ಟಿ. ಎಸ್. ಲೋಹಿತಾಶ್ವ
ಟಿ. ಎಸ್. ಲೋಹಿತಾಶ್ವ
ಡಾ.ಟಿ. ಎಸ್. ಲೋಹಿತಾಶ್ವ ಅವರು ಪ್ರಾಧ್ಯಾಪಕರಾಗಿ, ರಂಗಭೂಮಿ - ಕಿರುತೆರೆ - ಚಲನಚತ್ರ ಕಲಾವಿದರಾಗಿ ಮತ್ತು ಬರಹಗಾರರಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದವರು. ಪ್ರಸಿದ್ಧ 'ಮುಖ್ಯಮಂತ್ರಿ' ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ರೂಪಾಂತರಿಸಿದ ಕೀರ್ತಿ ಲೋಹಿತಾಶ್ವ ಅವರದ್ದು.
ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆಯಲ್ಲಿ 1942ರ ಆಗಸ್ಟ್ 5ರಂದು ಜನಿಸಿದರು. ತಂದೆ ಸಿದ್ಧವೀರಪ್ಪ. ತಾಯಿ ಭದ್ರಮ್ಮ. ಇಂಗ್ಲೀಷ್ ಸಾಹಿತ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಸಾಧನೆ ಮಾಡಿದರು. ಮುಂದೆ 34 ವರ್ಷಗಳ ಸುದೀರ್ಘಕಾಲ ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿದ್ದರು. ನಿವೃತ್ತಿ ಎಂದು ಸುಮ್ಮನಿರದೆ ಕೃಷಿಯಲ್ಲಿಯೂ ನಿರತರಾಗಿದ್ದರು.
ಲೋಹಿತಾಶ್ವ ಅವರ ಬರಹಗಳಲ್ಲಿ ಬಣ್ಣದ ತಗಡಿನ ತುತ್ತೂರಿ, ಅಕ್ಕಡಿ ಸಾಲು, ಹೊತ್ತು ಹೋಗುವ ಮುನ್ನ (ಕಾವ್ಯ), ಮಾಡುಸಿಕ್ಕದಲ್ಲ, ಎ ಮಿಲಿಯನ್ ಮಾನ್ಷನ್ಸ್, ಮುಖ್ಯಮಂತ್ರಿ, ಸಲ್ಲಾಪ, ಸಂತೆಯಲ್ಲಿ ನಿಂತ ಕಬೀರ (ಅನುವಾದ), ಸಿದ್ದಾಂಗನೆಯ ಸಿದ್ಧಪುರುಷ ಮುಂತಾದವು ಸೇರಿವೆ. ಇವರ ಮೇಲೆ ಗಾಢ ಪ್ರಭಾವ ಬೀರಿದವರು ಬಂಗಾಳಿ ಸಾಹಿತಿ ಶರತ್‍ಚಂದ್ರ ಚಟರ್ಜಿ. ಹೀಗಾಗಿ ಸಿನಿಮಾ ಕಲಾವಿದರಾಗಿರುವ ಇವರ ಪುತ್ರರ ಹೆಸರು ಶರತ್ ಲೋಹಿತಾಶ್ವ.
ಲೋಹಿತಾಶ್ವ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ನಿರಂತವಾಗಿ ದುಡಿದಿದ್ದಾರೆ.
27 ಮಾವಳ್ಳಿ ಸರ್ಕಲ್, ಮುಖ್ಯಮಂತ್ರಿ, ಬೆಳ್ಚಿ, ಭಾರತ ದರ್ಶನ, ಚಸ್ನಾಳ ಟ್ರಾಜಿಡಿ, ದಂಗೆಯ ಮುಂಚಿನ ದಿನಗಳು, ಹುಲಿಯ ನೆರಳು, ಹುತ್ತವ ಬಡಿದರೆ, ಕತ್ತಲೆಯ ದಾರಿ ದೂರ, ಕುಬಿ ಮತ್ತು ಇಯಾಲ, ಮೆರವಣಿಗೆ, ಮೋಟೆ ರಾಮನ ಸತ್ಯಾಗ್ರಹ, ಪಂಚಮ ಮುಂತಾದವು ಲೋಹಿತಾಶ್ವ ಅವರು ಪಾತ್ರ ನಿರ್ವಹಿಸಿದ ಪ್ರಸಿದ್ಧ ನಾಟಕಗಳಲ್ಲಿ ಸೇರಿವೆ.
ಲೋಹಿತಾಶ್ವ ಸುಮಾರು 650 ಚಿತ್ರಗಳಲ್ಲಿ ನಟಿಸಿದ್ದು ಅವುಗಳಲ್ಲಿ ಅಭಿಮನ್ಯು, ಎ.ಕೆ. 47, ದಾದಾ, ದೇವಾ, ಎಲ್ಲರಂಥಲ್ಲ ನನ್ನ ಗಂಡ, ಏಕಲವ್ಯ, ಹೊಸ ನೀರು, ಇಂದಿನ ರಾಮಾಯಣ, ಕಲಾವಿದ, ನೀ ಬರೆದ ಕಾದಂಬರಿ, ಒಂದು ಊರಿನ ಕಥೆ, ಪ್ರೀತಿ ವಾತ್ಸಲ್ಯ, ಸಾಂಗ್ಲಿಯಾನ, ಸಮಯದ ಗೊಂಬೆ, ಸಿಂಹಾಸನ ಮುಂತಾದವು ಸೇರಿವೆ.
ಲೋಹಿತಾಶ್ವ ಅವರು ಕಿರುತೆರೆಯಲ್ಲಿ ಎಂ. ಎಸ್. ಸತ್ಯು ಅವರ ಅಂತಿಮ ರಾಜಾ, ಪ್ರತಿಧ್ವನಿ; ಗಿರೀಶ್ ಕಾಸರವಳ್ಳಿ ಅವರ ಗೃಹಭಂಗ, ಶಂಕರನಾಗ್ ಅವರ ಮಾಲ್ಗುಡಿ ಡೇಸ್, ಜಿ. ವಿ. ಅಯ್ಯರ್ ಅವರ ನಾಟ್ಯರಾಣಿ ಶಾಂತಲಾ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು..
ಲೋಹಿತಾಶ್ವ ಅವರಿಗ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಗೌರವ ಮತ್ತು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಲೋಹಿತಾಶ್ವ 2022ರ ನವೆಂಬರ್ 8ರಂದು ಈ ಲೋಕವನ್ನಗಲಿದರು.
On the birth anniversary of writer, actor and teacher Dr. T. S. Lohitashwa
ಕಾಮೆಂಟ್‌ಗಳು