ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವ ಪ್ರವಾಸೋದ್ಯಮ ದಿನ


 ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ


ವಿಶ್ವದ ಚರಿತ್ರೆಯೆಲ್ಲ ಬರೀ ಯುದ್ಧಗಳದ್ದೇ. ವಿಶ್ವದಲ್ಲಿ ಯಾವಾಗಲೂ ಯುದ್ಧ ನಡೆಯುತ್ತಿತ್ತು ಇಲ್ಲವೇ ಯುದ್ಧಗಳಿಗೆ ಸಿದ್ಧತೆ ನಡೆಯುತ್ತಿತ್ತು. ಈಗ ಏನು ಕಮ್ಮಿ ಅಂತ ಕೇಳುವವರುಂಟು. ಈಗ ನನ್ನ ಅನಿಸಿಕೆಯಲ್ಲಿ ವಿಶ್ವ ಸಾಕಷ್ಟು ಬದಲಾಗಿದೆ. ಏನು ಅಮೆರಿಕದವರು, ರಷ್ಯಾದವರು, ಪಾಕಿಸ್ತಾನಿಯರು, ಕರೋನಾ ಚೈನೀಸು, ತಾಲೀಬಾನಿಗಳು ಎಲ್ಲಾ ಬುದ್ಧಮ್ ಶರಣಂ ಗಚ್ಛಾಮಿ ಅಂತ ಸನ್ಯಾಸ ತೊಗೊಂಡ್ರ? ನಮ್ಮ ಬುದ್ಧಿ ಜೀವಿಗಳು ಇನ್ಮೇಲೆ ಟಿವಿಯಲ್ಲಿ ಕೂತು ಚರ್ಚೆ ಮಾಡೋಲ್ಲ ಅಂತ ಶಪಥ ಮಾಡಿಬಿಟ್ರ ಅಂತ ಕೇಳ್ಬೇಡಿ.

ಹಿಂದಿನ ಕಾಲದಲ್ಲಿ, ಎಲ್ಲರ ಮನೆಯೂ ಒಂದೇ ತರಹ ಇರೋದು. ಬಹುಶಃ ಎಲ್ಲ ದೇಶಗಳವರೂ ಎಲ್ಲಿಗೆ ಹೋದ್ರೂ ಒಂದೇ. ಎಲ್ಲಿಯೂ ಸ್ಟಾರ್ ಹೋಟೆಲ್ ಇರುತ್ತೆ ಅಂತ ನಿರೀಕ್ಷೆ ಮಾಡ್ತಾ ಇರಲಿಕ್ಕಿಲ್ಲ. ಬೇಜಾರು ಅಂದ್ರೆ ಹೇಳ್ದೆ ಕೇಳ್ದೆ ಚಪ್ಪಲಿ ಕೂಡಾ ಇಲ್ಲದೆ (ಇದ್ದಿದ್ರೆ ತಾನೇ) ಹೊರಟು ಬಿಡೋವ್ರು. 

ಮುಂದೆ ತಾವು ಚೆನ್ನಾಗಿರ್ಬೇಕು ಅಂತ ಆದಾಗ, ಸ್ವಂತ ಶಕ್ತಿಯಿಂದ ಹಾಗೆ ಆಗೋಕೆ ಸಾಧ್ಯ ಇಲ್ಲ ಅಂತ ಆದಾಗ ಮತ್ತೊಬ್ಬರ ಹತ್ರ ಕಿತ್ತುಕೊಂಡು ಇನ್ನೊಬ್ಬನನ್ನು ಕೊಂದ್ ಹಾಕೋಕೆ ತೊಡಗಿದ್ರು. ಅದು ವ್ಯವಸ್ಥಿತವಾಗ್ತಾ ಹೋದಾಗ ಅದಕ್ಕೆ ಒಂದು ಸೈನ್ಯ, ದೊಣ್ಣೆ(ದಂಡ)ನಾಯಕ, ಅದಕ್ಕೊಬ್ಬ (ಅಯೋಗ್ಯ) ರಾಜ, ಹೆದರಿಕೊಂಡೋರಿಗೆ ಒಬ್ಬ ಗುರು, ಅವ ಬಿಡುಗಡೆ ತೋರಿಸೋ ಬಾಗಿಲಿಗೆ ಒಂದು ದೇವರ ವಿಗ್ರಹ ಹೀಗೆ ಬಾಲಂಗೋಚಿ ಬೆಳೀತಾ ಹೋಯ್ತು. ಇಂದೂ ಅದು ಕಡಿಮೆ ಆಗಿಲ್ಲ, ಮುಂದೆ ಎಂದೂ ಕಡಿಮೆ ಆಗೋದೂ ಇಲ್ಲ.

ಆದ್ರೆ ಈ ಮಧ್ಯೆ ಒಂದು ನಿಟ್ಟುಸಿರು ಅಂದ್ರೆ ಮನುಷ್ಯ ಕಂಡುಹಿಡಿದುಕೊಂಡ ವ್ಯಾಪಾರ. ಮುಂಚೆ ವ್ಯಾಪಾರ ಅನ್ನೋದು ಅವಶ್ಯಕತೆಗಳಿಗೆ ನಡೀತಾ ಇತ್ತು. ನಾ ರಾಗಿ ಕೊಡ್ತೀನಿ, ನೀ ಭತ್ತ ಮಡುಗು ಅಂತಿದ್ರು. ಮುಂದೆ ವ್ಯಾಪಾರ ಅನ್ನೋದು ಪರಸಂಗದ ಗೆಂಡೆತಿಮ್ಮನ ಪ್ರಪಂಚ ಆಗಿ ಬದಲಾಗಿದ್ದು ನಮಗೆಲ್ಲ ಗೊತ್ತಿದೆ. ಹಾಗೇ ವಿಶ್ವಬೆಳೀತಾ ಇರೋ ಹಾಗೆ ಈ ವ್ಯಾಪಾರ ಅನ್ನೋದು ತೆರೆಯ ಮೇಲಿನ ಪರಸಂಗದ ಗೆಂಡೆತಿಮ್ಮನ ಕತೆ ಮಾತ್ರಾ ಆಗದೆ ವಿಶ್ವದ ನಿಜನಾಟಕ ಕೂಡಾ ಆಯ್ತು. ಪೆಟ್ರೋಲ್ಗೆ ಯುದ್ದ
ಮಾಡ್ತಾ ಇದ್ದ ಅಮೆರಿಕಕ್ಕೆ ತಾನು ಮಾಡಿದ ಬಾಂಬು ತಾನೇ ಉಪಯೋಗಿಸಿದ್ರೆ ಬರೀ ಲಾಸು. ಅದನ್ನು ಕೊಂಡುಕೊಂಡು ಕಿತ್ತಾಡೋ ಬಕ್ರಾಗಳನ್ನು ಬೆಳೆಸಬೇಕು ಅಂತ ಗೊತ್ತಾಯ್ತು. ಅದೇ ರೀತಿ ಮೊಬೈಲ್ ಮಾಡೋವ್ರಿಗೆ, ಟಿವಿ ಮಾಡೋರಿಗೆ, ಕಾರ್ ಮಾಡೋವ್ರಿಗೆ, ಸಿನಿಮಾ ಮಾಡೋರಿಗೆ ತಮ್ಮ ಊರಿನ ಬಕ್ರಾಗಳು ಮಾತ್ರಾ ಸಾಲೊಲ್ಲ ಅಂತ ಗೊತ್ತಾಯ್ತು.

ಇವೆಲ್ಲವುಗಳ ನಡುವೆ ವಿಶ್ವದ ಸಣ್ಣಪುಟ್ಟ ದೇಶಗಳು ಆತಿಥ್ಯವನ್ನೇ ಆಕರ್ಷಕ ವ್ಯಾಪಾರ ಮಾಡ್ಕೊಂಡು ನಮ್ಮೂರಿನ ವಿಶೇಷ ತೋರಿಸಿ, ಚೆನ್ನಾಗಿ ಆತಿಥ್ಯ ಮಾಡಿದರೆ ಅದಕ್ಕಿಂತ ದೊಡ್ಡ ಬ್ಯುಸಿನೆಸ್ ಯಾವುದೂ ಇಲ್ಲ ಅಂತ ಅರಿವಿಗೆ ಬಂತು. ಅದರಿಂದ ವಿಶ್ವದ ಎಲ್ಲಾ ಪ್ರತಿಷ್ಠಿತ ಹೋಟೆಲ್ಗಳು ಎಲ್ಲೆಡೆಯಲ್ಲೂ  ಫ್ರಾಂಚೈಸ್ ತಂದ್ವು. ವಿಮಾನ ಸಂಸ್ಥೆಗಳು ಹೆಚ್ಚಾದ್ವು. ಎಲ್ಲೆಡೆ ಉದ್ಯೋಗ ಸೃಷ್ಟಿ ಆದ್ವು. ಎಲ್ಲ ದೇಶದವರೂ ಬೇರೆ ದೇಶಕ್ಕೆ ಹೋಗಿ ಮರುಳಾಗಿ ಬೋಳಿಸಿಕೊಳ್ಳುತ್ತಾರೆ, ನಾವು ಚೆನ್ನಾಗಿ ಬೋಳಿಸಿಕೊಳ್ಳೋ ಸೆಲೂನ್ ಆದ್ರೂ ಸೃಷ್ಠಿ ಮಾಡೋಣ, ನಮ್ಮ ದೇವರಿಗೆ ವಜ್ರದ ಅಂಗಿ ಹಾಕಿ, ದೇವಸ್ಥಾನದಲ್ಲಿ ಊಟ ಹಾಕಿ ಪಕ್ಕದಲ್ಲಿ ಒಂದು ಸುಸಜ್ಜಿತ ಮಾಲ್ ಕಟ್ಟೋಣ, ನಮ್ಮ ಕಾಡಲ್ಲಿ ಇರೋ ಪ್ರಾಣಿಗಳನ್ನು ಒಂದಷ್ಟು ಟ್ರೈನ್ ಮಾಡಿ ಪಾರ್ಕಲ್ಲಿ ಇಟ್ಟು ಸೆಲ್ಫಿ ತೊಗೊಳೋ ಜನದ ಜೊತೆ ಸ್ಮೈಲ್ ಮಾಡೋಕೆ ಕಲಿಸೋಣ ಅಂತ ಬ್ರಿಲಿಯಂಟ್ ಐಡಿಯಾಗಳು ಹೊಳೀತಾ ಬಂದ್ವು. 

ಅಮೆರಿಕದವರು ರಷ್ಯಾಗೆ ಪ್ರವಾಸ ಹೋದ್ರು, ಅಂದು ಬಾಂಬ್ ಹಾಕಿದ ಜರ್ಮನರು ಜಪಾನಿಗೆ ಹೋಗಿ ಅವರು ಅದೆಷ್ಟು ಒಳ್ಳೆಯವರು ಅಂದ್ರು, ದುಬೈಗೆ ಬಂದವರು ಇದು ಮರಳುಗಾಡೇ ಅಲ್ಲ ಅಂತ ಮರುಳಾದ್ರು, ಅಲ್ಲಿ ಹೆಜ್ಜೆ ಹೆಜ್ಜೆಗೂ ಮಿಲ್ಟ್ರಿ ಅವರಿದ್ದಾರೆ ಅದಕ್ಕಿಂತ ಸೇಫ್ ಜಾಗ ಬೇರೆ ಇಲ್ಲ ಅಂತ ಎಲ್ಲರೂ ಕಾಶ್ಮೀರಕ್ಕೂ ಬಂದ್ರು, ಹಳೇಬೀಡಿನ ದೇವಸ್ಥಾನಕ್ಕೆ ಸೇರಿಕೊಂಡಿರೋ ಬಸ್ ಸ್ಟ್ಯಾಂಡ್ ಕಮ್ ಟಾಯ್ಲೆಟ್ ಕಮ್ ಮಾರ್ಕೆಟ್ನಲ್ಲಿ ಎಷ್ಟು ಹಸೀ ಕಡ್ಲೆ ಸೊಪ್ಪು ಸಿಗುತ್ತೆ ಗೊತ್ತಾ ಅಂತ ಅಲ್ಲಿಗೂ ಜನ ಬಂದ್ರು, 

ಇನ್ನು ನಮ್ಮ ಸಾಫ್ಟ್ವೇರ್ ಜನ ಒಂದು ದಿನ ಕ್ಯಾಲಿಫೋರ್ನಿಯಾ, ಒಂದಿನ ಸ್ವಿಟ್ಜರ್ಲ್ಯಾಂಡ್, ಒಂದಿನ ಡಿಸ್ನಿ, ಒಂದಿನ ನಯಾಗರ, ಒಂದಿನ ಪ್ಯಾರಿಸ್ಸು, ಒಂದಿನ ಇಟಲಿ ಅಂತ ಹೋಗಿದ್ದ ಕಡೆಯಲ್ಲೆಲ್ಲ ತಾವು ನೋಡಿದ ಸ್ಥಳಕ್ಕಿಂತ ತಾವು ತಿಂದ ಹೊಟೇಲಲ್ಲಿ ಸೆಲ್ಫಿ ಹಾಕ್ತಾ ಇದ್ದಾರೆ ಅಂದ್ರೆ ವಿಶ್ವದಲ್ಲಿ ಯುದ್ಧ ಇದೆ ಅಂತ ಹೇಳಾಕ್ಕಾಗುತ್ಯೆ. ಇದೇ ಪ್ರವಾಸೋದ್ಯಮದ ಮಹಿಮೆ.

ಇಂದು ಯುದ್ಧ ಏನಿದ್ರೂ ಯಾರೂ ಕಾಲಿಡದ ದೇಶಗಳಲ್ಲಿ ಮಾತ್ರಾ. ಯುದ್ಧ ಮಾಡಬೇಕು ಅಂತ ಆಸೆ ಪಡೋ ಚೀನಾ ಕೂಡಾ ತನ್ನ ವ್ಯಾಪಾರೀ ಪ್ರವಾಸೋದ್ಯಮಕ್ಕೆ ಗೋತಾ ಆಗಬಾರದು ಅಂತ ಗೋಮುಖ ವ್ಯಾಘ್ರಸಂಯಮಿ ಆಗಿದೆ. ವಿಶ್ವಕ್ಕೆಲ್ಲ ಕರೋನಾ ಹರಡಿ ತನ್ನ ಬಳಿ ಮೂಸೋಕೆ ಸಧ್ಯಕ್ಕೆ ಯಾರೂ ಬರೋಲ್ಲ ಅಂತ ಅನಿಸಿದಾಗ, ಯುದ್ಧ ಆದ್ರೂ ಮಾಡಿ ಪ್ರಚಾರದಲ್ಲಿರೋಣ ಅಂತ ಕಾಲುಕೆರೆಯೋಕೆ ಆರಂಭಿಸಿತು.  ತಾನು ಪುನಃ ಯುದ್ಧಕ್ಕೆ ಕಾಲಿಟ್ರೆ ಅಲ್ಲಿ ಯಾವ ದೇಶದವನೂ ಕಾಲಿಡದೆ ಇರುವ ವಿನಾಶಕ್ಕೆ ಹೋಗುವ ಸಾಧ್ಯತೆ ದೂರವಿಲ್ಲ, ತಾನು ನಿರ್ಮಿಸುವ ಅಷ್ಟೊಂದು ಉತ್ಪನ್ನಗಳು ಮಾರಾಟವಾಗದೆ ಅಭಿವೃದ್ಧಿಪಥದಲ್ಲಿ ಮುಂದವರೆಯೋದು ಸಾಧ್ಯವಿಲ್ಲ ಎಂಬ  ಅರಿವಿನಿಂದ ಸ್ವಲ್ಪ ತೆಪ್ಪಗೂ ಇದೆ.  

ಒಂದೆಡೆ ಸರ್ವಾಧಿಕಾರ, ಕೆಲವು ದೇಶಗಳಲ್ಲಿರುವ ಮೌಢ್ಯಯುತ ಪುಂಡಾಟ ಯದ್ಧಗಳನ್ನು ಸದಾ ಚಾಲ್ತಿಯಲ್ಲಿಟ್ಟಿರುವುದು ಮತ್ತೊಂದು ವಿಚಾರ.  ಇದಕ್ಕೆ ಹೊರತುಪಡಿಸಿದಂತೆ, ಇಂದು ವಿಶ್ವದಲ್ಲಿ ಅಭಿವೃದ್ಧಿ ಆಗ್ತಾ ಇರೋ ದೇಶಗಳಿಗೆ,  ಪ್ರವಾಸೋದ್ಯಮ ಮಾನದಂಡ. ಅದು ಸರಿ ಇಲ್ಲ ಅಂದ್ರೆ ಮಾನ ಮೂರುಕಾಸಿಗೆ ಹರಾಜು. 

ಹೀಗೆ ವ್ಯಾಪಾರದ ದೆಸೆಯಿಂದಾದ್ರೂ ಬಹುತೇಕ ದೇಶಗಳು ತಮ್ಮ ಕೊಳೆಗಳನ್ನ ತೊಳೆದುಕೊಳ್ಳೋಕೆ ಸ್ಪರ್ಧಿಸಲು ಪ್ರಾರಂಭಿಸಿರೋದು ವಿಶ್ವವೆಲ್ಲ ಭವ್ಯವಾದ ಪ್ರೇಮಮಂದಿರ ಅಂತ ಹಾಡೋಕೆ ಇರೋ ಭವ್ಯ ವಾತಾವರಣ. ಯುದ್ಧಗಳ ಬುದ್ಧಿ ಕಳೆದು,  ವಿಶ್ವದಲ್ಲಿ ಎಲ್ಲೆಡೆ,  ಮಾನವ ಪ್ರೀತಿ ಶಾಂತಿ ಸೌಹಾರ್ದತೆಗಳಿಂದ ಎಲ್ಲರನ್ನೂ ಎಲ್ಲೆಡೆ ಸ್ವಾಗತಿಸುವಂತಾಗಲಿ.

World Tourism Day

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ