್ತ ಓಡುತಿಹ
ವಿಶಾಲ ರಸ್ತೆಗಳ ಬದಿಯಲಿ
ನಳನಳಿಸುತಿಹ ಪುಷ್ಪರಾಶಿಯಲಿ
ಹಸಿರು ತಂಪಿನಲಿ
ತಾರಾಲೋಕವೇ ಧರೆಗಿಳಿದಂತಿರುವ
ದೀಪಗಳ ಝಗಮಗದಲಿ
ನಸುಕಿನ ಅರುಣರಾಗದಲಿ
ನಿಶೆಯ ಶಶಿಕಾಂತಿಯಲಿ
ಪ್ರೀತಿಯಸುಧಾ ಸಿಂಚನದಲಿ,
ದೇಗುಲದ ದೀಪದ ಬೆಳಕಲಿ
ಎಲ್ಲೆಲ್ಲೂ ನೀನೇ ಕಾಣುತಿಹೆ
ನನಗಿಲ್ಲಿ ಈ ಮಸ್ಕತ್ತಿನಲ್ಲಿ
ಸೂರ್ಯಾಸ್ತದಿಂದ ಸೂರ್ಯೋದಯ
ಓಮಾನಿನಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯ
ಓಮಾನಿನಾಗಸದಲ್ಲಿ ಬಣ್ಣಗಳ ಚಿತ್ತಾರ
ಸುತ್ತಮುತ್ತಣ ಮಲೆಯ ವಲಯದಲ್ಲೆಲ್ಲ ಅದರ ಮರುಪ್ರಸಾರ
ಆಗಸದಿ ರವಿ ಮರೆಯಾಗುವ ಹೊತ್ತು
ಬೋಳುಗುಡ್ಡಗಳಿಗೂ, ವರ್ಣಮಯ ಚೆಲುವನ್ನಿತ್ತು.
ವಕ್ರತೆಗೂ ವೈಶಿಷ್ಟ್ಯದ ಮೆರುಗನ್ನಿತ್ತು
ಮರೆಯಾಗಿ ಹೋಗುವ ಮೊದಲು
ಸೃಷ್ಟಿಸಿದ ದೃಶ್ಯಕಾವ್ಯದ ವೈಭವವನ್ನು
ಕಂಡುಮೂಕವಾಯಿತೆನ್ನ ಮನ!
ಕುಳಿರ್ಗಾಳಿ ಮೈ ನಡುಗಿಸಿದೆ, ಎಚ್ಚರಗೊಳಲು
ಕಂತಿಹ ಭಾನುಪ್ರಭೆ ಮುದಗೊಳಿಸೆ
ಬಿದಿಗೆಯ ಚಂದನಿಗಾಗಿ ಹುಡುಕಾಡುತ್ತಿರಲು
ಬೆಳಗಾಗೆ ಕುಟೀರದ ಕದ ತೆರೆಯೆ
ಬೆಳ್ಳಿಯ ಕಿರಣಗಳು ಕಣ್ಣುಕುಕ್ಕಲು
ನನ್ನ ತವರಿನ ಕಡಲಿನೀ ತಟದ ಓಮಾನಿನ
ಕಮನೀಯ ನೇಸರಗೆ ಧನ್ಯತೆಯಲಿ ಕೈ ಮುಗಿದೆ.
ವಿಮಲಾ ನಾವಡ ಅವರು, ಅವರ ಕುಟುಂಬದವರು ಹಲವು ದಶಕಗಳಿಂದ ನನ್ನಾಪ್ತರಾಗಿರುವುದು ನನ್ನ ಬದುಕಿನ ಸೌಭಾಗ್ಯಗಳಲ್ಲೊಂದು. ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಿಮ್ಮ ಅಕ್ಕರೆ, ಪ್ರೋತ್ಸಾಹ ವಿಶ್ವಾಸದ ಈ ಭಾಗ್ಯ ನನ್ನೊಂದಿಗೆ ಸದಾ ಇರಲಿ. ನಮಸ್ಕಾರ.
Happy birthday Vimala Navada 🌷🙏🌷
ಕಾಮೆಂಟ್‌ಗಳು