ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಪಾದ ಹೆಗಡೆ ಸೋಮನಮನೆ


 ಶ್ರೀಪಾದ ಹೆಗಡೆ ಸೋಮನಮನೆ


ಲೇಖಕಿ: ಮನಸಾ  ನಾಗಭೂಷಣಂ Manasa Nagabhushanam

ಬೆಂಗಳೂರಿನ ಕಾಮತ್ ಬ್ಯೂಗಲ್ ರಾಕ್ನಲ್ಲಿ ಒಂದು ಭಾನುವಾರ ಊಟಕ್ಕೆ ಹೋಗಿದ್ದೆವು. ಹಿಂದೂಸ್ಥಾನಿ ಸಂಗೀತದ ಒಂದು ಕಚೇರಿ ನಡೆಯುತ್ತಿತ್ತು. ಆ ಸಂಗೀತವನ್ನು ಕೇಳುತ್ತಾ ನಾನು ನನ್ನ ಪತಿ ಮೈಮರೆತಿದ್ದೆವು. ಒಂದು ರೀತಿ ಧ್ಯಾನಾವಸ್ಥೆಗೆ ಕರೆದುಕೊಂಡು ಹೋಗುವ ಭಾವನಾತ್ಮಕ ಗಾಯನ. ಕಾರ್ಯಕ್ರಮ ಮುಗಿಯದಿರಲಿ ಹೀಗೆ ಕೇಳುತ್ತಾ ಅದರಲ್ಲಿ ಲೀನವಾಗಿಬಿಡಬೇಕೆನ್ನುವಷ್ಟು ಹಿಡಿದಿಟ್ಟ ಸಂಗೀತ.  ಮನಸ್ಸಿನ ಒಂದೊಂದು ತಂತುವನ್ನು ತಲುಪುವಷ್ಟು ಶಕ್ತಿಯುಳ್ಳದ್ದಾಗಿತ್ತು. ನಾವು ಅವರ ಬಳಿ ಹೋಗಿ ಯಮನ್ ಕಲ್ಯಾಣ ಪ್ರಸ್ತುತ ಪಡಿಸಬಹುದೆ ಎಂದು ಕೇಳಿಕೊಂಡೆವು. ಹೀಗೆ ಶುರುವಾಗಿ ಅವರ ಅನೇಕ ಕಾರ್ಯಕ್ರಮಗಳ ನಿರಂತರ ಶ್ರೋತೃಗಳಾದೆವು. ಅವರೇ ಶ್ರೀಪಾದ ಹೆಗಡೆ ಸೋಮನಮನೆ. ಮೂಲತಃ ಶಿರಸಿಯವರು. 

ಉತ್ತಮ ಶಾರೀರ, ವಿವಿಧ ಸ್ವರಜೋಡಣೆ ನೈಪುಣ್ಯ, ಭಾವನಾತ್ಮಕ ಧ್ವನಿ, ಶುದ್ಧತೆ, ಶಾಸ್ತ್ರೀಯ ರಾಗ ವಿಸ್ತಾರ, ತಾನ್ ಗಳ ವಿವಿಧ ಪ್ರಕಾರಗಳ ಪ್ರಸ್ತುತಿ ಹೀಗೆ ಹಲವಾರು ವೈಶಿಷ್ಟ್ಯಗಳುಳ್ಳ ಗಾಯನ ಪಂ.ಶ್ರೀಪಾದ ಹೆಗಡೆ ಸೋಮನಮನೆಯವರದು. 

ಇವರು ಮತ್ತು ಇವರ ಶ್ರೀಮತಿಯವರಾದ ಬಕುಳಾ ಹೆಗಡೆಯವರ ಜುಗಲಬಂದಿ ಕಾರ್ಯಕ್ರಮ ಇನ್ನೂ ಬಹಳ ವಿಶಿಷ್ಟವಾದದ್ದು. ಇಬ್ಬರ ಏಕತಾನತೆಯಲ್ಲಿ ಕೇಳುಗರು ತಲ್ಲೀನ ರಾಗಿಬಿಡುತ್ತಾರೆ.

ಇವರು ಹುಟ್ಟಿದ್ದು 6 ಅಕ್ಟೋಬರ್ 1971ರಂದು. ನಾಟಕಗಳಲ್ಲಿ ಸಂಗೀತ ಸಂಯೋಜಕರಾಗಿದ್ದ ಸೋಮನಮನೆ ವಿಶ್ವನಾಥ ಹೆಗಡೆಯವರು ಇವರ ತಂದೆ. ಹವ್ಯಕ ಸಾಂಪ್ರದಾಯಿಕ ಹಾಡುಗಳನ್ನು ರಚಿಸುವ ದಾಕ್ಷಾಯಿಣಿ ಹೆಗಡೆಯವರು ಇವರ ತಾಯಿ.  ಸಂಗೀತ ವಾತಾವರಣದಲ್ಲಿ ಹುಟ್ಟಿದ ಶ್ರೀಪಾದ ಅವರಿಗೆ ಸಂಗೀತ ಸಂಸ್ಕಾರ ಸಹಜವಾಗಿಯೇ ಒದಗಿಬಂತು.

ಸಂಗೀತ ವಿದ್ವತ್ ಮಾಡಿದ ಶ್ರೀ ಪಾದ ಹೆಗಡೆ ಸೋಮನಮನೆಯವರ ಸಂಗೀತ ಅಭ್ಯಾಸ ಉಡುಪಿಯ ಶ್ರೀ ಎಂ.ಟಿ ಭಾಗ್ವತ್ ಅವರಲ್ಲಿ ಪ್ರಾರಂಭಗೊಂಡಿತು. ನಂತರ, ಪಂ. ಎಂ.ಪಿ. ಹೆಗಡೆಯವರ ಮಾರ್ಗದರ್ಶನ, ಮುಂದೆ ಧಾರವಾಡದಲ್ಲಿ ಪ್ರಸಿದ್ದ ಗಾಯಕರಾಗಿದ್ದ ಸಜ್ಜನ ವ್ಯಕ್ತಿತ್ವವುಳ್ಳ ಪಂ.ಚಂದ್ರಶೇಖರ ಪುರಾಣಿಕಮಠರ ಬಳಿ ಶಿಷ್ಯವೃತ್ತಿ ನಡೆಸಿದರು.  ಶಾಸ್ತ್ರೀಯ ಗಾಯನದ ವಿಸ್ತಾರವಾದ ಜ್ಞಾನದ ಬಯಕೆಯಲ್ಲಿ  ಪಂ.ಗಣಪತಿ ಭಟ್ ಹಾಸಣಗಿಯವರಲ್ಲಿ ಸಂಗೀತ ಅಭ್ಯಾಸ ಮಾಡಿದರು.

ಲಹರಿ ಸಂಗೀತ ಸಂಸ್ಥೆ ಇವರ ಎರಡು  ಸಂಗೀತ ಗುಚ್ಛಗಳಾದ ಮಧುಬನ್ ಮತ್ತು ಜುಗಲಬಂದಿ ಸಿಡಿಗಳನ್ನು ಹೊರತಂದಿದೆ. 

ಶ್ರೀಪಾದ ಹೆಗಡೆಯವರ ಗಾಯನ ಶ್ರೇಷ್ಠತೆಯನ್ನು ಗುರುತಿಸಿ ಹುಬ್ಬಳ್ಳಿಯ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ "ತಾಮ್ಹಣ್ಯರ್' ಪ್ರಶಸ್ತಿ ನೀಡಿ ಗೌರವಿಸಿದೆ. ಸಂಗೀತ ಭಾರತಿ ಕುಂದಾಪುರ ಇವರು ನಡೆಸುವ ರಾಜ್ಯಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ ಶ್ರೀಪಾದ ಹೆಗಡೆಯವರು.  ಕೇಂದ್ರ ಸರ್ಕಾರದ ನ್ಯಾಶನಲ್ ಸ್ಕಾಲರ್ಶಿಪ್' ಅವಾರ್ಡ್,  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಯುವಜನೋತ್ಸವ ಪ್ರಶಸ್ತಿ, ಅಲ್ಲದೇ ಅನೇಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿವೆ. ಅವುಗಳಲ್ಲಿ ಪ್ರಮುಖವಾಗಿ ಗಾನಯೋಗಿ ಪುಟ್ಟರಾಜ ಕಲಾಸಂಘ (ರಿ) ಗದಗ, ಡಾ.ಗಂಗೂಬಾಯಿ ಹಾನ್ಗಲ್ ಮ್ಯೂಸಿಕ್ ಪೌಂಡೇಶನ್ ಹುಬ್ಬಳ್ಳಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಸಾಗರ, ಲಯನ್ಸ್ ಅಂಡ್ ಲಯನೆಸ್ ಕ್ಲಬ್ ಶಿರಸಿ ಇತ್ಯಾದಿ ಸಂಸ್ಥೆಗಳು ಇವರ ಕಲಾ ಕೌಶಲವನ್ನು ಗುರುತಿಸಿವೆ.

ಆಕಾಶವಾಣಿಯ 'ಬಿ' ಹೈ ಶ್ರೇಣಿಯ ಕಲಾವಿದರಾಗಿ ದೂರದರ್ಶನ ಮತ್ತು ಉದಯ ಟಿವಿಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯದ ಅನೇಕ ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಹಾಡಿದ್ದಾರೆ. ಕುಂದಗೋಳ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಶಿವಮೊಗ್ಗ ಬೆಂಗಳೂರು, ಉಡುಪಿ, ಮಂಗಳೂರು, ಮಣಿಪಾಲ, ಪುತ್ತೂರು, ಶಿರಸಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿರುತ್ತಾರೆ.  ಉತ್ತಮ ಹಾರ್ಮೋನಿಯಂ ವಾದಕರೂ ಆದ ಇವರು ತಮ್ಮ ಗುರುಗಳಾದ ಗಣಪತಿ ಭಟ್ ಹಾಸಣಗಿ ಅವರ ಜೊತೆ ಸಹಕಲಾವಿದರಾಗಿ ಅಮೇರಿಕಾ, ಕೆನಡಾ ದೇಶಗಳಲ್ಲೂ ಕಾರ್ಯಕ್ರಮ ನೀಡಿರುತ್ತಾರೆ.

ಶ್ರೀಪಾದ ಹೆಗಡೆಯವರ  ಪತ್ನಿ ಬಕುಳಾ ಹೆಗಡೆ ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ಮತ್ತು ಮಗ ಪ್ರದ್ಯೋತ್ ಹಿಂದೂಸ್ಥಾನಿ ಮತ್ತು ಸಮಕಾಲೀನ ಸಂಗೀತ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. 

ಶ್ರೀಪಾದ ಹೆಗಡೆಯವರ ಸಂಗೀತ ಸಾಧನೆ ಇನ್ನಷ್ಟು ಬೆಳೆದು ಸಂಗೀತ ಪ್ರಿಯರನ್ನು ರಂಜಿಸಲಿ ಎಂದು ಆಶಿಸುತ್ತಾ ಇವರ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರೋಣ.

ಕೃತಜ್ಞತೆಗಳು: ಲೇಖಕಿ ಮನಸಾ ನಾಗಭೂಷಣಂ ಅವರಿಗೆ

On the birthday of Hindustani musician pandit Shreepad Hegde Somanamane🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ