ಸದಾಶಿವರಾವ್
ಪೇಜಾವರ ಸದಾಶಿವರಾಯರು
ಪೇಜಾವರ ಸದಾಶಿವರಾಯರು ಸಾಹಿತ್ಯಲೋಕದ ಬಹುಮುಖ ಪ್ರತಿಭಾನ್ವಿತ ಲೇಖಕರು.
ಪೇಜಾವರ ಸದಾಶಿವರಾಯರು 1913ರ ಮಾರ್ಚ್ 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರದಲ್ಲಿ ಜನಿಸಿದರು. ಮುಂದೆ ಅವರು ಕಟೀಲಿನಲ್ಲಿ ನೆಲೆಸಿದರು. ತಂದೆ ಶಾಮರಾವ್ ಮತ್ತು ತಾಯಿ ಸೀತಮ್ಮನವರು.
ಸದಾಶಿವರಾಯರು ಪ್ರಾಥಮಿಕ ಹಂತದ ಶಿಕ್ಷಣವನ್ನು ಹೊಳೆಯಾಚೆ ಇದ್ದ ಎಕ್ಕಾರಿನ ಶಾಲೆಯಲ್ಲಿ ಪಡೆದರು. ಹೈಸ್ಕೂಲು ಶಿಕ್ಷಣ ನಡೆದದ್ದು ಮುಲ್ಕಿಯಲ್ಲಿ. ಮಂಗಳೂರಿನ ಆಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ ಸಮಯದಲ್ಲಿ ಸದಾಶಿವರರಾಯರ ಪ್ರತಿಭೆಯನ್ನು ಗಮನಿಸಿ, ಇವರಲ್ಲಿದ್ದ ಕನ್ನಡ ಸಾಹಿತ್ಯದ ಆಸಕ್ತಿಗೆ ನೀರೆರೆದು ಪೋಷಿಸಿದವರು ಸೇಡಿಯಾಪು ಕೃಷ್ಣಭಟ್ಟರು ಹಾಗೂ ಮುಳಿಯ ತಿಮ್ಮಪ್ಪಯ್ಯನವರು. ಸದಾಶಿವರಾಯರು ತಾವಷ್ಟೇ ಕವಿತೆಗಳನ್ನು ರಚಿಸುತ್ತಿದ್ದುದಲ್ಲದೆ ಇತರರನ್ನೂ ಬರೆಯಲು ಪ್ರೇರೆಪಿಸುತ್ತಿದ್ದರು.
ಜೆ.ವಾಮನಭಟ್ಟ, ಕುಡ್ಪಿವಾಸುದೇವ ಶೆಣೈ, ಎಸ್.ಪಿ.ಭಟ್ಟ, ಜಿ.ಟಿ.ಆಚಾರ್ ಮುಂತಾದವರುಗಳೊಡನೆ ಸೇರಿ ಮಂಗಳೂರಿನಲ್ಲಿ ‘ಮಿತ್ರಮಂಡಲಿ’ಯನ್ನು ಸ್ಥಾಪಿಸಿ, ಈ ಗುಂಪಿನಿಂದ ‘ಅಳಿಲು ಸೇವೆ’ ಎಂಬ ಕವನ ಸಂಕಲನ ಹೊರತಂದರು. ನಂತರದಲ್ಲಿ ‘ಅಲರು’ ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದರು. ಅವರು ಹದಿನೇಳರ ಹರೆಯದಲ್ಲಿಯೇ ಕವನ ಬರೆದಿದ್ದಷ್ಟೇ ಅಲ್ಲದೆ ಸಂಪಾದಕರ ಜವಾಬ್ದಾರಿಯನ್ನೂ ಹೊತ್ತಿದ್ದರು. ಸಂಕಲನದ ಪೀಠಿಕೆಯಲ್ಲಿ ವ್ಯಾಟನ್ ಕವಿಯ ಸುಪ್ರಸಿದ್ಧ ಸಾಲುಗಳನ್ನು ಉದಹರಿಸಿರುವುದನ್ನು ಓದಿದವರಿಗೆ, ಸದಾಶಿವರಾಯರಿಗೆ 17ರ ಹರೆಯಲ್ಲಿಯೇ ಕಾವ್ಯ ಪ್ರೌಢಿಮೆ ಸಿದ್ಧಿಸಿತ್ತು ಎಂಬುದು ಅರ್ಥವಾದೀತು.
1927ರಿಂದ 1935ರವರೆಗೆ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಇಂಜಿನಿಯರಿಂಗ್ ಪದವಿಗಾಗಿ ಓದಿದ ಸದಾಶಿವರಾಯರು, ಮಂಗಳೂರಿನಲ್ಲಿದ್ದಾಗ ಇಟಲಿಯಿಂದ ಬಂದಿದ್ದ ಡಾ.ಫೆಸ್ಸಿ ಎಂಬ ನಿಕಟವರ್ತಿಗಳ ಪ್ರೇರಣೆಯಿಂದ ಇಟಲಿ ದೇಶದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದರು. ಇಟಲಿಗೆ ಶಿಕ್ಷಣಾರ್ಥಿಯಾಗಿ ಹೋಗುವವರು ಮದುವೆಯಾಗಿರಲೇಬೇಕೆಂಬ ನಿಬಂಧನೆಯಿದ್ದುದರಿಂದ ಮದುವೆಯಾದ ಎರಡನೆಯ ವರ್ಷ 1936ರಲ್ಲಿ ಇಟಲಿಯ ಮಿಲಾನ್‌ಗೆ ತೆರಳಿದರು. ಮಿಲಾನ್‌ನಲ್ಲಿದ್ದರೂ ಕನ್ನಡ ಪತ್ರಿಕೆಗಳಾದ ತ್ರಿವೇಣಿ, ಪ್ರಭಾತ, ಜಯಕರ್ನಾಟಕ ಮುಂತಾದ ಪತ್ರಿಕೆಗಳನ್ನು ತರಿಸಿಕೊಂಡು ಓದಿ, ಆಗಾಗ್ಗೆ ಪತ್ರಿಕೆಗಳಿಗೆ ಬರಹಗಳನ್ನೂ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿದ್ದ ಗೋಕಾಕರನ್ನು ಭೇಟಿಮಾಡಿದ ನಂತರ, ತಾವು ಬರೆದ ಕವನಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದರು. ಈ ಬರಹಗಳನ್ನು ಓದಿದ ಗೋಕಾಕರು ‘ನಾನೂ ಸಹ ಈ ರೀತಿ ಬರೆಯಲಾರೆ’ ಮುಂದುವರೆಸಿ ಎಂದು ಪ್ರಶಂಸಿಸಿ ಪತ್ರ ಬರೆದಿದ್ದರು.
ಸದಾಶಿವರಾಯರು ರಚಿಸಿದ ನಾಟಕಗಳಾದ ಸರಪಣಿ, ಬೀದಿಗಿಳಿದ ನಾರಿ, ಜೀವನ ಸಂಗೀತ ಎಂಬ ನಾಟಕಗಳು ತ್ರಿವೇಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕ್ಷತ್ರಿಯ ರಮಣಿ (ಐತಿಹಾಸಿಕ), ಚಂಡಮಾರುತ, ಬಿರುಸು, ಸೂಜಿಕಲ್ಲು ಮುಂತಾದ ಸ್ವತಂತ್ರ ಕಥೆಗಳಲ್ಲದೆ ಅಂಧಶಿಲ್ಪ ಮತ್ತು ಶ್ರೀಗಂಧ ಎಂಬ ಎರಡು ರೂಪಾಂತರ ಕಥೆಗಳನ್ನೂ ಬರೆದರು.
ಸದಾಶಿವರಾಯರು ಬರೆದ ಬಹುತೇಕ ಕವಿತೆಗಳಲ್ಲಿ ರಾಷ್ಟ್ರಭಕ್ತಿ, ಪ್ರಕೃತಿ, ಬದುಕು – ಸಾವುಗಳ ಚಿತ್ರಣಗಳು ತುಂಬಿವೆ. ನಾಟ್ಯೋತ್ಸವ ಎಂಬ ಕವನದಲ್ಲಿ ಬೇರೆ ಬೇರೆ ದೇಶಗಳಿಂದ ಇಟಲಿಗೆ ಬರುವ ಸುಂದರಿಯರ ನರ್ತನವನ್ನು ಚಿತ್ರಿಸಿದ್ದಾರೆ. ಹೀಗೆ ಅವರು ಬರೆದ 84 ಕವನಗಳ 'ವರುಣ’ ಎಂಬ ಸಂಕಲನದಲ್ಲಿ ಸೇರಿವೆ. ಇಟಲಿಯಲ್ಲಿದ್ದರೂ ಕನ್ನಡದ ಬಗ್ಗೆ ಆಸ್ಥೆ ವಹಿಸಿದ್ದ ಸದಾಶಿವರಾಯರಿಗೆ ವಾಮನ ಭಟ್ಟರು ತಮ್ಮ 'ಕೋದಂಡನ ಉಪನ್ಯಾಸಗಳು’ ಎಂಬ ಕೃತಿಯನ್ನು ಅರ್ಪಣೆ ಮಾಡಿದ್ದಾರೆ. ಇಟಲಿಯ ಕವಿ ಲೊರೊನ್ಜೊವಿನ ತತ್ತ್ವಗಳ ಒಳತೋಟಿಯನ್ನು ಇವರ ಅನೇಕ ಕವನಗಳಲ್ಲಿ ಗುರುತಿಸಬಹುದು. ನವ್ಯ ದೃಷ್ಟಿಯುಳ್ಳ ವರುಣ, ನಾಟ್ಯೋತ್ಸವ ಮೊದಲಾದ ಕವನಗಳನ್ನು ಇವರು ಕಳೆದ ಶತಮಾನದ ಮೂರನೆಯ ದಶಕದಲ್ಲೇ ಬರೆದಿದ್ದರೆಂಬುದು ಕುತೂಹಲದ ವಿಷಯ.
ಸದಾಶಿವರಾಯರು ಇಟಲಿಯಿಂದ ಜೆ.ವಾಮನಭಟ್ಟರಿಗೆ ಬರೆದ ಪತ್ರದಲ್ಲಿ ಡಿ.ವಿ.ಜಿ., ಬೇಂದ್ರೆ, ಗೋಕಾಕ ಮೊದಲಾದವರ ಕೆಲ ಕೃತಿಗಳನ್ನು ಕಳುಹಿಸುವಂತೆ ವಿನಂತಿಸಿದ್ದು, ಅವುಗಳನ್ನು ಇಟಾಲಿಯನ್ನರಿಗೆ ಪರಿಚಯಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಇದ್ದಕ್ಕಿದಂತೆ 1939ರ ಏಪ್ರಿಲ್‌ನಲ್ಲಿ ಅವರಿಗೆ ಪೆರಿಟೊನೈಟಿಸ್ ಖಾಯಿಲೆ ಕಾಣಿಸಿಕೊಂಡಿತು. ಇದು ಪ್ರಾಣಾಂತಿಕ ಖಾಯಿಲೆ ಅಲ್ಲದಿದ್ದರೂ ಯೂರೋಪಿನಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಿದ್ಧವಿರಲಿಲ್ಲ. ಚಿಕಿತ್ಸೆ ದೊರಕಿದಾಗ ಕೊಂಚ ಗುಣಮುಖರಾದಂತೆ ಕಂಡುಬಂದಾಗ, ತಮ್ಮ ಪ್ರೀತಿಯ ರಂಗಮಂದಿರಗಳಿಗೂ ಭೇಟಿನೀಡಿದ್ದರು. ಆದರೆ ಪುನಃ ರೋಗ ಉಲ್ಬಣಿಸಿ, ಜೀನಿವಾದ ಬಳಿಯ ವಿಶ್ರಾಂತಿ ಧಾಮದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದರು. ಸೆಪ್ಟೆಂಬರ್ ವೇಳೆಗೆ ದೈಹಿಕವಾಗಿ ನಿತ್ರಾಣಗೊಂಡಿದ್ದರ ಜೊತೆಗೆ ಸಾವಿರಾರು ಮೈಲಿ ದೂರದಲ್ಲಿರುವ ತಂದೆ ತಾಯಿ, ಬಂಧುಗಳು, ಪ್ರೀತಿಯ ಹೆಂಡತಿ, ಮಗು ಯಾರೂ ತನ್ನ ಬಳಿ ಇಲ್ಲವೆಂಬ ಮಾನಸಿಕ ಕ್ಲೇಶೆಗೊಳಗಾಗಿ ಚಿಕಿತ್ಸೆ ಪರಿಣಾಮಕಾರಿಯಾಗದೆ ರಾಯರು 1939ರ ಅಕ್ಟೋಬರ್ 18ರಂದು ಕೊನೆಯುಸಿರೆಳೆದರು.
ಅತ್ಯಂತ ಪ್ರತಿಭಾನ್ವಿತರಾಗಿದ್ದ ಪೇಜಾವರ ಸದಾಶಿವರಾಯರು ಕೇವಲ ತಮ್ಮ 26ನೆಯ ವಯಸ್ಸಿನಲ್ಲಿಯೇ ಈ ಲೋಕವನ್ನಗಲಿದರು.
On Remembrance Day of great writer who lived short Pejawara Sadashiva Rao
ಕಾಮೆಂಟ್‌ಗಳು