ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಬ್ಬಯ್ಯ ನಾಯ್ಡು


 ಎಂ. ವಿ. ಸುಬ್ಬಯ್ಯ ನಾಯ್ಡು


ಎಂ. ವಿ. ಸುಬ್ಬಯ್ಯ ನಾಯ್ಡು ನಾಡಿನ ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು ಮತ್ತು ನಿರ್ದೇಶಕರು. 

ಸುಬ್ಬಯ್ಯ ನಾಯ್ಡು ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ 1896ರಲ್ಲಿ ಜನಿಸಿದರು. ತಂದೆ ವೆಂಕಟರಾಮಪ್ಪ. ತಾಯಿ ರಂಗಮ್ಮ, ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಹಲವು ಬಗೆಯ ಕಷ್ಟಗಳನ್ನು ಎದುರಿಸಿದರು. ತಾಯಿಯ ಜೊತೆಯಲ್ಲಿ ಹೆಗ್ಗಡದೇವನ ಕೋಟೆಯಲ್ಲಿದ್ದ ಸೋದರಮಾವನ ಮನೆಯಲ್ಲಿ ಸ್ವಲ್ಪಕಾಲ ನಿಂತು, ಎಮ್ಮೆಕಾಯುವ ಕೆಲಸವನ್ನು ಮಾಡಿದರು. ಅನಂತರ ಸಂತೆಸರಗೂರಿನ ಶಾನುಭೋಗರ ಮನೆಯಲ್ಲಿ ದುಡಿದರು. ಮುಂದೆ ಇವರು ಮೈಸೂರಿಗೆ ಬಂದು ಒಂದು ಮಂಡಿಯನ್ನು ಸೇರಿ ಜೀವನೋಪಾಯಕ್ಕೆ ದಾರಿ ಮಾಡಿಕೊಂಡರು. 

ಚಿಕ್ಕಂದಿನಲ್ಲಿಯೇ ನಾಟಕದ ಖಯಾಲಿ ಹತ್ತಿಸಿ ಕೊಂಡಿದ್ದ ಸುಬ್ಬಯ್ಯ ನಾಯ್ಡು, ಊಟಕ್ಕೆ ಇಲ್ಲದಿದ್ದರೂ ದುಡ್ಡು ಕೊಟ್ಟು ನಾಟಕ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ಮೈಸೂರಿಗೆ ಬಂದ ಮೇಲೆ ಗರಡಿಮನೆ ಸೇರಿ ಕಸರತ್ತುಮಾಡಿ ಕುಸ್ತಿ ಕಲಿತರು. ಅನೇಕ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದರು. ಆಗ ಮೈಸೂರಿನಲ್ಲಿ ಪ್ರಸಿದ್ಧ ನಟರಾಗಿದ್ದ ಎಂ.ವಿ. ಮಾದಪ್ಪನವರ ಮಾರ್ಗದರ್ಶನದಲ್ಲಿ ಸಂಗೀತವನ್ನೂ ಅಭಿನಯದಲ್ಲಿ ತರಬೇತಿಯನ್ನೂ ಗಳಿಸಿಕೊಂಡರು. 

ಮೈಸೂರಿನ ಶಾಕುಂತಲಾ ಕಂಪನಿಯನ್ನು ಸೇರಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ ಸುಬ್ಬಯ್ಯ ನಾಯ್ಡು ತುಮಕೂರಿನ ಸೀತಾರಾಮ ಮನೋಹರ ನಾಟಕ ಮಂಡಳಿ ಸೇರಿ ಅನೇಕ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿ ಹೆಸರು ಗಳಿಸಿದರು. ಅನಂತರ ಚನ್ನಪಟ್ಟಣದ ಭಾರತ ಜನಮನೋಲ್ಲಾಸಿನೀ ನಾಟಕ ಕಂಪನಿಯನ್ನು (ಗುರಿಕಾರ್ ಕಂಪನಿ) ಸೇರಿ ತಮ್ಮ ಅಭಿನಯ ಕಲೆಯನ್ನು ಪ್ರಕಟಿಸಿದರು. ಈ ಕಂಪನಿಯಲ್ಲಿ ಇವರಿಗೆ ಬಿ.ವಿ.ಗುರುಮೂರ್ತಪ್ಪ, ಗಂಗಾಧರರಾವ್, ಎಂ.ಸುಬ್ಬರಾವ್, ಮಹಮ್ಮದ್ ಪೀರ್ ಮೊದಲಾದ ಶ್ರೇಷ್ಠ ನಟರ ಸಾಹಚರ್ಯೆ ದೊರಕಿತು. 

ಸುಬ್ಬಯ್ಯ ನಾಯ್ಡು ಅವರು ಗುಬ್ಬಿ ನಾಟಕ ಕಂಪನಿಯನ್ನು ಸೇರಿ (1926-27) ನಿರ್ವಹಿಸಿದ ಸ್ತ್ರೀ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು. ಆ ನಾಟಕ ಕಂಪನಿಯ ಮುಖ್ಯ ನಟರಾಗಿದ್ದ ಇವರು ರಾಜಭಕ್ತಿ ನಾಟಕದಲ್ಲಿ ವಿಕ್ರಾಂತನ ಪಾತ್ರ, ಕರ್ನಾಟಕ ಸಾಮ್ರಾಜ್ಯ ನಾಟಕದಲ್ಲಿ ತಿರುಮಲರಾಯ, ಸ್ವಾಮಿನಿಷ್ಠೆ ನಾಟಕದಲ್ಲಿ ಶಿವಾಜಿಯ ಪಾತ್ರ - ಇವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿ ಜನಪ್ರಿಯರಾದರು; ಶ್ರೇಷ್ಠನಟರೆಂಬ ಕೀರ್ತಿಗೂ ಭಾಜನರಾದರು. 

ಮುಂದೆ ಸುಬ್ಬಯ್ಯ ನಾಯ್ಡು ಆರ್. ನಾಗೇಂದ್ರರಾಯರ ಸಹಕಾರದಿಂದ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಎಂಬ ಸ್ವತಂತ್ರ ನಾಟಕ ಮಂಡಳಿಯನ್ನು ಆರಂಭಿಸಿದರು (1932). ಭೂಕೈಲಾಸ, ಸದಾರಮೆ, ವಸಂತಸೇನೆ, ನಿರುಪಮಾ, ಕೀಚಕವಧೆ ಮುಂತಾದ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಇವುಗಳಲ್ಲಿ ಭೂಕೈಲಾಸ ಮತ್ತು ವಸಂತಸೇನೆ ನಾಟಕಗಳು ತುಂಬ ಜನಪ್ರಿಯವಾದುವು. ಮಂಗಳೂರು, ಬಿಜಾಪುರ, ಗದಗ, ಬಾಗಲಕೋಟೆ ಮುಂತಾದ ನಾಡಿನ ನಾನಾ ಸ್ಥಳಗಳಲ್ಲದೆ, ನಾಡಿನ ಹೊರಗಿನ ಸ್ಥಳಗಳಾದ ಮದರಾಸು, ಕರ್ನೂಲುಗಳಲ್ಲೂ ಈ ಕಂಪನಿ ಪ್ರದರ್ಶಿಸಿದ ನಾಟಕಗಳು ಜನಪ್ರಿಯವಾದುವು. ಪ್ರಯೋಗಶೀಲರಾಗಿದ್ದ ಸುಬ್ಬಯ್ಯ ನಾಯ್ಡು  ನಾಟಕದ ಸಂದರ್ಭಕ್ಕೆ ತಕ್ಕಂತೆ ವಿವಿಧ ರೀತಿಯ ರಂಗಸಜ್ಜಿಕೆಗಳನ್ನು ಅಳವಡಿಸಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು.

ಸುಬ್ಬಯ್ಯ ನಾಯ್ಡು  ಚಲನಚಿತ್ರ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಗುಬ್ಬಿ ವೀರಣ್ಣನವರು ನಿರ್ಮಿಸಿದ ಮೂಕಿಚಿತ್ರ ಹಿಸ್ ಲವ್ ಅಫೇರ್ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಪ್ರಥಮ ಕನ್ನಡ ವಾಕ್ಚಿತ್ರ ಸತಿಸುಲೋಚನದಲ್ಲಿ (1934) ನಾಯಕ ಪಾತ್ರವನ್ನು (ಇಂದ್ರಜಿತು) ನಿರ್ವಹಿಸಿದರು. ಆ ಚಿತ್ರದಲ್ಲಿ ಅಭಿನಯಿಸಿದ ಲಕ್ಷ್ಮೀಬಾಯಿಯವರ ಪರಿಚಯವಾಗಿ ಅನಂತರ ಅವರನ್ನು ವಿವಾಹವಾದರು. ವಸಂತಸೇನೆ (1941) ಚಿತ್ರದಲ್ಲಿ ಚಾರುದತ್ತನ ಪಾತ್ರವನ್ನು ಅಭಿನಯಿಸಿದ ಇವರು ತೆಲುಗಿನಲ್ಲಿ ತಯಾರಾದ ಭೂಕೈಲಾಸದಲ್ಲೂ ಪಾತ್ರವಹಿಸಿದ್ದರು. ಹರಿಶ್ಚಂದ್ರ (1943), ಮಹಾತ್ಮ ಕಬೀರ್ (1947) ಇವರು ಅಭಿನಯಿಸಿದ ಇತರ ಚಿತ್ರಗಳು.

ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳೆರಡರಲ್ಲೂ ಸಾರ್ಥಕ ಸೇವೆಸಲ್ಲಿಸಿದ ಸುಬ್ಬಯ್ಯ ನಾಯ್ಡು ಅವರಿಗೆ ಹಲವು ಬಗೆಯ ಪ್ರಶಸ್ತಿಗಳು, ಬಹುಮಾನಗಳು ಬಂದುವು. ಮದರಾಸಿನ ಹೆಸರಾಂತ ಕಲಾವಿಲಾಸ ನಾಟಕ ಸಂಘವಾದ ಸುಗುಣವಿಲಾಸ ಸಭೆ ಚಿನ್ನದ ಪದಕ ನೀಡಿ ಗೌರವಿಸಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯ ಲಲಿತಕಲಾ ಅಕಾಡೆಮಿಯ ಗೌರವಗಳೂ ಇವರಿಗೆ ಸಂದವು. 

ಸುಬ್ಬಯ್ಯ ನಾಯ್ಡು  ಅವರು ಬದುಕಿನ ಕೊನೆಯ ದಿನಗಳಲ್ಲಿ ಆರ್ಥಿಕ ನಷ್ಟಕ್ಕೆ ಒಳಗಾಗಬೇಕಾಯಿತು. ಆದರೂ ಧೈರ್ಯದಿಂದ ರಂಗಭೂಮಿ ಸೇವೆಯನ್ನು ಮುಂದುವರಿಸಿ ಮಂಡ್ಯದಲ್ಲಿ ಮೊಕ್ಕಾಂ ಮಾಡಿದ್ದಾಗ 1962 ಜುಲೈ 21ರಂದು ಹೃದಯಾಘಾತದಿಂದ ನಿಧನರಾದರು. 

Great name in Theatre and movie world M. V. Subbaiah Naidu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ