ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೂಗೂರು ಸುಂದರ್


 ಮೂಗೂರು ಸುಂದರ್


ಕನ್ನಡಿಗರಾದ ಮೂಗೂರು ಸುಂದರ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಸಿದ್ಧ ನೃತ್ಯ ಸಂಯೋಜಕರಾಗಿದ್ದಾರೆ. ಅವರ ಪುತ್ರರಾದ ಪ್ರಭುದೇವ, ರಾಜು ಸುಂದರಂ ಮತ್ತು ನಾಗೇಂದ್ರ ಪ್ರಸಾದ್ ಸಹಾ ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಸುಂದರ್ 1938ರ ಆಗಸ್ಟ್ 31ರಂದು ಮೈಸೂರು ಜಿಲ್ಲೆಯ ಮುಗೂರು ಎಂಬ ಗ್ರಾಮದಲ್ಲಿ ಜನಿಸಿದರು.

ಮೂಗೂರು ಸುಂದರ್ ಚೆನ್ನೈನ ಚಂದಮಾಮ ಪ್ರೆಸ್‍ನಲ್ಲಿ ತಿಂಗಳಿಗೆ 40 ರೂಪಾಯಿ ಸಂಭಳಕ್ಕೆ ಕೆಲಸ ಮಾಡುತ್ತಿದ್ದರು. ಅದರಲ್ಲಿ 10 ರೂಪಾಯಿ ಖರ್ಚು ಮಾಡಿ ನೃತ್ಯ ಕಲಿತರು. 1962ರಲ್ಲಿ ಕೊಂಜುಂ ಸಲಂಗೈ ಚಿತ್ರದಲ್ಲಿ ಸಮೂಹ ನೃತ್ಯಗಾರರಾಗುವ ಅವಕಾಶ ದಕ್ಕಿತು. ತಂಗಪ್ಪನ್ ಮಾಸ್ತರರಿಗೆ ಸಹಾಯಕರಾಗಿ ನಾಲ್ಕು ವರ್ಷ ಕೆಲಸ ಮಾಡಿದರು. 

ಮೂಗೂರು ಸುಂದರ್ ತಮ್ಮ ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ತಮಿಳು ಚಿತ್ರರಂಗದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. 1970 - 80ರ ದಶಕದಲ್ಲಿ ಅವರು ಬಿಡುವಿಲ್ಲದ ನೃತ್ಯ ಸಂಯೋಜಕರಾಗಿದ್ದರು.   ಬಹುತೇಕ ಎಲ್ಲಾ ಪ್ರಮುಖ ನಟರೊಂದಿಗೂ ಕೆಲಸ ಮಾಡಿದ್ದಾರೆ. 1980ರಲ್ಲಿ ಬಿಡುಗಡೆಯಾದ 'ಆರದ ಗಾಯ' ಅವರ ಆರಂಭಿಕ ಮನ್ನಣೆ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಅದರ ನಂತರ ಪ್ರೀತಿಸಿ ನೋಡು, ಪ್ರಚಂಡ ಪುಟಾಣಿಗಳು, ಅನುಪಮಾ, ನೀ ನನ್ನ ಗೆಲ್ಲಲಾರೆ, ಕೆರಳಿದ ಸಿಂಹ ಮುಂತಾದವು ಅವರ ಇನ್ನಿತರ ಆರಂಭಿಕ ಚಿತ್ರಗಳಲ್ಲಿವೆ. ಸುಮಾರು ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ ಅವರು ಸುಮಾರು 1000 ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಮೂಗೂರು ಸುಂದರ್ 2001ರಲ್ಲಿ  'ಮನಸೆಲ್ಲ ನೀನೆ' ಎಂಬ ಚಿತ್ರವನ್ನು ನಿರ್ದೇಶಿಸಿದರು. ಅವರ ಮಗ ನಾಗೇಂದ್ರ ಪ್ರಸಾದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸುಂದರ್ ಕನ್ನಡ ಚಲನಚಿತ್ರಗಳಾದ ತಬ್ಬಲಿ,  ಜಾನಿ, ಸೂಪರ್ ಸ್ಟಾರ್ ಮುಂತಾದವುಗಳಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.  ಹಿಂದೀ  ಚಲನಚಿತ್ರಕ್ಕಾಗಿಯೂ ನೃತ್ಯ ಸಂಯೋಜನೆ ಮಾಡಿದ್ದರು. ಇತರ ಭಾಷಾ ಚಿತ್ರಗಳಲ್ಲೂ ಒಮ್ಮೊಮ್ಮೆ ನಟಿಸಿದ್ದಿದೆ.  ಅವರು ಜೀ ತೆಲುಗು ಚಾನೆಲ್, ವಿಜಯ್ ತಮಿಳು ಚಾನೆಲ್ ಮುಂತಾದ ವಾಹಿನಿಗಳ ನೃತ್ಯ ಕಾರ್ಯಕ್ರಮಗಳ ತೀರ್ಪುಗಾರರಾಗಿಯೂ  ಕಾರ್ಯನಿರ್ವಹಿಸಿದ್ದಾರೆ.

ಮೂಗೂರು ಸುಂದರ್ 1993ರಲ್ಲಿ 'ತಿರುಡಾ ತಿರುಡಾ' ಚಿತ್ರದಲ್ಲಿನ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ಇದಲ್ಲದೆ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ತೆಲುಗಿನ ಗೀತಾಂಜಲಿ ಮತ್ತು ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರಗಳ ನೃತ್ಯ ಸಂಯೋಜನೆಗೆ ನಂದಿ ಪ್ರಶಸ್ತಿ, ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಜಯ್ ಜೀವಮಾನ ಸಾಧನಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

On the birthday of great dance choreographer Mugur Sundar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ