ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಬ್ಬರತ್ನಂ


 ಕಾಂಚನ ವಿ. ಸುಬ್ಬರತ್ನಂ


ವಿದ್ವಾನ್ ಕಾಂಚನ ವಿ. ಸುಬ್ಬರತ್ನಂ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕರಾಗಿ ಪ್ರಸಿದ್ಧರು.

ಸುಬ್ಬರತ್ನಂ 1948ರ ಡಿಸೆಂಬರ್ 10ರಂದು  ದಕ್ಷಿಣ ಕನ್ನಡ ಜಿಲ್ಲೆಯ ಕಾಂಚನ ಎಂಬಲ್ಲಿ ಜನಿಸಿದರು. ತಂದೆ ಸಂಗೀತರತ್ನ ಕಾಂಚನ ವೆಂಕಟ ಸುಬ್ರಹ್ಮಣ್ಯಂ. ತಾಯಿ ಸಂಗೀತ ವಿದುಷಿ ಕೆ.ವಿ. ತಂಗಮ್ಮಾಳ್.

ತಂದೆಯವರಿಂದ ಗಾಯನ ಕಲಿತ ಸುಬ್ಬರತ್ನಂ ಅವರು, ಸ್ವಸಾಧನೆಯಿಂದ ಪಿಟೀಲು ವಾದನದಲ್ಲಿ ಪರಿಣತಿ ಗಳಿಸಿದರು. 9ನೇ ವಯಸ್ಸಿನಲ್ಲೇ  ಚೆಂಬೈ ವೈದ್ಯನಾಥ ಭಾಗವತರ್, ಚಕ್ರಕೋಡಿ ನಾರಾಯಣ ಶಾಸ್ತ್ರಿ ಮತ್ತು ತಮ್ಮ ತಂದೆ ವೆಂಕಟ ಸುಬ್ರಹ್ಮಣ್ಯಂ ಅವರ  ಸಂಗೀತ ಕಚೇರಿಗಳಲ್ಲಿ ಪಿಟೀಲು ನುಡಿಸಿದ್ದರು.‍ 12ನೇ ವಯಸ್ಸಿನಲ್ಲಿ ಮಹಾರಾಜಪುರಂ ವಿಶ್ವನಾಥ ಅಯ್ಯರ್, 16-17ನೇ ವಯಸ್ಸಿನ ವೇಳೆಗೆ ಟಿ. ಆರ್. ಮಹಾಲಿಂಗಂ ಮುಂತಾದ ಮಹಾನ್ ಸಂಗೀತಗಾರರಿಗೆ ಪಿಟೀಲುವಾದನ ಸಹಕಾರ ನೀಡಿದ್ದರು.  ಸುಬ್ಬರತ್ನಂ ಅವರಲ್ಲಿದ್ದ ಅಸಾಮಾನ್ಯ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದ ಪಿಟೀಲು ಚೌಡಯ್ಯನವರು ಎರಡು ಬಾರಿ ಅವರಿಗೆ ಪಿಟೀಲು ಕೊಡುಗೆ ನೀಡಿದ್ದರು. 

ಸುಬ್ಬರತ್ನಂ ವಿದ್ವತ್‌ನಲ್ಲಿ ಮೊದಲ ರ್‍ಯಾಂಕ್ ಸಾಧನೆ ಮಾಡಿದರು. ಆಕಾಶವಾಣಿ, ದೂರದರ್ಶನದ ಎ ಗ್ರೇಡ್ ಕಲಾವಿದರಾಗಿ ಗೌರವಾನ್ವಿತರಾಗಿದ್ದರು. ತಂದೆಯವರು ಸ್ಥಾಪಿಸಿದ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಪ್ರಿನ್ಸಿಪಾಲರ ಹುದ್ದೆ ನಿರ್ವಹಿಸಿ ತಮ್ಮ ಪತ್ನಿ ವಿದುಷಿ ರೋಹಿಣಿ Rohini Kanchana Subbarathnam ಅವರೊಡಗೂಡಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾದಾನ ಮಾಡಿದರು. 

ಕಲಾವಿದರೂ, ಕಲಾಪ್ರಿಯರೂ, ಕಲಾಪೋಷಕರೂ ಆಗಿದ್ದ ಸುಬ್ಬರತ್ನಂ ತಮ್ಮ ತಂದೆ ವೆಂಕಟರತ್ನಂ ಅವರೊಂದಿಗೆ ಯಕ್ಷಗಾನಕ್ಕೆ ಸಂಗೀತ ಅಳವಡಿಕೆಗಳ ಕುರಿತಾಗಿ ಅಪಾರ ಕೆಲಸ ಮಾಡಿದರು. ಸುಮಾರು 45ವರ್ಷಗಳ ಕಾಲ ಅನೇಕ ಸಂಗೀತ ಮತ್ತು ಸಾಂಸ್ಕೃತಿಕ ಉತ್ಸವಗಳ ನಿರ್ವಹಣೆಗೆ ಶ್ರಮ ಮತ್ತು ಉದಾರ ಕೊಡುಗೆಗಳನ್ನು ನೀಡಿದ್ದರು.

ಸುಬ್ಬರತ್ನಂ ಕರ್ನಾಟಕ ಆಂಧ್ರ, ತಮಿಳುನಾಡು, ಕೇರಳ, ಉತ್ತರಭಾರತ, ಬಂಗಾಳ, ಪಂಜಾಬ್ ಮುಂತಾದ ಎಲ್ಲೆಡೆ ಪ್ರಧಾನ ಸಂಗೀತಗಾರರಾಗಿ ಕಚೇರಿಗಳನ್ನು ನೀಡಿದರಲ್ಲದೆ, ಎಲ್ಲ  ಪ್ರಸಿದ್ಧ ಸಂಗೀತಗಾರರಿಗೆ ವಾದನ ಸಹಕಾರದ ಕಚೇರಿಗಳನ್ನೂ ನಿರ್ವಹಿಸಿದರು.  ಮದರಾಸ್ ಮ್ಯೂಸಿಕ್ ಅಕಾಡಮಿ, ಬೆಂಗಳೂರು ಗಾಯನ ಸಮಾಜ, ಮೈಸೂರು ಕಲಾವರ್ಧಿನಿ ಸಭಾ, ವಿವೇಕ ಕಲ್ಚರಲ್ ಸೆಂಟರ್ ಸೇರಿದಂತೆ ಎಲ್ಲ ಪ್ರತಿಷ್ಠಿತ ವೇದಿಕೆಗಳಿಂದ ಅವರಿಗೆ ನಿರಂತರ ಕಚೇರಿ ಆಹ್ವಾನಗಳು ಸಲ್ಲುತ್ತಿದ್ದವು.  

ಸುಬ್ಬರತ್ನಂ ಅವರು ಸ್ವಯಂ ಅನೇಕ ವರ್ಣ, ತಿಲ್ಲಾನ ಪಲ್ಲವಿಗಳನ್ನು ರಚಿಸಿದರಲ್ಲದೆ ಸಮಕಾಲೀನರಾದ ಅನೇಕ ವಾಗ್ಗೇಯಕಾರರ ಕೃತಿಗಳಿಗೆ ಬರಹರೂಪ ನೀಡಿದ್ದರು. 

ಸುಬ್ಬರತ್ನಂ ದಕ್ಷಿಣ ಕನ್ನಡ ಜಿಲ್ಲೆಯ ಬಜತೂರು ಗ್ರಾಮದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ "ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಹೈಸ್ಕೂಲು" ಸ್ಥಾಪಿಸಿದರು. ಪ್ರೈಮರಿ ಶಾಲೆ ಮತ್ತು ಗುರುಕುಲ ಮಾದರಿಯ ಸಂಗೀತ ಶಾಲೆಗಳನ್ನೂ ಸ್ಥಾಪಿಸಿದರು.  ಶಾಲೆಗಳ ಸಿಬ್ಬಂದಿಗೆ ರಾಜ್ಯಸರ್ಕಾರದಿಂದ ವೇತನ ಸಿಗುವ ವ್ಯವಸ್ಥೆ ಸಹಾ ಕಲ್ಪಿಸಿ ಮಕ್ಕಳಿಗೆ ಉಚಿತ  ವಿದ್ಯಾಸೌಲಭ್ಯ ಕಲ್ಪಿಸಿದರು. ನಾದಪ ಶ್ರೀ ವಿಷ್ಣುಮೂರ್ತಿ ದೇಗುಲ ಮತ್ತು ಪೆರ್ಲ ಶ್ರೀ ಷಣ್ಮುಖ ದೇಗುಲಗಳಿಗೆ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಈ ದೇಗುಲಗಳಿಗೆ ತಮ್ಮ ಭೂಮಿ ಮತ್ತು ಅಪಾರ ಕೊಡುಗೆ ನೀಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇಗುಲ ಮತ್ತು ಶರವೂರು ದೇಗುಲಗಳೂ ಸೇರಿದಂತೆ ಅನೇಕ ದೇಗುಲಗಳಿಗೂ ಉದಾರ ಕೊಡುಗೆ ನೀಡಿದರು.  ತಮ್ಮ ಊರಿನ ಸಮುದಾಯಕ್ಕೆ ಅನುಕೂಲವಾಗುವಂತೆ ಅನೇಕ ಸಾಮಾಜಿಕ ಸೇವೆಗಳ ಮುಂದಾಳತ್ವ ವಹಿಸಿದ್ದೇ ಅಲ್ಲದೆ ಸಂಪನ್ಮೂಲ ಬೆಂಬಲ ನೀಡಿದರು.

ವಿದ್ವಾನ್ ಕಾಂಚನ ವಿ. ಸುಬ್ಬರತ್ನಂ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಮೈಸೂರಿನ ಪುರಂದರ, ತ್ಯಾಗರಾಜ ಆರಾಧನಾ ಸಮಿತಿಯಿಂದ ಸಂಗೀತ ಕಲಾತಪಸ್ವಿ, ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ, ಮದರಾಸು ಮ್ಯೂಸಿಕ್ ಅಕಾಡಮಿಯಿಂದ ಎರಡುಬಾರಿ ಬೆಸ್ಟ್ ಮ್ಯೂಸಿಷಿಯನ್ ಪ್ರಶಸ್ತಿ, ಸಂಗೀತ ಕಲಾಸಿಂಧು, ನಾದ ಜ್ಯೋತಿ, ಪ್ರಣವಶ್ರೀ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದವು. ಸುಬ್ಬರತ್ನಂ ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 

ಕಾಂಚನ ವಿ. ಸುಬ್ಬರತ್ನಂ ಅವರ ಪುತ್ರಿಯರಾದ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ Kanchana Shriranjani - Shruthiranjani Kanchana ಜೋಡಿ ಸಂಗೀತಲೋಕದಲ್ಲಿ ಪ್ರಸಿದ್ಧರಾಗಿದ್ದಾರೆ.  ಈ ಕುಟುಂಬ ಇಂದೂ ಸಂಗೀತೋತ್ಸವಗಳು, ಸಾಧಕರಿಗೆ ಗೌರವ,  ಮುಂದಿನ ಪೀಳಿಗೆಗಳ ಪ್ರೋತ್ಸಾಹ ಮುಂತಾದ ಅನೇಕ ಕಾರ್ಯಗಳಿಗೂ ಹೆಸರಾಗಿದೆ.

ಕಾಂಚನ ವಿ. ಸುಬ್ಬರತ್ನಂ ಅವರು 2005ರ ಅಕ್ಟೋಬರ್ 27ರಂದು ಈ ಲೋಕವನ್ನಗಲಿದರು. 

On the birth anniversary of Great musician Kanchana V. Subbaratnam 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ