ಡಿಗೊ ಮರಡೋನಾ
ಡಿಗೊ ಮರಡೋನಾ
ನಮ್ಮ ಯುಗದಲ್ಲಿ ನಾವು ಕಂಡ ಮೊದಲ ಅಪ್ರತಿಮ ಫುಟ್ಬಾಲ್ ಪ್ರತಿಭೆ ಡಿಗೊ ಮರಡೋನಾ. ಹಿಂದೆ ಇದ್ದ ಮಹಾನ್ ಫುಟ್ಬಾಲ್ ದಂತಕಥೆ ಪೀಲೆ ಹೆಸರನ್ಜು ನಾವು ಕೇಳಿದ್ದು ಸಹಾ, ಫುಟ್ಬಾಲ್ ಆಟದ ಬಗ್ಗೆ, ಮರಡೋನಾ ನಮ್ಮಲ್ಲಿ ಪ್ರೀತಿ ಹುಟ್ಟಿಸಿದ ಮೇಲೆಯೇ.
ನಮಗೆ ನಮ್ಮ ಬಾಲ್ಯದಲ್ಲಿ ಆಟವೆಂದರೆ ಗೋಲಿ ಆಟ. ಸ್ವಲ್ಪ ಶಕ್ತಿವಂತರಾಗಿದ್ದರೆ ಚಿನ್ನಿದಾಂಡು, ಲಗೋರಿ ಇತ್ಯಾದಿ. ಕ್ರಿಕೆಟ್ ಅಂದ್ರೆ ರೇಡಿಯೋದಲ್ಲಿ ವರ್ಷಕ್ಕೊಮ್ಮೆ ಭಾರತ ಯಾವುದೋ ತಂಡದ ವಿರುದ್ದ ಆಡುತ್ತಿದ್ದ ಕಾಮೆಂಟರಿ ಮತ್ತು ಆ ಹುರುಪಿನಲ್ಲಿ ಒಂದು ಮರದ ಹಲಗೆಗೆ ಕತ್ತಿನ ಎರಡು ತುದಿ ಕತ್ತರಿಸಿ ರಬ್ಬರ್ ಬಾಲ್ ಜೊತೆ ನಾವೇ ಪಟೌಡಿ, ವಿಶ್ವನಾಥ್ ಆಗಿಬಿಟ್ಟಿದ್ದೇವೆ ಎಂಬ ಭ್ರಮೆ. ನಮ್ಮ ಶಾಲೆಗಳಲ್ಲಿ ಆಟಕ್ಕೆ ಅಂತ ಸಿಗುತ್ತಿದ್ದದ್ದು ಫುಟ್ಬಾಲ್ ಒಂದೇ. ಯಾಕೆಂದರೆ ಯಾರು ಎಷ್ಟೇ ಒದ್ದರೂ ಬಾಳಿಕೆ ಬರುತ್ತಿದ್ದದ್ದು ಅದೊಂದೇ. ಶಾಲೆಗಳಿಗೆ ಅದು ಶಾಶ್ವತವಾಗಿ ಸ್ಥಿರವಾದ ಆಸ್ತಿಯಂತಿರುತ್ತಿತ್ತು. ನಮಗೋ ಫುಟ್ಬಾಲ್ ಅಂದರೆ ನಮ್ಮಂತೆಯೇ. ಯಾರು ಎಷ್ಟು ಒದ್ದು ಉಪ್ಪುಖಾರ ಹಾಕಿದರೂ, ಜಗ್ಗದೆ ಬಗ್ಗದೆ, ಬಿಸಿಲು ಚಳಿಗೆ ಬಿರುಗಾಳಿ ಮಳೆಗೆ ಅಳುಕದೆ, ಮುಂದೆ ಉರುಳಿ ಸಾಗುತ್ತಿದ್ದ ನಮ್ಮ ಬಾಳೂ, ಫುಟ್ಬಾಲ್ ತೆರನಾಗೇ ಇತ್ತು.
ನಮಗೆ ಫುಟ್ಬಾಲ್ ಅಂದರೆ ಒಬ್ಬರಿಗೊಬ್ಬರು ಎದುರುಬದುರು ಒದ್ದು ಮೈ ಬಟ್ಟೆಯೆಲ್ಲ ಅರ್ಥ ತಾತ್ಪರ್ಯಗಳಿಲ್ಲದೆ ಕೊಳೆ ತುಂಬಿಕೊಳ್ಳುವ ಆಟ. ಇದಕ್ಕೊಂದು ವಿಶ್ವವ್ಯಾಪಿತ್ವ ಇದೆ ಎಂದು ಅರ್ಥ ಆಗಿದ್ದೇ ಟಿವಿ ಬಂದು ವಿಶ್ವಕಪ್ ನಡೆದಾಗ. ನಾವು ನೋಡಿದ ಮೊದಲ ವಿಶ್ವಕಪ್ನಲ್ಲೇ ಈ ಅದ್ಭುತ ಡಿಗೊ ಮರಡೋನಾ ಕಂಡದ್ದು. ಆತ ತನ್ನ ಆಟದಿಂದ ತನ್ನ ಅರ್ಜೆಂಟೀನಾ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ್ದು.
ಪುನಃ ನಾಲ್ಕುವರ್ಷ ಕಳೆದು ಇದೇ ಡಿಗೊ ಮರಡೋನಾ ಸ್ಮರಣೆ ಮಾಡುತ್ತಾ ಟಿವಿ ಮುಂದೆ ಕುಳಿತವರಿಗೆ ಅದದ್ದು ಅಪಾರ ನಿರಾಸೆ. 1990ರಲ್ಲಿ ಇಟಲಿಯಲ್ಲಿ ನಡೆದಿದ್ದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಫೇವರಿಟ್ ತಂಡವಾಗಿ ಪ್ರವೇಶಿಸಿತ್ತು. ಆದರೆ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯಾರಿಗೂ ಗೊತ್ತೇ ಇಲ್ಲದ ಕ್ಯಾಮರೂನ್ ತಂಡದ ವಿರುದ್ಧ ಅರ್ಜೆಂಟೀನಾ ಸೋತಿತು. ಆದರೆ, ಆರಂಭಿಕ ಪಂದ್ಯದ ಸೋಲಿನಿಂದ ಕಂಗೆಡದ ನಾಯಕ ಮರಡೋನಾ ಛಲ ಬಿಡದೆ ಹೋರಾಡಿ ತಂಡವನ್ನು ಫೈನಲ್ ವರೆಗೂ ಕೊಂಡೊಯ್ದ. ಅರ್ಜೆಂಟೀನಾ ತಂಡ ಫೈನಲ್ನಲ್ಲಿ ಪಶ್ಚಿಮ ಜರ್ಮನಿಗೆ ಸೋಲುವವರೆಗಿನ ಪ್ರತಿ ಪಂದ್ಯದಲ್ಲೂ ಎದುರಾಳಿ ಆಟಗಾರರ ಗುರಿ ಮರಡೋನಾ ತಡೆಯುವುದೇ ಆಗಿತ್ತು. ಅಷ್ಟರ ಮಟ್ಟಿಗೆ ಮರಡೋನಾ ಭಯ ಎದುರಾಳಿ ತಂಡಗಳನ್ನು ಆವರಿಸಿತ್ತು. ಮರಡೋನಾ ಗೋಲು ಹೊಡೆದು ಸಂಭ್ರಮಿಸಿದ ಕ್ಷಣಗಳಿಗಿಂತ ಆತ ಕೆಳಗೆ ಬಿದ್ದು ಗೋಳಾಡುತ್ತಿದ್ದ ದೃಶ್ಯಗಳೇ ಟಿವಿ ತುಂಬಿದವು. ಕೊನೆಗೆ ಫೈನಲ್ನಲ್ಲಿ ಸೋತು ಕಣ್ಣೀರಿಟ್ಟ ಆತನ ಕಂಗಳು ಇನ್ನೂ ನಮ್ಮಿಂದ ಮರೆಯಾಗಿಲ್ಲ.
ಡಿಗೊ ಮರಡೋನಾ 1960ರ ಅಕ್ಟೋಬರ್ 30ರಂದು ಲನೂಸ್ ಎಂಬಲ್ಲಿ ಜನಿಸಿದ.
ಹದಿನಾರರ ಹರೆಯದಲ್ಲಿದ್ದಾಗ ರಾಷ್ಟ್ರೀಯ ತಂಡ ಸೇರಿಕೊಂಡಿದ್ದ ಮರಡೋನಾ, ಸ್ವದೇಶದಲ್ಲಿ 1978ರಲ್ಲಿ ನಡೆದಿದ್ದ ವಿಶ್ವಕಪ್ ತಂಡದಲ್ಲಿದ್ದರು. ಆಗ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡದ ನಾಯಕ ಡೇನಿಯಲ್ ಪಸರೆಲಾ, 'ಮುಂದೊಂದು ದಿನ ಮರಡೋನಾ ನೇತೃತ್ವದಲ್ಲಿ ತಂಡ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲಿದೆ' ಎಂಬ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಎಂಟು ವರ್ಷಗಳಲ್ಲಿ ನಿಜವಾಯಿತು. 1986ರಲ್ಲಿ ಮೆಕ್ಸಿಕೋದಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ವಿರುದ್ಧ ಮರಡೋನಾ ಹೊಡೆದಿದ್ದ ಎರಡು ಗೋಲುಗಳ ನೆರವಿನಿಂದಲೇ ಅರ್ಜೆಂಟೀನಾ ಪಂದ್ಯ ಗೆದ್ದಿತ್ತು. ಆ ಪೈಕಿ ಒಂದು ಗೋಲು ಹೊಡೆಯುವಾಗ ಚೆಂಡು ಮರಡೋನಾ ಕೈಗೆ ಬಡಿದಿತ್ತು. ಆದರೂ ರೆಫರಿಗಳು ಗೋಲನ್ನು ನೀಡಿದ್ದರು. ಮುಂದೆ ಆ ಕೈ 'ದೇವರ ಕೈ' ಎಂದೇ ಹೆಸರುವಾಸಿಯಾಯಿತು.
ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಗೆದ್ದು ಕಪ್ ಎತ್ತಿ ಹಿಡಿದಿದ್ದ 26ರ ಹರೆಯದ ಹುಡುಗ ಡಿಯಾಗೋ ಮರಡೋನಾ ಫುಟ್‌ಬಾಲ್ ಪ್ರಿಯರ ಅಚ್ಚುಮೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು.
1994ರಲ್ಲಿ ಅಮೆರಿಕದಲ್ಲಿ ನಡೆದಿದ್ದ ತಮ್ಮ ಕೊನೆಯ ವಿಶ್ವಕಪ್ ಪಂದ್ಯಾವಳಿಯಲ್ಲಿ, ಮಾದಕ ವಸ್ತು ಸೇವಿಸಿ ಭಾಗವಹಿಸಿರುವ ಆರೋಪ ಸಾಬೀತಾಗಿ ಮರಡೋನಾ ಟೂರ್ನಿಯ ಮಧ್ಯ ಭಾಗದಲ್ಲೇ ಹೊರನಡೆದರು.
ಎದುರಾಳಿ ಆಟಗಾರರನ್ನು ಭೇದಿಸಿಕೊಂಡು ಮುನ್ನುಗ್ಗುತ್ತಿದ್ದ ಡಿಯಾಗೋ ಸ್ವಾರ್ಥಿಯಾಗಿರದೆ, ತನ್ನ ಸಹ ಆಟಗಾರರಿಗೆ ಚೆಂಡನ್ನು ಪಾಸ್ ಮಾಡುತ್ತಿದ್ದ ವೈಖರಿ ಅದ್ಭುತದ್ದಾಗಿತ್ತು. ಅವರ ಕಾಲ್ಚಳಕ ಅಸಾಮಾನ್ಯದ್ದಾಗಿತ್ತು.
ತನ್ನ ಆಗಾಧ ಪ್ರತಿಭೆ, ಸಾಟಿಯಿಲ್ಲದ ಆಟದಿಂದಾಗಿ ಅಭಿಮಾನಿಗಳ ಆರಾಧ್ಯದೈವವಾಗಿದ್ದ ಮರಡೋನಾ ವಿವಾದಗಳಿಂದಲೂ ಕುಖ್ಯಾತರಾಗಿ ಜಗಳ, ಮಾದಕ ವಸ್ತುವಿನ ನಶೆ, ದುಶ್ಚಟಗಳಿಂದಾಗಿ ಸಹ ಸುದ್ದಿಯಾದರು.
ದುಶ್ವಟದಿಂದಾಗಿ ಹಲವು ಬಾರಿ ಸಾವಿನ ದವಡೆಗೆ ಜಾರಿ ಮರಳಿ ಬಂದಿದ್ದ ಮರಡೋನಾ, ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು.
ಕೆಲವೊಂದು ಅದ್ಭುತ ಸಾಧಕರಿಗೆ ಪ್ರತಿಭಾ ಸಾಮರ್ಥ್ಯವನ್ನು ಕೊಟ್ಟ ವಿಧಿ, ಯಶಸ್ಸು ಮತ್ತು ಬದುಕಿನ ನಡುವಿನ ಸಮತೋಲನ ನಿರ್ವಹಿಸುವದನ್ನು ಕಲಿಸಿಕೊಟ್ಟಿರುವುದಿಲ್ಲ ಎಂಬುದು ಖೇದದ ಸಂಗತಿ. ಅದು ಏಕೆ ಹಾಗೆ ಮಾಡುತ್ತದೆ ಎಂದು ಹೇಗೆ ಹೇಳುವುದು!
ಮನುಷ್ಯನ ಯಶಸ್ಸಿನ ತುತ್ತತುದಿಯ ಘಳಿಗೆ ಒಂದೇ ಕ್ಷಣದ್ದು. ಅವನು ಅದರಿಂದ ಕೆಳಗಿಳಿದಾಗ ಎಲ್ಲಿ ಎಷ್ಟು ಅಳಕ್ಕಿಳಿದ ಎಂಬುದು ಮಾತ್ರವೇ ಅವನ ನಿಜಸುಖವನ್ನು ನಿರ್ಣಯಿಸುವಂತದ್ದು. ಸುಖವಾದರೆ ಅಂತ್ಯವೂ ಸುಖ, ಇಲ್ಲದಿದ್ದರೆ ಅಂತ್ಯದವರೆಗೆ ದುಃಖ. ಉಳಿದಂತೆ ಲೋಕಕ್ಕೆ ಎಂದೋ ಕಂಡ ಡಿಗೋ ಮರಡೋನಾ ಎಂಬ ರೋಮಾಂಚನವೊಂದು 2020ರ ನವೆಂಬರ್ 25ರಂದು ಅಳಿದುಹೋದ ಎಂಬುದು ಒಂದು ಕ್ಷಣದ ದುಃಖ.
On the birth anniversary of great football player Deigo Maradona
ಕಾಮೆಂಟ್‌ಗಳು