ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೂತನ ದೋಶೆಟ್ಟಿ


 ನೂತನ ಎಂ. ದೋಶೆಟ್ಟಿ


ನೂತನ ಎಂ. ದೋಶೆಟ್ಟಿ ಕನ್ನಡ ಬರಹ ಲೋಕದಲ್ಲಿ ಹೆಸರಾದವರು.

ಸೆಪ್ಟಂಬರ್ 6 ನೂತನ ದೋಶೆಟ್ಟಿ ಅವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಅವರು ಜನಿಸಿದ ಊರು. ಅವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. 

ನೂತನ ದೋಶೆಟ್ಟಿ ಅವರ ಬರಹಗಳು ಕರ್ಮವೀರ, ಸುಧಾ, ತುಷಾರ, ಕಸ್ತೂರಿ, ದ ವೀಕ್, ಇಂಡಿಯಾ ಟುಡೆ, ಪ್ರಜಾವಾಣಿ, ಕನ್ನಡ ಪ್ರಭ ಸೇರಿದಂತೆ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ವ್ಯಾಪಿಸಿವೆ. 

ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳು, ಮಾನವೀಯತೆ ಬಿಕ್ಕಳಿಸಿದೆ, ಮಾತೆಂದರೆ ಏನು ಗೂಗಲ್  ಮುಂತಾದವು ನೂತನ ದೋಶೆಟ್ಟಿ  ಅವರ ಪ್ರಮುಖ ಕವನ ಸಂಕಲನಗಳು. ’ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ’ ಅವರ ಮೊದಲ ಕಥಾ ಸಂಕಲನ.  ಅವರ ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ಕತೆ ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು. 'ಆಕಾಶವಾಣಿಯ ಅಂತರಾಳ' ಎಂಬ ಇವರ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ. ಕೇದಾರನಸಥದ ಪ್ರವಾಸ ಕಥನವನ್ನೂ ಮೂಡಿಸಿದ್ದಾರೆ.  ಇವರ ಬರಹಗಳು 'ಸೌಹಾರ್ದ ಕರ್ನಾಟಕ' ಅಂತಹ ಬರಹ ಗುಚ್ಛಗಳಲ್ಲಿಯೂ ಶೋಭಿಸಿದೆ.

.... ಅರಿವಿಗೆ ಕಾವಲು
ಹಾಕುವುದಾದರೂ ಸಾಧುವೆ?
ಕತ್ತಲಾಗುವುದು ಇಡಿಯ ಜಗಕೆ
ಅವಳಿಗೊಂದು ಬೇರೆ ಕತ್ತಲ ಜಗವೇ?!
ಬೆಳಕಿನ ಕಿರಣ ಕಸಿದರೆ
ಮಸುಕಾಗುವುದು ಬೆಳಕೇ
ನೆನಪಿರಲಿ ನಿನಗೆ ಸಂಕೋಲೆಯೆ!

ಹೀಗೆ ನೂತನ  ದೋಶೆಟ್ಟಿ ಅವರ ಕಾವ್ಯ ಹಲವು ಧ್ವನಿಗಳನ್ನು ಪ್ರತಿಧ್ವನಿಸುತ್ತ ಬಂದಿದೆ.

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಒಂದೆಡೆ ಹೇಳುತ್ತಾರೆ: "ಶ್ರೀಮತಿ ನೂತನ ಎಂ. ದೋಶೆಟ್ಟಿ ಅವರದು ಆರ್ದ್ರವೂ ಆಪ್ತವೂ ಆದ ಕಾವ್ಯಧ್ವನಿ, ನೇರವಾದ ಪ್ರಾಮಾಣಿಕವಾದ, ಹಿತಮಿತ ಮಾತಿನ ಅಭಿವ್ಯಕ್ತಿ ಅವರದ್ದು. ಅವರ ಕವಿತೆಗಳ ಲಯವೂ ನಿರ್ದುಷ್ಟವಾದುದಾಗಿದೆ. ಸಹಜವಾದ ಕುತೂಹಲದಿಂದ ಒಳ-ಹೊರಗಿನ ಪ್ರಪಂಚಗಳನ್ನು ವೀಕ್ಷಿಸುತ್ತಾ ಮಾನವೀಯ ನೆಲೆಯಲ್ಲಿ ನೂತನ ಅವರು ತಮ್ಮ ಸ್ಪಂದನಗಳನ್ನು ಸರಳ-ಸುಂದರವಾಗಿ ದಾಖಲಿಸುತ್ತಾರೆ. ಅವರ ಕಾವ್ಯ ಪ್ರಜ್ಞೆ ಮಾಗಿದ ಹಾಗೆ, ಅವರ ಅಭಿವ್ಯಕ್ತಿಯೂ ದೃಢಗೊಳ್ಳುವುದೆಂಬ ವಿಶ್ವಾಸ ನನಗಿದೆ. ಇವರು ತಮ್ಮ ಬರವಣಿಗೆಯಲ್ಲಿ ಎಲ್ಲೂ ಅಪ್ರಾಮಾಣಿಕವಾಗದ ಕವಿ"

ಆತ್ಮೀಯ ಪ್ರತಿಭಾವಂತರಾದ ನೂತನ ಎಂ. ದೋಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday 🎉🎂🎈🎁🎊 Nutana Doshetty

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ