ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರತಿ

ಆರತಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ತಾರೆಯರಲ್ಲಿ ಆರತಿ ಪ್ರಮುಖರು.  

ಆರತಿ ಅವರು 1954ರ ಆಗಸ್ಟ್ 16ರಂದು  ಜನಿಸಿದರು.  ಅವರ ಅಂದಿನ ಹೆಸರು ಭಾರತಿ.  ತಂದೆ ಶೇಷಣ್ಣ. ತಾಯಿ ಸತ್ಯಭಾಮಾ.  ಆರತಿ ಅವರು ಮೈಸೂರಿನ ಅಕ್ಕನ ಮನೆಯಲ್ಲಿದ್ದು ಪಿಯುಸಿ ಓದಿದರು.  ಮೆಡಿಕಲ್ ಓದಬೇಕೆಂದಿದ್ದ ಅವರಿಗೆ ಅದು ದುಬಾರಿಯಾಗಿ ತಂದೆ ಒಪ್ಪದೆ ಸಾಧ್ಯವಾಗದೆ ಹೋಯಿತು.  

ಆರತಿಯವರು ತಮ್ಮ ಬಂಧು ಅಚ್ಚಯ್ಯನವರ ಆತ್ಮೀಯರಾಗಿಯೂ ಸಮೀಪದ ಗ್ರಾಮದವರಾಗಿಯೂ ಬಲ್ಲವರೂ ಆಗಿದ್ದ ಪುಟ್ಟಣ್ಣನವರಲ್ಲಿ ಅಭಿನಯಿಸುವ ಅವಕಾಶ ಕೇಳಿದರು.  ಹೀಗೆ 1969ರಲ್ಲಿ ತೆರೆಕಂಡ ಪ್ರಸಿದ್ಧವಾದ ‘ಗೆಜ್ಜೆಪೂಜೆ’ ಚಿತ್ರದಲ್ಲಿ ನಾಯಕ ಗಂಗಾಧರ್ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದು ಚಿತ್ರರಂಗದಲ್ಲಿ ಆರತಿ ಅವರ ಪ್ರಥಮ ಪಾತ್ರ ನಿರ್ವಹಣೆ.

1970-71ರ ಅವಧಿಯಲ್ಲಿ  ಕಸ್ತೂರಿ ನಿವಾಸ, ಪ್ರತಿಧ್ವನಿ, ಕುಲಗೌರವ, ಸಿಪಾಯಿ ರಾಮು,  ನ್ಯಾಯವೇ ದೇವರು ಮುಂತಾದ ರಾಜ್ ಕುಮಾರ್ ಅವರ ಪ್ರಧಾನ ಭೂಮಿಕೆಯ ಚಿತ್ರಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿದ ಆರತಿ ಮುಂದೆ ‘ನಾಗರಹಾವು’ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ಪಡೆದ ತಿರುವು ಮಹತ್ವಪೂರ್ಣವಾದದ್ದು.  ಒಂದು ರೀತಿಯಲ್ಲಿ ಇದು ಅವರ ಬದುಕಿನ ತಿರುವು ಕೂಡಾ ಹೌದು.   ‘ನಾಗರಹಾವು’ ಚಿತ್ರ ಪುಟ್ಟಣ್ಣ ಕಣಗಾಲರ ಜೀವನದಲ್ಲಿ ಕೂಡಾ ಹಲವು ರೀತಿಯಲ್ಲಿ ವೈಶಿಷ್ಟ್ಯಮಯ ಚಿತ್ರ.  

ಪುಟ್ಟಣ್ಣ ಕಣಗಾಲರು ಶರಪಂಜರ, ಬೆಳ್ಳಿಮೋಡ, ಗೆಜ್ಜೆಪೂಜೆ, ಸಾಕ್ಷಾತ್ಕಾರ ಮುಂತಾದ ಮಹತ್ವದ ಚಿತ್ರಗಳನ್ನು ‘ನಾಗರಹಾವು’ ಚಿತ್ರಕ್ಕೆ ಮೊದಲೇ ನೀಡಿದ್ದರೆಂಬುದು ನಿಜ.  ಆದರೆ ‘ನಾಗರಹಾವು’ ಚಿತ್ರ ಪುಟ್ಟಣ್ಣನವರು ನೀಡಿದ ಕಲಾವಿದರುಗಳ ಕೊಡುಗೆಗಾಗಿ ಹೆಚ್ಚು ಆಪ್ತವಾಗುತ್ತದೆ.  ಈ ಚಿತ್ರದಿಂದ ಕಣಗಾಲರು ತಾವು   ನೀಡಿದ ಹೊಸ ನಿಟ್ಟಿನ ಕಲಾವಿದರಾದ ವಿಷ್ಣುವರ್ಧನ್, ಅಂಬರೀಶ್, ಶುಭಾ ಮುಂತಾದ ಪ್ರತಿಭೆಗಳಿಗಾಗಿ   ಹೇಗೆ ಪ್ರಸಿದ್ಧರೋ ಅಂತೆಯೇ ಅವರು  ಆರತಿ, ಅಶ್ವಥ್, ಶಿವರಾಂ, ಜಯಂತಿ, ಎಂ. ಪಿ. ಶಂಕರ್, ಲೀಲಾವತಿ  ಅಂತಹವರ ಕಲಾವಂತಿಕೆಯನ್ನು ವಿಶಿಷ್ಟ ರೀತಿಯಲ್ಲಿ ಹೊರಹೊಮ್ಮಿಸಿದ್ದಕ್ಕೆ ಕೂಡಾ ಅಷ್ಟೇ ಪ್ರಮುಖರಾಗಿ ಕಾಣುತ್ತಾರೆ.  ರಾಮಾಚಾರಿಯ ಮೊದಲ ಪ್ರೇಮದ ಹುಡುಗಿಯಾಗಿ ‘ಕರ್ಪೂರದ ಗೊಂಬೆ ನಾನು’ ಎಂದು ಮಿಂಚಿ, ನಂತರದಲ್ಲಿ ವಿಭಿನ್ನ ರೀತಿಯ ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎನ್ನುವ ಆರತಿ ಒಂದು ರೀತಿಯಲ್ಲಿ ಇಡೀ ಚಿತ್ರದ ಅಂತರಾತ್ಮವೇ ಆಗಿ   ಪ್ರೇಕ್ಷಕನ ಹೃದಯಲ್ಲಿ ನೆಲೆ ನಿಂತುಬಿಡುತ್ತಾರೆ.  ‘ನಾಗರಹಾವು’ ಚಿತ್ರಕ್ಕಾಗಿ ಅಂದು ಪ್ರಶಸ್ತಿ ಪಡೆದವರಲ್ಲಿ ಆರತಿ ಕೂಡಾ ಪ್ರಮುಖರು.

ಮುಂದೆ ಆರತಿ ಅವರಿಗೆ ಪುಟ್ಟಣ್ಣ ಕಣಗಾಲರ ಗರಡಿಯಲ್ಲಿ ಹಲವಾರು ಚಿತ್ರಗಳು ದೊರಕಿದವು.  ‘ಶುಭಮಂಗಳ’, ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’, ‘ಬಿಳಿ ಹೆಂಡ್ತಿ’, ‘ಧರ್ಮಸೆರೆ’, ‘ಕಥಾಸಂಗಮದ ಭಾಗವಾದ ಮುನಿತಾಯಿ’, ‘ಪಡುವಾರಳ್ಳಿ ಪಾಂಡವರು’ ಹಾಗೂ ಯಾವುದೇ ಕಲಾವಿದೆ ತನ್ನ ಜೀವಮಾನದಲ್ಲೊಮ್ಮೆ ಅಂತಹ ಅವಕಾಶ ಪಡೆದರೆ ಧನ್ಯೆ ಎನಿಸುವಂತಹ ‘ರಂಗನಾಯಕಿ’.  ಇವೆಲ್ಲವೂ ಆರತಿ ಅವರ ಅಭಿನಯ ಸಾಮರ್ಥ್ಯವನ್ನು ಅಪೂರ್ವ ರೀತಿಯಲ್ಲಿ ಹೊರತಂದ ಮಹತ್ವದ  ಚಿತ್ರಗಳು.      

ಈ ಮಧ್ಯೆ ಆರತಿ ಅವರು, ಇತರ ನಿರ್ದೇಶಕರಿಂದ ಮೂಡಿಬಂದ ಪ್ರಸಿದ್ಧ ಚಿತ್ರಗಳಾದ 'ಶ್ರಿಕೃಷ್ಣ ರುಕ್ಮಿಣಿ ಸತ್ಯಭಾಮ', ‘ಸಿಪಾಯಿ ರಾಮು',  ‘ಹೊಂಬಿಸಿಲು’, ‘ಮಾಗಿಯ ಕನಸು’, ‘ಪ್ರೇಮದ ಕಾಣಿಕೆ’, ‘ಪಾವನಗಂಗ’, ‘ಅನುರಕ್ತೆ’,  ‘ಮುಳ್ಳಿನ ಗುಲಾಬಿ’,  ‘ದೇವರ ಕಣ್ಣು’, ‘ಮಹಾತ್ಯಾಗ’, ‘ಪ್ರೀತಿಸಿ ನೋಡು’, ‘ಸುವರ್ಣ ಸೇತುವೆ’ ಅಂತಹ ಪಾತ್ರಗಳಲ್ಲಿ ನೀಡಿದ ಅಭಿನಯ ಅವರಿಗೆ ಕೌಟುಂಬಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿ ಎಂಬ ಪ್ರಸಿದ್ಧಿಯನ್ನು ತಂದಿತ್ತು.  ಇದಲ್ಲದೆ ವಸಂತ ಲಕ್ಷ್ಮಿ, ರಾಜಾ ನನ್ನ ರಾಜಾ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ನಾನಿರುವುದೇ ನಿನಗಾಗಿ, ಹೊಸಿಲು ಮೆಟ್ಟಿದ ಹೆಣ್ಣು, ಭಕ್ತ ಸಿರಿಯಾಳ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೂಡಾ ಅವರು ನಟಿಸಿದ್ದರು.  ಒಂದು ಕಾಲದಲ್ಲಿ ಆರತಿ ಮತ್ತು ಮಂಜುಳಾ ಒಂದು ಒಂದೂವರೆ ದಶಕದಲ್ಲಿ ಬಂದಿದ್ದ ಸಿಂಹಪಾಲು ಚಿತ್ರಗಳನ್ನು ಆಕ್ರಮಿಸಿಕೊಂಡಿದ್ದರು.  

1969ರ ವರ್ಷದಿಂದ 1987ರ ವರ್ಷದ ವರೆಗಿನ ಸುಮಾರು ಹದಿನೆಂಟು ವರ್ಷಗಳ ವೃತ್ತಿ ಜೀವನದಲ್ಲಿ ಆರತಿ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು.   ಒಂದಿನಿತು ಇತರ ಭಾಷೆಗಳ ಚಿತ್ರಗಳಿಗೂ ಹೋಗಿ ಬಂದಿದ್ದರು.   ಅವರಿಗೆ ದೊರೆತಷ್ಟು ವಿಭಿನ್ನ ಪಾತ್ರಗಳು ಕನ್ನಡ ಚಿತ್ರರಂಗದಲ್ಲಿ ಇತರರಿಗೆ ದೊರೆತದ್ದು ಕಡಿಮೆ.  ಆ ಪಾತ್ರಗಳಿಗೆ ಅವರು ಅಷ್ಟೇ ನಿಷ್ಠೆಯಿಂದ ತನ್ಮಯತೆಯಿಂದ ಅಭಿನಯ ನೀಡಿದ್ದರು ಎಂಬುದು ಕೂಡಾ ಅಷ್ಟೇ ನಿಜ.  

ಕಲಾಮಾಧ್ಯಮ ಕಲೆಗಾಗಿ ಕಲಾವಿದರನ್ನು ಪ್ರಸಿದ್ಧಿ ಪಡಿಸುವುದಕ್ಕಿಂತ ಆ ಕಲಾವಿದರ ಬದುಕಿನಲ್ಲಿ ನಡೆದ ಅಂಕು ಡೊಂಕುಗಳನ್ನು ಹೆಚ್ಚು ಕಾಣಿಸಿಬಿಡುತ್ತದೆ.  ಚಿತ್ರರಂಗದ ಬದುಕು ಕೆಲವೊಂದು ಪ್ರಸಿದ್ಧ ನಟರನ್ನು ಸುಖವಾಗಿರಿಸಿದ್ದಷ್ಟು ಪ್ರಸಿದ್ಧ ಕಲಾವಿದೆಯರನ್ನು ಸುಖವಾಗಿರಿಸಿದ್ದು ಕಡಿಮೆ.  ಈ ನಿಟ್ಟಿನಲ್ಲಿ ನಮ್ಮ ಕನ್ನಡ ಚಿತ್ರರಂಗವನ್ನೂ ಒಳಗೊಂಡಂತೆ ಹಲವು ಕಲಾವಿದೆಯರ ನಿದರ್ಶನಗಳು ನಮ್ಮ ಮುಂದಿವೆ.  ಆರತಿ ಅವರು ಕೂಡಾ ಇಂತಹ ಪ್ರವಾಹದಲ್ಲಿ ತಮ್ಮದೇ ಆದ ರೀತಿಯಲ್ಲಿ ಈಜಿದವರು.  ಹಲವು ವರ್ಷ ವಿದೇಶವೆಂಬ ಅಜ್ಞಾತದಲ್ಲಿದ್ದು ಪುನಃ ಇಲ್ಲಿಗೆ ಬಂದು 'ಮಿಠಾಯಿ ಮನೆ’ ಎಂಬ ಪ್ರಶಸ್ತಿ ಪಡೆದ ಚಿತ್ರ ನಿರ್ಮಿಸಿ ನಿರ್ದೇಶಿಸಿದರು.   ತಮ್ಮ ಹೆಸರನ್ನು ಎಲ್ಲೂ ಬಹಿರಂಗ ಪಡಿಸದೆಯೇ ದೊಡ್ಡ ರೀತಿಯ ಸಮಾಜ ಸೇವೆ ಮಾಡಿದರು ಎಂಬ ಸುದ್ಧಿ ಕೂಡಾ ಪತ್ರಿಕೆಗಳಲ್ಲಿ ಮೂಡಿ ಬಂತು.

ಕಾಲ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ.  ಏನೆಲ್ಲಾ ಮರೆಯಾಗಿ ಹೋಗುತ್ತವೆ.  ಆದರೆ ಮಧುರತೆ ಎಂಬ ನೆನೆಪು ಎಂದೋ ಹೂಬನದಲ್ಲಿ ಕಂಡ ಕೆಲವೊಂದು ಹೂವುಗಳ ನೆನಪನ್ನು ಅಲ್ಲಲ್ಲಿ ನಮ್ಮಲ್ಲಿ ಉಳಿಸಿರುತ್ತವೆ.  ಉತ್ತಮ ಕಲಾವಿದರು ಕೂಡಾ ತಾವು ನಡೆದ ಹಾದಿಯಲ್ಲಿ ಅಂತಹ ಪರಿಮಳವನ್ನು ಅಲ್ಲಲ್ಲಿ ಚೆಲ್ಲಿ ಸಾಗಿರುತ್ತಾರೆ.  ಈ ನಿಟ್ಟಿನಲ್ಲಿ ‘ನಾಗರಹಾವು’, ‘ಉಪಾಸನೆ’, ‘ಮುನಿತಾಯಿ’, ‘ಹೊಂಬಿಸಿಲು’, ‘ರಂಗನಾಯಕಿ’ ಅಂತಹ ಪಾತ್ರಗಳ ಆರತಿ ತಮ್ಮ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ ಆರತಿಯ ಪ್ರಭೆ ಖಂಡಿತವಾಗಿ ಸ್ಮರಣೀಯವಾದದ್ದು.

On the birthday of our great actress Arathi 
Arati

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ