ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ 9


 ತಿರುಪ್ಪಾವೈ 

ಬಾಗಲಲಿ ಹಸನ್ಮುಖಿಯಾಗಿ ಬಂದು ನಿಂತಿದ್ದಾನೆ
Thiruppavai 9

ತೂಮಣಿಮಾಡುತ್ತು  ಚುಟ್ರುಂ  ವಿಳಕ್ಕೆರಿಯ 
ತೂಪಂಕಮಳಿತ್ತುಯಿಲಕಲಣೈಮೇಲೆ ಕಣ್‍ವಳರುಂ 
ಮಾಮಾನ್ ಮಗಳೇ ಮಣಿಕ್ಕದವಂ ತಾಳೆ ತಿರುವಾಯ್ 
ಮಾಮೀರ್‌ವಲೈ  ಯೆಳುಪ್ಪೀರೋ  ಉನ್ ಮಗಳ್ ತಾನ್ 
ಉಮೈಯೋ ಅನಿಚ್ಚವಿಡೋ ಆನಂದಲೋ 
ಏಮಷ್ಟೆರುಂ ತುಯಿಲ್ ಮಂತಿರಪ್ಪಾಟ್ಟಾಳೋ  
ಮಾಮಾಯನ್ ಮಾಧವನ್ ವೈಕುಂದನ್ ಎನ್ರೆನ್ರು 
ನಾಮಂ ಫಲವುಂ ನವಿನ್ರುಲೋರೆಂಬಾವಾಯ್

ಭಾವಾನುವಾದ - ೯

ಭಕ್ತಿಜ್ಞಾನದ ಪರಿಮಳದ ಕಂಪಿನಾಗರ ನಿನ್ನರಮನೆಯು ಓ ಗೆಳತಿ 
ಸಪ್ತಾದ್ರಿವಾಸನ ಮಹಿಮೆಯಲಿ ಮನ ಮರೆತಿಹೆಯೇನೇ ? 
ಅಣ್ಣ ಪುಂಡರೀಕಾಕ್ಷನೇ ಬರಲೆಂಬ ಯೋಗನಿದ್ರೆಯು ತರವಹುದೇ 
ಬಂದಿಹನು ಬಾಗಿಲಿಗೆ ಶ್ರೀ ರಂಗರಂಗ ಪಾಂಡುರಂಗ ಕರವಿಟ್ಟು ಕಟಿಯಲ್ಲಿ 
ಕಳೆಯೆ ಮೋಹಮದಮಾತ್ಸರ್ಯಗಳನೆಲ್ಲ ಏಳೆನ್ನೊಲವ ನಾದಿನಿಯೇ 
ಮಾರ್ಗಶಿರದುದಯ ನೋಂಪಿಯನರುಹಮಗೆ ನಡೆಯೆ ಶಿಷ್ಟೇಷ್ಠನೆಡೆಗೆ 
ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆಮ್ಮಕೇಶವನ ಚರಣದೆಡೆಗೆ 
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲೆಡೆ ಮಂಗಳದ ಮುಂಬೆಳಕು

ಸಂಕ್ಷಿಪ್ತ ಭಾವಾರ್ಥ

ಆದಿಶಕ್ತಿಯಾದ ಮಾಯೆಯು ದುರ್ಗಿಯಾಗಿ ಶ್ರೀಕೃಷ್ಣನ ತಂಗಿಯಾಗಿ ಅವತರಿಸಿದವಳು. ಅವಳಿಗೆ ಸರಿಸಮಾನಳಾದ ಗೆಳತಿಯನ್ನು ಎಬ್ಬಿಸುತ್ತಿದ್ದಾಳೆ ಈ ಪಾಶುರದಲ್ಲಿ. ಮಾಮಾನ್ ಮಗಳೇ ಎಂದರೆ ಮಹಾ ಐಶ್ವರ್ಯವಂತನ ಮಗಳೇ ಎಂದೂ, ಅತ್ತೆಯ ಮಗಳು ಎಂದರೆ ಗಂಡನ ತಂಗಿ ಎಂದು ಕರೆಯುತ್ತಿದ್ದಾಳೆ. ಇಲ್ಲಿ ಶ್ರೀ ಕೃಷ್ಣನನ್ನೇ ತನ್ನ ಪತಿ ಎಂದು ಗೋದಾದೇವಿ ನಿಶ್ಚಯಿಸಿಬಿಟ್ಟಿದ್ದಾಳಾದ್ದರಿಂದ ಈ ಸಖಿಯನ್ನು ಶ್ರೀಕೃಷ್ಣನ ತಂಗಿ ಎಂದು ಕರೆಯುತ್ತಿದ್ದಾಳೆ. ಶ್ರೀಕೃಷ್ಣನನ್ನು ತನ್ನವನನ್ನಾಗಿಸಿಕೊಳ್ಳಲು ಅವನ ತಂಗಿಯನ್ನು ಸಹಾಯಕ್ಕೆ ಪಡೆಯಲಿಚ್ಚಿಸಿದ್ದಾಳೆ.

ಓ ಸಖಿ ನಿನ್ನ ಅರಮನೆಯಿಂದ ಭಕ್ತಿಯ ಪರಿಮಳದ ಸುಗಂಧ ಬರುತ್ತಿದೆ. ಅಂದರೆ ಸದಾ ನಾರಾಯಣನ ನಾಮಸ್ಮರಣೆಯೊಂದಿಗೆ ವೇದಗೀತೆಯ ಮಧುರಧ್ವನಿ ಬರುತ್ತಿದೆ. ನಿನ್ನಣ್ಣನೇ ಬಂದು ನಿನ್ನನ್ನು ಎಚ್ಚರಿಸಲೆಂದು ನಿದ್ರೆಯ ನಟನೆ ಮಾಡುತ್ತಿದ್ದೀಯೆ. ನೀನೂ ಸಹ ಯೋಗನಿದ್ರೆಯ ನಟನೆ ಮಾಡುವವಳೇ ಆಗಿದ್ದೀಯೆ. ನೋಡು ಅದಾಗಲೇ ಗೋವಿಂದನು ಬಂದು ನಿಂತಿದಾನೆ ಬಾಗಿಲಲ್ಲಿ, ಭವಬಂಧನದಿಂದ ಬಿಡಿಸುತ್ತೇನೆಂದು ಕಟಿಯಲ್ಲಿ ಕರವಿಟ್ಟು ಹಸನ್ಮುಖಿಯಾಗಿ ಬಂದು ನಿಂತಿದ್ದಾನೆ. ಆದ್ದರಿಂದ ಎದ್ದು ಬಾ ತಾಯಿ.

ನೀನು ನಮ್ಮೊಡನಿದ್ದರೆ ನಿನ್ನ ಆತ್ಮೀಯ ಗೆಳತಿಯರು ನಾವು ಎಂದು, ನಿನ್ನ ಮೇಲಿನ ಮಮತೆಯಿಂದ ತಪ್ಪದೇ ನಮ್ಮ ವ್ರತಕ್ಕೆ ಮೆಚ್ಚಿ ವರಗಳನ್ನು ಕೊಡುತ್ತಾನೆ. ನಮಗೆ ಭಕ್ತಿಮಾರ್ಗವನ್ನು ತಿಳಿಸಿ ನಮ್ಮನ್ನು ಉದ್ದರಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ.ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತ ಲೋಕಕ್ಕೂ ಮಂಗಳವುಂಟಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ