ತಿರುಪ್ಪಾವೈ 2
ತಿರುಪ್ಪಾವೈ ಗೋದೆಯ ಭಕ್ತಿಗಾನ
ವೈಯತ್ತು ವಾಳ್ವೀರ್ಗಾಳ್ ನಾಮುಂ ನಂಬಾವೈಕ್ಕು।
ಚ್ಚೆಯ್ಯುಂ ಕಿರಿಶೈಗಳ್ ಕೇಳೀರೋ ಪಾರ್ಕಡಲುಳ್।
ಪೈ ಯತ್ತು ಯಿನ್ರ ಪರಮನಡಿಪಾಡಿ।
ನೆಯ್ಯುಣ್ಣೋಂ ಪಾಲುಣ್ಣೋಂ ನಾಟ್ಕಾಲೇ ನೀರಾಡಿ।
ಮೈಯಿಟ್ಟೆಳುದೋಂ ಮಲರಿಟ್ಟು ನಾಮುಡಿಯೋಂ।
ಶಯ್ಯಾದನ ಶಯ್ಯೋಂ ತೀಕ್ಕುರಳೈ ಚ್ಚೆನ್ರೋದೋಂ।
ಐಯ್ಯಮುಂ ಪಿಚ್ಚೈಯುಂ ಆಂದನೈಯುಂ ಕೈಕಾಟ್ಟಿ।
ಉಯ್ಯು ಮಾರೆಣ್ಣಿ ಯುಗಂದೇಲೋ ರೆಂಬಾವಾಯ್ ॥2॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ಭುವಿಸೌಖ್ಯ ಜೀವಿಗಳೇ, ಕೇಳಿನೋಂಪಿಯ ಪರಿಯ
ಭುವನರಕ್ಷಕ ನೆಪಕೆ ಮಲಗಿ ಕ್ಷೀರಾಧಿಯೊಳಗೆ |
ತವೆಸುಷುಪ್ತಿಯೊಳಿರಲ್ಕವನ ಪಾದಮುಟ್ಟಿ ಮೆಳ್ಳಲಾರೆವು ಘೃತವ, ನೊರೆವಾಲ
ಸವಿಯಲಾರೆವು, ಮಿಂದುಷಃ ಕಾಲದಲ್ಲಿ , ಕಣ್ಗೆ
ಲವಲವಿಕೆಯಿಂ ಹಚ್ಚಿಕಾಡಿಗೆಯ, ಹೂ ಮುಡಿದು –
ಲೆವಾಗಾಗದದರಿಂದ , ಭಕ್ತಿ ಶ್ರದ್ಧೆಯೊಳವನ ನೆನೆವುದೇ, ವ್ರತದ ಗುರಿಯು ||2||
ಮೊದಲ ಪಾಶುರಂನಲ್ಲಿ ಗೋದಾದೇವಿಯು ಮಾರ್ಗಶೀರ್ಷ ಮಾಸದ ಮಹಿಮೆಗಳನ್ನು ಹೇಳುತ್ತಾ, ತನ್ನ ಸಖಿಯರನ್ನು ಎಬ್ಬಿಸುತ್ತಾ, ಭಗವಂತನ ಕಲ್ಯಾಣಗುಣಗಳನ್ನು ವರ್ಣಿಸುತ್ತಾಳೆ. ಹೀಗೆ ಮುಂದುವರೆಸುತ್ತ ಭಗವದಾಶ್ರಿತರಿಗೆ ತ್ಯಾಜ್ಯ ಮತ್ತು ಸಾಧನೆಯ ವಿವಿಧ ಮಾರ್ಗಗಳನ್ನು ಮುಂದೆ ತಿಳಿಸುತ್ತಾ ಹೋಗುತ್ತಾಳೆ.
‘ವೈಯತ್ತು ವಾಳ್ವಿರ್ಕಾಳ್’ ಎಂದು ಈ ಲೋಕದಲ್ಲಿ ಉಜ್ಜೀವಿಸಲು ಬಂದಂತ ಗೋಪಿಯರೇ,
(‘ವೈಯಂ‘ ಎಂದರೆ ಪ್ರಪಂಚ) ಇಂತಹ ಪ್ರಪಂಚದಲ್ಲಿ ಶರೀರವೆಂಬ ಗಾಡಿಯಲ್ಲಿ ವಾಸಿಸುವವರೇ, ನೀವು ದೇಹಿಗಳು ಮಾತ್ರವಲ್ಲ, ಇಲ್ಲಿ ಪರಮಾತ್ಮನೊಂದಿಗೆ ಕೂಡಿ ವಾಸಿಸುತ್ತಿರುವವರು ಎಂದು ಸಂಭೋದಿಸಿ ತನ್ನ ಸಖಿಯರನ್ನು ಕೂಗಿ ಎಬ್ಬಿಸುತ್ತಾಳೇ.
ಹಿಂದಿನ ಪದ್ಯದಲ್ಲಿ ಹೇಳಿದ ‘ನಾರಾಯಣನೇ’-ಇಲ್ಲಿ ಕ್ಷೀರಾಬ್ದಿ ಶಾಯಿಯಾದ ಪರಮಾತ್ಮ, ಅವನೇ ಶ್ರೀ ಕೃಷ್ಣ. ಆ ಪರಮಾತ್ಮ ನಿಮ್ಮನ್ನು ಹೀಗೆ ಬಾಳುವಂತೆ ಮಾಡಿ ತಾನೂ ನಿಮ್ಮನ್ನು ಬಿಡದೆ ಪ್ರೇಮಾತಿಶಯದಿಂದ ನಮ್ಮನ್ನೆಲ್ಲ ಕೂಡಲು ಆತುರ ಪಡುತ್ತಿರುವನು. ಇದು ನಮ್ಮೆಲ್ಲರ ಭಾಗ್ಯ ವಿಶೇಷ. ಅವನೊಡನಿದ್ದು ನಾವು ಹೊಂದುವ ಆನಂದ ವೈಕುಂಠದಲ್ಲಿಯೂ ಇಲ್ಲ. ಎಲ್ಲಿ ನೆನೆದರೆ ಅಲ್ಲೇ ಬರುವ ಗುಣದವನು. ನಮ್ಮ ಬಾಳೇ ಅವನು. ಅವನನ್ನು ನಾವು ಅಗಲಿ ಇರಲಾರೆವು. ಅವನನ್ನು ನಾವು ಸಂಪೂರ್ಣವಾಗಿ ಹೊಂದಬೇಕಾದರೆ ವ್ರತಾನುಷ್ಠಾನ ಮಾಡಬೇಡವೇ? ಅದಕ್ಕಾಗಿ ಬೇಗ ಬನ್ನಿ ಎಂದು ಕರೆಯುತ್ತಾಳೆ. ಆ ವ್ರತಕ್ಕಾಗಿ ಮಾಡಬೇಕಾದ ಕಾರ್ಯಗಳನ್ನು ಕೇಳಿ ಎನ್ನುತ್ತಾಳೆ.
ಗೋದೆ ಆಶ್ರಯಿಸಿರುವ ವ್ರತ ಸಾಮಾನ್ಯವಾದ ಉಳಿದ ವ್ರತಗಳಂತಲ್ಲ. ಇದು ಮೋಕ್ಷಕ್ಕೆ ಅಂದರೆ ಕೃಷ್ಣ ಸಂಗಮಕ್ಕೆ ಕಾರಣವಾದುದು. ಆದ್ದರಿಂದ ಪರಮ ಸಾತ್ವಿಕವಾದದ್ದು. ಇದು ನಿಜವಾಗಿಯೂ ಫಲಪ್ರದವಾದದ್ದು. ಹಾಗಾಗಿ ಈ ವ್ರತಾನುಷ್ಠಾನದ ವಿಧಾನವನ್ನು ಶ್ರದ್ದೆಯಿಂದ ಕೇಳಿರಿ ಎಂದು ಹೇಳುತ್ತಾಳೆ.
ಪಾರ್ಕಡಲುಳ್ಪೈಯತ್ತು ಯಿನ್ರ ಪರಮನಡಿಪಾಡಿ – ಅನಂತಶಾಹಿಯಾದ ಪರಮಾತ್ಮನು ಕ್ಷೀರ ಸಮುದ್ರದಲ್ಲಿ, ಆದಿಶೇಷನ ಮೇಲೆ ಮೆಲ್ಲಗೆ ಯೋಗನಿದ್ರೆ ಮಾಡುತ್ತಿರುವವನು. ಆ ನಾರಾಯಣನು, ಆಶ್ರಿತರ ಆರ್ತನಾದ ಸ್ವಲ್ಪ ಕಿವಿಗೆ ಬಿದ್ದರೂ, ಎಚ್ಚರವಾಗುವ ನಿದ್ರೆಯಲ್ಲಿದ್ದಾನೆ. ಆ ಪರಮನು ತನ್ನಿಂದ ಸೃಷ್ಟಿಸಲ್ಪಟ್ಟ ಜೀವರಾಶಿಗಳ ಉದ್ದಾರಕ್ಕಾಗಿ ಕರುಣೆಯಿಂದ ಬದ್ದಸೇವ್ಯನಾಗಿ ಕ್ಷೀರಾಬ್ದಿಶಾಯಿಯಾಗಿದ್ದಾನೆ. ಅವನನ್ನು ಹಾಡಿ ಹೊಗಳಿ ಅವನ ಪಾದಾರವಿಂದಗಳನ್ನು ಸೇರುವುದೇ ಯೋಗ್ಯವಾದದ್ದು. ಶ್ರೇಯಸ್ಕರವಾದದ್ದು. ಅಡಿಪಾಡಿ – ಆಶ್ರಿತರಿಗೆ, ಸೋಪಾನದಂತಿರುವ ಅವನ (ಅಡಿಗಳು) ಪಾದಗಳೆ ಪರಮಪ್ರಾಪ್ಯ. ಪಟ್ಟಾಭಿಷೇಕ ಕಾಲದಲ್ಲಿ ಸುಗ್ರೀವಾದಿ ಕಪಿಗಳು ಒಬ್ಬೊಬ್ಬರು ಒಂದೊಂದು ಸೇವೆ ಮಾಡಿದರೆ, “ಚರಣೌ ಶರಣಂ ಪ್ರಪದ್ಯೇ” ಎಂದು ಆಂಜನೇಯನು ಶ್ರೀ ರಾಮನ ಪಾದಗಳೇ ಪೂಜ್ಯವೆಂದು ಅವುಗಳ ಅಡಿಯಲ್ಲಿಯೇ ಕೈಮುಗಿದು ಉಪಾಸನೆ ಮಾಡುವಂತೆ, ನಾವೆಲ್ಲರೂ ಕೂಡಿ ಪಾಡಿ ಎಂದು ಪ್ರೀತಿಪೂರ್ವಕವಾಗಿ “ಬನ್ನಿ ಹಾಡೋಣ” ಎನ್ನುತ್ತಾಳೆ.
ನಾವು ಎಲ್ಲ ಭೋಗಗಳನ್ನೂ ವರ್ಜಿಸೋಣ. ವೀತತೃಷ್ಣರಾಗೋಣ. ‘ಯಾವಜ್ಜೀವಂ ಪ್ರಭಾತೇ ಸ್ನಾತವ್ಯಂ ‘ ಎಂದು ಶಾಸ್ತ್ರವಿದೆ. ಈ ಸ್ನಾನವಲ್ಲದೆ ವ್ರತಾಂಗಸ್ನಾನ ಮಾಡೋಣ. ಪಂಚ ಉಷಃ ಕಾಲದ ಚಳಿಯಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ನಡುಗುತ್ತಾ ಸ್ನಾನ ಮಾಡಿದರೆ, ಭಗವಂತನು ಬೇಗ ಪ್ರಸನ್ನನಾಗುವನು.
ನಾಟ್ಕಾಲೇ ನೀರಾಡಿ- ಶ್ರೀ ರಾಮನ ಅಯೋಧ್ಯಾ ಅಗಲಿಕೆಯಿಂದ ಉಂಟಾದ ವಿರಹತಾಪದಿಂದ ಪರಿಹೃತನಾಗಲು ಭರತನು ಅಪರರಾತ್ರಿಯಲ್ಲಿಯೇ ಸರಯೂನದಿಯಲ್ಲಿ ಸ್ನಾನ ಮಾಡುತ್ತಿದ್ದನಂತೆ. “ನಮೇಸ್ನಾನಂ ಬಹುಮತಂ ತಂ ವಿನಾ ಕೈಕಯೀಸುತಂ” ಎಂದವನನ್ನೂ ಹಿಂದುಮಾಡೋಣ.
ನೆಯ್ಯುಣ್ಣೋಂ ಪಾಲುಣ್ಣೋಂ- ಬರೀ ಹೇಯವಾದ ಶರೀರದ ಧಾರಣ ಮತ್ತು ಪೋಷಣಗಳಿಗೆ ಉಪಯುಕ್ತವಾದ ಭೋಗಾಪದಾರ್ಥಗಳಾದ ತುಪ್ಪ, ಹಾಲುಗಳನ್ನು ತ್ಯಜಿಸೋಣ. ಶ್ರೀ ಕೃಷ್ಣನ ಸೌಂದರ್ಯವನ್ನು ಸ್ಮರಣೆ ಮಾಡಿ ನಾವು ಪುರುಷಭಾವದಿಂದ ಸಮಾಧ್ಯವಸ್ತೆಯಲ್ಲಿ ಅವನನ್ನು ಪಡೆಯೋಣ.
ಮೈಯಿಟ್ಟೆಳುದೋಂ ಮಲರಿಟ್ಟು ನಾಮುಡಿಯೋಂ- ದೃಷ್ಟಿಹಾರಕವಾದ ಕಾಡಿಗೆಯನ್ನು ಹಚ್ಚದಿರೋಣ. ಕೃಷ್ಣನ ಮೇಲಿನ ಭಕ್ತಿ ಹಾಗೂ ಪ್ರೀತಿಗಾಗಿ ಸುಗಂಧಿತ, ಅಲಂಕಾರಿಕ ಹೂವುಗಳನ್ನು ಮುಡಿಯದಿರೋಣ. ಆಗ ಶ್ರೀ ಕೃಷ್ಣನು ನಮ್ಮ ಕರೆಗೆ ಬೇಗ ಬರುವನು.
ಶಯ್ಯಾದನ ಶಯ್ಯೋಂ ತೀಕ್ಕುರಳೈ ಚ್ಚೆನ್ರೋದೋಂ- ನಿಷಿದ್ಧವಾದ ಕಾಮ್ಯಗಳನ್ನೂ ಅವನಿಗೆ ಮತ್ತು ಹಿರಿಯರಿಗೆ ಅನಭಿಮತವಾದುದನ್ನ ಮಾಡೆವು. ಹಾಳುಹರಟೆಯಲ್ಲಿ ನಿರತರಾಗೆವು. ಕ್ರೂರ ಶಬ್ದಗಳನ್ನು, ಪರರಿಗೆ ಅನರ್ಥಕವೂ, ಅಪ್ರಿಯವೂ ಆದ ಮಿಥ್ಯಾವಚನಗಳನ್ನು ಹೇಳೆವು. ಪೈಶುನ್ಯ ಮೊದಲಾದುವನ್ನ ಮಾಡೆವು. ಕರ್ಮಯೋಗ ಸಾದ್ಗುಣ್ಯಕ್ಕಾಗಿ ವಾಂಜ್ಞಯ ತಪಸ್ಸನ್ನು ಮಾಡುವೆವು. ಮೋಕ್ಷಸಾಧನವಾಗಿ ಜ್ಞಾನಿಗಳು ತಿಳಿಸಿರುವ, ಭಕ್ತಿಯೋಗ, ಅಷ್ಟಾಂಗಯೋಗ ಮತ್ತು ಷಡಂಗಯೋಗ (ಸ್ವತಂತ್ರ ಪ್ರಪತ್ತಿ) ಮುಂತಾದ ಸ್ವೋಜ್ಜೀವನ ಪ್ರಕಾರವನ್ನು ಅನುಸರಿಸುವೆವು ಎಂದು ಹೇಳುತ್ತಾಳೆ.
ತಿರುಪ್ಪಾವೈ ಕುರಿತಾದ ತಿಳವಳಿಕೆಗೆ ಕೃತಜ್ಞತೆಗಳು: ವಿದ್ವಾನ್
ಬಿ. ಎಸ್. ಕೌಶಿಕ್, ಶ್ರೀಮತಿ ಕಮಲಮ್ಮ ವಿಠಲ ರಾವ್, ಪೂರ್ಣಿಮಾ ವೆಂಕಟೇಶ್ ಮತ್ತು www.indica.today
Thiruppavai 2
ಕಾಮೆಂಟ್‌ಗಳು