ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿತ್ಯಶ್ರೀ ಮಹಾದೇವನ್


 ನಿತ್ಯಶ್ರೀ ಮಹಾದೇವನ್


ನಿತ್ಯಶ್ರೀ ಮಹಾದೇವನ್ ಶಾಸ್ತ್ರೀಯ ಸಂಗೀತ ಮತ್ತು ಸಿನಿಮಾ ಸಂಗೀತಗಳೆರಡರಲ್ಲೂ ಹೆಸರಾಗಿದ್ದಾರೆ.  

ನಿತ್ಯಶ್ರೀ ಮಹಾದೇವನ್ 1973ರ ಆಗಸ್ಟ್ 25ರಂದು ಜನಿಸಿದರು. ತಂದೆ ಈಶ್ವರನ್ ಶಿವಕುಮಾರ್ ಮೃದಂಗ ಕಲಾವಿದರು.  ತಾಯಿ ಲಲಿತಾ ಶಿವಕುಮಾರ್ ಗಾಯಕಿ. ಇವರ ತಂದೆಯ ತಾಯಿ ಸಂಗೀತಲೋಕದ ಮೇರು ಕಲಾವಿದೆ ಡಿ. ಕೆ. ಪಟ್ಟಮ್ಮಾಳ್.  ಅಜ್ಜಿ ಪಟ್ಟಾಮ್ಮಾಳ್ ಅವರ ಸಹೋದರ ಮಹಾನ್ ಸಂಗೀತ ಕಲಾವಿದ ಡಿ. ಕೆ. ಜಯರಾಮನ್. ತಾಯಿಯ ತಂದೆ ಪಾಲ್ಗಾಟ್ ಮಣಿ ಅಯ್ಯರ್ ಮಹಾನ್ ಮೃದಂಗ ವಿದ್ವಾಂಸರು. 

ತಮ್ಮ ತಾಯಿಯಿಂದ ಮೊದಲು ಸಂಗೀತ ಕಲಿತ ನಿತ್ಯಶ್ರೀ,  ಅಜ್ಜಿ ಡಿ. ಕೆ. ಪಟ್ಟಮ್ಮಾಳ್ ಅವರ ಪ್ರಮುಖ ಶಿಷ್ಯೆಯರಲ್ಲಿ ಒಬ್ಬರಾಗಿ ಸಾಧನೆ ಮಾಡಿದ್ದಲ್ಲದೆ ಅವರ ಸಂಗೀತ ಕಚೇರಿಗಳಲ್ಲಿ ಜೊತೆಗಾತಿಯಾಗಿಯೂ ಹಾಡುತ್ತಿದ್ದರು.  ಮುಂದೆ ಅವರು ಭಾರತದ ಎಲ್ಲ ಪ್ರಖ್ಯಾತ ಸಭಾಗಳಲ್ಲಿ ಮಾತ್ರವಲ್ಲದೆ ವಿದೇಶಗಳಿಂದಲೂ ನಿರಂತರ ಆಹ್ವಾನ ಪಡೆದು ಪ್ರಸಿದ್ಧರಾಗಿದ್ದಾರೆ.

ಸಂಗೀತ ಲೋಕದ ವಿಶಿಷ್ಟ ವಿನೂತನ ಧ್ವನಿಗಳನ್ನು ಸಿನಿಮಾ ಸಂಗೀತಕ್ಕೆ ಬಳಸುವುದಕ್ಕೆ ಹೆಸರಾದ ಎ. ಆರ್. ರಹಮಾನ್, 1998ರಲ್ಲಿ ನಿತ್ಯಶ್ರೀ ಅವರಿಂದ 'ಜೀನ್ಸ್' ಚಿತ್ರದ 'ಕಣ್ಣೋಡೆ ಕಾಣ್ಬದೆಲ್ಲಾಮ್' ಎಂಬ ಗೀತೆಯನ್ನು ಹಾಡಿಸಿದರು. ಇದು ಚಲನಚಿತ್ರಗೀತೆಗಳಲ್ಲಿ ಅಪಾರ ಪ್ರಸಿದ್ಧಿ ಪಡೆದಿರುವುದಲ್ಲದೆ ಅವರಿಗೆ ತಮಿಳುನಾಡು ಸರ್ಕಾರದಿಂದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸಹಾ ತಂದಿತು. ಕನ್ನಡದ 'ಆಪ್ತಮಿತ್ರ'ದ ಶಾಸ್ತ್ರೀಯ ಹಿನ್ನೆಲೆಯ ಗೀತೆ ಸೇರಿದಂತೆ ನಿತ್ಯಶ್ರೀ ವಿವಿಧ ಭಾಷೆಗಳ ಅನೇಕ ಪ್ರಸಿದ್ಧ ಚಲನಚಿತ್ರಗಳಿಗೆ ಧ್ವನಿಯಾಗಿದ್ದಾರೆ. ಕೆಲವೊಮ್ಮೆ ಸಿನಿಮಾ ಮತ್ತು ಕಿರುತೆರೆಯ ಕಥಾನಕಗಳಿಗೆ ಸಂಗೀತ ಸಂಯೋಜನೆ ಕೂಡಾ ಮಾಡಿದ್ದಾರೆ. ಅವರ 500ಕ್ಕೂ ಹೆಚ್ಚು ಆಲ್ಬಮ್ಗಳು ಮಾರುಕಟ್ಟೆಯಲ್ಲಿವೆ. 

ಆಕಾಶವಾಣಿಯ ಅಗ್ರಶ್ರೇಣಿ ಕಲಾವಿದೆ, ಆರು ಬಾರಿ ಮದ್ರಾಸ್ ಮ್ಯೂಸಿಕ್ ಅಕಾಡಮಿಯ ಅತ್ಯುತ್ತಮ ಕಚೇರಿ ಪ್ರಶಸ್ತಿ, ಕಲೈಮಾಮಣಿ ಗೌರವ ಸೇರಿದಂತೆ ನಿತ್ಯಶ್ರೀ ಮಹಾದೇವನ್ ಅವರಿಗೆ ಅನೇಕ ಗೌರವಗಳು ಸಂದಿವೆ.

On the birthday of musician and playback singer Nithyasree Mahadevan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ