ತಿರುಪ್ಪಾವೈ8
ತಿರುಪ್ಪಾವೈ
ಮಾರ್ಧನಿಸಿಹುದು ನಂದಗೋಕುಲ ಧೇನು ಘಂಟಾರವದಿ
Thiruppavai 8
ಕೀಳವಾನಂ ವೆಳ್ಳೆನ್ರೆರುಮೈ ಶಿರುವೀಡು
ಮೇಯ್ವಾನ್ ಪರಂದನ ಕಾಣ್ ಮಿಕ್ಕುಳ್ಳಪಿಳ್ಳೈಗಳುಂ
ಪೋವಾನ್ ಪೋಗಿನ್ರಾರೈ ಪೋಕ್ಕಾಮಲ್ ಕಾತ್ರುನ್ನೈ
ಕೂವುವಾನ್ ವಂದು ನಿನ್ರೋಂ ಕೋತು ಕುಲಮುಡೈಯ
ಪಾವಾಯ್ ಯೆಳುಂದಿರಾಯ್ ಪಾಡಿಪ್ಪರೈಕೊಂಡು
ಮಾವಾಯ್ ಪಳಂದಾನೈ ಮಲ್ಲರೈಮಾಟ್ಟಿಯ
ದೇವಾದಿ ದೇವನೈಚ್ಚೆನ್ರುನಾಂ ಶೇವಿತ್ತಾಲೆ
ಆವಾವನ್ರು ಅರಾಯನ್ದು ಆರುಳೇಲೋರೆಂಬಾವಾಯ್
ಭಾವಾನುವಾದ
ಕಾವಳದಿ ನಡೆದಿರಲು ಧೇನುಗಳಾತುರದಿ
ಜೀವಜಂತುಗಳೆಚ್ಚರಾಗುಹುವು
ಮಾರ್ಧನಿಸಿಹುದು ನಂದಗೋಕುಲ ಧೇನು ಘಂಟಾರವದಿ
ಎಚ್ಚರಾಗದೆ ಕೇಳಿಸದೇ ನಮ್ಮೊಲವ ಕರೆ ಏನಿದೀ ಯೋಗನಿದ್ರೆಯ ನಟನೆ
ನಡೆದಿಹರೆಲ್ಲ ಗೆಳತಿಯರು ಯಮುನೆಯಡೆಗೆ ಕಾದಿಹರು ನಿನಗಾಗಿ
ಅಶ್ವಕೇಶಿ ಚಾಣೂರಮರ್ಧನ ಕೇಶವನ ಚರಣ ದರ್ಶನಕೆ ನಡೆಸೆಮ್ಮ
ಯದುಕುಲೋತ್ತುಂಗ ಶೃಂಗ ಶಿಖರಾಭರಣನು ನಿನ್ನವನು ಸಖಿಯೇ
ವಿಷ್ಣುಚಿತ್ತಾತ್ಮನಿಲಯ ಚೆಲುವನಾರಾಯಣನು ತಾನೊಲಿವ
ನೀನಿರಲು ನಮ್ಮೊಡನೆ
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು.
ತಿರುಪ್ಪಾವೈ 8:
ಸಂಕ್ಷಿಪ್ತ ಭಾವಾರ್ಥ
ಇದು ಮತ್ತೊಬ್ಬ ಭಕ್ತ ಶ್ರೇಷ್ಟಳಾದ ಸಖಿಯನ್ನು ಎಬ್ಬಿಸುವ ಪರಿ. ಈ ಸಖಿಗೆ, ತನಗೆ ಪರಾಮಾತ್ಮನಲ್ಲಿ ಅಧಿಕ ಪ್ರೀತಿ ಇದೆಯೋ ಅಥವಾ ತನ್ನಲ್ಲಿ ಶ್ರೀಹರಿಗೆ ಪ್ರೀತಿ ಅಧಿಕವೋ? ಎಂದು ತಿಳಿಯುವ ಹಂಬಲ. ವ್ರತನಿಯಮಗಳಿಲ್ಲದೆಯೇ ಆತನನ್ನು ಒಲಿಸಿಕೊಳ್ಳಲಾಗುವುದಿಲ್ಲವೇ? ವ್ರತ ನಿಯಮಗಳೇ ಬೇಕೆ? ಎಂಬ ತರ್ಕದವಳು. ತನ್ನಲ್ಲಿ ತಾನು ಶ್ರೀಕೃಷ್ಣನೊಡನೆ ತಲ್ಲೀನಳಾಗಿರುವವಳು. ಇಂತಹ ಪರಮಸಖಿಯನ್ನು ನಿಜಸ್ಥಿತಿಗೆ ಬಂದು ನಮಗೆ ಮಾರ್ಗದರ್ಶನ ನೀಡು ಎಂದು ಎಬ್ಬಿಸುತ್ತಿದ್ದಾಳೆ ಮಾತೆ ಗೋದಾದೇವಿ.
ನೋಡು ಬಾಲನೇಸರನುದಿಸಿ ಮೂಡಣದಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿದೆ. ಹಸುಕರುಗಳು ಅದಾಗಲೇ ಗಿರಿಗಳತ್ತ ನೆಡೆಯುತ್ತಿದ್ದು ಕೊರಳ ಘಂಟಾನಾದ ಗೋಕುಲದ ತುಂಬೆಲ್ಲಾ ತುಂಬಿದೆ. ಇಷ್ಟಾದರೂ ನೀನು ಒಬ್ಬ ಯೋಗಿನಿಯಂತೆ ಈ ಶಬ್ದವಾವುದನ್ನೂ ಕೇಳಿಯೂ ಕೇಳದವಳಂತೆ ನಿದ್ದೆಯ ನಟನೆಯನ್ನು ಮಾಡುತ್ತಿದ್ದೀಯೆ. ಎಲ್ಲಾ ಗೆಳತಿಯರೂ ಒಂದಾಗಿ ಕೂಡಿ ಆಗಲೇ ಯಮುನೆಯ ತಟಕ್ಕೆ ಹೊರಟ್ಟಿದ್ದಾರೆ. ನಿನ್ನ ಜೊತೆಗಾಗಿ ಎಲ್ಲರನ್ನು ತಡೆದಿದ್ದೇನೆ. ನೀನು ಶ್ರೀ ಕೃಷ್ಣನ ಅನುಪಮ ಭಕ್ತ ಶ್ರೇಷ್ಠಳು. ನೀನು ನಮಗೆ ಕೇಶವನ ಚರಣಕಮಲಗಳನ್ನು ದರ್ಶನ ಮಾಡುವ ಮಾರ್ಗವನ್ನು ತೋರಿಸಬೇಕಾದವಳು. ನಿನ್ನ ಭಕ್ತಿಗೆ ತನ್ನನ್ನು ತಾನೇ ಮರೆತಿರುವವನು ಶ್ರೀಕೃಷ್ಣ, ಮಹಿಮಾಂತರಂಗ, ಅಶ್ವಕೇಶಿ ಚಾಣೂರಮಲ್ಲರನ್ನೆಲ್ಲಾ ಹುಟ್ಟಡಗಿಸಿದ ಧೀರ, ಯದುಕುಲ ತಿಲಕ. ನೀನು ನಮ್ಮೊಡನಿದ್ದು ಈ ಮಾರ್ಗಶಿರ ವ್ರತವನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಾನುರಾಗದಿಂದ ಶ್ರೀ ಹರಿಯ ಒಲುಮೆಯನ್ನು ನಮಗೆ ಕೊಡಿಸು. ಇದರಿಂದ ನಮ್ಮ ವೈಶಿಷ್ಟಪೂರ್ಣವಾದ ವ್ರತವು ಸಿದ್ದಿಸಲಿ. ನಳಿನನಾಭ ನಮಗೆ ವರಗಳನ್ನು ಕರುಣಿಸಲಿ. ಲೋಕ ಕಲ್ಯಾಣವೂ ಆಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು