ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ 3


 ತಿರುಪ್ಪಾವೈ - ಗೋದೆ ಕಂಡ ತ್ರಿವಿಕ್ರಮ

Thiruppavai 3


ಓಂಗಿ ಯುಲಗಳಂದ ಉತ್ತಮನ್ ಪೇರ್ಪಾಡಿ
ನಾಂಗಳ್ ನಂಬಾವೈಕ್ಕು ಚ್ಚಾಟ್ರಿ ನೀರಾಡಿನಾಲ್
ತೀಂಗನ್ರಿ ನಾಡೆಲ್ಲಾಂ ತಿಂಗಳ್ ಮುಮ್ಮಾರಿ ಪೆಯ್‍ದು
ಓಂಗು ಪೆರುಂಶೆನ್ನೆಲ್ ಊಡು ಕಯಲುಗಳ
ಪೂಂಗುವಳೈ ಪೋದಿಲ್ ಪೊರಿವಂಡು ಕಣ್ಪಡುಪ್ಪ
ತೇಂಗಾದೇ ಪುಕ್ಕಿರುಂದು ಶೀರ್ ತ್ತಮುಲೈ ಪಟ್ರಿ
ವಾಂಗಕ್ಕುಡಂ ನಿರೈಕ್ಕುಂ ವಳ್ಳಲ್ ಪೆರುಂಬಶುಕ್ಕಳ್
ನೀಂಗಾದಶೆಲ್ವಂ ನಿರೈಂದೇಲೋ ರೆಂಬಾವಾಯ್ ॥3॥

ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ವರತ್ರಿವಿಕ್ರಮನಾಗಿ ಬೆಳೆದು, ವಿಶ್ವವನಳೆದ
ಹರಿಯ ನಾಮಸ್ಮರಣೆಗೈದು, ನೋಂಪಿಯ  ಚರಿಸೆ ।
ಹರುಷದಿಂದೊಂದಾಗಿ ಮಿಂದನಾವೃಷ್ಟಿಯಾ  
ದೋಷವಿಲ್ಲದ ದೇಶದೊಳ್|
ಸುರಿದು ಮೂರಾವರ್ತಿ ಮಳೆಯೆಲ್ಲ ಮಾಸದೊಳಗುರೆ
ಬೆಳೆದ ಪೈರುಭತ್ತ ದೊಳೊಲೆವ ಮೀನು, ಮೇಣ್
ಕುರಿದುಂಬಿ ನೈದಿಲೆಯೊಳೊರಗಿರಲು, ತುರುಕರೆಯೆ 
ಕೊಡವಾಲ, ವ್ರತಸಿದ್ಧಿಯು  ||3||

ಲೋಕದಲ್ಲಿ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು  ಸುಖ, ಶಾಂತಿ  ಮತ್ತು ನೆಮ್ಮದಿಯಿಂದ  ಇರಬೇಕಾದರೆ, ಕಾಲ ಕಾಲಕ್ಕೆ ಮಳೆ ಬೀಳಬೇಕು. ಆ ಮಳೆಯಿಂದ ಸಮೃದ್ಧಿಯಾದ ಬೆಳೆ ತೆಗೆಯಬೇಕು. ಆ ಬೆಳೆಯಿಂದ ಬಂದಂತ ಹುಲ್ಲನ್ನು ಗೋವುಗಳು ತಿಂದು ಕೆಚ್ಚಲು ತುಂಬಾ ಹಾಲನ್ನ ಕೊಡುತ್ತವೆ. ಇದರಿಂದ ಮನೆ ಮನೆಯಲ್ಲಿ  ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗು ಸಮೃದ್ಧಿಯಾದ ದವಸ ಧಾನ್ಯಗಳ ಕೊರತೆ ಇಲ್ಲದೆ  ತುಂಬಿ ತುಳುಕುತ್ತವೆ .  ಇದಕ್ಕೆಲ್ಲ ಮೂಲ ಕಾರಣ  ಮಳೆ. ಭಾಗವತದಲ್ಲೂ ಶ್ರೀಕೃಷ್ಣನ ಗೋವರ್ಧನಗಿರಿಯ ಪ್ರಕರಣದಲ್ಲಿ ಇದನ್ನ ನಾವು ನೋಡುತ್ತೇವೆ. ಹಾಗೆಯೇ ಇಲ್ಲಿಯೂ ಕೂಡ ತ್ರಿವಿಕ್ರಮ ರೂಪಿಯಾದ ನಾರಾಯಣನು ತನ್ನ ಮೂರು ಪಾದಗಳಿಂದ, ಮೂರು ಲೋಕವನ್ನು ಅಳೆದಂತೆ, ಅವನ ಮಹಿಮೆಯನ್ನು ವರ್ಣಿಸುತ್ತ, ಸ್ತೋತ್ರಮಾಡುತ್ತಾ, ಅವನ ದಿವ್ಯನಾಮಗಳನ್ನು ಹಾಡುತ್ತಾ, ಮಾರ್ಗಶಿರ ಮಾಸದ ಬೆಳಗ್ಗಿನ ಸ್ನಾನ ಮಾಡಿ  ವ್ರತವನ್ನು ಆಚರಿಸಿದರೆ – ದೇಶದಲ್ಲಿ ಅನಾವೃಷ್ಟಿಯಿಲ್ಲದೆ ತಿಂಗಳಲ್ಲಿ ಮೂರು ಮಳೆಯು ಸಕಾಲದಲ್ಲಿ, ಸಮಸ್ಥಿತಿಯಲ್ಲಿ ಬರುತ್ತದೆ  ಎಂದು ಗೋದಾದೇವಿ ಅದ್ಭುತವಾಗಿ ಹೋಲಿಸುವುದನ್ನ ನಾವು ಕಾಣುತ್ತೆವೆ. ತ್ರಿವಿಕ್ರಮನಂತೆಯೇ, ಆಚಾರ್ಯನೂ ತನ್ನ ಮಹತ್ವವನ್ನು ತೋರ್ಪಡಿಸದೆ, ಸೌಮ್ಯವಾಗಿ ಮೂರು ಬಗೆಯ ಶಾಸ್ತ್ರಾರ್ಥಗಳನ್ನು ಕ್ರಮ ಕ್ರಮವಾಗಿ ತಿಳಿಸಿಕೊಡುತ್ತಾನೆ ಎಂದು ತಿಳಿಸುತ್ತಾಳೆ.

ಭಗವಂತನಿಗೆ ಪರ, ವ್ಯೂಹ ಮತ್ತು ವಿಭವ ಎಂಬ ಮೂರು ರೂಪಗಳನ್ನು ಹೇಳಲಾಗಿದೆ. ಪರರೂಪವು(೧ನೇ ಪಾಶುರಂ) ಸರ್ವವ್ಯಾಪಿಯಾದ ಸೃಷ್ಟಿಕರ್ತನ ರೂಪ. ಇವನು ಪರಮಪದದಲ್ಲಿರುವನು. ಪರಮಪದದಿಂದ ಕ್ಷೀರಾಬ್ದಿಗೆ ಬಂದು ಯೋಗನಿದ್ರೆಯಲ್ಲಿ ಮಗ್ನನಾಗಿರುವ ಕ್ಷೀರಾಬ್ಧಿಶಾಯಿ ವ್ಯೂಹರೂಪ(೨ ನೇ ಪಾಶುರಾಂ).  ಭೂಮಿಯಲ್ಲಿ ರಾಮ-ಕೃಷ್ಣ-ತ್ರಿವಿಕ್ರಮಾದಿ ರೂಪಗಳಲ್ಲಿ ಮನುಷ್ಯ ದೇಹದೊಡನೆ ತೋರುವಾಗ ಭಗವಂತನ ವಿಭವರೂಪ.

ಶ್ರೀಮನ್ನಾರಾಯಣನು ತ್ರಿವಿಕ್ರಮರೂಪಿಯಾಗಿ, ಉದ್ದವಾಗಿ ಬೆಳೆದು, ತನ್ನ ದಿವ್ಯ ಪಾದಗಳಿಂದ ಮೂರು ಲೋಕಗಳನ್ನು ಅಳೆದನು. ಈ ತ್ರಿವಿಕ್ರಮ ಅವತಾರವು ಬರಿಯ ಜಗತ್ತನ್ನು ಅಳೆಯುವುದಕ್ಕಾಗಿಯಲ್ಲ, ಪರಿಗ್ರಹಿಸುವುದಕ್ಕಾಗಿಯೂ ಅಲ್ಲ ಅಥವಾ ದೇವೇಂದ್ರನಿಗೆ ಅದನ್ನು ಕೊಡುವದಕ್ಕಾಗಿಯೂ ಅಲ್ಲ, ಇಂತಹ ದಾತೃವಿನ ಔದಾರ್ಯರೂಪ ಯಶಸ್ಸನ್ನು ಕ್ಷಣಕಾಲದಲ್ಲಿ ದಿಗಂತ ವಿಶ್ರಾಂತವಾಗಿ ಪ್ರಸಿದ್ಧಿಪಡಿಸುವುದಕ್ಕಾಗಿಯೇ !! ಎಂದು ತೋರುತ್ತದೆ. ಬಲಿ ತಾನು ಅಪಹರಿಸಿದ್ದ ತ್ರೈಲೋಕ್ಯವನ್ನು ಇಂದ್ರನೇ ಹೋಗಿ ಯಾಚಿಸಿದ್ದಲ್ಲಿಯೂ ಕೊಟ್ಟುಬಿಡುತ್ತಿದ್ದ. ಅವನೋ ಸುರನಾಯಕ, ಯಾಚಿಸುವುದು ನಾಚಿಕೆ. ಸ್ವಾಶ್ರಿತನಾದ ಸುರನಾಯಕನಿಗೆ  ಈ ಯಾಚ್ನಾ ದೈನ್ಯವನ್ನು ತಪ್ಪಿಸಲು ಸರ್ವಲೋಕನಾಯಕ ತಾನೇ ಯಾಚಿಸುತ್ತಾನೆ.  “ಲೋಕನಾಥ: ಪುರಾ ಭೂತ್ವಾ ಸುಗ್ರೀವಂ ನಾಥಮಿಚ್ಛತಿ” – ಎಂಬಂತೆ, ನಾಥನೆ, ನಾಥಕಾಮನೆ ಎರಡೂ ಅವನೇ. ಲಾಘವಭಯದಿಂದ ದೇವತೆಗಳು ನೆಲಕ್ಕೆ ಕಾಲನ್ನು ಸೋಕಿಸುವುದಿಲ್ಲ.

ಆದರೆ  “ತ್ರೈಲೋಕ್ಯಮಪಿ ನಾಥೇನ ಯೇನ ಸ್ಯಾನ್ನಾಥವತ್ತರಂ” – ಎಂದಿದೆ. ಈ ದೇವದೇವ – ಮೂರು ಲೋಕಗಳನ್ನೂ ನಿಬಿಡವಾಗಿಯೂ ನಿರಂತರವಾಗಿಯೂ ಸ್ಪರ್ಶಿಸಿದ. ತ್ರಿವಿಕ್ರಮನ ಪಾದದಿಂದ ಆಕಾಶದಲ್ಲಿ ಬಿದ್ದ ಗಂಗೆಯು ಎಲ್ಲಾ  ದಿಕ್ಕುಗಳಿಗೂ ವ್ಯಾಪಿಸಿ ಶುಭ್ರವಾದ ನೊರೆಗಳೊಡನೆ ಹರಿದಳು. ಅವಳ ಜಲಪಾತ ಬಲಿಯ ಯಶಸ್ತುತಿಯಂತೆಯೂ ಶ್ವೇತಧ್ವಜಪಟದಂತೆಯೂ ಆದವು. ಭಗವದಭಿಮಾನ ಪಾತ್ರನ ಯಶಸ್ಸು ಭಗವಂತನಿಂದಲೇ ಬೃಂಹಿತವಾಯಿತು.

ಗುಣಾವಗುಣಗಳ ನಿರೂಪಣೆಯಿಲ್ಲದೆಯೇ ಸಕಲಪ್ರಾಣಿಗಳ ಮೇಲೆ ಭಗವಂತ ಪಾದವಿಟ್ಟನು. ಭಗವದ್ ಪಾದ ಸಂಯೋಗವೇ ಪರಮ ಪುರುಷಾರ್ಥ. ಆದ್ದರಿಂದಲೇ ಇವನು ಉತ್ತಮನೆಂದು ಕೊಂಡಾಡಲ್ಪಟ್ಟಿದ್ದಾನೆ.

[ಓಂಗಿ ಯುಲಗಳಂದ ಉತ್ತಮನ್] – ಆಶ್ರಿತರ ಕೆಲಸಮಾಡಿಕೊಡಲು ಅಂಡಕಟಾಹವನ್ನು ಭೇದಿಸುವ ಹಾಗೆ ಬೆಳೆದು, ಮೂರು ಲೋಕಗಳನ್ನು ತನ್ನ ಪಾದಗಳಿಂದ ಅಳೆದು ಪುರುಷೋತ್ತಮನಾದ ತ್ರಿವಿಕ್ರಮನು.

ತಿರುಪ್ಪಾವೈ ಕುರಿತಾದ ತಿಳವಳಿಕೆಗೆ ಕೃತಜ್ಞತೆಗಳು: 
ವಿದ್ವಾನ್ ಬಿ. ಎಸ್. ಕೌಶಿಕ್, ಶ್ರೀಮತಿ ಕಮಲಮ್ಮ ವಿಠಲ ರಾವ್,  ಪೂರ್ಣಿಮಾ ವೆಂಕಟೇಶ್ ಮತ್ತು www.indica.today


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ