ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಎನ್. ಪಾಟೀಲ್


 ಸಿ. ಎನ್.  ಪಾಟೀಲ್


ಸಿ. ಎನ್. ಪಾಟೀಲ್ ಕಲಾವಿದರಾಗಿ ಮತ್ತು ಚಿತ್ರಕಲಾ ಸಂಸ್ಥೆಗಳನ್ನು ಕಟ್ಟಿದವರಾಗಿ ಮತ್ತು ರಂಗಕರ್ಮಿಯಾಗಿ ಹೆಸರಾದವರು. 

ಸಿ. ಎನ್. ಪಾಟೀಲರು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ನಿಟ್ಟೂರ ಗ್ರಾಮದಲ್ಲಿ 1923ರ ಆಗಸ್ಟ್ 16ರಂದು ಜನಿಸಿದರು. ತಂದೆ ನಿಂಗನಗೌಡ ದ್ಯಾಮನಗೌಡ ಪಾಟೀಲ.  ತಾಯಿ ನಿಂಗಮ್ಮ. ಬಾಲ್ಯದಿಂದಲೇ ಇವರಲ್ಲಿ ಚಿತ್ರಕಲಾಭ್ಯಾಸ ಆಸಕ್ತಿ ಮೂಡಿತು. 11ನೇ ವಯಸ್ಸಿನಲ್ಲಿಯೇ ಆಗಿನ ಮುಂಬಯಿ ರಾಜ್ಯದ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರ ಭಾವಚಿತ್ರ ಬಿಡಿಸಿ ಪ್ರಶಂಸೆ ಗಳಿಸಿದರು. 

ಮುಂಬಯಿ ಜೆ.ಜೆ ಕಲಾಶಾಲೆಯಲ್ಲಿ ಸಿ. ಎನ್. ಪಾಟೀಲರ  ಶಿಕ್ಷಣ ನಡೆಯಿತು. ಚಿತ್ರಕಲೆಯಲ್ಲಿ ಸಿ. ಎನ್. ಪಾಟೀಲರು ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಗಳಿಸಿದರು. 

ಸಿ. ಎನ್. ಪಾಟೀಲರ ಗದುಗಿನ ವಿಜಯ ಕಲಾ ಮಂದಿರ, ಬಿಜಾಪುರದಲ್ಲಿ ಸಿದ್ದೇಶ್ವರ ಕಲಾಮಂದಿರ, ಹಾವೇರಿಯಲ್ಲಿ ಹವ್ಯಾಸಿ ಕಲಾಕೇಂದ್ರ ಮುಂತಾದವುಗಳ ಸ್ಥಾಪಕರಾದರು. ಕೆಲವೆಡೆ ನಿರ್ದೇಶಕರ ಜವಾಬ್ದಾರಿ ಹೊತ್ತರು. ಮೈಸೂರು ದಸರಾ ಪ್ರದರ್ಶನದ ಕಲಾ ವಿಭಾಗ, ಲಲಿತ ಕಲಾ ಅಕಾಡಮಿಯ ಕಲಾ ಪ್ರದರ್ಶನ, ಚಿತ್ರಕಲಾ ಪರಿಷತ್ತಿನ ಕಲಾವಿದರ ಸಮಿತಿ, ಗದಗ ಬೋರ್ಡ್ ಸ್ಕೂಲಿನ ಸದಸ್ಯ, ಗದಗ ಜಿಲ್ಲಾ ಸ್ಕೌಟ್ಸ್ ಅಂಡ್‌ ಗೈಡ್‌ ಕಾರ್ಯದರ್ಶಿ ಕಮೀಷನರಾಗಿ ಸಹಾ ಸೇವೆ ಸಲ್ಲಿಸಿದರು. 

ಸ್ಕೌಟ್ಸ್ ಮತ್ತು ಗೈಡ್‌ ಸಂಸ್ಥೆ ಸ್ಥಾಪಕ ಲಾರ್ಡ್ ವೊವೆಲ್‌ ಮತ್ತು ಬಾಡೆನ್‌ ಪೊವೆಲ್ಲರ ಚಿತ್ರ ಬಿಡಿಸಿದ ಖ್ಯಾತಿ ಸಿ. ಎನ್. ಪಾಟೀಲರದು. ಕರ್ನಾಟಕ ನಾಮಕರಣ ಸಂದರ್ಭದಲ್ಲಿ ರಾಜರಾಜೇಶ್ವರಿ ಚಿತ್ರಬಿಡಿಸಿ ದೇವರಾಜ್‌ ಅರಸ್‌ ಅವರಿಂದ ಸನ್ಮಾನ ಪಡೆದರು. 

ಸಿ. ಎನ್. ಪಾಟೀಲರು ಚಿಕ್ಕಮ್ಮ, ರಾಷ್ಟ್ರವೀರ, ನಾಗರಿಕ, ಶಾಂತಿ ಸಾಮ್ರಾಟ ನಾಟಕಗಳ ನಿರ್ದೇಶನ ಮಾಡಿದರು. ಹಲವಾರು ನಾಟಕಗಳ ಕರ್ತೃವಾದರು. ರಾಷ್ಟ್ರವೀರ ನಾಟಕಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ ಸಂದಿತು. ಅಣ್ಣ ತಮ್ಮ, ಟಿಪ್ಪುಸುಲ್ತಾನ್‌, ದಸರಾ, ಬೂದಿ ಮುಚ್ಚಿದ ಕೆಂಡ, ಮಾಂಗಲ್ಯ ಭಾಗ್ಯ, ಗುರುಕಾಣಿಕೆ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿದ್ದರು. 

ಸಿ. ಎನ್. ಪಾಟೀಲರಿಗೆ 43 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಾಷ್ಟ್ರಪತಿಗಳಿಂದ ಪದಕ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ  ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದವು.

ಸಿ. ಎನ್. ಪಾಟೀಲರು 2007ರ ಜೂನ್ 25ರಂದು ನಿಧನರಾದರು.

On the birth anniversary of artiste C. N. Patil 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ