ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಮದೇವ


 ನಾಮದೇವ 


ಸಂತ ನಾಮದೇವ ಅವರ ಕಾಲ 1270-1350.  ಇವರು ಜ್ಞಾನೇಶ್ವರ ಅವರ ಸಮಕಾಲೀನರು. ನಾಮದೇವ ಇಂದಿನ ವಿಶಾಲವಾದ ವಿಟ್ಠಲಭಕ್ತಿಯ ಸಂಪ್ರದಾಯಕ್ಕೆ ತಳಹದಿಯನ್ನು ಹಾಕಿದವರು. 

ನಾಮದೇವ ಅವರ ತಂದೆ ದಾಮಾಶೇಟಿ. ಇವರು ವೃತ್ತಿಯಲ್ಲಿ ಸಿಂಪಿಗ. 

ನಾಮದೇವ ತನ್ನ ಆರಂಭದ ಜೀವನವನ್ನು ನೀಚ ವೃತ್ತಿಯಲ್ಲಿ ಕಳೆದಂತೆ ತಿಳಿಯುತ್ತದೆ. ಕಳ್ಳರ ಸಹವಾಸದಲ್ಲಿದ್ದು, ಅನೇಕ ದಾರಿಹೋಕರನ್ನು ಸುಲಿದು, ಕೊಂದು ಒಮ್ಮೆ ಅವಂಡಿ ಎಂಬ ಹಳ್ಳಿಗೆ ದೇವ ದರ್ಶನಕ್ಕೆ ಹೋದಾಗ ರೋದಿಸುತ್ತಿದ್ದ ಹೆಂಗಸೊಬ್ಬಳನ್ನು ಕಂಡು ಮರುಗಿ ಆಕೆಯ ದುಃಖಕ್ಕೆ ಕಾರಣವೇನೆಂದು ವಿಚಾರಿಸಿದ. ಆಕೆಯ ಗಂಡನನ್ನು ಕೊಂದವನು ತಾನೇ ಎಂದು ತಿಳಿದಾಗ ಇವನಲ್ಲಿ ವೈರಾಗ್ಯ ಹುಟ್ಟಿತು. ಅನಂತರ ಈತ ಪಂಢರಪುರಕ್ಕೆ ಬಂದು ವಿಟ್ಠಲನ ಭಕ್ತನಾದ. 

ಒಮ್ಮೆ ಜ್ಞಾನೇಶ್ವರರೇ ಮೊದಲಾದ ಸಂತರು ಕೂಡಿದಾಗ ಗೋರಾ ಕುಂಬಾರ ಎಂಬ ಭಕ್ತ ತನ್ನ ಕೈಯೊಳಗಿನ ಬಡಿಗೆಯಿಂದ ಇವರ ತಲೆಯ ಮೇಲೆ ಕುಟ್ಟಿ, ಈ ಗಡಿಗೆ ಕಚ್ಚಾ ಇದೆ ಎಂದು ಹೇಳಿದ. ಇದರಿಂದ ಅವಮಾನಿತರಾದ ನಾಮದೇವರು ವಿನೋಬಾ ಖೇಚರರ ದರ್ಶನಕ್ಕಾಗಿ ಬಾರ್ಶಿಗೆ ಹೋದರು. ದೇವರು ಎಲ್ಲೆಡೆಯೂ ಇದ್ದಾನೆಂಬ ಮಾತನ್ನು ವಿನೋಬಾ ಈತನಿಗೆ ಮನವರಿಕೆ ಮಾಡಿಕೊಟ್ಟರು. ಜ್ಞಾನೇಶ್ವರನನ್ನು ಕೂಡಿಕೊಂಡು ಇವರು ಭರತಖಂಡದ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಿದರು. ಜ್ಞಾನದೇವರು ತೀರಿಕೊಂಡಾಗ ಇವರು ಅಲ್ಲಿದ್ದು 1350ರಲ್ಲಿ ಸಮಾಧಿಯನ್ನು ಹೊಂದಿದರು. 

ಪಂಢರಪುರದಲ್ಲಿರುವ ಶ್ರೀ ವಿಟ್ಠಲಮಂದಿರದ ಮಹಾದ್ವಾರದ ಮೊದಲ ಮೆಟ್ಟಿಲೇ ನಾಮದೇವರ ಸಮಾಧಿ ಸ್ಥಾನವೆಂದು ತಿಳಿಯಲಾಗಿದೆ.
ಅತ್ಯಂತ ಆರ್ತಭಕ್ತರಾದ ನಾಮದೇವರು ಪರಮಾತ್ಮನ ನಾಮದ ಮಹಿಮೆಯನ್ನು ಹೆಚ್ಚಾಗಿ ಸಾರಿದ್ದಾರೆ. ನಿನ್ನ ನಾಮವನು ಒಂದರ ಗಳಿಗೆ ನೆನೆಯದಿರೆ ನನ್ನ ಪ್ರಾಣವೇ ಹೋಗಲಿ ಎನ್ನುತ್ತಾರೆ. ಪ್ರಪಂಚವನ್ನು ಮಾಡಿ, ಪರಮಾರ್ಥವನ್ನು ಪಡೆಯುವುದು ಸಾದ್ಯವಿಲ್ಲವೆಂದು ಇವರ ಅಭಿಪ್ರಾಯ. ಭಕ್ತ ಮಲಗಿ ಹಾಡಿದರೆ ಪರಮಾತ್ಮ ಕುಳಿತು ಕೇಳುತ್ತಾನೆ; ಆತ ಕುಳಿತು ಹಾಡಲು ಪರಮಾತ್ಮ ನಿಂತು ಕೇಳುತ್ತಾನೆ; ನಿಂತು ಹಾಡಿದರೆ ಭಕ್ತರ ಮುಂದೆ ಪರಮಾತ್ಮ ನಲಿಯುತ್ತ ಕುಣಿಯುತ್ತಾನೆ ಎನ್ನುತ್ತಾರೆ ಈ ಸಂತರು. (ಇದನ್ನೇ ದಾಸರ ಮಾತಿನಲ್ಲೂ ಮುಂದೆ ನಾವು ಕನ್ನಡದಲ್ಲಿ ಓದಿದ್ದೇವೆ). 

ಪರಮಾತ್ಮನ ಸಾಕ್ಷಾತ್ಕಾರದಿಂದ ಮಾನವ ದೈವವತ್ವಕ್ಕೇರಬಹುದು ಎನ್ನುವ ನಂಬಿಕೆ ನಾಮದೇವರದು.

On Remembrance Day of Namdev


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ