ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮದಾಸ ನಾಯ್ಡು


 ಪಿ. ಆರ್. ರಾಮದಾಸ ನಾಯ್ಡು 


ನನಗೆ ಪಿ. ಆರ್. ರಾಮದಾಸ ನಾಯ್ಡು ಅಂದರೆ ಮೊದಲು ಮನಸ್ಸಿಗೆ ಬರೋದು 'ಸವಿ ನೆನಪು'.  ರಾಮದಾಸ ನಾಯ್ಡು ಅವರ ‘ಸವಿ ನೆನಪುಗಳು ಬೇಕು ಸವಿಯಲಿ ಬದುಕು’ ಕನ್ನಡ ಚಲನಚಿತ್ರರಂಗದ ಅಮರ ಗೀತೆಗಳಲ್ಲಿ ಒಂದು.

ಡಾ. ಪಿ. ಆರ್. ರಾಮದಾಸ ನಾಯ್ಡು  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣಕಮಲ ಪ್ರಶಸ್ತಿಯನ್ನೂ ಸೇರಿ, ಅನೇಕ ರಾಷ್ಟ್ರ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಮಹಾನ್ ಸಾಧಕರು. ಕಳೆದ ನಾಲ್ಕೂವರೆ ದಶಕಗಳಲ್ಲಿ ಅವರು ಚಿತ್ರ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಗೀತ ರಚನಕಾರರಾಗಿ, ಚಿತ್ರಸಾಹಿತ್ಯ - ಸಂಭಾಷಣೆ ರಚನಕಾರರಾಗಿ, ಟೆಲಿವಿಷನ್ ಕಾರ್ಯಕ್ರಮ ನಿರ್ಮಾಣ ವ್ಯವಸ್ಥೆ ನಿರ್ಮಿಸಿದವರಾಗಿ,  ಸಿನಿಮಾ ಕುರಿತ ಸಾಹಿತ್ಯ ಕೃತಿ ಬರಹಗಾರರಾಗಿ ಶ್ರೇಷ್ಠ ಪ್ರಶಸ್ತಿಗಳ ಸಾಧನೆಗಳಿಗೆ ಹೆಸರಾಗಿದ್ದಾರೆ. 

ಪಿ. ಆರ್. ರಾಮದಾಸ ನಾಯ್ಡು 1952ರ ಆಗಸ್ಟ್ 28ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಎಂಬಲ್ಲಿ ಜನಿಸಿದರು. ಇವರ ಮಾತೃಭಾಷೆ ತೆಲುಗಾದರೂ ಕಾರ್ಯಕ್ಷೇತ್ರಕ್ಕೆ ಆರಿಸಿಕೊಂಡಿದ್ದು ಕನ್ನಡ.  ತಂದೆ ರಾಮಪ್ಪ ನಾಯ್ಡು ಸ್ವಾತಂತ್ರ್ಯ ಹೋರಾಟಗಾರರು.  ತಾಯಿ ಸುಬ್ಬಮ್ಮ.  ಸಂಗೀತ ಮತ್ತು ಸಾಹಿತ್ಯದಲ್ಲಿ ತಂದೆ ತಾಯಂದರಿಗೆ ಇದ್ದ ಆಸಕ್ತಿ ಮತ್ತು ಅವರು ನೀಡಿದ ಪ್ರೋತ್ಸಾಹದಿಂದ ರಾಮದಾಸ ನಾಯ್ಡು ಅವರಲ್ಲಿಯೂ ಸಾಹಿತ್ಯಾಸಕ್ತಿ ಬೆಳೆಯಿತು.    

ರಾಮದಾಸ ನಾಯ್ಡು ಅವರ ಪ್ರಾಥಮಿಕ ಶಿಕ್ಷಣ ರಾಯಲ್ಪಾಡುವಿನಲ್ಲಿ,  ಪ್ರೌಢಶಿಕ್ಷಣ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ, ನಂತರ ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಚತ್ರರಂಗದಲ್ಲಿ ಅಪಾರ ಆಸಕ್ತಿ ಹೊಂದಿದ್ದ ನಾಯ್ಡು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸೇರಿದಾಗ ಕಾಶೀನಾಥ್ ಸ್ನೇಹ ಬೆಳೆಯಿತು. ಇಬ್ಬರೂ ಕನ್ನ ಡ ಸಿನಿಮಾ ತಯಾರಿಸಲು ಮುಂದಾದರು. ಅಪರೂಪದ ಅತಿಥಿಗಳು, ಅಪರಿಚಿತ ಚಿತ್ರಗಳಿಗಾಗಿ ನಾಯ್ಡು ಅವರು ಕಾಶೀನಾಥ್ ಜೊತೆಯಾಗಿ ಎಲ್ಲಾ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದರು.

ರಾಮದಾಸ ನಾಯ್ಡು  1979ರಲ್ಲಿ ತೆರೆಕಂಡ 'ಅಮರ ಮಧುರ ಪ್ರೇಮ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ನಿರ್ದೇಶನ ಮಾಡಿದ್ದಲ್ಲದೆ ಸಾಹಿತ್ಯ, ಸಂಭಾಷಣೆ ರಚಿಸಿದರು. ಅಂದಿನ ಕಾಲಘಟ್ಟದಲ್ಲಿ ಉದ್ಯಮಕ್ಕೆ ಅತ್ಯಗತ್ಯವಿದ್ದ ಚಲನಚಿತ್ರ ನಿರ್ಮಾಪಕರ ಸಂಘದ ಸ್ಥಾಪನೆಗೆ ಕಾರಣರಾಗಿ, ಹಲವು ವರ್ಷ ಪದಾಧಿಕಾರಿಗಳಾಗಿಯೂ ಕಾರ್ಯ ನಿರ್ವಹಿಸಿದರು.  1980ರ ನಂತರ ಕನ್ನಡ ಚಿತ್ರರಂಗದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮನಗೊಂಡು ಹೋರಾಂಗಣ ಚಿತ್ರೀಕರಣ ಘಟಕವನ್ನು ಸ್ಥಾಪಿಸಿದರು.  1986ರ ನಂತರ ಕರ್ನಾಟಕದಲ್ಲಿ ಟೆಲಿವಿಷನ್ ಚಟುವಟಿಕೆ ಪ್ರಾರಂಭವಾದಾಗ ಸುಸಜ್ಜಿತ ಟೆಲಿವಿಷನ್ ಸ್ಟುಡಿಯೋ ಸ್ಥಾಪಿಸಿದರು.  ಈ ಮೂಲಕ ಸಾವಿರಾರು ಟೆಲಿವಿಷನ್ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದರಲ್ಲದೆ ಹತ್ತಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದರು. 

2002ರಿಂದ ಚಲನಚಿತ್ರದಲ್ಲಿ ಸಕ್ರಿಯರಾಗಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ವೃದ್ದಾಪ್ಯ ಸಮಸ್ಯೆಗಳ ಬಗೆಗಿನ 'ಮುಸ್ಸಂಜೆ', ಜಾಗತೀಕರಣಕ್ಕೆ ಕನ್ನಡಿಯಾಗಿದ್ದ 'ಪ್ರವಾಹ', ನಗರೀಕರಣ ಸಮಸ್ಯೆ ಬಗೆಗಿನ 'ಮೊಗ್ಗಿನ ಜಡೆ', ಪ್ರಜಾಪ್ರಭುತ್ವದಲ್ಲಿ ಪ್ರಜೆ ಮತ್ತು ಪ್ರಭುಗಳ ನಡುವಿನ ಸಂಬಂಧಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಬಿಂಬಿಸಿದ ಕುಂ.ವೀ. ಅವರ ಕಾದಂಬರಿ ಆಧರಿಸಿದ 'ಬೇಲಿ ಮತ್ತು ಹೊಲ' ಮತ್ತು ಶ್ರೇಷ್ಠ ಮಕ್ಕಳ ಚಿತ್ರವಾಗಿ ಮೂಡಿದ 'ಹೆಜ್ಜೆಗಳು' ಚಿತ್ರಗಳನ್ನು ನಿರ್ದೇಶಿಸಿದರು. ಈ ಚಿತ್ರಗಳಿಗೆ ಸ್ವರ್ಣಕಮಲ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದವು. ಇದಲ್ಲದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಸಿನಿಮಾ ಕುರಿತಾದ ಪುಸ್ತಕಕ್ಕೆ ಸಲ್ಲುವ ಪ್ರಶಸ್ತಿ ಇವರ 'ವಿಶ್ವ ಸಿನಿಮಾ' ಕೃತಿಗೆ ಸಂದಿದೆ. 
ರಾಮದಾಸ ನಾಯ್ಡು 2012ರಲ್ಲಿ ವಿಶ್ವಸಿನಿಮಾ ಅಧ್ಯಯನ ಕೇಂದ್ರ ಆರಂಭಿಸಿದರು.  

ರಾಮದಾಸ ನಾಯ್ಡು ಅವರಿಗೆ ಸಂದಿರುವ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳೇ ಅಲ್ಲದೆ ಅವರಿಗೆ ನಿರ್ಮಾಣ, ನಿರ್ದೇಶನ,‍ ಸಂಭಾಷಣೆ ಹಾಗೂ ಸಾಹಿತ್ಯ ರಚನೆಗಾಗಿ ಹತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ.‍ ಇವರ ನಿರ್ದೇಶನದ 45 ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಪ್ರವೇಶಿಸಿವೆ.‍ 11 ರೂಪಕ ಚಿತ್ರಗಳು, 2000ಕ್ಕೂ ಹೆಚ್ಚು ಟೆಲಿವಿಷನ್ ಕಾರ್ಯಕ್ರಮಗಳ ನಿರ್ಮಾಣ, ನಿರಂತರ ನಾಲ್ಕು ಚಿತ್ರಗಳು ಇಂಡಿಯನ್ ಪನೋರಮಾಗೆ ಆಯ್ಕೆ,  ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಭಾರತೀಯ ಆಸ್ಕರ್ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ, ಭಾರತೀಯ ಭಾಷೆಗಳ ಚಲನಚಿತ್ರಗಳ ಬಗ್ಗೆ ಬಿಂಬಿಸುವ ವಿಶ್ವ ಸಿನಿಮಾ ಅಧ್ಯಯನ ಗ್ರಂಥಗಳ ಪ್ರಕಟಣೆಗಾಗಿ ವಿಶ್ವ ಸಿನಿಮಾ ಅಧ್ಯಯನ ಕೇಂದ್ರ ಆರಂಭ ಮುಂತಾದವು ಇವರ ಮಹತ್ವದ ಸಾಧನೆಗಳಲ್ಲಿ ಸೇರಿವೆ.‍

ರಾಮದಾಸ್‌ ನಾಯ್ಡು ಅವರು ಬರೆದ ‘ಕನ್ನಡ ಸಿನಿಮಾ ಚಾರಿತ್ರಿಕ ನೋಟ: ಜಾಗತಿಕ ಪ್ರೇರಣೆ ಮತ್ತು ಪ್ರಭಾವಗಳನ್ನು ಅನುಲಕ್ಷಿಸಿ’ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಿ.ಲಿಟ್‌ ಗೌರವವನ್ನು ನೀಡಿದೆ.

ಮಹಾನ್ ಸಾಧಕರಾದ ರಾಮದಾಸ ನಾಯ್ಡು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of great film director, producer and lyricist P. R. Ramadas Naidu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ