ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ15


 ತಿರುಪ್ಪಾವೈ 15

ಬೇರಿನ್ಯಾರೊಡನೇ ನಾನು ಶ್ರೀನಿಧಿಯನ್ನು ಹಾಡಿ ನಲಿಯಲಿ?

ಎಲ್ಲೇ ಇಳಂಕಿಳಿಯೇ ಇನ್ನುಮುರಂಗುದಿಯೋ ಶಿಲ್ಲೆನ್ರಳೈಯೇನ್ಮಿನ್ ನಂಗೈಮೀರ್ ಪೋದರುಗಿನ್ರೇನ್
 ವಲ್ಲೇಯುನ್ ಕಟ್ಟುರೈಗಳ್ ಪಣ್ಡೀಯುನ್ವಾಯರಿದುಂ 
ವಲ್ಲಿರ್‌ಗಳ್ ನೀಂಗಳೇ ನಾನೇತಾನಾಯಿಡುಗ 
ಒಲ್ಲೈ ನೀ ಪೋದಾಯುನಕ್ಕೆನ್ನ ವೇರುಡೈಯೈ 
ಎಲ್ಲಾರು ಪೋನ್ದಾರೋ? ಪೋನ್ದಾರ್‌ ಪೋನ್ದೆಣ್ಣಿಕ್ಕೋಳ್
ವಲ್ಲಾನೈ ಕೋನ್ನಾನೈ ಮಾತ್ತಾರೈ ಮಾತ್ತಳಿಕ್ಕ 
ವಲ್ಲಾನೈ, ಮಾಯನೈಪ್ಪಾಡೇಲೋರೆಂಬಾವಾಯ್


ಭಾವಾನುವಾದ

ಧ್ರುವತಾರೆ ನೀನಮ್ಮ ಭವ್ಯೆ ಭಾಗೀರಥಿಯೇ ಕಾದಿಹೆವು ನಿನಗಾಗಿ ಕಾತುರದಿ ನೋಂಪಿಯನಾಚರಿಸಲೈದವರೆಷ್ಟು ತಪ್ಪಿದವರೆಷ್ಟೆಂದು ಕಾಲಹರಣವು ಬೇಡ ಮಹಾಮುಖನ ಮದಗಜ ಮರ್ಧನನ ಚಾಣೂರಮಲ್ಲರ ಸಂಹರನ ಮನೋಹರನ ಪವಮಾನ ಸುತ ಹೃತ್ಕಮಲವಾಸ ಪುರಾತನನ 
ಪಾಹಿ ಪರಮಾತ್ಮಪಾಹಿ ಪಾರ್ಥಸಾರಥಿಯೇ ಪಾಹಿ ಆತ್ಮಾರಾಮ ಎಂದಾಡಿ ತಪ್ಪದೆಯೇ ಸ್ತುತಿಸುವೆವು ನೀನಿರಲೆಮ್ಮನೋಂಪಿಯಲಿ
ನೆರವಾಗಿ 
ದೇವೇಶ ಶೋಕನಾಶನನು ಸೀತಾರಮಣ ತಾನೊಲಿದು ಸಲಹುವನೆಮ್ಮ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು

ತಿರುಪ್ಪಾವೈ ಗೀತ ಮಾಲೆ 15
ಸಂಕ್ಷಿಪ್ತ ಭಾವಾರ್ಥ

ಈಕೆ ಎಲ್ಲರಿಗಿಂತ ಹೆಚ್ಚು ಆತ್ಮವಿಶ್ವಾಸವುಳ್ಳವಳು. ಮಂದಗಾಮಿನಿ. ಶ್ರೀಕೃಷ್ಣ ತನ್ನನ್ನಗಲಿ ಎಲ್ಲೂ ಇರಲಾರ ಎಂಬ ತುಂಬು ವಿಶ್ವಾಸದವಳು. ಇದರ ಭಾವಾರ್ಥ ಶ್ರೀವೈಷ್ಣವ ಭಾಗವತೋತ್ತಮರೆಂದರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿ. ಅವರ ಹೃದಯದಲ್ಲಿ ಸದಾಕಾಲ ರಾರಾಜಿಸುತ್ತಿರುತ್ತಾನೆ ಎಂದು. ಇಂತಹ ಸಖಿ ಜೊತೆಗಿದ್ದರೆ ಶ್ರೀಹರಿಯ ದರ್ಶನ ಸುಲಭವಲ್ಲವೇ ಎಂದು ಗೋವಾದೇವಿ ಈಕೆಯನ್ನು ಎಬ್ಬಿಸುತ್ತಿದ್ದಾಳೆ. 

ಮಂದಗಾಮಿನಿಯಾದ ಈ ಸಖಿಯೋ ಎಲ್ಲರೂ ಬಂದಿದ್ದಾರೆಯೇ? ಎಷ್ಟು ಜನ ಬಂದಿದ್ದಾರೆ? ತಪ್ಪಿಸಿಕೊಂಡಿರುವವರೆಷ್ಟು ಮಂದಿ? ಇತ್ಯಾದಿ ಪ್ರಶ್ನೆಗಳ ಸರಮಾಲೆಯಿಂದ ಕಾಲಹರಣ ಮಾಡುತ್ತಿದ್ದಾಳೆ.

ಆದರೆ ಗೋದಾದೇವಿ ಹಿಂದೆ ಬೀಳುವುದಿಲ್ಲ. ನೀನೇ ಎದ್ದು ಬಾ. ಎಣಿಸಿ ನೋಡು. ನಮ್ಮ ಭಾಗವತರ ಗುಂಪೆಲ್ಲಾ ಬಂದಿದೆ. ಅಲ್ಲದೆ ಆಳ್ವಾರರುಗಳೆಲ್ಲಾ ದ್ವಾದಶ ತಿರುನಾಮಗಳಿಂದಲಂಕೃತರಾಗಿ ಬಂದಿದ್ದಾರೆ. ತನ್ನನ್ನು ಕೊಲ್ಲಲೆಂದೇ ಬಂದ ಕುವಲಯಾಪೀಡವೆಂಬ ಮದಗಜವನ್ನು ಕೊಂದವನನ್ನು, ಕಂಸನಿಂದ ನಿಯುಕ್ತರಾಗಿದ್ದ ಚಾಣೂರಮಲ್ಲರನ್ನೂ ಸಂಹರಿಸಿದವನನ್ನು ಪ್ರಾರ್ಥಿಸೋಣ ಬಾ ಸಖಿ.

ಗೋವಾದೇವಿಯ ಭಕ್ತಿಯ ಆಗ್ರಹಕ್ಕೆ ಮಣಿದ ಸಖಿ, ಆಯ್ತಮ್ಮಾಆಯ್ತು ಬಂದೆ ಕಣೇ ಬಂದೆ. ನಿಮ್ಮಂತಹ ಭಕ್ತಶಿರೋಮಣಿಗಳೊಡನಲ್ಲದೆ ಬೇರಿನ್ಯಾರೊಡನೇ ನಾನು ಶ್ರೀನಿಧಿಯನ್ನು ಹಾಡಿ ನಲಿಯಲಿ? ಮನುಕುಲಕ್ಕೆ ಭೂಷಣರೇ ಭಾಗವತರು ಎಂದು ತಾನೆದ್ದು ಬರಲು ಸನ್ನದ್ಧಳಾಗುತ್ತಾಳೆ ಮತ್ತು ಇದರಿಂದ ಸಮಸ್ತ ಲೋಕಕ್ಕೂ ಕಲ್ಯಾಣವಾಗಲಿ ಎಂದು ಧ್ವನಿಗೂಡಿಸುತ್ತಾಳೆ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ