ತಿರುಪ್ಪಾವೈ14
ತಿರುಪ್ಪಾವೈ
ನೀನು ಬಂದು ನಮ್ಮನ್ನೆಲ್ಲಾ ಎಚ್ಚರಿಸುತ್ತೇನೆ ಎಂದು ಹೇಳಿದ್ದೆ! ಆದರೆ ಎಲ್ಲಿ ?
Thiruppavai 14
ಉಂಗಲ್ ಪುಳ್ಳೆಕಡೈ ತೋಟ್ಟತ್ತು ವಾವಿಯುಳ್
ಶಂಗಳುನೀರ್ ವಾಯ್‍ನೆಹಿಳೆನ್ದಾಂಬಲ್‍ವಾಯ್
ಕೂಂಬಿನಾಕಾಣ್
ಶೆಂಗಲ್‌ಪ್ಪೊಡಿ ಕ್ಕೂರೈವೆಣಿಪಲ್ ತವತ್ತವರ್
ತಂಗಳ್ ತಿರುಕ್ಕೋಯಿಲ್ ಶಿಂಗಿಡುವಾನ್ ಪೋಕ್ಕಿನ್ರಾರ್
ಎಂಗಳೈ ಮುನ್ನಮೆಳುಪ್ಪುವಾನ್ ವಾಯ್ ಪೇಶುಮ್
ನಂಗಾಯ್ ಎಳುಂದಿರಾಯ್ ನಾಣಾದಾಯ್
ನವುಡೈಯಾಯ್
ಶಂಗೋಡು ಶಕ್ತರಮೇನ್ದುಂ ತಡೆಕ್ಕೈಯನ್
ಪಂಗಯಕ್ಕಣಾನೈ ಪ್ಪಾಡೇಲೋರೆಂಬಾವಾಯ್
ಭಾವಾನುವಾದ - 14
ಕೆಂದಾವರೆಯ ನಗೆ ಬಾಲನೇಸರನಾಗಮನಕ್ಕೆ ಸ್ವರ್ಣ ಕಿರಣದ ಕಾಂತಿ
ಮುನಿಗಳತಿಶಯದಿ ನಡೆದಿಹರು ಪಾಂಚಜನ್ಯವ ಮೊಳಗಿ ಮಾಧವನ
ದರ್ಶನಕೆ
ಅಭಯವನಿತ್ತವಳು ನೀ ಶೀಘ್ರದೊಳೆಚ್ಚರಿಸುವೆನೆಂದು ಅನಾಮಯನ ಪಾಡಲ್ಕೆ
ತರವೆ ನಿನಗಿದು ಯೋಗನಿದ್ರೆಯ ನಟನೆ ಕಾದಿರಲು ನಾವೆಲ್ಲ ನಿನಗಾಗಿ ಮೇರುಗಿರಿವಾಸ ಬದರಿನಾಥನ ಯತಿರಾಜ ವರದ ಚೆಲುವನರಗಿಣಿಯೇ ನೀನೆ ನಮಗೆಲ್ಲ ಭಕ್ತಿರಸ ಸಾರಸುರಗಂಗೆ ಕಮಲಾಕ್ಷಿ ಕಮಲಕೋಮಲೆಯೇ ತೋರೆಮಗನಂತ ಗುಣಸಾಗರ ಪರಮೇಷ್ಠಿಯ ಪಾದಪದುಮಗಳನು ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ತಿರುಪ್ಪಾವೈ ಗೀತ ಮಾಲೆ
ಭಾವಾರ್ಥ 14
ಗೋದಾದೇವಿಯು ಶ್ರೀಕೃಷ್ಣನ ಮತ್ತೊಬ್ಬ ಅಂತರಂಗ ಭಕ್ತಳೂ ಪ್ರಭಾವಿಯೂ ಆದ ಸಖಿಯನ್ನು ಎಬ್ಬಿಸುತ್ತಿರುವ ಪಾಶುರವಿದು. ಇಲ್ಲಿ ಗೋದಾದೇವಿಯು ತಾನೊಬ್ಬ ಸಾಧಾರಣ ಗೋಪಿಯೆಂಬುದಾಗಿ ಪರಿಭಾವಿಸಿ ಶ್ರೀಕೃಷ್ಣನ ದರ್ಶನವನ್ನು ಕೊಡಿಸೆಂದು ಈ ಭಕ್ತಾಗ್ರಗಳನ್ನು ಎಬ್ಬಿಸುತ್ತಿದ್ದಾಳೆ.
ನೋಡಮ್ಮ ಸಖಿ, ನಿನ್ನರಮನೆಯು ಎಷ್ಟು ಸುಂದರವಾಗಿ ವಿಶಾಲವಾಗಿದೆ. ನಿನ್ನರಮನೆಯ ಅಂಗಳದಲ್ಲಿರುವ ಕೊಳದಲ್ಲಿ ಕಮಲಪುಷ್ಪಗಳು ಅರಳಿ ನಗುವನ್ನು ಸೂಸುತ್ತಿವೆ. ಅದಾಗಲೇ ಬೆಳಗಾಗುವುದರಲ್ಲಿದೆ ಎಂದು ತಪೋವನಗಳಲ್ಲಿರುವ ಋಷಿಗಳು ಎದ್ದು ಸ್ನಾನ ಮಾಡಿ ದೇವಾಲಯಗಳಿಗೆ ಶಂಖು ಧ್ವನಿಗೈಯ್ಯುತ್ತಾ ಹೋಗುತ್ತಿದ್ದಾರೆ.
ನೀನು ನಮಗೆ ಈ ಮೊದಲೇ ತಿಳಿಸಿದ್ದೆ. ನೀನು ಬೇಗೆದ್ದು ಬಂದು ನಮ್ಮನ್ನೆಲ್ಲಾ ಎಚ್ಚರಿಸುತ್ತೇನೆ ಎಂದು. ಆದರೆ ಎಲ್ಲಿ ? ಈಗ ನೀನೇ ಶ್ರೀಕೃಷ್ಣನನ್ನು ನಿನ್ನಂತರಂಗದಲ್ಲಿ ಸ್ಥಾಪಿಸಿಕೊಂಡು ಅಂತರ್ಮುಖಿಯಾಗಿದ್ದೀಯೆ. ನಾವೇ ನಿನ್ನನ್ನು ಹುಡುಕಿಕೊಂಡು ಬಂದಿದ್ದೇವೆ. ಇದು ನಿನಗೆ ತರವಲ್ಲ. ನೀನಲ್ಲದೆ ನಮ್ಮನ್ನು ಮುನ್ನಡೆಸುವವರು ಯಾರು ? ದಯಾಮಾಡಿ ಬೇಗೆದ್ದು ಬಾ.
ನೀನು ನಮ್ಮೊಡನಿದ್ದರೆ ಅನಂತಶಯನನ ದರ್ಶನವು ನಮಗೆ ಶ್ರೀಘ್ರವೇ ದೊರಕುತ್ತದೆ. ಇದರಿಂದ ನಮ್ಮಜನ್ಮಸಾರ್ಥಕವಾಗುತ್ತದೆ.
ಇದರಿಂದ ನಮ್ಮ ಈ ಮಾರ್ಗಶಿರಮಾಸದ ವ್ರತವೂ ಈಡೇರಿ, ಸಮಸ್ತಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು