ಮುದಗಲ್ ವೆಂಕಟೇಶ್
ಮುದಗಲ್ ವೆಂಕಟೇಶ್
ಮುದಗಲ್ ವೆಂಕಟೇಶ್ ಸಾಹಿತ್ಯ, ಸಾಂಸ್ಕೃತಿಕ, ಜನಪರ ಕಾಳಜಿ ಮತ್ತು ಆತ್ಮೀಯ ಗುಣಗಳಿಗೆ ಹೆಸರಾದವರು. ಕೌನ್ ಬನೇಗಾ ಕ್ರೋರ್ ಪತಿ ಅಂತಹ ಅಮಿತಾಬ್ ಬಚ್ಚನ್ ನಡೆಸುವ ಕಾರ್ಯಕ್ರಮದಲ್ಲೂ ದೊಡ್ಡ ಸಾಧನೆ ಮಾಡಿಬಂದವರು.
ಮುದಗಲ್ ವೆಂಕಟೇಶ್ 1961ರ ಆಗಸ್ಟ್ 6ರಂದು ಜನಿಸಿದರು. ಅವರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವೀಧರರು.
ಮುದಗಲ್ ವೆಂಕಟೇಶರು 1986ರಿಂದ
ಮೊದಲ್ಗೊಂಡಂತೆ ಕಳೆದ 36 ವರ್ಷಗಳನ್ನು ಮೀರಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಸಿವಿಲ್ ಇಂಜಿನಿಯರಿಂಗ್ ಜವಾಬ್ಧಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ತಮ್ಮ ಕೆಲಸದ ತಾಂತ್ರಿಕತೆಯ ಭಾಗ ಮಾತ್ರವಾಗಿರದೆ ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಗುಲ್ಬರ್ಗಾ ನಗರದ ಸಾಂಸ್ಕೃತಿಕ ಆವರಣದ ಕ್ರಿಯಾಶೀಲ ಪ್ರತಿನಿಧಿಯೂ ಆಗಿದ್ದವರು.
ಮುದಗಲ್ ವೆಂಕಟೇಶ್ ಅವರಿಗೆ ಸಾಹಿತ್ಯ, ರಂಗಭೂಮಿ, ರಸಪ್ರಶ್ನೆ ಮುಂತಾದ ಸಾಂಸ್ಕೃತಿಕ ಅಸಕ್ತಿಗಳಲ್ಲಿ ಅಪಾರ ಆಸಕ್ತಿ. ಉತ್ತಮ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಗಳು ತಮಗಿಷ್ಟವಾಗಿದ್ದಾದರೆ, ಅಥವಾ ಆಪ್ತವಲಯದಲ್ಲಿದ್ದರೆ ಅವರು ಗುಲ್ಬರ್ಗಾದಿಂದ ಎಷ್ಟೇ ದೂರದಲ್ಲಿದ್ದರೂ ಪಯಣಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನನ್ನಂತಹವರಿಗೆ ಅವರ ಪರಿಚಯ ಸೌಭಾಗ್ಯ ಸಿಕ್ಕಿದ್ದೇ ಬೆಂಗಳೂರಿನಲ್ಲಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭೇಟಿ ಆದಾಗ. ಅವರಿಗೆ ಕಥೆ, ಕಾದಂಬರಿ, ಹರಿದಾಸ ಸಾಹಿತ್ಯ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಅಪಾರ ಆಸಕ್ತಿ. ಅವರು ಶಹಾಬಾದ್ನಲ್ಲಿ ಇದ್ದ ದಿನಗಳಲ್ಲಿ ಹನ್ನೊಂದು ಪ್ರಮುಖ ನಾಟಕಗಳಲ್ಲಿ ಪಾತ್ರನಿರ್ವಹಿಸಿದ್ದರು. ಆಕಾಶವಾಣಿಯಲ್ಲಿ 'ಬಿ' ಶ್ರೇಣಿ ಪುರಸ್ಕೃತ ನಾಟಕ ಕಲಾವಿದರಾದ ಮುದಗಲ್ ವೆಂಕಟೇಶ್ ಅನೇಕ ರೇಡಿಯೋ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ.
ಸಂಗೀತ ಪ್ರೇಮಿಗಳಾದ ಮದಗಲ್ ವೆಂಕಟೇಶರಿಗೆ ಶಾಸ್ತ್ರೀಯ, ಲಘು ಸಂಗೀತ, ಅದರಲ್ಲೂ ಮರಾಠಿ ಅಭಂಗಗಳೆಂದರೆ ಪ್ರಾಣ. ಕೆಲಕಾಲ ಡಾ. ಗುರುರಾಜ ದಂಡಾಪೂರ ಅವರಲ್ಲಿ ಹಾರ್ಮೋನಿಯಂ ಕಲಿಕೆಯನ್ನೂ ಮಾಡಿದ್ದಾರೆ.
ಮುದಗಲ್ ವೆಂಕಟೇಶರ ಪ್ರಮುಖ ಕಾರ್ಯಗಳಲ್ಲಿ ಪತ್ರಿಕಾ ಲೇಖನಗಳು ಪ್ರಮುಖವಾದವು. ಅವರು ಇದುವರೆವಿಗೂ 900ಕ್ಕೂ ಹೆಚ್ಚು ಲೇಖನಗಳನ್ನು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ದಿ ಹಿಂದೂ ಪತ್ರಿಕೆಗಳಲ್ಲಿ ಮೂಡಿಸಿದ್ದಾರೆ. ಇವರ ಅನೇಕ ಪ್ರಸಿದ್ಧ ಸಚಿತ್ರ ಲೇಖನಗಳೂ ಈ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ.
ಮುದಗಲ್ ವೆಂಕಟೇಶ್ ದೂರದರ್ಶನದ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದವರು.
ಮುದಗಲ್ ವೆಂಕಟೇಶ್ ಅವರು ನವೆಂಬರ್ 2005ರಲ್ಲಿ ಅಮಿತಾಬ್ ಬಚ್ಚನ್ ಅವರು ನಡೆಸಿಕೊಟ್ಟ 'ಕೌನ್ ಬನೇಗಾ ಕರೋಡಪತಿ' ಕಾರ್ಯಕ್ರಮದಲ್ಲಿ ಸಹೋದರ ಪ್ರಾಣೇಶ ಮುದಗಲ್ ಅವರೊಂದಿಗೆ ಭಾಗವಹಿಸಿ 2 ಲಕ್ಷ ಬಹುಮಾನ ಗೆದ್ದರು. ಮುಂದೆ 2011ರ ಅಕ್ಟೋಬರ್ 28ರಂದು ಕೌನ್ ಬನೇಗ ಕರೋಡಪತಿ ಜೋಡಿ ಸ್ಪೆಷಲ್ ಎಪಿಸೋಡ್ನಲ್ಲಿ ಈ ಸಹೋದರರು ತಲಾ 12.50ಲಕ್ಷ ಬಹುಮಾನ ಗೆದ್ದು ಬಂದರು. ಈ ಎಪಿಸೋಡ್ ಯು ಟ್ಯೂಬ್ನಲ್ಲಿದ್ದು ಇದನ್ನು ಕಂಡಾಗ ಈ ಸೋದರರು ಕನ್ನಡವನ್ನು ಅಮಿತಾಭರ ಮುಂದೆ ಹಾಟ್ಸ್ಪಾಟ್ನಲ್ಲಿ ಕುಳಿತು ಬೆಳಗಿದ ರೀತಿ ಮುದ ನೀಡುವಂತಿದೆ. ಹೀಗೆ ತಮ್ಮ ಮುದಗಲ್ ಹೆಸರಿನ ಮೊದಲೆರಡು ಅಕ್ಷರದ ಅಪ್ಯಾಯಮಾನತೆಯನ್ನು ಇವರು ಸಾರ್ಥಕವಾಗಿಸಿಕೊಂಡಿರುವವರು.
ಉತ್ತಮ ಛಾಯಾಗ್ರಾಹರೂ ಆಗಿರುವ ಮುದಗಲ್ ವೆಂಕಟೇಶ್ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದಾರೆ. ಪ್ರವಾಸ ಪ್ರಿಯರಾದ ಅವರು ದೇಶ ವಿದೇಶಗಳಲ್ಲಿ ಸಾಕಷ್ಟು ತಿರುಗಿದ್ದಾರೆ. ಗುಲ್ಬರ್ಗಾ ದೂರದರ್ಶನ ಸಂವಾದ ಕಾರ್ಯಕ್ರಮ, ಹಲೋ ಸಿಎಂ ಕಾರ್ಯಕ್ರಮ, ಹಲೋ ಡಾಕ್ಟರ್ ಕಾರ್ಯಕ್ರಮ ಹೀಗೆ ಅವರು ಎಲ್ಲದರಲ್ಲಿ ಭಾಗಿ.
ಮುದಗಲ್ ವೆಂಕಟೇಶ್ ಒಬ್ಬ ಸಕ್ರಿಯ ಕಲಾವಿದ, ಸಕ್ರಿಯ ಕ್ವಿಜ್ ಪಟು, ಸಕ್ರಿಯ ಸಾಮಾಜಿಕ ಕಾಳಜಿಗಳ ಕುರಿತಾದ ಬರಹಗಾರ, ಉತ್ಸಾಹಿ, ಉತ್ತಮ ವಾಗ್ಮಿ; ಪ್ರಚಲಿತ ವಿಚಾರಗಳ ಕುರಿತು ಅಧಿಕಾರಯುತವಾಗಿ ಮಾತಾಡಬಲ್ಲರು. ಎಲ್ಲಕ್ಕಿಂತ ಮುಖ್ಯ ಅವರೊಬ್ಬ ಆತ್ಮೀಯ ಸಹೃದಯಿ. ಅವರಿಗೆ ರಂಗಭೂಮಿ, ಸಿನಿಮಾ, ಸಾಹಿತ್ಯ ಹೀಗೆ ಎಲ್ಲೆಡೆ ಎಲ್ಲರೊಂದಿಗೆ ಒಡನಾಟವಿದೆ. ಅವರಿಗೆ ಜನ ವಿಶೇಷರೇ ಆಗಬೇಕೆಂದಿಲ್ಲ, ನನ್ನಂತಹ ಸಾಧಾರಣನನ್ನೂ ಆಪ್ತವಾಗಿ ಕಾಣುತ್ತಾರೆ.
ಬಹುಮುಖಿ ಪ್ರತಿಭಾನ್ವಿತ ಆತ್ಮೀಯ ಗೆಳೆಯರಾದ ಮುದಗಲ್ ವೆಂಕಟೇಶರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Mudgal Venkatesh Kalaburagi
ಕಾಮೆಂಟ್‌ಗಳು