ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಣಿ ರವಿಶಂಕರ್


ವಾಣಿ ರವಿಶಂಕರ್


ವಾಣಿ ರವಿಶಂಕರ್ ಅವರು ತಮ್ಮ ಬಹುತೇಕ ಪ್ರವೃತ್ತಿಗಳನ್ನೆಲ್ಲ ಆಸಕ್ತ ವೃತ್ತಿಯನ್ನಾಗಿಸಿಕೊಂಡಿರುವ ಅಪರೂಪದ ಕುಶಲಕರ್ಮಿ.   ಅಡುಗೆ ಕಲೆ,  ಕರಕುಶಲ ಕಲೆ,  ಬರಹ, ರಂಗೋಲಿ, ಪುಷ್ಪಾಲಂಕರಣ,  ಕಿರುತೆರೆಯ ಕಾರ್ಯಕ್ರಮಗಳು, ಪುಸ್ತಕ ಪ್ರಕಾಶನ, ಯುವ ಜನತೆಗೆ ಮಾರ್ಗದರ್ಶನ, ಗಾಯನ  ಹೀಗೆ ಅನೇಕ ವಿಧದಲ್ಲಿ ನಿರಂತರ ಸಕ್ರಿಯರು. 

ಜೂನ್ 25, ವಾಣಿ ಅವರ ಜನ್ಮದಿನ.  ಮೂಲತಃ ಇವರು ಶಿವಮೊಗ್ಗದವರು.  ಬಿ.ಕಾಮ್, ಬ್ಯಾಂಕಿಂಗ್ ಡಿಪ್ಲೊಮಾ, ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೋಮಾ, ಎಂ.ಕಾಮ್ ಮುಂತಾದವು ಅವರ ಶೈಕ್ಷಣಿಕ ಸಾಧನೆಗಳು. ವಿವಾಹದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೃಷಿ ಕುಟುಂಬದಿಂದ ಬಂದ ಪತಿ ರವಿಶಂಕರ್ ಐಟಿ ಕ್ಷೇತ್ರದಲ್ಲಿದ್ದಾರೆ.  ಪುತ್ರಿ ಸಾಂಘವಿ ಎಸ್. ಶಂಕರ್ ಅವರು ಎಂ.ಎಸ್‍ಸಿ ಇನ್ ಸೈಕಲಾಜಿ ಓದಿ ಶಿವಮೊಗ್ಗದ 'ಅಶೋಕ್ ಪೈ ಮಾನಸ ಆಸ್ಪತ್ರೆ'ಯಲ್ಲಿ ಮನಃಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ವಾಣಿ ಅವರು ಬೆಂಗಳೂರಿನಲ್ಲಿ ಕೆಲವು ವರ್ಷಗಳ ಕಾಲ ಆಡಳಿತ ಮತ್ತು ಲೆಕ್ಕಪತ್ರ  ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.  ಮುಂದೆ ಕಳೆದ 22 ವರ್ಷಗಳಲ್ಲಿ ಫ್ರಿಲ್ಯಾನ್ಸರ್ ಆಗಿ ಎಲ್ಲಾ ಕನ್ನಡ ಟಿವಿ ಮಾಧ್ಯಮಗಳಲ್ಲಿ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಕೆಲಸ ಮಾಡುತ್ತ ಬಂದಿದ್ದಾರೆ. 
 
ವಾಣಿ ಅವರು ಅಡುಗೆ ಪುಸ್ತಕಗಳು ಮತ್ತು ಹಲವು ವಿವಿಧ ವಿಚಾರಗಳಲ್ಲಿನ ಲೇಖಕಿಯಾಗಿದ್ದಾರೆ. ‘ಕರ್ಮವೀರ’ ವಾರ ಪತ್ರಿಕೆಯಲ್ಲಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಶನಿವಾರದ ಲಿವಿಂಗ್ ಪೇಪರ್‌ನಲ್ಲಿ ವಾಣಿ ಅವರ ಅಡುಗೆಗಳು ಪ್ರಕಟಗೊಂಡಿವೆ.  ಕಿರುತೆರೆಯ ಅನೇಕ ಅಡುಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಿಹಿ-ಕಹಿ ಚಂದ್ರು ಅವರ 'ಬೊಂಬಾಟ್ ಭೋಜನ'ದ 6 ಎಪಿಸೋಡ್‌ಗಳಲ್ಲಿ ಭಾಗವಹಿಸಿದ್ದು, ಅತಿಥಿಯಾಗಿ ಮತ್ತು 6 ಅಡುಗೆಗಳನ್ನು ಮಾಡಿ ತೋರಿಸಿದ್ದಾರೆ. ಕನ್ನಡ ಟಿ.ವಿ. ಮಾಧ್ಯಮಗಳಾದ ಉದಯ, ಕಲರ್ಸ್ ಕನ್ನಡ, ಜೀ ಟಿವಿ, ಉದಯ ನ್ಯೂಸ್, ಉದಯ ಮ್ಯೂಸಿಕ್, ಕಸ್ತೂರಿ, ಸುವರ್ಣ, ಸ್ಟಾರ್ ಸುವರ್ಣ, ಚಂದನ, ಕಲರ್ಸ್ ಕನ್ನಡ ನ್ಯೂಸ್ ಚಾನಲ್, ಸುವರ್ಣ ನ್ಯೂಸ್ ಚಾನಲ್, ಸಿರಿಗನ್ನಡ, ಸರಳ ಜೀವನ, ಶಂಕರ ಟಿವಿ  ಎಲ್ಲವೂ ಸೇರಿ ಅಡುಗೆ ಕಾರ್ಯಕ್ರಮಗಳಲ್ಲಿ ಒಟ್ಟು 300 ಎಪಿಸೋಡ್‌ಗಳಲ್ಲಿ ಭಾಗವಹಿಸಿ 600 ಅಡುಗೆಗಳನ್ನು ಮಾಡಿ ತೋರಿಸಿ ಹೇಳಿಕೊಟ್ಟಿದ್ದಾರೆ. ಉದಯ ಕನ್ನಡ ಚಾನಲ್‌ನಲ್ಲಿ 'ಅಡುಗೆ ಅರಮನೆಯಲ್ಲಿ' ಬೇಸಿಗೆಗೆ ಆಹಾರಗಳನ್ನು ಮಾಡಿ
ತೋರಿಸಿದ್ದಾರೆ.  ಸುವರ್ಣ ಚಾನಲ್‌ನಲ್ಲಿ 'ದಂಪತಿಗಳ ಅಡುಗೆ ಶೋ'ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದಾರೆ.  ಚಂದನದ 'ಆಹಾ ಎಂಥಾ ರುಚಿಯಲ್ಲಿ' ಮಲೆನಾಡಿನ ತಂಬುಳಿಗಳು ಮತ್ತು ಸಾಸುವೆಗಳ ಪ್ರಾಮುಖ್ಯತೆಯ ಪ್ರಸ್ತುತಿ ಮತ್ತು ಅಡುಗೆ ಮಾಡಿ ತೋರಿಸಿದ್ದಾರೆ. ಸುವರ್ಣ ನ್ಯೂಸ್ ಚಾನಲ್‌ನಲ್ಲಿ ಒಂದೂವರೆ ನಿಮಿಷದಲ್ಲಿ ಮಾಡುವ 'ದಿಢೀರ್ ಹೆಲ್ತಿ ಬ್ರೇಕ್‌ಫಾಸ್ಟ್' ಫಾರ್ ವರ್ಕಿಂಗ್ ವುಮ್ಯಾನ್ಸ್ ಮಾಡಿತೋರಿಸಿದ್ದಾರೆ. ಈ ಟಿ.ವಿ ಯ 'ಸವಿರುಚಿ'ಯಲ್ಲಿ ವರ್ಷದ 365 ದಿನಗಳಿಗೂ, ಜೀ ಟಿವಿಯ 'ರುಚಿ ಅಭಿರುಚಿ'ಯಲ್ಲಿ, ಕಸ್ತೂರಿಯ 'ಪಾಕಶಾಲೆ' ಯಲ್ಲಿ,  ಸಿರಿಕನ್ನಡದ 'ನಳಪಾಕ'ದಲ್ಲಿ ಸರಳ ಜೀವನದ 'ಅಡುಗೆ ಕಾರ್ಯಕ್ರಮ'ದಲ್ಲಿ, ಕಲರ್ಸ್ ಕನ್ನಡ ನ್ಯೂಸ್ ಚಾನಲ್‌ನಲ್ಲಿ 'ಪಾಕಶಾಲೆ'ಯಲ್ಲಿ, ಸಲ್ಲುವಂತಹ ಅಡುಗೆಗಳನ್ನು ಮಾಡಿ ತೋರಿಸಿದ್ದು ಇವೆಲ್ಲ ಒಳ್ಳೆಯ ಅನುಭವಗಳಾಗಿವೆ. 

ಉದಯ ಕನ್ನಡ ಚಾನಲ್‌ನ 'ಸ್ಟಾರ್ ಪಾಕ' ಎಂಬ ಕಲಾವಿದರ ಅಡುಗೆ ಕಾರ್ಯಕ್ರಮಗಳಲ್ಲಿ ಸುಮಾರು 200 ಜನ ಮುಖ್ಯ ಕಲಾವಿದರಿಗೆ ಆಫ್ ಸ್ಕ್ರೀ‌ನಲ್ಲಿ ಚೆಫ್ ಆಗಿ 8 ತಿಂಗಳು ಕೆಲಸ ಮಾಡಿದ್ದಾರೆ.

1. ಚಪಾತಿಗೆ ಕರೀಸ್ ಭಾಗ-1
2. ಚಪಾತಿ ಕರೀಸ್ ಭಾಗ 2
3. 100 ವಿಧದ ರೈಸ್ ಬಾತ್
4. ನೂರಾರು ವಿಧದರೊಟ್ಟಿಗಳು
5. 250 ವಿಧದ ಸಂಜೆ ತಿಂಡಿ-ತಿನಿಸುಗಳು ಭಾಗ-1
6. 250 ವಿಧದ ಸಂಜೆ ತಿಂಡಿ-ತಿನಿಸುಗಳು ಭಾಗ-2
7. ಮಕ್ಕಳಿಗಾಗಿ ನೂರಾರು ತಿಂಡಿ-ತಿನಿಸುಗಳು 
8. ಹಾಗಲಕಾಯಿಯಲ್ಲಿ ರುಚಿಕರ, ಆರೋಗ್ಯಕರ, ವೈವಿಧ್ಯಮಯ ಅಡುಗೆಗಳು
9. ದಿನಕ್ಕೊಂದು ಅಡುಗೆ
10. ರಾಗಿಯಲ್ಲಿ ರುಚಿಕರ, ಆರೋಗ್ಯಕರ, ವೈವಿಧ್ಯಮಯ ಅಡುಗೆಗಳು
11. ಚಪಾತಿ ಕರಿ-ಪಾರ್ಟ್-1 ಇಂಗ್ಲೀಷ್ ವರ್ಶನ್
12. ಬೇಬಿಕಾರ್ನ್ನಲ್ಲಿ- ಏಕತೆಯಲ್ಲಿ ವೈವಿಧ್ಯತೆಯ ಅಡುಗೆಗಳು
13. ಸ್ಟಫಡ್ ಪರಾಠಗಳು
14. ಸ್ಟಫಡ್ ಖಾರ ಹೋಳಿಗೆಗಳು

ಹೀಗೆ ವಾಣಿ ಅವರ 50,000ಕ್ಕೂ ಹೆಚ್ಚು ವಿವಿಧ ಪುಸ್ತಗಳು‍  ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಿಂದ ಪ್ರಕಟಗೊಂಡು ಮಾರಾಟವಾಗಿವೆ. ಸ್ವಯಂ ವಾಣಿ ಅವರೇ 'ಸಾಂಘವಿ ಪ್ರಕಾಶನ' ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ವಾಣಿ ಅವರು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ನ್ಯಾಷನಲ್ ಫಸ್ಟ್ ಗ್ರೇಡ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಆಗಿದ್ದಾಗ ಕುವೆಂಪು ಯೂನಿವರ್ಸಿಟಿ ಪರವಾಗಿ ಗುಲ್ಬಾರ್ಗಾದಲ್ಲಿ ನಡೆದ ಸೌತ್ ಝೋನ್ ಯೂತ್ ಫೆಸ್ಟಿವಲ್‌ನ ಸಾಂಸ್ಕೃತಿಕ ಕಲೆಯಾದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ 25 ಯೂನಿವರ್ಸಿಟಿಗಳ ಸಹ ಸ್ಪರ್ಧಿಗಳೊಂದಿಗೆ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿದ್ದರು. ಅಲ್ಲಿಂದ ನ್ಯಾಷನಲ್ ಲೆವೆಲ್ ಇಂಟರ್ ಯೂನಿವರ್ಸಿಟಿಯ ಕುರುಕ್ಷೇತ್ರದಲ್ಲಿ ಆ ವರ್ಷ ನಡೆದ ಸಾಂಸ್ಕೃತಿಕ ಕಲೆಗಳಲ್ಲಿ ರಂಗೋಲಿ ಸ್ಪರ್ಧೆಗೆ ನೇರವಾಗಿ ಆಯ್ಕೆಯಾದರು. 1993ರ ಕುವೆಂಪು ವಿಶ್ವವಿದ್ಯಾನಿಲಯದ ಆ ವರ್ಷದ ಘಟಿಕೋತ್ಸವದಲ್ಲಿ ಅಂತರ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಝೋನಲ್ ಲೆವೆಲ್ ತನಕ ಭಾಗವಹಿಸಿದ್ದಕ್ಕೆ ನ್ಯಾಷನಲ್ ಲೆವೆಲ್ ತನಕ ಆಯ್ಕೆಯಾಗಿದ್ದಕ್ಕೆ ಬಿ.ಆರ್.ಪಿ.ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಈ ಮೇಲಿನ ಸಾಧನೆಗಾಗಿ ಶ್ರೀಯುತ ಪಾಟಿಲ್ ಪುಟ್ಟಪ್ಪ ನವರಿಂದ 'ಪ್ರತಿಭಾ ಪುರಸ್ಕಾರ' ಸಂದಿತು. ಇದೇ ಸಾಧನೆಗಾಗಿ ನ್ಯಾಷನಲ್ ಫಸ್ಟ್ ಗ್ರೇಡ್ ಕಾಲೇಜಿನ ಆ ವರ್ಷದ ವಾರ್ಷಿಕೋತ್ಸವದಲ್ಲಿ ಕಾಲೇಜಿಗೆ ಹೆಸರು ತಂದದ್ದಕ್ಕಾಗಿ 'ರಂಗೋಲಿ ರಾಣಿ` ಎಂದು ಬಿರುದು ಕೊಟ್ಟು ಸನ್ಮಾನ ಮಾಡಲಾಯಿತು.

ವಾಣಿ ಅವರು ಮದುವೆ ಮತ್ತು ಸಮಾರಂಭಗಳಲ್ಲಿ  ರಂಗೋಲಿ ಹಾಕುವುದು ಮತ್ತು ಹೂವಿನ ಅಲಂಕಾರದ ವ್ಯವಸ್ಥೆಗಳನ್ನು ನೀಡುತ್ತಾರೆ. ಕಿರುತೆರೆಯ 'ರಾಣಿ-ಮಹಾರಾಣಿ' ಮಹಿಳಾ ಸ್ಪರ್ಧೆ ರಿಯಾಲಿಟಿ ಶೋ, 'ಸುವರ್ಣ ಶ್ರೀಮತಿ' ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.  ಮಹಿಳೆಯರಿಗೆ ಮತ್ತು ಯುವಜನರಿಗೆ, ನೆರೆ-ಹೊರೆ ಮತ್ತು ಸ್ನೇಹಿತೆಯರಿಗೆ ಅಡುಗೆ ಹೇಳಿಕೊಡುವುದು ಅಡುಗೆ ತರಬೇತಿ ಕ್ಲಾಸ್ ಮಾಡುತ್ತಾರೆ.  ಮಕ್ಕಳಿಗೆ ಸಮ್ಮರ್ ಕ್ಯಾಂಪ್‌ನಲ್ಲಿ ದೇವರನಾಮ ಸಿಂಪಲ್ ವೆಜಿಟೆಬಲ್ಸ್ ಕಾರ್‌ವಿಂಗ್, ವಿತೌಟ್ ಫೈಯರ್-ಕಿಡ್ಸ್ ಫನ್ನೀ ರೆಸಿಪೀಸ್ ಕ್ಲಾಸ್ ಮಾಡಿದ್ದಾರೆ. ರಂಗೋಲಿ ತರಬೇತಿ ನೀಡಿದ್ದಾರೆ 

ಇದಲ್ಲದೆ ಹಾಡು ಹೇಳುವುದು, ಫ್ಯಾಶನ್ ಡಿಸೈನಿಂಗ್, ಹೋಮ್ ಡೆಕೋರೇಟಿಂಗ್, ಫ್ರೀ ಹ್ಯಾಂಡ್ ರಂಗೋಲಿ (ಸಾವಿರಾರು ಚಿತ್ರಗಳು), ಹೊಸ ಅಡುಗೆಗಳನ್ನು ಕಲಿತು ಮಾಡುವುದು, ಯೋಗ, ಸೀರೆಗಳಿಗೆ ಕುಚ್ಚು ಕಟ್ಟುವುದು, ಆರತಿ ತಟ್ಟೆ ತಯಾರಿಸುವುದು ಇತ್ಯಾದಿ ಅನೇಕ ಹವ್ಯಾಸಗಳು ಇವರೊಂದಿಗಿವೆ. ಇವೆಲ್ಲದರ ನಡುವೆ ಇವರಿಗೆ ಅಧ್ಯಾತ ಜೀವನ ಶೈಲಿಯಲ್ಲಿಯೂ ಒಲವಿದೆ. ಪ್ರಬಂಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಪುರಸ್ಕಾರ ಗಳಿಸಿದ್ದಾರೆ.

'ಸ್ಪರ್ಧಾಸ್ಪೂರ್ತಿ' ಪಾಕ್ಷಿಕ ಪುಸ್ತಕದಲ್ಲಿ ಬ್ಯೂಟಿ ಟಿಪ್ಸ್ ಸುಮಾರು  500ರ ತನಕ ಪ್ರಕಟಗೊಂಡಿವೆ. ‘ಲೈಫ್ 360 ಮ್ಯಾಗ್ಸಿನ್’ ನಲ್ಲಿ ಸಂದರ್ಶನ ಮತ್ತು ಅಡುಗೆ ಪ್ರಕಟಣೆ ಕಂಡಿವೆ.  'ಅಡುಗೆ ಸ್ಪರ್ಧೆ' ಗಳಲ್ಲಿ ಎಂ.ಎನ್.ಸಿ ಕಂಪನಿಗಳಲ್ಲಿ ಜಡ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ. 'ರಂಗೋಲಿ ಸ್ಪರ್ಧೆಗಳಲ್ಲಿ' ಜಡ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ .   ಪ್ರತಿಷ್ಠಿತ ಸಪ್ನ ಬುಕ್‌ಹೌಸ್'ನಲ್ಲಿ ಇವರ ಎಲ್ಲಾ 14 ಅಡುಗೆ ಪುಸ್ತಕಗಳ ಮಾರಾಟವಾಗಿವೆ ಮತ್ತು ಕೆಲವು  ಪ್ರಕಟಣೆಗೊಂಡಿವೆ.  ಅಲ್ಲಿನಎಲ್ಲಾ ಪ್ರಮುಖ ಕಾರ್ಯಕ್ರಮಗಳಿಗೆ ಲೇಖಕಿಯಾಗಿ ಅತಿಥಿಯಾಗಿ ಇವರಿಗೆ ಆಹ್ವಾನ ಸಂದಿದೆ.

2019 ರಲ್ಲಿ ಬಬ್ಬೂರುಕಮ್ಮೆ ಸೇವಾ ಸಮಿತಿಯ ವಾರ್ಷಿಕ ಬಳಗದ ಕೂಟದಲ್ಲಿ ವಾಣಿ ಅವರು ಕಲೆಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ‘ಬಬ್ಬೂರುಕಮ್ಮೆ ಸಾಧಕರತ್ನ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

ವಾಣಿ ಅವರಿಗೆ ಕನ್ನಡ ಕಿರುತೆರೆಯ ಧಾರವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ಪಾತ್ರವಹಿಸಿ ಅಭಿನಯಿಸಬೇಕೆಂಬ ಆಸಕ್ತಿಯಿದೆ. ಪುಸ್ತಕ ಪ್ರಕಾಶನದ ಸಂಸ್ಥೆಗಳಲ್ಲಿ ಕೈಯಲ್ಲಿ ಹಸ್ತಪ್ರತಿ ಬರೆಯುವ ಕೆಲಸವಿದ್ದರೆ ಮಾಡುವ ಆಸಕ್ತಿ ಇದೆ.
 
 ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿರುವ ನಮ್ಮ ನಡುವಿನ ಮಹತ್ವದ ಸಾಧಕಿ ವಾಣಿ ರವಿಶಂಕರ್ ಅವರಿಗೆ ಹೃತ್ಪೂರ್ವಕ ಶುಭಹಾರೈಕೆಗಳು.  ನಮಸ್ಕಾರ.

Vani Ravishankar 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ