ಹುಟ್ಟಿದ ಹಬ್ಬ
ಹುಟ್ಟಿದ ಹಬ್ಬ
ಒಂದು ದಿನ ನನ್ನನ್ನೂ ತೊಟ್ಟಿಲಲ್ಲಿ ಹಾಕಿ ಹೆಸರಿಟ್ಟರು.
ಅಂದಿನಿಂದ ನಾನು ಕೃಷ್ಣ!
ಎಷ್ಟೋ ದಿನಗಳ ನಂತರ ಒಂದು ದಿನ, ಮತ್ತೆ ಸಂಜೆಯಾಗಿತ್ತು.
ನನಗೆ ಬೆಳಗಿನ ಮೇಲೆ ಪ್ರೀತಿ.
ಸಂಜೆಯ ಮೇಲೆ ಕೋಪ!
ಅಮ್ಮ ಬೆಳಗಾಗಿದೆ ಎನ್ನುವ ಮೊದಲೆ ಏಳುತ್ತಿದ್ದೆ. “ಸಂಜೆಯಾಗಿದೆ” ಅಂದರೆ “ಈಗೇಕೆ ಸಂಜೆ; ಈಗಲೇ ಆಗಬಾರದು” ಎನ್ನುತ್ತಿದ್ದೆ. ಅದೂ ತಾಯಿಗೆ ನಗು. ನಾನು ಹೀಗೆ ಹೇಳಿದರೆ ಅವಳೇಕೆ ಎತ್ತಿ ಕುಣಿದಾಡಬೇಕು? ನನಗೆ ಗೊತ್ತಾಗುತ್ತಿರಲಿಲ್ಲ.
ನೆರೆಮನೆಯ ಹೆಂಗಸರೆಲ್ಲ ನಮ್ಮ ಮನೆಯಲ್ಲಿ ನೆರೆದಿದ್ದಾರೆ. ಎಲ್ಲರೂ ಹೊಸ ಬಟ್ಟೆ ತೊಟ್ಟಿದ್ದಾರೆ. ಮುಡಿಯಲ್ಲಿ ಹೂ.
ನಾನೊಬ್ಬನೆ ಹೊಸ ಬಟ್ಟೆ ತೊಟ್ಟಿದ್ದೆ.
ನನ್ನ ಜತೆಗಿದ್ದವರನ್ನು ಕೇಳಿದೆ, “ನೀನು ಹೊಸ ಬಟ್ಟೆ ಹಾಕಿ ಬಾ....”
“ನಮ್ಮಮ್ಮ ಕೊಟ್ಟಿಲ್ಲ”
“ನಮ್ಮ ಅಮ್ಮ ಕೊಡುತ್ತಾಳೆ.”
‘ಅವನು ಇಂದು ಹಾಕಬಾರದು.”
“ಯಾಕೆ?”
“ಇಂದು ನಿನಗೆ ಹುಟ್ಟಿದ ಹಬ್ಬ, ನೀನು ಹೊಸ ಬಟ್ಟೆ ಹಾಕಬೇಕು.” ಶಾರೂ ನನಗಿಂತ ಹಿರಿಯ ನಾನು ಅವನ ಹತ್ತಿರ ಸರಿದು ಕೇಳಿದೆ,
“ಶಾರೂ ನೀವೆಲ್ಲ ಹುಟ್ಟಲಿಲ್ಲವೇನೋ, ನಿಮಗೆ ಹಬ್ಬ ಇಲ್ಲವೆ?”
“ನಮ್ಮ ಹುಟ್ಟಿದ ಹಬ್ಬ ಬಂದಾಗ ನಾವೂ ಹೊಸ ಅಂಗಿ ತೊಡುತ್ತೇವೆ. ಮೊನ್ನೆಯೆ ನನಗೆ ಹುಟ್ಟಿದ ಹಬ್ಬವಾಯಿತು. ನಾಡಿದ್ದು ನಂದೂಗೆ, ನಾನು ಅವರ ಮನೆಗೇ ಊಟಕ್ಕೆ ಹೋಗುತ್ತೇನೆ”.
ಬಾಲೂ ಹೇಳಿದ. ನನಗೆ ಸಮಾಧಾನವಾಗಲಿಲ್ಲ.
“ನಾವೆಲ್ಲ ಒಂದೇ ದಿನ ಯಾಕೆ ಹುಟ್ಟಬಾರದು. ಹಾಗಿದ್ದರೆ ಎಷ್ಟು ಚಂದ ಗೊತ್ತೊ? ಎಲ್ಲರಿಗೂ ಹೊಸ ಅಂಗಿ...”
ತಾಯಿ ಎಲ್ಲಿಂದಲೊ ಬಂದು ಎತ್ತಿ ಅಪ್ಪಿ ಮುದ್ದಾಡಿದಳು. ನಾನು ಬಿಡಿಸಿಕೊಂಡು ಹೇಳಿದೆ.
“ಅಮ್ಮ ನಾನು ಆಡುವಾಗೆಲ್ಲ ನೀನು ಹೀಗೆ ಅಡ್ಡ ಬರಬಾರದು. ಬಿಡು ನನ್ನ.”
ಅಮ್ಮ ನನ್ನನ್ನು ಕೆಳಗಿಳಿಸಿದಳು. ನನ್ನನ್ನೆ ನೋಡುತ್ತ ನಿಂತಿದ್ದಳು.
“ಅಮ್ಮ ಪುಟ್ಟೂಗೆ ಹೊಸ ಅಂಗಿ ಕೊಡು.”
ತಾಯಿ ಹಿಂದು ಮುಂದೆ ನೋಡಿದಳು.
“ಅವನ ಅಂಗಿ ಕೊಳೆ ಆಗಿದೆ ನೋಡು.”
ತಾಯಿ ಒಳಗಿನಿಂದ ಹೊಸ ಅಂಗಿ ತಂದು ಪುಟ್ಟೂಗೆ ಕೊಟ್ಟಳು. ಪುಟ್ಟೂ ಕೈಯಲ್ಲಿ ಹಿಡಿದು ಅದನ್ನೆ ನೋಡುತ್ತ ನಿಂತ.
“ತೊಟ್ಟುಕೊಳ್ಳೊ ಪೆದ್ದ. ಅಂಗಿ ತೊಟ್ಟುಕೊಳ್ಳೋಕೆ ಬರೋದಿಲ್ಲ.”
ನನ್ನ ಅಂಗಿ ನಾನೇ ತೊಟ್ಟುಕೋತೀನಿ. ನೋಡು ನನಗಿಂತ ನೀನು ಇಷ್ಟು ದೊಡ್ಡವ ಇದ್ದೀ”.
ನಾನು ಅವನ ಹತ್ತಿರ ಸರಿದು ಕಾಲು ಜೋಡಿಸಿ ಅವನ ತಲೆ ನನ್ನ ತಲೆಗೆ ಹಚ್ಚಿ ಅವನ ಎತ್ತರ ತೋರಿಸಿದೆ.
ಆದರೂ ಪುಟ್ಟೂ ಅಂಗಿ ತೊಡಲಿಲ್ಲ.
“ಬಾರೊ ನಾನು ತೊಡಿಸ್ತೀನಿ....”
“ನಾ ಒಲ್ಲೆ ಅಮ್ಮ ಕೊಟ್ರೆ ಅಂಗಿ ತೊಡಬೇಕು.”
“ಅಯ್ಯೊ ಬೆಪ್ಪೆ ಇದನ್ನು ಯಾರು ಕೊಟ್ರು ಕಣ್ಣು ಕಾಣೋದಿಲ್ವೆ? ಇದನ್ನೂ ಅಮ್ಮ ಕೊಡಲಿಲ್ವೆ?”
“ಅಲ್ಲೊ ಅವರಮ್ಮ ಕೊಟ್ಟದ್ದು ಅವನು ತೊಡಬೇಕು”
“ಶಾರೂ ಇಷ್ಟು ದೊಡ್ಡವನಾಗಿದ್ದಿ? ಅಮ್ಮ ಬೇರೇನೆ? ಅಮ್ಮ ಎಲ್ಲರಿಗೂ ಒಂದೇ ಅಲ್ಲವೇನೋ, ಹೇಗೊ ಗೊತ್ತಿಲ್ಲ ನಿನಗೆ?
“ತೋಡೋ ಪುಟ್ಟಾ ಅಂಗೀನ....”
ಅಮ್ಮನ ಕಣ್ಣಲ್ಲಿ ನೀರು ಬಂದಿತ್ತು. ಪುಟ್ಟ ಅಂಗಿ ತೊಟ್ಟುಕೊಳ್ಳುವುದನ್ನು ನೋಡುತ್ತಲೇ ಇದ್ದಳು.
ಪುಟ್ಟೂ ಅಂಗಿ ತೊಟ್ಟರೆ ಅಮ್ಮನಿಗೇಕೆ ಅಳು ಬರಬೇಕು. ತಿಳಿಯಲಿಲ್ಲ. ಪುಟ್ಟೂ ಅಂಗಿ ತೊಟ್ಟ. ನಾನು ಕೂಗಾಡಿದೆ.
“ಓಹೋ ಹೇಗಿದೆ”
ನನಗೆ ಶಾರೂ, ನಂದೂ, ಬಾಲೂ.... ಎಲ್ಲರಿಗೂ ಅಂಗಿ ಬೇಕೆನ್ನಿಸಿತು. ಎಲ್ಲರೂ ಚೆನ್ನಾಗಿದ್ದರೇನೆ ಚೆನ್ನ.
“ಅಮ್ಮ ಶಾರೂ, ನಂದೂ, ಬಾಲೂ ಎಲ್ಲರಿಗೂ ಹೊಸ ಅಂಗಿ ಕೊಡು.”
“ಕೃಷ್ಣ ಮನೆಯಲ್ಲಿ ಅಷ್ಟೆಲ್ಲ ಅಂಗಿ ಇರ್ತಾವೇನೋ?” ಶಾರೂಗೆ ತಾನು ದೊಡ್ಡವನೆಂಬ ಜಂಭ, ಏನಾದರೂ ಅಡ್ಡತಿಡ್ಡಾನೆ ಅವ ಮಾತನಾಡೋದು.
“ಅಮ್ಮ ಅಂದ್ರೆ ಮಕ್ಕಳಿಗೆಲ್ಲ ಅಂಗಿ ಕೊಡಲೇಬೇಕು. ನೀನು ಸುಮ್ಮನಿರು ಅಮ್ಮ ಬೇಗೆ ಇನ್ನು ಐದು ಅಂಗಿ ತಾ.”
ನಾನು ಶಾರೂ ನಂದೂ ಬಲ್ಲೂ, ಒಬ್ಬೊಬ್ಬರಾಗಿ ಎಣಿಸಿ ಹೇಳಿದೆ. ಐದೇ ಜನ ಇತ್ತು.
“ನೋಡೋ ನನ್ನ ಲೆಕ್ಕ ಎಷ್ಟು ಸರಿ” ಅಮ್ಮ ಕೆನ್ನೆಗೊಂದು ಮುತ್ತುಕೊಟ್ಟವಳೇ, “ಈಗಲೆ ಅಂಗಿ ತಂದೆ” ಎಂದವಳೆ ಒಳಗೆ ಓಡಿದಳು. ಅವಳು ಬರುವುದು ಒಂದು ನಿಮಿಷ ತಡವಾಯಿತು. ಶಾರೂ ಶುರು ಮಾಡಿದ.
ಅಂಗಿ ಏನು ಹೂವೇ ಹಣ್ಣೇ. ಹೋಗಿ ಹಿತ್ತಲಮರದಿಂದ ಕಿತ್ಕೊಂಡು ಬರ್ತಾರೆಯೇ?
“ಮನೆಯಲ್ಲಿ ಒಂದು ಹೆಚ್ಚಾದರೆ ಎರಡು ಇರ್ತಾವೆ....” ಇನ್ನು ಏನೋ ಹೇಳುವವನಿದ್ದ. ಅಮ್ಮ ಅಂಗಿಯ ಪೊಟ್ಟಣ ತಂದಳು.
“ನೋಡೋ ಶಾರಿ ಅಂಗೀನ. ಮಕ್ಕಳಿಗೆ ಬೇಕಾದ್ದುದನ್ನು ಅಮ್ಮ ಕೊಡಲೇ ಬೇಕು ಕಣೋ. ಅಮ್ಮನ ಮೇಲೆ ನಂಬಿಕೇನೇ ಇಲ್ಲದವ ನೀನೆಂಥ ಮಗನೋ...?”
ತಾಯಿ ತನ್ನ ಕೈ ಮುಟ್ಟಿ ಎಲ್ಲರಿಗೆ ಒಂದೊಂದು ಅಂಗಿ ಕೊಡಹತ್ತಿದಳು. ಅಮ್ಮನಿಗೆ ತಿಳಿಯೋದಿಲ್ಲವೆಂದು ನಾನೇ ಎಚ್ಚರಿಸಿದೆ.
“ಶಾರೂಗೆ ದೊಡ್ಡ ಅಂಗಿ ಕೊಡು ನಂದೂಗೆ ಚಿಕ್ಕದು”
ಅಮ್ಮ ನಗುತ್ತಾಳೆ ಯಾಕೋ ಒಮ್ಮೊಮ್ಮೆ ತಿಳಿಯುವುದಿಲ್ಲ.
ದೊಡ್ಡವರು ಮಾಡುವುದು ನನಗೆ ಹೇಗೆ ತಿಳಿಯಬೇಕು? ನಾವೆಲ್ಲ ಈಗ ಹೊಸ ಅಂಗಿಯ ಹುಡುಗರು. ಅಮ್ಮ ಎಲ್ಲರನ್ನೂ ನೋಡಿ ಹಿಗ್ಗಿರಬೇಕು. ಎಲ್ಲರ ಕೆನ್ನೇನು ತಟ್ಟಿ ಮುಂದಲೆ ಮೂಸಿದಳು. ಅಷ್ಟರಲ್ಲಿ ಯಾರೋ ಕೂಗಿದರು. ಅಮ್ಮ ಅತ್ತ ಹೋದಳು.
ನಾವೆಲ್ಲ ಕೈಗೆ ಕೈ ಹಿಡಿದುಕೊಂಡು ಕುಣಿದಾಡಿದೆವು.
ಮೊಗಸಾಲೆಯಲ್ಲಿ ಒಂದು ರತ್ನಗಂಬಳಿ. ಅದರ ಮೇಲೊಂದು ದುಕೂಲ ಹಾಸಿದ್ದರು. ನೆರೆಮನೆಯಾಕೆ ನಂದೂನ ತಾಯಿ. ಅವಳು ನನ್ನನ್ನು ಎಳೆದು ಹಸೆಗೆ ಕರೆದು ಕೂರಿಸಿದಳು.
ಕೂಡಲೆ ನಾನು ಎದ್ದು ಹೊರಟೆ.
ಯಾರೋ ಹೇಳಿದರು, “ಕೂಡಬೇಕಪ್ಪ ಕೂತುಕೊ”
“ಇಲ್ಲ ಸಾಧ್ಯವಿಲ್ಲ ನನಗೆ ಕೆಲಸವಿದೆ”.
ನನ್ನ ಮಾತು ಕೇಳಿದ ಹೆಂಗಸರಿಗೆ ನಗೆ. ನನಗೆ ವಿಚಿತ್ರವೇ ಅನ್ನಿಸಿತು. ಹೆಂಗಸರ ನಗೆ ಅಳುವಿಗೆ ಕಾರಣವೇ ತಿಳಿಯೋದಿಲ್ಲ.
ನಾನು ಹೊರಟು ಓಡುತ್ತಿರುವಾಗಲೆ ಇನ್ನೊಬ್ಬಳು ಹೇಳಿದಳು. “ಕೂತುಕೋ ಅಂದರೆ ಕೂತುಕೊಳ್ಳಬೇಕು. ಇಂದು ಹುಟ್ಟಿದ ಹಬ್ಬ ಆರತಿ ಮಾಡಿಸಿಕೊಳ್ಳಬೇಕು...”
“ಅವರು ಅವರೆಲ್ಲ....?”
“ಅವರೂ ತಮ್ಮ ಹುಟ್ಟಿದ ಹಬ್ಬಕ್ಕೆ ಮಾಡಿಸಿಕೊಳ್ಳುತ್ತಾರೆ...?”
“ನೀನೋ ಶಾರೂಗಿಂತ ದೊಡ್ಡವಳು. ಅದೆಲ್ಲ ಆಗದು, ಅವರೂ ಇಂದೇ ಹುಟ್ಟಬೇಕು. ಈಗ ಆರತಿ ಮಾಡಿಸಿಕೊಳ್ಳಬೇಕು. ಅವರು ಹುಟ್ಟಿದರೇನೆ ನಾನು ಹುಟ್ಟುತ್ತೇನೆ. ನಾನೊಬ್ಬನೇ ಹುಟ್ಟೋದಿಲ್ಲ...”
ಹೆಂಗಸರೆಲ್ಲಾ ಬಿದ್ದು ಬಿದ್ದು ನಕ್ಕರು ನನಗೆ ತುಸು ಕೋಪ ಬಂತು. ನಗಲಿಕ್ಕೆ ಇವರಿಗೇನು ಬಂತೊ?
ಹಸೆಯ ಮೇಲೆ ಎಲ್ರೂ ಸ್ನೇಹಿತರು ಬಂದರು. ನಡುವೆ ನಾನು, ಅಕ್ಕಪಕ್ಕಕ್ಕೆ ಉಳಿದವರು. ಅಮ್ಮ ಎಲ್ಲರಿಗೂ ಕುಂಕುಮ ಇಟ್ಟರು. ಮುಂದಲೆಗೆ ಎಣ್ಣೆಯ ಬೊಟ್ಟು. ಹೆಂಗಳೆಯರು ಏನೋ ಹಾಡುತ್ತ ಆರತಿ ಎತ್ತಿದರು. ಆರತಿಯ ದೀಪದ ಕೆಳಗೆ ಕೊಬ್ಬರಿ ಬೆಲ್ಲ ಇತ್ತು. ನಾನು ಆರತಿ ಎಣಿಸಿದೆ ಏಳು ಇದ್ದವು. ನಂದೂನಿಂದ ಶಾರೂನವರೆಗೆ ನನ್ನ ಹಿಡಿದು ಎಣಿಸಿ ನೋಡಿದರೆ ಏಳೆ ಏಳು.
‘ಸರಿ ಹೋಯಿತು’ ಲೆಕ್ಕ ಎಂದೆ. ತಾಯಿ ನಮ್ಮ ಕೈಯಲ್ಲಿ ಏನೋ ಸಿಹಿ ಹಾಕಿದರು. ನಾವೆಲ್ಲ ಬಾಯಿಗೆ ಅದನ್ನು ನೂಕಿಕೊಂಡು ಅಂಗಿಯ ತೋಳಿನಿಂದಲೆ ಬಾಯಿ ಒರೆಸಿಕೊಂಡು ಎದ್ದೆವು. ಓರಗೆಯವರೆಲ್ಲ ಓಡಿದ್ದರು.
ನನಗೆ ಆರತಿಯ ಮೇಲೆ ಕಣ್ಣಿತ್ತು. ದೀಪ ನಂದುವ ದಾರಿಕಾಯುತ್ತ ನಿಂತಿದ್ದೆ. ಶಾತವಾಗಿದ್ದೇ ತಡ ಏಳು ಆರತಿಯನ್ನು ಸರ್ರನೆ ಮುಷ್ಟಿಯಲ್ಲಿ ಹಿಡಿದವನೇ ಅಂಗಳಕ್ಕೆ ಓಡಿದೆ. ಗೆಳೆಯರೆಲ್ಲ ಒತ್ತಟ್ಟಿಗಿಲ್ಲ. ತಮ್ಮ ತಾಯಿಂದಿರ ಸೆರಗು ಹಿಡಿದು ನಿಂತುಕೊಂಡಿದ್ದಾರೆ.
“ಬನ್ನಿರೊ ಇಲ್ಲಿ...”
ಅಂದದ್ದೇ ತಡ ಓಡಿ ಬಂದೇ ಬಿಟ್ಟರು. ನಾನು ಮುಷ್ಠಿ ಬಿಚ್ಚಿ ಎಲ್ಲರಿಗೂ ಒಂದೊಂದು ಆರತಿ ಕೊಟ್ಟೆ. ಉಳಿದ ಒಂದನ್ನು ನಾನೂ ಬಾಯಲ್ಲಿ ಹಾಕಿ ಕೊಂಡೆ.
“ಎಲ್ಲರಿಗೂ ಇಂದೇ ಹುಟ್ಟಿದ ಹಬ್ಬ, ಆಯಿತೊ ಇಲ್ಲೋ....” ನಾನು ಹಿಗ್ಗಿನಿಂದಲೇ ಕೇಳಿದೆ.
“ಅದು ಹೇಗೊ ಆಗುತ್ತೇ, ಇಂದು ನಿನ್ನದೆ ಹುಟ್ಟು ಹಬ್ಬ,ನಮ್ಮದು ಬೇರೆ ದಿನ....”
ಅದೇ ಅಡ್ಡ ಮಾತನಾಡುವ ಶಾರೂನ ಕೆಟ್ಟ ಮಾತು. ನಾನು ಜರ್ರನೆ ಇಳಿದು ಹೋದೆ.
ಎಲ್ಲರೂ ಇಂದೇ ಹುಟ್ಟಬೇಕೆಂದು –
ಹೊಸ ಅಂಗಿ ಹಾಕಿಕೊಂಡೆವು.
ಕುಂಕುಮ ಹಚ್ಚಿಕೊಂಡೆವು,
ಬಂದು ಹಸೆಯ ಮೇಲೆ ಕೂಡಿ ಕುಳಿತೆವು.
ಆರತಿ ಬೆಳಗಿಸಿಕೊಂಡೆವು.
ಸಿಹಿ ತಿಂಡಿ ತಿಂದೆವು.
ಹಸೆಬಿಟ್ಟು ಕೆಳಗೆ ಬರುವುದರೊಳಗೆ ಈ ಹುಚ್ಚರಿಗೆ-
ಅದೇ ಜ್ವರ. ನಾವು ಬೇರೆ ಬೇರೇ ಹುಟ್ಟಿದೆವು. ನಾಯಿಯ ಬಾಲ....
ಆಗಲೆ ತಿಂದ ಸಿಹಿಯ ತಳದಲ್ಲಿ ಏನೋ ಕಹಿ ಇದೆ ಎನ್ನಿಸಿತು. ಮಂಕು ಹಿಡಿದು ನಿಂತಿದ್ದೆ. ಅವರೆಲ್ಲ ಹೊರಟು ಹೋದರು.
ನಾನು ಅಮ್ಮನ ಸೆರಗು ಹಿಡಿದುಕೊಂಡು ಮುಖ ಮುಚ್ಚಿಕೊಂಡಿದ್ದೆ. ನನಗೇಕೋ ದುಃಖ ಬಂದಿತ್ತು. ತನ್ನ ಸೀರೆ ನೆನೆದುದನ್ನು ಕಂಡು ಅಮ್ಮ ತೋಳಲ್ಲಿ ನನ್ನ ಎತ್ತಿ ಕಣ್ಣೊರೆಸಿದಳು.
“ಯಾಕೆ ಮಗು ಅಳುವುದು ಯಾಕೆ, ಯಾವ ಪಾಪಿ ದೃಷ್ಟಿ ತಾಕಿತೊ?”
(ಸತ್ಯಕಾಮ ಅವರ ‘ರಾಜಕ್ರೀಡೆ’ ಕಥಾನಕದ ಒಂದು ಸಣ್ಣ ಎಳೆ)
ಕಾಮೆಂಟ್‌ಗಳು