ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗರೇಖಾ ಗಾಂವಕರ


 ನಾಗರೇಖಾ ಗಾಂವಕರ

ನಾಗರೇಖಾ ಗಾಂವಕರ ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಬಹುಮುಖಿ ಚಿಂತಕಿ ಮತ್ತು ಬರಹಗಾರ್ತಿ.

ನಾಗರೇಖಾ ಅವರ ಜನ್ಮದಿನ ಆಗಸ್ಟ್ 20.  ಕೃಷಿ ಕುಟುಂಬದಿಂದ ಬಂದವರಾದ ನಾಗರೇಖಾ ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಎಂಬ ಗ್ರಾಮದಲ್ಲಿ ಜನಿಸಿದರು. ಕೃಷಿ ಕುಟುಂಬದಲ್ಲಿನ ಕೆಲಸ ಕಾರ್ಯಗಳಲ್ಲಿನ ಆಸಕ್ತಿ ಬೆಳೆಸಿಕೊಂಡಿದ್ದ ನಾಗರೇಖಾ, ಮನೆಯಲ್ಲಿನ ಹಲವು ಕಷ್ಟ ಕಾರ್ಪಣ್ಯಗಳ ನುವೆಯೂ ಉನ್ನತ ದರ್ಜೆಯಲ್ಲಿ ಬಿ. ಎ. ಮತ್ತು ಬಿ.ಎಡ್ ಪದವಿಗಳನ್ನು ಪಡೆದರು. ಕೆಲಸ ಮಾಡುತ್ತಲೇ ವಿವಾಹದ ನಂತರದ ಜವಾಬ್ದಾರಿಗಳು, ತಾಯ್ತನಗಳನ್ನು ನಿರ್ವಹಿಸುತ್ತ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ.ಎ ಪದವಿಯನ್ನೂ ಗಳಿಸಿದರು. 

ವೃತ್ತಿಯಿಂದ ಉಪನ್ಯಾಸಕಿಯಾಗಿರುವ   ನಾಗರೇಖಾ ಗಾಂವಕರ ಅವರು ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅವರ ಕವಿತೆಗಳು, ಕತೆಗಳು, ಅಂಕಣಗಳು, ವಿಮರ್ಶೆಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಬೆಳಕು ಕಂಡು ನಾಡಿನ ಹಿರಿಯರ ಮೆಚ್ಚುಗೆ ಗಳಿಸಿವೆ. ಇವರು ಅನೇಕ ಕವಿಗೋಷ್ಠಿಗಳಲ್ಲಿ, ಸಮ್ಮೇಳನಗಳಲ್ಲಿ ತಮ್ಮ ಕವಿತೆ,  ವಿಚಾರಗಳ ಮಂಡನೆಗೂ ಹೆಸರಾಗಿದ್ದಾರೆ.

ನಾಗರೇಖಾ ಗಾಂವಕರ ಅವರ ಕೃತಿಗಳಲ್ಲಿ 'ಏಣಿ', 'ಪದಗಳೊಂದಿಗೆ ನಾನು', 'ಬರ್ಫದ ಬೆಂಕಿ', 'ಪಾದಕ್ಕೊಂದು ಕಣ್ಣು' ಮುಂತಾದ ಕವನ ಸಂಕಲನಗಳು; 'ಮೌನದೊಳಗೊಂದು ಅಂತರ್ಧಾನ' ಕಥಾ ಸಂಕಲನ;  'ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ' ಎಂಬ  ಅಂಕಣ ಬರಹಗಳ ಸಂಕಲನ; 'ಕವಾಟ' ಎಂಬ ಪುಸ್ತಕ ಪರಿಚಯ ಕೃತಿ; 'ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ', 'ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್ ಫ್ರಾಂಕ್', ಬಾಲ್ಯದ ಅನುಭವ ಲೋಕ 'ಬಣ್ಣದ ಕೊಡೆ', 'ಇಪ್ಪತ್ತು ವರ್ಷಗಳ ನಂತರ' ಎಂಬ ಬಹುಮುಖಿ ಚಿಂತನ ಬರಹಗಳು ಮುಂತಾದವು ಸೇರಿವೆ.

ನಾಗರೇಖಾ ಗಾಂವಕರ ಅವರ 'ದಿ ಡೈರಿ ಆಫ್ ಎ ಯಂಗ್ ಗರ್ಲ್ ಅ್ಯಾನ್ ಫ್ರಾಂಕ್' ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಭಾಷಾಂತರ 'ಶ್ರೀಲೇಖ' ಪುರಸ್ಕಾರ,  'ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ, ‘ಬರ್ಫದ ಬೆಂಕಿ’ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ ಗೀತಾ ದೇಸಾಯಿ ದತ್ತಿಬಹುಮಾನ, ‘ಮೌನದೊಳಗೊಂದು ಅಂತರ್ಧಾನ’ ಕಥಾ ಸಂಕಲನಕ್ಕೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಅವರಿಂದ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ, 'ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ' ಕೃತಿಗೆ ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

ಆತ್ಮೀಯರೂ ನಿರಂತರ ಕ್ರಿಯಾಶೀಲರೂ, ಬರಹಗಾರರೂ ಆದ ನಾಗರೇಖಾ ಗಾಂವಕರ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Nagarekha Gaonkar 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ