ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಎಸ್. ಚರಣ್

 

ಚರಣ್ ಸಿ. ಸದಾಶಿವನ್

ಸಿ. ಎಸ್. ಚರಣ್ ಓದಿನಲ್ಲಿ ಇಂಜಿನಿಯರಾಗಿ, ಆಸಕ್ತಿಯಿಂದ ಪತ್ರಿಕಾ ಸಂಪಾದನೆ ವೃತ್ತಿಮಾರ್ಗಕ್ಕಿಳಿದು, ಪ್ರವೃತ್ತಿಯಿಂದ ಸೈಕಲೇರಿ ಸಾಗುತ್ತಾ ಬರವಣಿಗೆ ಹವ್ಯಾಸದಲ್ಲಿ ತೇಲುತ್ತಾ ಸುಖ ಕಂಡುಕೊಂಡವರು.

ನಿಮ್ಮ ಹುಟ್ಟಿದ ಹಬ್ಬ ಯಾವತ್ತು ಅಂದರೆ, "ನಾ ಆಫೀಸಿಗೆ ಸೈಕಲ್ ಸವಾರಿ ಆರಂಭಿಸಿದ್ದು 2007 ವರ್ಷ ಅಕ್ಟೋಬರ್ 2ರಂದು.  ನನಗೆ ಅದೇ ಹಬ್ಬ " ಅನ್ನುವವರು ಚರಣ್.   'ಸದಾಶಿವನಿಗೆ ಅದೇ ಧ್ಯಾನ' ಅನ್ನೋ ಹಾಗೆ ಈ ಸದಾಶಿವ ಚರಣ್ಗೆ  ಸೈಕಲ್ ಮೇಲೆ ಚರಣವನ್ನಿಟ್ಟು ಚಾರಣದಂತೆ ನಗರ ಹಳ್ಳಿ ಬೆಟ್ಟಗುಡ್ಡಗಳ ಮೇಲೆ ಸಾಗುವುದಿಷ್ಟ. ಚರಣ್ ಸಿ. ಸದಾಶಿವನ್ ಇಂಜಿನಿಯರಿಂಗ್ ಓದಿದರೂ, ಪತ್ರಿಕೋದ್ಯಮದಲ್ಲಿ ಆಸಕ್ತಿ ತಾಳಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹದಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2007ರಿಂದ ಮೊದಲುಗೊಂಡಂತೆ ನಗರದಲ್ಲಿನ ಬಿರುಸಿನ ವಾಹನ ಸಂಚಾರಗಳ ನಡುವೆ ವೃತ್ತಿಗಾಗಿ, ಪ್ರಕೃತಿ  ಪ್ರೇಮಿಯಾಗಿ ಮತ್ತು ಭಾರತದ ಬಹುತೇಕ ಕಡೆಗಳಿಗೆ ಪ್ರವಾಸಿಗನಾಗಿ ಚರಣ್ ಸೈಕಲ್ ಸವಾರಿ ಮಾಡುತ್ತಾ ಬಂದಿದ್ದಾರೆ. ಜೊತೆಗೆ 2009ರಿಂದ ಮೊದಲುಗೊಂಡಂತೆ ಸೈಕಲ್ ಸವಾರಿಯ ಬಗ್ಗೆ, ಸೈಕಲ್ ಸವಾರಿ ಮಾಡುವಗರ ಬಗ್ಗೆ ಮತ್ತು ಸೈಕಲ್ ಸವಾರಿ ಆಸಕ್ತ ತಂಡಗಳ ಬಗ್ಗೆ ವೈವಿಧ್ಯಪೂರ್ಣ ಲೇಖನಗಳನ್ನೂ ಬರೆಯುತ್ತ ಬಂದಿದ್ದಾರೆ. ಈ ಪಯಣದಲ್ಲಿ ಅವರು ಸೈಕಲ್ ಆಸಕ್ತ ವೈದ್ಯರುಗಳು, ಇಂಜಿನಿಯರುಗಳು, ವಿಜ್ಞಾನಿಗಳು, ಶಿಕ್ಷಣತಜ್ಞರು ಮತ್ತು ಬದುಕಿನ ಅವಲಂಭನೆಗಾಗಿ ಸೈಕಲ್ ಆಶ್ರಯಿಸಿರುವವರೂ ಸೇರಿದಂತೆ ವಿವಿಧ ಹಿನ್ನೆಲೆಯ ಸೈಕ್ಲಿಗರೊಡನೆ ಸಂಪರ್ಕ ಸಮಲೋಚನೆಗಳ ಆಧಾರಿತ ವಿಷಯಗಳನ್ನು ಪ್ರಸ್ತುತ ಪಡಿಸುತ್ತ ಸಾಗಿದ್ದಾರೆ.

ಚರಣ್ ಸದಾಶಿವನ್ ತಮ್ಮ ಮನೆಯಿಂದ ಕೆಲಸ ಮಾಡುವ ಟೈಮ್ಸ್ ಆಫ್ ಇಂಡಿಯಾ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ದಿನಾ ಕಡೇ ಪಕ್ಷ ಇಪ್ಪತ್ತು ಕಿಲೋಮೀಟರ್, ವಾರಾಂತ್ಯದ ಉದ್ದುದ್ದದ ಹವ್ಯಾಸಿ ಸೈಕ್ಲಿಂಗ್, 2013ರ ಪಶ್ಚಿಮ ಘಟ್ಟಗಳಲ್ಲಿನ ಗ್ರೇಟ್ ಮಲ್ನಾಡ್ ಚಾಲೆಂಜ್ (900 ಕಿಲೋಮೀಟರ್), 2014ರ ಕರ್ನಾಟಕ ತಮಿಳುನಾಡು, ಕೇರಳಗಳಲ್ಲಿನ ನೀಲಗಿರಿ ಬೆಟ್ಟ ಪ್ರದೇಶದ 900 ಕಿಲೋಮೀಟರ್ ಪ್ರವಾಸಿ ಸೈಕ್ಲಿಂಗ್, ಸ್ವಂತ ಊರಾದ ಶಿವಮೊಗ್ಗಕ್ಕೆ 275 ಕಿಲೋಮೀಟರ್ ಸೈಕ್ಲಿಂಗ್, 2015ರಲ್ಲಿ ಕನ್ಯಾಕುಮಾರಿಗೆ 670 ಕಿಲೋಮೀಟರ್ ಸೈಕ್ಲಿಂಗ್, 2016ರಲ್ಲಿ ಉಡುಪಿವರೆಗೆ ಕರ್ನಾಟಕದ ಹಲವು ಪ್ರದೇಶಗಳಲ್ಲಿನ 550 ಕಿಲೋಮೀಟರ್ ಸೈಕ್ಲಿಂಗ್, 2017ರಲ್ಲಿ ಮನಾಲಿ ಖರ್ದುಂಗ ಲಾ ಪ್ರದೇಶದಲ್ಲಿ 550 ಕಿಲೋಮೀಟರ್ ಸೈಕ್ಲಿಂಗ್, 2019ರಲ್ಲಿ ಪುದುಚೇರಿಯಲ್ಲಿ 360 ಕಿಲೊಮೀಟರ್ ಸೈಕ್ಲಿಂಗ್ ಮುಂತಾದ ವೈವಿಧ್ಯ ಸೈಕ್ಲಿಂಗ್ ಮೂಲಕ ಹಲವು ದಶ ಸಹಸ್ರ ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದಾರೆ.  ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಸಮಸ್ತ ದಂತ ಕ್ಲಿನಿಕಗಳನ್ನೆಲ್ಲ ತಲುಪಿದ ಸೈಕ್ಲಿಂಗ್ ಅಭಿಯಾನ ಕೂಡ ಮಾಡಿದ್ದರು.  ಹೀಗೆ ಅವರು ನಡೆಸಿದ ಅಭಿಯಾನಗಳು ಇನ್ನೆಷ್ಟೆಷ್ಟೋ.  

ಚರಣ್ ಸಿ. ಸದಾಶಿವನ್ ಅಂತರ್ಜಾಲಯುಗದ ಮಹತ್ವದ ಕಥೆಗಾರರು. ಅವರ ಕಥೆಗಳು 'ಆಂಟಿ ಕ್ಲಾಕ್' ಮತ್ತು 'ಸಮ್ಮಿಲನ್ 2.0’ ಎಂಬ ಕಥಾ ಸಂಕಲನಗಳಲ್ಲಿ ಹೊರಹೊಮ್ಮಿದ್ದು ಓದುಗರು ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿವೆ.  ಇವರ ಕಥೆಗಳು ಬರಿಯ ತಂತ್ರಜ್ಞಾನದ ಓಟದೊಂದಿಗೆ ಓಡುವ ಕಥೆಗಳಾಗಿರದೆ ಭಾವನಾತ್ಮಕ ಸ್ಪರ್ಶಗಳೊಂದಿಗೆ ಹೊಸದನ್ನೇನನ್ನೊ ಒಳ ಮನದಿಂದ ಅರಸುತ್ತ ಮುದ ನೀಡುವಂತದ್ದಾಗಿವೆ.  ಇವರ ಅನೇಕ ಕಲ್ಪನೆಗಳು ಆಧುನಿಕ ಅಂತರ್ಜಾಲಯುಗದ ಸಂವೇದನೆಗಳನ್ನು  ಚಿತ್ರಿಸುವ ಜೊತೆ ಜೊತೆಗೆ ಅದರ ನಡುವಣ ಹೊಸ ಸಾಧ್ಯತೆಗಳೆಡೆಗೂ ಕಣ್ಣುಹಾಯಿಸುವಂತಿವೆ.  

ಜೆಟ್ -ರಾಕೆಟ್ ಯುಗಗಳ ವೇಗದ ನಡುವೆ ನಿಧಾನಗತಿಯ ಸೈಕಲ್ ಸವಾರಿಗಿರುವ ಮೌಲ್ಯ ಹಾಗೂ ಎಲ್ಲವೂ ಅಂತರಜಾಲದಲ್ಲಿ ಲಭ್ಯ ಎನ್ನುವ ಮನದ ಮೂಲೆಯಲ್ಲಿ ನಮ್ಮೊಳಗಿರುವ ದೀಪದ ಬತ್ತಿಯನ್ನು ಮತ್ತಷ್ಟು ಉದ್ದೀಪನಗೊಳಿಸುವತ್ತ ಚಾಚುವ ಚರಣ್ ಸದಾಶಿವನ್ ಅವರ ನಡೆ ಹಲವು ರೀತಿಯ ಸರಳತೆ ಮತ್ತು ಸ್ನೇಹಪರತೆಗಳೊಂದಿಗೆ ಸದಾ ವಿಸ್ತಾರ ಪಡೆಯುತ್ತ ಸಾಗಿರುವಂತದ್ದು.

ಆತ್ಮೀಯ ಚರಣ್ ಸದಾಶಿವನ್ ಅವರ ಬದುಕಿನ ಈ ವಿಶಿಷ್ಟ ಪಯಣ ನಿರಂತರ ನಿತ್ಯನವೀನತೆಗಳೊಂದಿಗೆ ಉಲ್ಲಾಸಮಯವಾಗಿರಲಿ.

Happy 15th anniversary of great cycling to Charan C Sadashivan 🌷🚴‍♂️ 🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ