ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದನಿಗೂಡಿಸುವಾಸೆ


ಹಕ್ಕಿಯ ಹಾಡಿಗೆ ತಲೆದೂಗುವ ಹೂ 
ನಾನಾಗುವ ಆಸೆ;
ಹಸುವಿನ ಕೊರಳಿನ ಗೆಜ್ಜೆಯ ದನಿಯೂ ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ 
ಮುಗಿಲಾಗುವ ಆಸೆ;
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ 
ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ 
ಜೇನಾಗುವ ಆಸೆ;
ಕಡಲಿನ ನೀಲಿಯ ನೀರಲಿ ಬಳುಕುವ 
ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ;
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ, ನೋವಿಗೆ, ನಲಿವಿಗೆ
ಕನ್ನಡಿ ಹಿಡಿವಾಸೆ;
ಮಾನವ ಹೃದಯದ ಕರುಣೆಗೆ ಒಲವಿಗೆ
ದನಿಗೂಡಿಸುವಾಸೆ.

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ

Photo: At Jumeira Islands, Dubai






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ