ಕ್ರಾಕಟೋವ
ಕ್ರಾಕಟೋವ ನೆನಪು
ಇಂಡೋನೇಷ್ಯದ ಜಾವ ಮತ್ತು ಸುಮಾತ್ರ ದ್ವೀಪಗಳ ನಡುವೆ ಸುಂದ ಜಲಸಂಧಿಯಲ್ಲಿರುವ ಚಿಕ್ಕ ಜ್ವಾಲಾಮುಖೀದ್ವೀಪ.
ಇಂಡೊನೇಷ್ಯದ ದ್ವೀಪಗಳಲ್ಲಿ ಹರಡಿರುವ ನೂರಕ್ಕೂ ಹೆಚ್ಚು ಜೀವಂತ ಅಗ್ನಿಪರ್ವತಗಳಲ್ಲಿ ಇಲ್ಲಿಯದೂ ಒಂದು. ವಿಶ್ವದ ಅತ್ಯಂತ ಸಾಂದ್ರ ಜ್ವಾಲಾಮುಖೀ ಪ್ರದೇಶ ಈ ದ್ವೀಪಸ್ತೋಮ.
ಮಾನವ ವೀಕ್ಷಿಸಿರುವ ಅತ್ಯಂತ ಭೀಕರ ಜ್ವಾಲಾಮುಖೀ ಸ್ಫೋಟಗಳ ಪೈಕಿ 1883ರಲ್ಲಿ ಕ್ರಾಕಟೋವದಲ್ಲಿ ಸಂಭವಿಸಿದ ಸ್ಫೋಟವೂ ಒಂದು. ಸುಮಾರು 10,00,000 ವರ್ಷಗಳಿಂದೀಚೆಗೆ ಚಿಮ್ಮಿದ ಕಿಟ್ಟ, ಬೂದಿ, ಮತ್ತು ಲಾವಗಳಿಂದ ಇಲ್ಲಿ ಶಂಕುವಿನಾಕಾರದ ಅಗ್ನಿಪರ್ವತ ರೂಪುಗೊಂಡಿತು. ಈ ಜ್ವಾಲಾಮುಖಿಯ ತಳ ಸಮುದ್ರಮಟ್ಟದಿಂದ 303ಮೀ ಕೆಳಗೆ ಇದೆ. ಅಲ್ಲಿಂದ ಈ ಪರ್ವತ ಸಮುದ್ರಮಟ್ಟದಿಂದ 667 ಮೀ ಎತ್ತರಕ್ಕೆ ಬೆಳೆಯಿತು. ಇತಿಹಾಸ ಪೂರ್ವಕಾಲದಲ್ಲಿ ಈ ಪರ್ವತದ ತುದಿ ನಾಶವಾಗಿ 6.44 ಕಿ.ಮೀ. ಅಗಲದ ಜ್ವಾಲಾಕುಂಡದ (ಕಾಲ್ಡೆರ) ನಿರ್ಮಾಣವಾಯಿತು. ಕುಂಡದ ಬಹುಭಾಗ ಸಮುದ್ರಮಟ್ಟಕ್ಕೆ ಕೆಳಗೆ ಇತ್ತಾದರೂ ಅದರ ಅಂಚಿನ ಭಾಗ ಎತ್ತರವಾಗಿತ್ತು; ಅದರ ಸುತ್ತ ನಾಲ್ಕು ಪುಟ್ಟ ದ್ವೀಪಗಳು ನಿರ್ಮಾಣವಾಗಿದ್ದುವು. ಜ್ವಾಲಾಮುಖಿಯ ಅಗಲವಾದ ಬಾಯಿಂದಾಗಿ ಜ್ವಾಲಾಕುಂಡದ ಚಟುವಟಿಕೆ ಮತ್ತೆ ಪ್ರಕಟವಾಯಿತು. ನಾಲ್ಕು ದ್ವೀಪಗಳ ಪೈಕಿ ಒಂದಾದ ರಕಾಟಾದ ಬಳಿಯಲ್ಲಿ ಎರಡು ಶಂಕುಗಳು ಉಂಟಾದವಲ್ಲದೆ ಕ್ರಮೇಣ ಅವೆರಡೂ ರಕಾಟಾದಲ್ಲಿ ಸೇರಿಹೋದವು. ಹೀಗಾಗಿ ರಕಾಟಾದ ಎತ್ತರ ಸಮುದ್ರಮಟ್ಟದಿಂದ 796 ಕಿ.ಮೀ.ಗೆ ಬೆಳೆಯಿತು.
1883ಕ್ಕೆ ಮುಂಚೆ, ಇತಿಹಾಸ ಕಾಲದಲ್ಲಿ ಸಂಭವಿಸಿದ ಒಂದೇ ಒಂದು ಸ್ಫೋಟವೆಂದರೆ 1680ರಲ್ಲಿ ಸಂಭವಿಸಿದ್ದು. ಮತ್ತೆ 1883ರಲ್ಲಿ ಮೇ 20ರಂದು ಈ ಜ್ವಾಲಾಮುಖಿ ಚೈತನ್ಯಪೂರ್ಣವಾಯಿತು. ಆಗ ಇದರ ಚಟುವಟಿಕೆ ಅಷ್ಟೇನೂ ತೀವ್ರವಾಗಿರಲಿಲ್ಲ. ಬೂದಿ ತುಂಬಿದ ಹಬೆ ಮೋಡಗಳು 10 ಕಿ.ಮೀ. ಎತ್ತರಕ್ಕೆ ಚಿಮ್ಮಿದುವು. ಅದರ ಶಬ್ದ 161 ಕಿ.ಮೀ.ಗಳ ದೂರಕ್ಕೆ ಕೇಳಿಸುತ್ತಿತ್ತು. ಮೇ ತಿಂಗಳ ಅಂತ್ಯದ ವೇಳೆಗೆ ಇದು ಸ್ತಬ್ಧವಾಯಿತಾದರೂ ಮತ್ತೆ ಜೂನ್ 19ರಂದು ಎಚ್ಚತ್ತು. ಆಗಸ್ಟ್‍ನಲ್ಲೂ ಮುಂದುವರಿದು ಆ ತಿಂಗಳ 26ರ ವೇಳೆಗೆ ಅತ್ಯಂತ ಉಗ್ರವಾಯಿತು. ಚಿಮ್ಮಿದ ಬೂದಿಯ ಕಪ್ಪುಮೋಡದ ಎತ್ತರ 27 ಕಿ.ಮೀ. ಫಿರಂಗಿಯಿಂದ ಏಕಪ್ರಕಾರವಾಗಿ ಗುಂಡು ಹಾರಿಸಿದಂತೆ ಇದರ ಸದ್ದು ಬಟೇವಿಯದಲ್ಲಿ ಕೇಳಿಸುತ್ತಿತ್ತು. ಮನೆಗಳು ಅದಿರಿದುವು; ಗೋಡೆಯ ಗಾರೆ ಉದುರಿತು. ಮರುದಿನ ಬೆಳಗ್ಗೆ 10 ಗಂಟೆಯ ವೇಳೆಗೆ ಭಾರಿ ಅನಾಹುತ ಸಂಭವಿಸಿತು. ಆಗ ಚಿಮ್ಮಿದ ಬೂದಿಯ ಎತ್ತರ 80 ಕಿ.ಮೀ. 3542 ಕಿ.ಮೀ. ಆಚೆ, ಆಸ್ಟ್ರೇಲಿಯದಲ್ಲಿ ಇದರ ಸದ್ದು ಕೇಳಿಸಿತು. ಆ ಹಗಲೂ ಅಂದು ರಾತ್ರಿಯೂ ಸ್ಫೋಟ ಮುಂದುವರಿಯಿತು. ಮರುದಿನ ಬೆಳಗ್ಗೆಯ ವೇಳೆಗೆ ಸ್ತಬ್ಧವಾಯಿತು. ಆಮೇಲೂ ಕೆಲವು ತಿಂಗಳುಗಳ ಕಾಲ ಆಗಾಗ ಸ್ಫೋಟಗಳು ಸಂಭವಿಸಿದರೂ ಅವು ಉಗ್ರವಾಗಿರಲಿಲ್ಲ.
ಆ ಮಹಾಸ್ಫೋಟದ ಸಮಯದಲ್ಲಿ ಜ್ವಾಲಾಮುಖಿ ಉಗುಳಿದ ಬಂಡೆಚೂರುಗಳ ಮೊತ್ತ ಸುಮಾರು 21 ಘ.ಕಿ.ಮೀ. ಸುಮಾರು 114000 ಚ.ಕಿ.ಮೀ. ಪ್ರದೇಶದಲ್ಲಿ ಬೂದಿ ತುಂಬಿತ್ತು. ಜ್ವಾಲಾಮುಖಿಯ ಬಳಿಯ ಸಮುದ್ರವನ್ನೆಲ್ಲ ದಟ್ಟವಾಗಿ ಆವರಿಸಿದ್ದ ಕಾಚುವಸ್ತುವಿನಿಂದಾಗಿ ಹಡಗುಗಳ ಸಂಚಾರ ದುರ್ಗಮವಾಗಿತ್ತು. ವಾತಾವರಣದಲ್ಲಿ ತುಂಬಿದ್ದ ಬೂದಿಯಿಂದಾಗಿ ಬೆಳಕೇ ಇರಲಿಲ್ಲ. ಬಟೇವಿಯದಲ್ಲಿ ಆಗಸ್ಟ್ 27 ರಂದು ಮನೆಗಳಲ್ಲಿ ಹಗಲಿನಲ್ಲೂ ದೀಪ ಹಚ್ಚಿಡಬೇಕಾಯಿತು. ಜ್ವಾಲಾಮುಖಿಯಿಂದ ಸುಮಾರು 80 ಕಿ.ಮೀ. ಗಳವರೆಗಿನ ಪ್ರದೇಶದಲ್ಲಿ ಎರಡೂವರೆ ದಿವಸಗಳ ಕಾಲ ಗಾಢಾಂಧಕಾರ ತುಂಬಿತ್ತು. ಜ್ವಾಲಾಮುಖಿಯಿಂದ ಹೊರಟ ಸಣ್ಣ ದೂಳು ಭೂಗೋಳವನ್ನು ಸುತ್ತುತ್ತಿದ್ದುದರಿಂದ ಸ್ಫೋಟ ಸಂಭವಿಸಿದ ಅನಂತರ ಒಂದು ವರ್ಷ ಕಾಲ ವಿಶ್ವದಲ್ಲೆಲ್ಲ ಸೂರ್ಯಾಸ್ತ ವರ್ಣಮಯವಾಗಿತ್ತು.
ಹಿಂದೆ ಇದ್ದ ನಾಲ್ಕು ಪುಟ್ಟ ದ್ವೀಪಗಳ ಪೈಕಿ ಪರ್ಬುವತನ್, ಡಾನನ್ ಮತ್ತು ಪೋಲಿಷ್ ಹ್ಯಾಟ್ ಸಂಪೂರ್ಣವಾಯೂ ರಕಾಟಾದ ಅರ್ಧಭಾಗವೂ ಕಣ್ಮರೆಯಾದುವು. ದ್ವೀಪಗಳಿದ್ದೆಡೆಯಲ್ಲಿ ಸಂಗ್ರಹವಾಗಿದ್ದ ಕಾಚುವಸ್ತುವಿನ ಚೂರುಗಳಲ್ಲಿ ಶೇ.10ರಷ್ಟು ಮಾತ್ರ ಅದೃಶ್ಯವಾದ ದ್ವೀಪಗಳ ಭಾಗವಾಗಿದ್ದುದರಿಂದ ಜ್ವಾಲಾಮುಖಿ ತನ್ನ ಹಳೆಯ ಶಿಖರಗಳನ್ನು ಹೊರತಳ್ಳಲಿಲ್ಲವೆಂದು ಅವು ಒಳಕ್ಕೆ ಕುಸಿದಿರಬೇಕೆಂದೂ ಊಹಿಸಲಾಗಿದೆ. ವಿಶ್ವದ ಇತರ ಜ್ವಾಲಾಕುಂಡಗಳೂ ಇದೇ ರೀತಿ ರೂಪುಗೊಂಡಿವೆ.
ಶಿಖರಗಳ ಕುಸಿತದ ಪರಿಣಾಮವಾಗಿ ಎತ್ತರದ ಅಲೆಗಳು ಎದ್ದುವು. ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ಸಂಭವಿಸಿದ ಸ್ಫೋಟದಿಂದ ಎದ್ದ ಅಲೆಯೇ ಅತ್ಯಂತ ಭೀಕರ, ಅದು ತಲುಪಿದ ಎತ್ತರ 36 ಮೀ. ಜ್ವಾಲಾಮುಖಿಯ ಬಳಿಯ ಜಾವ ಸುಮಾತ್ರಗಳ ಕರಾವಳಿಯ ಪಟ್ಟಣಗಳಲ್ಲಿಯ 36000 ಮಂದಿ ಇದಕ್ಕೆ ಆಹುತಿಯಾದರು. ಎಲ್ಲ ಜೀವರಾಶಿಯೂ ಸಂಪೂರ್ಣ ನಾಶವಾಯಿತು. ಆ ಭಾಗವನ್ನು ನಿಸ್ಸಾರವಾದ ಬೂದಿ ಮುಚ್ಚಿತ್ತು. ಸಸ್ಯ ಪ್ರಾಣಿ ಜೀವನದ ಪುನಃಸ್ಥಾಪನವನ್ನು ಅಧ್ಯಯನ ಮಾಡಲು ಇದರಿಂದ ಅವಕಾಶ ದೊರಕಿತು.
1927ರ ಡಿಸೆಂಬರ್ 29ರಂದು ಸಮುದ್ರ ತಳದಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾದುವು. ಹಿಂದಿದ್ದ ದನಾನ್ ಮತ್ತು ಪರ್ಬುವತನ್‍ಗಳ ನಡುವೆ ಸಂಭವಿಸಿದ ಈ ಸ್ಫೋಟದಿಂದಾಗಿ ಅಲ್ಲೊಂದು ಸಣ್ಣ ಗುಪ್ಪೆ ಎದ್ದು ಸಣ್ಣ ದ್ವೀಪವಾಗಿ ಪರಿಣಮಿಸಿತು. ಇದಕ್ಕೆ ಇಡಲಾದ ಹೆಸರು ಅನಾಕ್ ಕ್ರಾಕಟೋವ ಅಥವಾ ಕ್ರಾಕಟೋವದ ಮಗು. 1953ರ ವೇಳೆಗೆ ಈ ದ್ವೀಪ ಸಮುದ್ರಮಟ್ಟದಿಂದ 109 ಮೀ ಎತ್ತರಕ್ಕೆ ಬೆಳೆದಿತ್ತು. 1960ರ ಅನಂತರವೂ ಜ್ವಾಲಾಮುಖಿಯ ಚಟುವಟಿಕೆ ನಿಲ್ಲಲಿಲ್ಲ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
Krakatova Volcano memories
Pictures are only for representation and are not the exact pictures of real Krakatova
ಕಾಮೆಂಟ್‌ಗಳು