ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೀನ್ ಕಾನರಿ


 ಜೇಮ್ಸ್ ಬಾಂಡ್  ಶಾನ್ ಕಾನರಿ


ನಮಗೆ ಇಂಗ್ಲಿಷ್ ಚಿತ್ರಗಳ ವ್ಯಾಮೋಹದ ಹುಚ್ಚು ಹೆಚ್ಚಾದದ್ದೇ ಜೇಮ್ಸ್ ಬಾಂಡ್ ಚಿತ್ರಗಳಿಂದ.  ಮತ್ತೊಂದು ರೀತಿಯಲ್ಲಿ ಭಾರತದ ತೆರತೆರನಾದ ಹೊಡೆದಾಟಗಳ ಹೀರೋ  ವೈಭವೀಕರಣದ ಮೂಲ ಕೂಡಾ ಜೇಮ್ಸ್ ಬಾಂಡ್ ಚಿತ್ರಗಳಲ್ಲೇ ಇದೆ. ಈ ಜೇಮ್ಸ್ ಬಾಂಡ್ ಮೊದಲ ಪಾತ್ರಧಾರಿ ಶಾನ್ ಕಾನರಿ. 

ಸರ್ ಥಾಮಸ್ ಶಾನ್ ಕಾನರಿ 1930ರ ಆಗಸ್ಟ್‌ 25ರಂದು ಯುನೈಟೆಡ್ ಕಿಂಗ್ಡಂನ ಎಡಿನ್ಬರ್ಗ್ ಪ್ರದೇಶದ ಫೌಂಟೇನ್ ಬ್ರಿಡ್ಜ್‌ನಲ್ಲಿ ಜನಿಸಿದರು. ತಾಯಿ ಕಸಗುಡಿಸುವ ವೃತ್ತಿಯಲ್ಲಿದ್ದರು. ತಂದೆ ಕಾರ್ಖಾನೆ ನೌಕರರಾಗಿದ್ದರು. ಇವರ ಹೆಸರಿನಲ್ಲಿರುವ ಶಾನ್ ಎಂಬುದು ಇವರ ಬಾಲ್ಯದ ಗೆಳೆಯ ಸೀಮಸ್ ಎಂಬಾಂತ ಈತನನ್ನು ಕರೆಯುತ್ತಿದ್ದ ಬಗೆ.  ಕೋಪರೇಟಿವ್ ಸೊಸೈಟಿಯಲ್ಲಿ ಹಾಲು ಮಾರುವನಾಗಿ ಸೀನ್ ಕಾನರಿ ಕೆಲಸ ಮಾಡಿ ನಂತರ ಸೈನ್ಯ ಸೇರಿದರೆ, ರೋಗಿಷ್ಟ ಎಂದು ಹೊರದಬ್ಬಲ್ಟಟ್ಟರು. ಪುನಃ ಹಾಲು ವಿತರಕನಾಗಿ, ಲಾರಿ ಚಾಲಕನಾಗಿ ಕೆಲಸ ಮಾಡುತ್ತಾ ರಂಗಭೂಮಿಯಲ್ಲಿ ತೆರೆಯ ಹಿಂದೆ ಕೆಲಸ ಮಾಡಿದರು.  ಬಾಡಿ ಬಿಲ್ಡರ್ ಆಗಿ, ಪುಟ್ಟರೀತಿಯ ನಟನಾಗಿ ಹಾಗೆಯೇ ಕ್ರಮೇಣ ಪ್ರಸಿದ್ಧಿಗೇರುತ್ತಲೇ ಹೋದರು.

1962ರಿಂದ 1967 ಅವಧಿಯ ಪ್ರಥಮ ಐದು ಬಾಂಡ್ ಚಿತ್ರಗಳಾದ ಡಾ. ನೋ, ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್ ಅಲ್ಲದೆ 1971ರ ಡೈಮಂಡ್ಸ್ ಆರ್ ಫಾರೆವರ್ ಮತ್ತು 1983ರ ನೆವರ್ ಸೇ ನೆವರ್ ಅಗೈನ್ ಸೇರಿ ಒಟ್ಟು ಏಳು ಚಿತ್ರಗಳಲ್ಲಿ ಶಾನ್ ಕಾನರಿ ವಿಜೃಂಭಿಸಿದ್ದರು. 

ಬಾಂಡ್ ಚಿತ್ರಗಳಲ್ಲದೆ ಮಾರ್ನಿ, ಮರ್ಡರ್ ಆನ್ ದಿ ಓರಿಯಂಟ್ ಎಕ್ಸ್ಪ್ರೆಸ್, ದ ಮ್ಯಾನ್ ಹೂ ವುಡ್ ಬಿ ಕಿಂಗ್, ಎ ಬ್ರಿಡ್ಜ್ ಟೂ ಫಾರ್, ಹೈಲ್ಯಾಂಡರ್, ದ ಅನ್‍ಟಚಬಲ್ಸ್, ಇಂಡಿಯಾನಾ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್, ದ ಹಂಟ್ ಫಾರ್ ರೆಡ್ ಅಕ್ಟೋಬರ್, ಎಂಟ್ರಾಪ್ಮೆಂಟ್, ಡ್ರಾಗನ್‍ಹಾರ್ಟ್, ದ ರಾಕ್, ಫೈಂಡಿಂಗ್ ಫಾರೆಸ್ಟರ್ ಮುಂತಾದವು ಶಾನ್ ಕಾನರಿ ಅವರ ಹಲವು ಪ್ರಸಿದ್ಧ ಚಿತ್ರಗಳು.  

ಸೀನ್ ಕಾನರಿ 2006ರಲ್ಲಿ ನಿವೃತ್ತರಾದರು.  ಒಂದು ಅಕಾಡಮಿ ಪ್ರಶಸ್ತಿ, ಎರಡು ಬಾಫ್ಟಾ ಪ್ರಶಸ್ತಿ, ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿ,  ಕೆನೆಡಿ ಸೆಂಟರ್ ಜೀವಮಾನ ಸಾಧನೆ ಪ್ರಶಸ್ತಿ, 2004ರಲ್ಲಿ 'ದ ಗ್ರೇಟೆಸ್ಟ್ ಲಿವಿಂಗ್ ಸ್ಕಾಟ್' ಎಂದು ಸಂಡೇ ಹೆರಾಲ್ಡ್  ಆಯ್ಕೆ, 2011ರಲ್ಲಿ 'ಸ್ಕಾಟ್ಲೆಂಡಿನ ಗ್ರೇಟೆಸ್ಟ್ ಲಿವಿಂಗ್ ನ್ಯಾಷನಲ್ ಟ್ರೆಷರ್' ಎಂದು ಯೂರೋಮಿಲಿಯನ್ಸ್ ಸಮೀಕ್ಷಾ ಆಯ್ಕೆ, ಪೀಪಲ್ ನಿಯತಕಾಲಿಕ ಸಮೀಕ್ಷೆಯಲ್ಲಿ 1989ರಲ್ಲಿ  'ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್'  ಮತ್ತು 1999ರಲ್ಲಿ 'ಸೆಕ್ಸಿಯೆಸ್ಟ್ ಮ್ಯಾನ್ ಆಫ್ ದ ಸೆಂಚುರಿ' ಆಯ್ಕೆ ಮುಂತಾದ ಗೌರವ ಪ್ರಸಿದ್ಧಿಗಳು ಶಾನ್ ಕಾನರಿ ಅವರದ್ದಾಗಿದ್ದವು.

ಏನು ಸಾಧನೆಯಿದ್ದರೇನು, ಏನು ಸೆಕ್ಸಿಯೆಸ್ಟ್ ಆಗಿದ್ದರೇನು 'ಕಾಲನ ದೂತರು ಕೈಪಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ?’.  ಶಾನ್ ಕಾನರಿ 2020ರ ಅಕ್ಟೋಬರ್ 31ರಂದು ನಿಧನರಾದರು. ಬದುಕಿದ್ದಾಗ ಉಳಿಸಿಹೋದ ನೆನಪುಗಳೆಲ್ಲ ಕೆಲಕಾಲದ ಮುಂದಿನವರ ನೆನಪಿಗಾಗಿ.  ಶಾನ್ ಕಾನರಿ ನಮ್ಮಲ್ಲಿ ಅಂತಹ ನೆನಪು ತುಂಬಿದವರೆಂಬುದಂತೂ ನಿಜ. ಕೆಲವು ಚಿತ್ರಗಳಲ್ಲಿ ನಾವು ಕಂಡ ಶಾನ್ ಕಾನರಿಯವರಲ್ಲಿದ್ದ ವರ್ಚಸ್ಸು ನಿಜಕ್ಕೂ ನೆನಪಲ್ಲಿ ಉಳಿಯುವಂತದ್ದು.

On the birth anniversary of Sean Connery

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ