ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಶೀಲಾ ಸುಬ್ರಹ್ಮಣ್ಯ

 




ಸುಶೀಲಾ ಸುಬ್ರಹ್ಮಣ್ಯ


ಸುಶೀಲಾ ಸುಬ್ರಹ್ಮಣ್ಯ ಅವರು ‘ಸದರ್ನ್‌ ಎಕನಾಮಿಸ್ಟ್’ ಪತ್ರಿಕೆ ಮೂಲಕ ಅರ್ಥಶಾಸ್ತ್ರ ಪತ್ರಿಕೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ ಮಹಾನ್ ಪತ್ರಿಕಾ ಸಂಪಾದಕಿ. ತಮ್ಮ 90ನೇ ವರ್ಷಕ್ಕೆ ಕಾಲಿಟ್ಟಿರುವ ಈ ಮಹಾನ್ ಸಾಧಕಿ,  ತಮ್ಮ ‘ಸದರ್ನ್‌ ಎಕನಾಮಿಸ್ಟ್’ ಪತ್ರಿಕೆಯನ್ನು 62 ವರ್ಷಗಳವರೆಗೆ ಕೊಂಡೊಯ್ದಿದ್ದಾರೆ.

ಇದು ಭಾರತ ಮತ್ತು ಸಾರ್ಕ್‌ ದೇಶಗಳಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿಗಳ ನೆಚ್ಚಿನ ಮತ್ತು ವಿಶ್ವಾಸಾರ್ಹ ಜರ್ನಲ್‌ ಎನಿಸಿದೆ. 

ಸುಶೀಲಾ ಅವರು 1934ರ ಸೆಪ್ಟೆಂಬರ್ 6ರಂದು ಜನಿಸಿದರು. ಇವರು ಹಾಸನದ ಮೂಲದವರು.

1962ರಲ್ಲಿ ಸುಶೀಲಾ ಅವರ ಸಂಪಾದಕತ್ವದಲ್ಲಿ, ಅವರ ಪತಿ ಕೆ. ಎನ್. ಸುಬ್ರಹ್ಮಣ್ಯ ಅವರ ಮಾರ್ಗದರ್ಶನದಲ್ಲಿ 'ಸದರ್ನ್ ಎಕಾನಮಿಸ್ಟ್' ಇಂಗ್ಲಿಷ್ ಪಾಕ್ಷಿಕ ಪತ್ರಿಕೆ ಜನ್ಮ ತಳೆಯಿತು. ಅಂದಿನ ದಿನಗಳಲ್ಲಿ ಬಹಳಷ್ಟು ಪತ್ರಿಕೆಗಳು ದಿನನಿತ್ಯದ ಆಗುಹೋಗುಗಳು ಮತ್ತು ರಾಜಕೀಯದಂತಹ ವಿಷಯಗಳ ಕಡೆಗೆ ಗಮನಹರಿಸಿದ್ದಾಗ 'ಸದರ್ನ್ ಎಕಾನಮಿಸ್ಟ್' ಜವಾಬ್ದಾರಿಯುತ ಆರ್ಥಿಕ ಪತ್ರಿಕೋದ್ಯಮದೆಡೆಗೆ ಹೆಜ್ಜೆಯಿಟ್ಟಿತು. ಆ ಪತ್ರಿಕೆ 23ನೇ ವರ್ಷದಲ್ಲಿ ನಡೆಯುತ್ತಿದ್ದಾಗ  ಸುಬ್ರಹ್ಮಣ್ಯ ಅವರ ಹಠಾತ್ ಸಾವು ಸುಶೀಲಾ ಅವರನ್ನು ದಿಕ್ಕುಗೆಡಿಸಿತು. ಗಂಡನ ಸಾವು, ಕೈಯಲ್ಲಿ ಕಾಸಿಲ್ಲ, ಆದರೆ ಪತ್ರಿಕೆ ನಡೆಸಬೇಕಾದ ಸ್ಥಿತಿ ಉದ್ಭವಿಸಿತು. ಧೃತಿಗೆಡದೆ ಮುಂದೆ ಸಾಗಿದ‍ ಸುಶೀಲಾ ಅವರು ಪತ್ರಿಕೆಯ ಒಂದು ಸಂಚಿಕೆಯನ್ನೂ ನಿಲ್ಲಿಸಲಿಲ್ಲ.  ಸುಶೀಲಾ ಅವರ ಸಾಮರ್ಥ್ಯದಿಂದ ಪತ್ರಿಕೆ ಈಗ 62ನೇ ವರ್ಷದಲ್ಲಿ ಸಾಗುತ್ತಿದೆ.‍

ಸದರ್ನ್ ಎಕಾನಮಿಸ್ಟ್ ಪತ್ರಿಕೆ ತಾನು ಬೆಳೆಯುವುದರೊಂದಿಗೆ ಅನೇಕ ಲೇಖಕರನ್ನೂ ಬೆಳೆಸಿದೆ. ತಮ್ಮ ಪತ್ರಿಕೆಗೆ ತಕ್ಕಂತಹ ಬರಹಗಳನ್ನು ಆಹ್ವಾನಿಸುವ ಸಲುವಾಗಿ ಸುಶೀಲಾ ಸುಬ್ರಹ್ಮಣ್ಯ ಅವರು ಸ್ಟಡಿ ಸರ್ಕಲ್ ರಚಿಸಿಕೊಂಡಿದ್ದಾರೆ. ಈ ಸರ್ಕಲ್‌ನಲ್ಲಿರುವವರು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮನಶ್ಶಾಸ್ತ್ರ ಮೊದಲಾದ ವಿಷಯಗಳಲ್ಲಿ ತಜ್ಞರಾದವರು, ಪ್ರತಿ ತಿಂಗಳು ಸಭೆ ಸೇರುವುದು, ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವುದು, ವಿವಿಧ ಕ್ಷೇತ್ರಗಳ ತಜ್ಞರೊಡನೆ ಸಂವಾದ ನಡೆಸುವುದು ಇದರ ಮೂಲ ಉದ್ದೇಶ.

ಇಲ್ಲಿಯವರೆಗೂ ಸ್ಟಡಿ ಸರ್ಕಲ್‌ನಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿ ಆ ವಿಷಯಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅರ್ಥಶಾಸ್ತ್ರ ಹಣಕಾಸು, ವಾಣಿಜ್ಯ ವಿಷಯಗಳಿಗೆ ಸಂಬಂಧಪಟ್ಟ ವಿವಿಧ ತಜ್ಞರಷ್ಟೇ ಅಲ್ಲದೇ, ವಿವಿಧ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಅನೇಕರು ಈ ಸ್ಟಡಿ ಸರ್ಕಲ್‌ನ ಸದಸ್ಯರಾಗಿದ್ದಾರೆ.

ಪತ್ರಿಕೆಗಳ ಆಧುನಿಕ ತಾಂತ್ರಿಕತೆ ಮತ್ತು ಹೊಸ ಹೊಸ ಪ್ರಯೋಗಗಳನ್ನು ಅಧ್ಯಯನ ಮಾಡುವುದಕ್ಕಾಗಿ ವಿವಿಧ ದೇಶಗಳಿಗೆ ಭೇಟಿ ಕೊಟ್ಟಿರುವ ಸುಶೀಲಾ, ಆರ್ಥಿಕ ವಿಷಯ ಕುರಿತ ಅನೇಕ ರೇಡಿಯೋ ಹಾಗೂ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಪುಸ್ತಕ ಪ್ರೀತಿಯ ಸುಶೀಲಾ ಅವರು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ತಮ್ಮ ಸಂಪಾದನೆಯ ಹಾಗೂ ಇತರರ 20ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ತಮ್ಮ ಪತಿ ಬರೆಯುತ್ತಿದ್ದ ಸಂಪಾದಕೀಯ - ‘ಇಂಡಿಯಾ ದಿ ಟರ್ಬ್ಯುಲೆಂಟ್ ಆಫ್ ಡಿಕೇಡ್’, ಸದರ್ನ್ ಎಕಾನಮಿಸ್ಟ್ ಪತ್ರಿಕೆಗೆ ಸಲಹೆಗಾರರಾಗಿದ್ದ ಪ್ರೊ.ಎಸ್.ಎಲ್.ಎನ್. ಸಿಂಹ ಅವರು ಬರೆಯುತ್ತಿದ್ದ ಸಂಪಾದಕೀಯದ ‘ವಾಯ್ಸ್ ಆಫ್ ವಿಸ್ಡಂ’ ಪುಸ್ತಕಗಳೂ ಸೇರಿವೆ. ಇತರ ಲೇಖಕರ ಜೊತೆಯಲ್ಲಿ ಸುಶೀಲಾ ಅವರು ಸಂಪಾದಿಸಿರುವ ಪುಸ್ತಕಗಳನ್ನು ಇತರ ಪ್ರಕಾಶನಗಳೂ ಪ್ರಕಟಿಸಿವೆ.

ಸುಶೀಲಾ ಸುಬ್ರಹ್ಮಣ್ಯ ಅವರು ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ಅಧ್ಯಕ್ಷೆಯಾಗಿ (1989–1998) ಮತ್ತು ಇಂಡಿಯನ್‌ ಎಕನಾಮಿಕ್ಸ್‌ ಅಸೋಸಿಯೇಷನ್‌ನ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

ಹಿರಿಯ ಸಾಹಸಿ ಅರ್ಥಶಾಸ್ತ್ರಜ್ಞೆ, ಪತ್ರಿಕಾ ಸಂಪಾದಕಿ ಸುಶೀಲಾ ಸುಬ್ರಹ್ಮಣ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಕೃತಜ್ಞತೆ: ಈ ವಿಚಾರವನ್ನು ಗಮನಕ್ಕೆ ತಂದ Shylaja Suresh 🌷🙏🌷


On the birthday of great name in journalism Susheela Subrahmanya 




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ