ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಸೂಯಾದೇವಿ


 ಅನಸೂಯಾದೇವಿ 


ಡಾ. ಅನಸೂಯಾದೇವಿ ಪ್ರಾಧ್ಯಾಪಕಿ, ಬರಹಗಾರ್ತಿ, ಗಾಯಕಿ, ಉಪನ್ಯಾಸಕಿ, ರಂಗ ಕಲಾವಿದೆ... ಹೀಗೆ ಹಲವು ಪ್ರತಿಭೆಗಳ ಸಂಗಮರು.

ಅನಸೂಯಾದೇವಿ  1949ರ ಅಕ್ಟೋಬರ್ 31ರಂದು ಜನಿಸಿದರು.  ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಧವೀಧರರಾದ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 'ಹರಿದಾಸ ಸಾಹಿತ್ಯ'ದ ಮೇಲಿನ ತಮ್ಮ ಸಂಶೋಧನಾ ಮಹಾಪ್ರಬಂಧಕ್ಕಾಗಿ ಡಾಕ್ಟೊರೇಟ್ ಗಳಿಸಿದ್ದಾರೆ.

ಡಾ. ಅನಸೂಯಾದೇವಿ ಅವರು ಬೆಂಗಳೂರಿನ ಬಿ.ಎಚ್.ಎಸ್. ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ವಿಶ್ರಾಂತ ಜೀವನದಲ್ಲಿದ್ದಾರಾದರೂ, ಪ್ರವೃತ್ತಿಯಿಂದ  ಹತ್ತು ಹಲವು ಚಟುವಟಿಕೆಗಳ ಕೇಂದ್ರದಂತಿದ್ದಾರೆ.  

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಅನಸೂಯಾದೇವಿ ಅವರು, ಸುಗಮ ಸಂಗೀತ ಪ್ರಸ್ತುತಿಯಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ. ಜನಪದ ನೃತ್ಯ, ಕೋಲಾಟ, ನಾಟಕಗಳಲ್ಲಿನ ಅಭಿನಯ ಇತ್ಯಾದಿಗಳಲ್ಲಿಯೂ ಅವರಿಗೆ ಅಪರಿಮಿತ ಉತ್ಸಾಹವಿದೆ. ಅನೇಕ ವಾದ್ಯಗಳ ನುಡಿಸುವಿಕೆಯೂ ಇವರಿಗೆ ಕರಗತ. 

ಅನಸೂಯಾದೇವಿ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾವ್ಯಕಾವೇರಿ ನಿಯೋಜಿಸುವ ಕಾರ್ಯಕ್ರಮಗಳಲ್ಲಿ, ಕಿರುತೆರೆಯ ವಾಹಿನಿಗಳಲ್ಲಿ, ಆಕಾಶವಾಣಿಯಲ್ಲಿ ಮತ್ತು ಅನೇಕ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾವಗೀತೆ, ಜನಪದಗೀತೆ, ನಾಡಗೀತೆಗಳನ್ನು ಪ್ರಸ್ತುತ ಪಡಿಸುತ್ತ ಬಂದಿದ್ದಾರೆ. ಚಲನಚಿತ್ರ ಗೀತೆಗಳ ಗಾಯನವೂ ಇವರಿಗೆ ಸುಲಲಿತ. ಕಾವ್ಯವಾಚನ ಮತ್ತು ವ್ಯಾಖ್ಯಾನಗಳಲ್ಲಿಯೂ ಇವರು ಹೆಸರಾಗಿದ್ದಾರೆ. ಇವರ ದಾಸರ ಪದಗಳು ಮತ್ತು ವಚನಗಳ ಪ್ರಸ್ತುತಿ  ಹಾಗೂ ಶ್ರೇಷ್ಠ ಕವಿವರೇಣ್ಯರ ಕವಿತಾ ಗಾಯನದೊಂದಗಿನ ವ್ಯಾಖ್ಯಾನ; ಕಾವ್ಯವಾಚನ  ಮುಂತಾದವು ಜನಮೆಚ್ಚುಗೆ ಪಡೆದಿವೆ. ಶಾಕುಂತಲಾ ಎಂಬ ನೋವು, ಅನುಭವ ಮಂಟಪದಲ್ಲಿ ಅಕ್ಕ ಮುಂತಾದವು ಇವರ ಜನಪ್ತಿಯ ನೃತ್ಯರೂಪಕಗಳು.‍ ತಾವೇ ರಚಿಸಿದ ಪರಿವರ್ತನೆ, ಶ್ರೀಪುರಂದರದಾಸರು ಮುಂತಾದವುಗಳಲ್ಲಿ ಸ್ವಯಂ ಅಭಿನಯಿಸಿ ಹೆಸರಾಗಿದ್ದಾರೆ.‍ ಅಲಸೂರಿನ ತಮಿಳು ಸಂಘದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕಾರ್ಯ ನಿರ್ವಹಿಸಿದ್ದಾರೆ. ಅನೇಕ  ನಾಟಕಗಳು ಮತ್ತು ಪ್ರಹಸನಗಳನ್ನು ರಚಿಸಿ, ಪ್ರದರ್ಶಿಸಿದ್ದಾರೆ.  ಭಾರತದ ಹೆಸರಾಂತ ವೇದಿಕೆಗಳಲ್ಲಿ ಮಾತ್ರವಲ್ಲದೆ, ಕೌಲಾಲಂಪುರ, ಸಿಂಗಪುರ, ಅಬುದಾಭಿ ಸೇರಿದಂತೆ ಹೊರದೇಶಗಳ ಅನೇಕ ಕನ್ನಡಪರ ವೇದಿಕೆಗಳಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಡಾ. ಅನಸೂಯಾದೇವಿ ಅವರ ಕವನಗಳು, ಲೇಖನಗಳು, ಕಥೆಗಳು, ಕಾದಂಬರಿಗಳು, ಚಿಂತನಗಳು ಮುಂತಾದವು ಉದಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ತರಂಗ, ಕರ್ಮವೀರ, ಸಂಯುಕ್ತ ಕರ್ನಾಟಕ 
ಸೇರಿದಂತೆ ಎಲ್ಲ ನಿಯತಕಾಲಿಕಗಳಲ್ಲಿಯೂ ನಿರಂತರವಾಗಿ ಹರಿದುಬಂದಿವೆ.

ಡಾ. ಅನಸೂಯಾದೇವಿ ಅವರ ಪ್ರಕಟಿತ ಕೃತಿಗಳಲ್ಲಿ ಪ್ರಕೃತಿ ಪುರುಷ, ಅಮ್ಮ... ನಿನ್ನ ನೆನಪಿಗೆ, ಕೇಶವ ನಮನ, ಅನನ್ಯ ಮತ್ತು ಎದೆ ಹಾಸಿನ ಭಾವ ಹೂಗಳು ಎಂಬ ಕವನ ಸಂಕಲನಗಳು; ಆಕಾಶದ ಹಾಡು, ಸಂಕಟವೇ ನಿಲ್ಲು..ಸಾಧನೆಯಾಗು, ಕಾಳ ಬೆಳದಿಂಗಳು, ನಕ್ಷತ್ರ ಸೂಕ್ತ ಮತ್ತು ಕರುಣಾಳು ಬಾ ಬೆಳಕೆ ಎಂಬ ಕಾದಂಬರಿಗಳು; ಮಲ್ಲಿಗೆ ಹೂ, ಉರಿಯ ಬೇಲಿ, ದೀಪದ ಕೆಳಗೆ, ಅನಸೂಯ ಕಥೆಗಳು, ಅಜ್ಜಿ ಹೇಳಿದ ಕಥೆಗಳು ( ಮಕ್ಕಳಿಗಾಗಿ) ಮತ್ತು ಆಕಾಶದ ಕರೆ ಮುಂತಾದ ಕಥಾ ಸಂಕಲನಗಳು; ವ್ಯಾಸಕೂಟ ಮತ್ತು ದಾಸಕೂಟ ( ಪಿಎಚ್.ಡಿ.ಮಹಾಪ್ರಬಂಧ), ಕುಂದಗನ್ನಡ ಗಾದೆಗಳು ವ್ಯಾಖ್ಯಾನದೊಂದಿಗೆ, ಪ್ರಕೃತಿ ಮತ್ತು ಪ್ರೀತಿ ( ವೈಚಾರಿಕ ಮತ್ತು ಆಧ್ಯಾತ್ಮಿಕ ಬರಹಗಳ ಸಂಕಲನ), ದಾಸ ಸಾಹಿತ್ಯ ನವನೀತ (ಆಧ್ಯಾತ್ಮಿಕ ಲೇಖನಗಳ ಸಂಕಲನ), ಇಂಗ್ಲಿಷ್‌ ಪ್ರಾಧ್ಯಾಪಕ ಹಾಗೂ ದ್ವಿಭಾಷಾ ಸಾಹಿತಿ ಪ್ರಭಾಕರ ಆಚಾರ್ಯ ( ಜೀವನಚರಿತ್ರೆ) ಮುಂತಾದ ವೈವಿಧ್ಯಗಳು ಸೇರಿವೆ. 

ದಕ್ಷಿಣ ಕನ್ನಡದ ಹೆಸರಾಂತ  ಕಾಂತಾವರ ಕನ್ನಡ ಸಂಘವು ಅನಸೂಯಾದೇವಿಯವರ ಬದುಕು ಮತ್ತು ಸಾಹಿತ್ಯ, ಸಂಗೀತ ಕೃಷಿಗಳ 
ಪರಿಚಯರೂಪದ  "ಬಹುಮುಖ ಪ್ರತಿಭೆಯ ಡಾ. ಅನಸೂಯಾದೇವಿ" ಎಂಬ ಕೃತಿ ಪ್ರಕಟಿಸಿ ಸನ್ಮಾನಿಸಿ ಗೌರವಿಸಿದೆ. ಇದಲ್ಲದೆ ಅಸೂಯಾದೇವಿ ಅವರಿಗೆ 'ಪ್ರಕೃತಿ ಪುರುಷ' ಕವನ ಸಂಕಲನಕ್ಕೆ ಧರ್ಮಸ್ಥಳದ ರತ್ನಮ್ಮ ಮಂಜಯ್ಯ ಹೆಗ್ಗಡೆ ಪ್ರಶಸ್ತಿ,  'ಉರಿಯ ಬೇಲಿ' ಕಥಾಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ,  ವಿಶುಕುಮಾರ್ ಪ್ರಶಸ್ತಿ, ಬೆಳಗಾವಿಯ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ, ಧಾರವಾಡದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ, ಕುವೆಂಪು ಶ್ರೀ ಪ್ರಶಸ್ತಿ, ಶ್ರೀ ವಿಜಯ ಪ್ರಶಸ್ತಿ,  ಸಾಹಿತ್ಯ ಸೇತು ಪ್ರಶಸ್ತಿ,  ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,  ಎಂ. ಜಿ. ರಂಗನಾಥ್ ಸ್ಮಾರಕ ಬಹುಮಾನ, ಹೂಗೊಂಚಲು  ಪ್ರಶಸ್ತಿ,  ಶ್ರೀ ಭೀಮಸೇತು ಪುರಂದರ ಪ್ರಶಸ್ತಿ2012, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ವ್ಯಾಸಕೂಟ ದಾಸಕೂಟ ಕೃತಿಗೆ ದಶಮಾನೋತ್ಸವ ಪ್ರಶಸ್ತಿ, 
ಪಂಚರತ್ನ ಶಾರದೆ ಎಂಬ ಬಿರುದು, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ, ಅಬುದಾಭಿಯಲ್ಲಿ  ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ವಿಶ್ವಮಾನ್ಯರು ಗೌರವ ಮುಂತಾದ ಅನೇಕ ಗೌರವಗಳು ಸಂದಿವೆ.

ಹಿರಿಯ ಸಾಧಕರೂ ಆತ್ಮೀಯರೂ ಅದ ಡಾ. ಅನಸೂಯಾದೇವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ಸಕಲ ಭಾಗ್ಯಗಳಿಂದ ಬದುಕು ನಿತ್ಯಸುಂದರವಾಗಿರಲಿ.

Happy birthday Dr. Anasuya Devi Amma 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ