ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಶ್ ಬಾಬ


 ನಾಗೇಶ್ ಬಾಬ


ನಾಗೇಶ್ ಬಾಬ ಕನ್ನಡ ಚಿತ್ರರಂಗದಲ್ಲಿ ಹಲವು ರೀತಿಯಲ್ಲಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ.

ನಾಗೇಶ್ ಬಾಬ ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿ ಮತ್ತು ಸ್ಥಿರ ಛಾಯಾಗ್ರಣಕ್ಕೆ ಹೆಸರಾಗಿದ್ದ ಬೆಂಗಳೂರು ಗಾಂಧೀನಗರದ 'ಪ್ರಗತಿ ಸ್ಟುಡಿಯೋಸ್' ಮಾಲೀಕರಾಗಿ ಪ್ರಸಿದ್ಧರಾಗಿದ್ದವರು. 

ನಾಗೇಶ್ ಬಾಬ ಅವರು 1932ರಲ್ಲಿ ಜನಿಸಿದರು. ಮಂಡ್ಯ ಜಿಲ್ಲೆ ಬೆಳಕವಾಡಿ ‌ ಅವರ ಹುಟ್ಟೂರು. ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವಿ ಪಡೆದರು. ಚಿತ್ರರಂಗದಲ್ಲಿ ಕೆಲಸ ಮಾಡುವ ಇರಾದೆಯಿಂದ 1956ರಲ್ಲಿ ಚೆನ್ನೈಗೆ ತೆರಳಿ, ಅಲ್ಲಿ ಆರ್. ನಾಗೇಂದ್ರರಾವ್ ನಿರ್ದೇಶನದ 'ಪ್ರೇಮದ ಪುತ್ರಿ' (1957) ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 'ಬೆಟ್ಟದ ಕಳ್ಳ', 'ಪ್ರತಿಮಾ' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ 'ಕೋಟಿ ಚೆನ್ನಯ' ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದರು. 

ನಾಗೇಶ್ ಬಾಬ 'ತೂಗುದೀಪ', 'ನನ್ನ ಕರ್ತವ್ಯ' ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದರು. ಕೃಷ್ಣಮೂರ್ತಿ ಪುರಾಣಿಕರ 'ವಸುಂಧರೆ' ಕೃತಿಯನ್ನು ಆಧರಿಸಿ 'ಅನಿರೀಕ್ಷಿತ' (1970) ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಆ ಚಿತ್ರಕ್ಕಾಗಿ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಗೀತೆಗಳಿಗೆ  'ಪ್ರೇಮಕವಿ' ಕೆ.ಎಸ್. ನರಸಿಂಹಸ್ವಾಮಿ ಅವರು ಸಾಹಿತ್ಯ ಬರೆದುಕೊಟ್ಟಿದ್ದು ವಿಶೇಷ. 

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ. ಅವರು 1964ರಲ್ಲಿ ಮದ್ರಾಸ್‌ನಲ್ಲಿ ವೆಂಕಟೇಶ್ವರನ್ ಅವರ ಜೊತೆ 'ತ್ರೀ ಸ್ಟಾರ್ಸ್' ಸ್ಥಿರಚಿತ್ರ ಛಾಯಾಗ್ರಹಣ ಸಂಸ್ಥೆ ಆರಂಭಿಸಿದರು. ನಂತರ 1972ರಲ್ಲಿ ಬೆಂಗಳೂರಿಗೆ ಮರಳಿದ ಅವರು 'ಪ್ರಗತಿ' ಸ್ಟುಡಿಯೋ ಆರಂಭಿಸಿದರು. ಅವರ ಸಹೋದರ ಅಶ್ವತ್ಥ ನಾರಾಯಣ ಅವರು ನಾಗೇಶ್ ಬಾಬರಿಗೆ ಇಲ್ಲಿ ಜೊತೆಯಾದರು. ಕನ್ನಡ ಚಿತ್ರರಂಗದ 350ಕ್ಕೂ ಹೆಚ್ಚು ಚಿತ್ರಗಳಿಗೆ 'ಪ್ರಗತಿ'ಯ ಸ್ಥಿರಚಿತ್ರ ಛಾಯಾಗ್ರಾಹಣವಿದೆ.

ಹಲವು ವರ್ಷಗಳ ಕಾಲ ಮದ್ರಾಸ್‌ನಲ್ಲಿದ್ದ ನಾಗೇಶ್ ಬಾಬ ಅವರು, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ತಮ್ಮ ಶಿಫಾರಸು ಬಳಸಿ ಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ಕಚ್ಛಾ ಫಿಲ್ಮ್ ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದರು. 2005ರಲ್ಲಿ 'ಪ್ರಗತಿ' ಸ್ಟುಡಿಯೋ ಕಾರ್ಯ ಸ್ಥಗಿತಗೊಳಿಸಿದ ನಂತರ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅದ್ವೈತವನ್ನು ಪ್ರತಿಪಾದಿಸಿದ ನಿಸರ್ಗದತ್ತ ಮಹಾರಾಜ್ ಅವರ ಕುರಿತು ನಾಗೇಶ್ ಬಾಬ ಅವರು 2009ರಲ್ಲಿ ತಯಾರಿಸಿದ 'ತತ್ವಮಸಿ – ಯು ಆರ್ ದಟ್' ಎಂಬ 87 ನಿಮಿಷಗಳ ಇಂಗ್ಲಿಷ್ ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡು ಹೆಸರಾಗಿದೆ.

ನಾಗೇಶ್ ಬಾಬ 2020ರ ಅಕ್ಟೋಬರ್ 6ರಂದು ತಮ್ಮ 82ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. 

On Remembrance Day of Nagesh Baba,  a great name in Film Industry 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ