ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಬ್ಲ್ಯೂ.ಸಿ. ಬ್ಯಾನರ್ಜಿ


 ಉಮೇಶಚಂದ್ರ ಬ್ಯಾನರ್ಜಿ


ಡಬ್ಲ್ಯೂ. ಸಿ. ಬ್ಯಾನರ್ಜಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮಾಧಿವೇಶನದ ಪ್ರಥಮಾಧ್ಯಕ್ಷರು. ನ್ಯಾಯವಾದಿ, ಸಮಾಜ ಸುಧಾರಕ, ಹಾಗೂ ದೇಶಪ್ರೇಮಿ. 

ಉಮೇಶಚಂದ್ರ ಬ್ಯಾನರ್ಜಿ ಕಲ್ಕತ್ತದ ಸೋನೆ ಕಿದ್ದರ್ ಪುರದಲ್ಲಿ 1844ರ ಡಿಸೆಂಬರ್ 29ರಂದು ಜನಿಸಿದರು. ತಂದೆ ಗಿರೀಶಚಂದ್ರ ಹೆಸರಾಂತ ನ್ಯಾಯವಾದಿ. ತಾಯಿ ಸರಸ್ವತಿದೇವಿ. ಉಮೇಶಚಂದ್ರರ ಸ್ವಭಾವ ಮತ್ತು ವ್ಯಕ್ತಿತ್ವ ನಿರೂಪಿಸುವುದಕ್ಕೆ ತಂದೆ ತಾಯಿ ಬಲುಮಟ್ಟಿಗೆ ಕಾರಣರು. ಉಮೇಶಚಂದ್ರರ ಶಿಕ್ಷಣ ಪ್ರಾರಂಭದಲ್ಲಿ ಓರಿಯೆಂಟಲ್ ಸೆಮಿನರಿಯ ಶಾಖಾಶಾಲೆಯಲ್ಲಿ ನಡೆದು ಮುಂದೆ ಅದರ ಮುಖ್ಯ ಸಂಸ್ಥೆಯಲ್ಲಿ ಮುಂದುವರೆಯಿತು. 1859ರಲ್ಲಿ ಹೇಮಾಂಗಿನಿ ದೇವಿಯೊಂದಿಗೆ ಇವರ ವಿವಾಹ ಆಯಿತು. 

ಉಮೇಶಚಂದ್ರ ಬ್ಯಾನರ್ಜಿ ಕಲ್ಕತ್ತೆಯ ಶ್ರೇಷ್ಠ ನ್ಯಾಯಲಯದ ನ್ಯಾಯವಾದಿಯಾಗಿದ್ದ ಡಬ್ಲ್ಯು. ಪಿ ಗಿಲ್ಲ್ಯಾಂಡರ್ಸ್ ಅವರಲ್ಲಿ ಗುಮಾಸ್ತರಾಗಿ ಸೇರಿ (1862) ಬಹಳಷ್ಟು ಕಾಯಿದೆ ವಿಷಯ ತಿಳಿದು ಕೊಂಡರು. ಇದು ಮುಂದಿನ ಅವರ ಜೀವನಗತಿಯಲ್ಲಿ ನೆರವಾಯಿತು. 1864ರಲ್ಲಿ ಬ್ಯಾನರ್ಜಿ ಇಂಗ್ಲೆಂಡಿಗೆ ತೆರಳಿ 1867ರಲ್ಲಿ ಮಿಡಲ್ ಟೆಂಪಲ್‍ಲ್ಲಿ ಶಿಕ್ಷಣ ಮುಂದುವರಿಸಿ ಬಾರಿಸ್ಟರ್ ಪದವಿಯೊಡನೆ 1868ರಲ್ಲಿ ಸ್ವದೇಶಕ್ಕೆ ಹಿಂತಿರುಗಿ, ಕಲ್ಕತ್ತೆಯ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸರ್ ಚಾಲ್ರ್ಸ್‍ಪಾಲರ ನೇತೃತ್ವದಲ್ಲಿ ನ್ಯಾಯವಾದಿಯ ವೃತ್ತಿಯನ್ನು ಪ್ರಾರಂಭಿಸಿದರು. ಬ್ಯಾರಿಸ್ಟರ್ ಜೆ.ಪಿ. ಕೆನಡಿ ಸಹ ಇವರಿಗೆ ವೃತ್ತಿಯಲ್ಲಿ ಹೆಸರುಗಳಿಸುವುದಕ್ಕೆ ನೆರವಾದರು. ಕೆಲವೇ ವರ್ಷಗಳಲ್ಲಿ ಉಮೇಶಚಂದ್ರರು ಉಚ್ಚನ್ಯಾಯಾಲಯದಲ್ಲಿ ಅತಿ ಹೆಚ್ಚು ಬೇಡಿಕೆಯ ನ್ಯಾಯವಾದಿಯಾದರು. ಬ್ಯಾನರ್ಜಿಯವರು ಭಾರತದ ಮೊತ್ತ ಮೊದಲ ಸ್ಥಾಯೀ ನ್ಯಾಯವಾದಿಯಾಗಿ ನೇಮಕಗೊಂಡು ಆ ಹುದ್ದೆಯಲ್ಲಿ ನಾಲ್ಕುಬಾರಿ ಕಾರ್ಯನಿರ್ವಹಿಸಿದರು. 
1883ರಲ್ಲಿ ನ್ಯಾಯಸ್ಥಾನ ನಿಂದನೆಯ ಪ್ರಕರಣದಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರ ಪರವಾಗಿ ವಾದಿಸಿದರು. 

ಸಮಾಜಸುಧಾರಣೆ ಬಗ್ಗೆ ಉದಾತ್ತರಾಗಿದ್ದ ಉಮೇಶಚಂದ್ರ ಬ್ಯಾನರ್ಜಿ ಬಾಲ್ಯ ವಿವಾಹವನ್ನು ವಿರೋಧಿಸಿ ಸ್ತ್ರೀಯರಿಗೆ ಶಿಕ್ಷಣ ಅತ್ಯವಶ್ಯವೆಂದು ಮಂಡಿಸಿದ್ದಲ್ಲದೆ ರಾಜಕೀಯ ಹಕ್ಕುಗಳು ಸಮಾಜ ಸುಧಾರಣೆಗಳನ್ನು ಅವಲಂಬಿಸಿಲ್ಲವೆಂದೂ ವಾದಿಸಿದರು. ಉಮೇಶಚಂದ್ರರು ಪಾಶ್ಚಾತ್ಯ ಶಿಕ್ಷಣವನ್ನು ಮೆಚ್ಚಿದ್ದರು. ಸರಕಾರ ಪ್ರಾಥಮಿಕ ಶಿಕ್ಷಣಕ್ಕಷ್ಟೇ ಅಲ್ಲದೆ ಎಲ್ಲ ಬಗೆಯ ತಾಂತ್ರಿಕ ಮತ್ತು ಉಚ್ಚಶಿಕ್ಷಣಗಳಿಗೆ ಪ್ರೋತ್ಸಾಹ ನೀಡಬೇಕೆಂದರು. ಬ್ಯಾನರ್ಜಿಯವರು ಕಲ್ಕತ್ತ ವಿಶ್ವವಿದ್ಯಾಲಯದ ಸಿಂಡಿಕೇಟಿನ ಸದಸ್ಯರಾಗಿ 1884ರಲ್ಲಿ ನ್ಯಾಯಶಾಸ್ತ್ರ ವಿಭಾಗದ ಅಧ್ಯಕ್ಷರಾದರು. 1894-95ರಲ್ಲಿ ಬಂಗಾಳದ ವಿಧಾನಪರಿಷತ್ತಿನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದರು. ಗಿರೀಶ್ ಚಂದ್ರರಿಗೆ "ಬಂಗಾಲೀ" ಪತ್ರಿಕೆ ಪ್ರಕಟಿಸಲು ನೆರವಾದರಲ್ಲದೆ ಸುಮಾರು ಮೂರುವರ್ಷಗಳ ಕಾಲ ಅದಕ್ಕೆ ವಾರದ ವಾರ್ತೆಗಳ ಸಾರಾಂಶವನ್ನು ಒದಗಿಸುತ್ತಿದ್ದರು ಕೂಡ. 

ಉಮೇಶಚಂದ್ರ ಬ್ಯಾನರ್ಜಿ ಇಂಗ್ಲೆಂಡಿನಲ್ಲಿದ್ದಾಗ ಲಂಡನ್ ಇಂಡಿಯನ್ ಸೊಸೈಟಿಯ ಸ್ಥಾಪನೆಗೆ ನೆರವಾದರು. 1885ರಲ್ಲಿ ಮುಂಬಯಿಯಲ್ಲಿ ಸೇರಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧಿವೇಶನಕ್ಕೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1886ರಲ್ಲಿ ಅಧಿವೇಶನದಲ್ಲಿ ಎಲ್ಲ ಪ್ರಾಂತ್ಯಗಳಲ್ಲೂ ಕಾಂಗ್ರೆಸ್ಸಿನ ಕಾರ್ಯಕಲಾಪಗಳನ್ನು ಹೆಚ್ಚು ಸಮನ್ವಯಗೊಳಿಸುವುದಕ್ಕೆ ಸ್ಥಾಯೀಸಮಿತಿಗಳ ಸ್ಥಾಪನೆ ಪ್ರಸ್ತಾಪಿಸಿ ಕಾಂಗ್ರೆಸ್ಸು ಸಮಾಜ ಸುಧಾರಣೆಯ ಸಮಸ್ಯೆಯನ್ನೂ ಉಳಿದ ಸಂಸ್ಥೆಗಳಿಗೆ ಬಿಟ್ಟು ತನ್ನ ಚಳವಳಿಯನ್ನು ರಾಜಕೀಯಕ್ಕೆ ಸೀಮಿತವಾಗಿಡಬೇಕೆಂದರು. ಭಾರತದಲ್ಲಿದ್ದ ಆಡಳಿತ ಪದ್ಧತಿಯನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರದಲ್ಲಿ ಪ್ರಾತಿನಿಧ್ಯವಿಲ್ಲದೆ ತೆರಿಗೆ ವಸೂಲಿ ಇರಬಾರದೆಂದು ಘೋಷಿಸಿದರು. ಭಾರತದ ಆಡಳಿತದ ಮೇಲೆ ಇಂಗ್ಲೆಂಡಿನ ಸೆಕ್ರೆಟರಿ ಆಫ್ ಸ್ಟೇಟರಿಗೆ ಇರುವ ಹಿಡಿತ ಅಸಂಬದ್ಧವಾದದು ಮತ್ತು ಹಾನಿಕರವಾದದ್ದು. ಅವರಿಗೆ ಭಾರತೀಯ ವಿಷಯಗಳ ಬಗೆಗೆ ಸರಿಯಾದ ಮಾಹಿತಿ ಇರುವುದಿಲ್ಲವಾದ್ದರಿಂದ ಅವರು ಭಾರತದಲ್ಲಿ ಇರುವ ಬ್ರಿಟಿಷ್ ಆಡಳಿತಗಾರರ ಸಲಹೆಯನ್ನೇ ಅವಲಂಬಿಸಬೇಕಾಗುತ್ತದೆ. ಭಾರತದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎನ್ನುವುದರ ಬಗೆಗೆ ಭಾರತದಲ್ಲಿರುವ ಅಧಿಕಾರಿಗಳು ಕಳುಹಿಸುವ ವರದಿಗಳ ಸತ್ಯ ಅರಿತುಕೊಳ್ಳಲೂ ಯಾವ ಸಾಧನವೂ ಅವರ ಹತ್ತಿರ ಇದ್ದಂತೆ ಕಾಣುವುದಿಲ್ಲ ಎಂದೂ ಅವರು ಹೇಳಿದರು. ಆಡಳಿತ ಪದ್ಧತಿಯಲ್ಲಿ ಕ್ರಮೇಣ ಬದಲಾವಣೆಗಳು ಆಗುವುದು ಸಾಧ್ಯವೆಂದು ನಂಬಿದ್ದರು. 

ಹಂತಹಂತವಾಗಿ ವಿವಿಧ ಕ್ಷೇತ್ರಗಳ ಬ್ರಿಟಿಷ್ ತಜ್ಞರು ಭಾರತದಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ಉಮೇಶಚಂದ್ರ ಬ್ಯಾನರ್ಜಿ ಅವರಿಗೆ ಒಳ್ಳೆಯ ಅಭಿಪ್ರಾಯವಿತ್ತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಕಾಂಗ್ರೆಸ್ಸಿನ ಯಶಸ್ಸಿಗೆ ಒಂದು ರೀತಿ ಕಾರಣವಾಗಿದೆ ಎಂಬುದು ಇವರ ಅಭಿಪ್ರಾಯವಾಗಿತ್ತು. ಬ್ರಿಟಿಷರ ಸಂಪರ್ಕದಿಂದ ಭಾರತಕ್ಕೆ ಒದಗಿದ ಲಾಭಗಳನ್ನು ಇವರು ಒಪ್ಪಿಕೊಂಡು ಬ್ರಿಟನ್ನಿನಲ್ಲಿ ಲಭ್ಯವಿದ್ದ ರಾಷ್ಟ್ರೀಯ ಜೀವನದ ಸೌಲಭ್ಯಗಳನ್ನು ಭಾರತದಲ್ಲಿಯೂ ಒದಗಿಸುವಂತೆ ಬ್ರಿಟಿಷ್ ಅಧಿಕಾರಿಗಳನ್ನು ಕೇಳಿಕೊಂಡರು. ಭಾರತೀಯರು ಯಾವುದೇ ಕಾರ್ಯವನ್ನು ಜವಾಬುದಾರಿಯಿಂದ ವಹಿಸಿಕೊಳ್ಳಬಲ್ಲರು ಮತ್ತು ಪ್ರತಿನಿಧಿಕರೂಪದ ಸರ್ಕಾರವನ್ನು ದಕ್ಷತೆಯಿಂದ ನಡೆಸಬಲ್ಲರು ಎಂದು ನಂಬಿದ್ದರು. ಮೊದಲೇ ಶಿಕ್ಷೆಗೆ ಒಳಪಟ್ಟವರ ಬಗ್ಗೆ ಮರು ಅರ್ಜಿಯ ಬಳಿಕ ಶಿಕ್ಷಾವಧಿಯನ್ನು ಹೆಚ್ಚಿಸುವ ಕ್ರಮವನ್ನು ಉಪ್ಪಿನ ಮೇಲಿನ ಕರ ಹೇರುವುದನ್ನೂ ಇವರು ಉಗ್ರವಾಗಿ ಪ್ರತಿಭಟಿಸಿದರು. ಮಿಲಿಟರಿ ಖರ್ಚು ಕಡಿಮೆ ಮಾಡಿ ಬ್ರಿಟನ್ ಮತ್ತು ಭಾರತದ ನಡುವೆ ಅದರ ನ್ಯಾಯ ಸಮ್ಮತ ಹಂಚುವಿಕೆಗೂ ಒಂದು ಅಯೋಗ ರಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. 

ಉಮೇಶಚಂದ್ರ ಬ್ಯಾನರ್ಜಿ ದೇಶದ ಕೈಗಾರಿಕಾಕರಣವನ್ನು ಬಯಸಿದ್ದಲ್ಲದೆ ಸ್ವದೇಶೀ ಆಂದೋಲನವನ್ನೂ ಸ್ವಾಗತಿಸಿದರು. ಪತ್ರಿಕಾ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದು 1896ರಲ್ಲಿ ವೃತ್ತಪತ್ರಿಕೆಗಳ ಮೇಲಿನ ನಿರ್ಬಂಧ ಪ್ರತಿಭಟಿಸಿದರು. ಭಾರತೀಯ ವಿಚಾರ ಪ್ರಚಾರಕ್ಕಾಗಿ 1888ರಲ್ಲಿ ಲಂಡನ್ನಿನಲ್ಲಿ ಸ್ಥಾಪಿತವಾಗಿದ್ದ ನಿಯೋಗಕ್ಕೆ ಹಣ ಕೂಡಿಸಿಕೊಟ್ಟರು. 

ಉಮೇಶಚಂದ್ರ ಬ್ಯಾನರ್ಜಿ 1902ರಲ್ಲಿ ಆರೋಗ್ಯದ ಕಾರಣಗಳಿಗಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ನೆಲಸಿ ಅಲ್ಲಿನ ಪ್ರೀವಿ ಕೌನ್ಸಿಲ್‍ನಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು. ಭಾರತೀಯ ವ್ಯವಹಾರಗಳ ಬಗೆಗೆ ವಿಶೇಷವಾಗಿ ಗೌವರ್ನರ್ ಜನರಲ್ಲರ ಕಾರ್ಯನಿರ್ವಾಹಕ ಪರಿಷತ್ತಿನಲ್ಲಿ ಭಾರತೀಯರನ್ನು ಸದಸ್ಯರಾಗಿ ನೇಮಿಸಿಕೊಳ್ಳುವುದರ ಅವಶ್ಯಕತೆ ಪ್ರತಿಪಾದಿಸಿದ್ದಲ್ಲದೆ ತಮ್ಮ ರಾಜಕೀಯ ಚಟುವಟಿಕೆಗಳನ್ನು ಅಲ್ಲೂ ಮುಂದುವರಿಸಿದರು. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯತ್ವಕ್ಕೆ ಎರಡುಸಲ ಸ್ಪರ್ಧಿಸಿ ವಿಫಲರಾದರು. ಅವರು ಭಾರತೀಯರ ಸಮಸ್ಯೆಗಳ ನಿವಾರಣೆಗೋಸ್ಕರ ಭಾರತ ಮತ್ತು ಇಂಗ್ಲೆಂಡಿನಲ್ಲಿ ಬಹಳಷ್ಟು ಹಣ ಖರ್ಚು ಮಾಡಿದರು. ಬಲು ಕಾಲದ ತನಕ ಸಂಸದೀಯ ಸ್ಥಾಯೀ ಸಮಿತಿ ಮತ್ತು ಇಂಗ್ಲೆಂಡಿನಿಂದ ಪ್ರಕಟವಾಗುತ್ತಿದ್ದ ಇಂಡಿಯಾ ಪತ್ರಿಕೆಗೆ ಹಣ ಒದಗಿಸಿ ಅದರ ಮೂಲಕ ತಾಯಿನಾಡಿನ ಸೇವೆ ಮಾಡಿದ್ದರು.

ಉಮೇಶಚಂದ್ರ ಬ್ಯಾನರ್ಜಿ 1906ರ ಜುಲೈ 21ರಂದು ನಿಧನರಾದರು.

On the birth anniversary of first president Indian National congress W. C. Banerjee (Womesh Chunder Banerjee)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ