ಮಮತಾ ಅರಸೀಕೆರೆ
ಮಮತಾ ಅರಸೀಕೆರೆ
ಮಮತಾ ಅರಸೀಕೆರೆ ಬಹುಮುಖಿ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಪ್ರತಿಭಾನ್ವಿತೆ, ಸಂಘಟನಾ ಚತುರೆ ಮತ್ತು ಸಮಾಜಮುಖಿ ಕ್ರಿಯಾಶೀಲೆ.
ಆಗಸ್ಟ್ 16 ಮಮತಾ ಅವರ ಹುಟ್ಟುಹಬ್ಬ. ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದಲ್ಲಿ. ತಂದೆ ಅನಂತರಾಮಯ್ಯ. ತಾಯಿ ಶಾರದಮ್ಮ. ಪದವಿ, ಟಿಸಿಎಚ್, ಬಿಎಡ್, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಂತಾದವು ಮಮತಾ ಅವರ ಶೈಕ್ಷಣಿಕ ಸಾಧನೆಗಳು. ಮಮತಾ ಅವರು ನೆಲೆ ನಿಂತಿರುವುದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ.
ಮಮತಾ ಅವರು ಶಿಕ್ಷಕಿಯಾಗಿ ಸೇವೆ ಆರಂಭಿಸಿ ಮುಂದೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬಡ ಮಕ್ಕಳು ಓದುವ ಶಾಲೆಗಳಿಗೆ ಸಂಪನ್ಮೂಲ ತರುವ ಅವರ ಕಾರ್ಯಶ್ರದ್ಧೆ ಮತ್ತು ಪ್ರೀತಿ ಮನನೀಯವಾದದ್ದು.
ಮಮತಾ ಅವರದ್ದು ವ್ಯಾಪಕ ಮಾನಸಿಕ ಜಗತ್ತು. ವಿಜ್ಞಾನ, ರಂಗಭೂಮಿ, ಸಾಹಿತ್ಯ, ಸಂಘಟನೆ ಮುಂತಾದ ಎಲ್ಲೆಡೆ ಇವರ ಆಸಕ್ತಿಗಳು ವ್ಯಾಪಿಸಿವೆ. ಚಿತ್ರಕಲೆಯಲ್ಲೂ ಅವರಿಗೆ ಅಭಿರುಚಿ ಇದೆ.
'ಸಂತೆ ಸರಕು' ಕವನ ಸಂಕಲನ, ‘ಕಾಲಡಿಯ ಮಣ್ಣು' ಎಂಬ ಹಿಂದಿಯಿಂದ ಅನುವಾದಿತ ಕವನ ಸಂಕಲನ ಇವರ ಮೊದಲ ಪ್ರಕಟಿತ ಕೃತಿಗಳು.
'ನೀರ ಮೇಲಿನ ಮುಳ್ಳು' ಕವನ ಸಂಕಲನ, 'ಒಳಗೂ - ಹೊರಗು' ಲೇಖನಗಳ ಸಂಕಲನ 2022ರಲ್ಲಿ ಹೊರಬಂದಿದೆ. 'ಗಾಯಗಳಿಗೆ ವಿದಾಯ ಹೇಳಬೇಕು' ಅವರ ಮತ್ತೊಂದು ಸಂಕಲನ. ಇದಲ್ಲದೆ ಇವರ ಮಕ್ಕಳ 'ಪೇಟೆ ಮಕ್ಳು ಹಳ್ಳಿಗ್ ಬಂದ್ರು' ಎಂಬ ನಾಟಕ 'ಮಕ್ಕಳ ಮೂರು ನಾಟಕಗಳು' ಕೃತಿಯ ಭಾಗವಾಗಿದೆ. ಇವರ ಬರಹಗಳು 'ಹೆಣ್ಣೊಳನೋಟ' ಮತ್ತು ಇತರ ಅನೇಕ ಪ್ರಮುಖ ಸಂಗ್ರಹ ಪ್ರಕಟಣೆಗಳ ಭಾಗವಾಗಿದೆ. ಇವರ ಕವಿತೆ, ಕಥೆ, ಚಿಂತನ, ಅಂಕಣ ಮತ್ತು ಪ್ರವಾಸ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ಶೋಭಿಸುತ್ತ ಬಂದಿವೆ. ಪ್ರವಾಸಗಳಲ್ಲಿ ಅಪಾರ ಆಸಕ್ತರಾದ ಮಮತಾ ಅವರು ಹೋದೆಡೆಗಳಲ್ಲಿನ ಜನ, ಬದುಕು, ಸಂಸ್ಕೃತಿ ಮತ್ತು ವಿಶೇಷತೆಗಳನ್ನು ತಮ್ಮ ಬರವಣಿಗೆಗಳಲ್ಲಿ ಆಪ್ತವಾಗಿ ತೆರೆದಿಡುತ್ತ ಬಂದಿದ್ದಾರೆ. ಇವರ ಕವಿತೆಗಳು ಹಿಂದಿ, ಇಂಗ್ಲಿಷ್, ಮಲಯಾಳಂ, ತೆಲುಗು, ತಮಿಳು ಮತ್ತಿತರ ಭಾಷಗಳಿಗೆ ಅನುವಾದಗೊಂಡಿವೆ. ಭಾವಗೀತೆಗಳಾಗಿ ಪ್ರಸಿದ್ಧರ ಧ್ವನಿಯಲ್ಲಿ ಹಾಡಾಗಿಯೂ ನಲಿದಿವೆ.
ರಂಗಕಲೆಯಲ್ಲಿ ವ್ಯವಸ್ಥಿತ ತರಬೇತಿ ಪಡೆದಿರುವ ಮಮತಾ ನಾಟಕೋತ್ಸವ, ನಾಟಕ ನಿರ್ಮಾಣ, ಕಾಲೇಜು ವಿದ್ಯಾರ್ಥಿಗಳಿಗಾಗಿ ಸೆಮಿನಾರ್‌ಗಳು, ಬೀದಿ ನಾಟಕಗಳು, ಸಂಗೀತ, ಜಾನಪದ, ರಂಗ ತರಬೇತಿಯಂತಹ ಶಿಬಿರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದ್ದಾರೆ. ‘ಅರಸೀ ವೇದಿಕೆ' ಮೂಲಕ ಮಕ್ಕಳ ನಾಟಕ ನಿರ್ಮಾಣ ಮಾಡಿದ್ದಾರೆ. ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಆನಂದಕಂದ ಟ್ರಸ್ಟ್, ಗೋಕಾಕ್ ಟ್ರಸ್ಟ್, ಪುತಿನ ಟ್ರಸ್ಟ್, ಮೊದಲಾದ ಟ್ರಸ್ಟ್ ಮೂಲಕ ಮಾಡುತ್ತ ಬಂದಿದ್ದಾರೆ. ಕತೆ - ಕಾವ್ಯ ಕಮ್ಮಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಅವರು ಸದಾ ಮುಂದು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಎಚ್. ನರಸಿಂಹಯ್ಯನವರ ಸ್ಮರಣಾರ್ಥ ಹಾಸನ ಜಿಲ್ಲೆಯದ್ಯಂತ ಜಾಥಾ ನಡೆಸಿದ್ದಾರೆ. ಮತದಾನದ ಕುರಿತು ಬೀದಿ ನಾಟಕಗಳು ಮತ್ತು ಮೂಢನಂಬಿಕೆ ನಿರ್ಮೂಲನೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮೈಸೂರಿನ ರಂಗಾಯಣಕ್ಕಾಗಿ ಮಕ್ಕಳ ನಾಟಕ ರಚನೆ, ನಿರ್ಮಾಣ ಮಾಡಿದ್ದಾರೆ. ಹಲವಾರು ಪ್ರಸಿದ್ಧ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ.ಇತ್ತೀಚೆಗೆ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ ಗೌರವ ಅವರನ್ನರಸಿ ಬಂದಿದೆ.
ಮಮತಾ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೂ ಸೇರಿದಂತೆ ರಾಜ್ಯ ಮತ್ತು ದೇಶದ ವಿವಿದೆಡೆಗಳಲ್ಲಿನ ಅನೇಕ ಸಮ್ಮೇಳನ, ಉತ್ಸವಗಳು ಮತ್ತು ವಿಚಾರಗೋಷ್ಠಿಗಳಲ್ಲಿ ಪ್ರತಿನಿಧಿಯಾಗಿ ಕವಿತೆ ಮತ್ತು ವಿಚಾರ ಮಂಡಿಸಿದ್ದಾರೆ.
ಮಮತಾ ಅರಸೀಕೆರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಂಟಿಯಾಗಿ ನೀಡುವ ಪ್ರಸಿದ್ಧ ಮಯೂರವರ್ಮ ಸಾಹಿತ್ಯ ಪ್ರಶಸ್ತಿ, ಕಣವಿ ಕಾವ್ಯ ಪ್ರಶಸ್ತಿ ಹಾವೇರಿ, ಮಂಡ್ಯ ಬಿಎಂಶ್ರೀ ಕಾವ್ಯ ಪುರಸ್ಕಾರ, ಹರಿಹರಶ್ರೀ ಕಾವ್ಯ ಪ್ರಶಸ್ತಿ, ‘ನೀರ ಮೇಲಿನ ಮುಳ್ಳು’ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’, 'ಗಾಯಗಳಿಗೆ ವಿದಾಯ ಹೇಳಬೇಕು' ಕಾವ್ಯ ಸಂಕಲನಕ್ಕೆ ಮುಂಬೈನ ಸುಶೀಲಾ ಎನ್ ಶೆಟ್ಟಿ ಹಸ್ತಪ್ರತಿ ಬಹುಮಾನ, 'ನೀರ ಮೇಲಿನ ಮುಳ್ಳು'ವಿಗೆ 2023ರ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಕಾವ್ಯ ಪುರಸ್ಕಾರ, 'ಒಳಗೂ- ಹೊರಗೂ'ವಿಗೆ 2022 ರ ಹೊನ್ಕಲ್ ಸಾಹಿತ್ಯ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಪ್ರತಿಭಾವಂತರೂ ಆತ್ಮೀಯರೂ ಆದ ಮಮತಾ ಅರಸೀಕೆರೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Mamatha Arsikere 🌷🌷🌷
ಕಾಮೆಂಟ್‌ಗಳು