ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಭುಪ್ರಸಾದ್


 ಕೆ. ಬಿ. ಪ್ರಭುಪ್ರಸಾದ್


ಕೆ. ಬಿ. ಪ್ರಭುಪ್ರಸಾದ್ ಪ್ರಾಧ್ಯಾಪಕರಾಗಿ, ಬರಹಗಾರರಾಗಿ. ತತ್ವಜ್ಞಾನಿಯಾಗಿ ಮತ್ತು ಸುಗಮ ಸಂಗೀತ ಗಾಯಕರಾಗಿ ಹೆಸರಾಗಿದ್ದವರು.

ಪ್ರಭುಪ್ರಸಾದ್ 1929ರ ಡಿಸೆಂಬರ್ 27ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ಬಿ.ಎಸ್. ಕುರುವತ್ತಿ, ತಾಯಿ ಸರ್ವಮಂಗಳಾ. ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆಯಲ್ಲಿ ನಡೆಯಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮತ್ತು ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು.

ಪ್ರಭುಪ್ರಸಾದ್ ಮೊದಲು ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ಮುಂದೆ ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ ಸೈನ್ಸ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಪ್ರಭುಪ್ರಸಾದ್ ಅವರದ್ದು ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದ, ಶ್ರೀ ಸತ್ಯಸಾಯಿಬಾಬಾ ಮುಂತಾದವರ ಪ್ರಭಾವದಿಂದ ಬೆಳೆದ ವ್ಯಕ್ತಿತ್ವ. ಸಾಹಿತ್ಯ, ಸಂಗೀತ, ನಾಟಕ, ಹಾಸ್ಯ, ಆಕಾಶವಾಣಿ, ಸುಗಮ ಸಂಗೀತ ಗಾಯಕರಾಗಿ ಅನೇಕ ರೀತಿಯ ಪ್ರವೃತ್ತಿ ಅವರದಾಗಿತ್ತು. ಅವರು ಆಧ್ಯಾತ್ಮಿಕ ಉಪನ್ಯಾಸಗಳಿಗೂ ಹೆಸರಾಗಿದ್ದರಲ್ಲದೆ ಅನೇಕ ಸಮುದಾಯ ಹಿತಾಸಕ್ತಿಯುಳ್ಳ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಪ್ರಭುಪ್ರಸಾದ್ ಅವರ ಕೃತಿಗಳಲ್ಲಿ ಪ್ರವಾಸ ಕಥನ 'ದೇಗುಲಗಳ ದಾರಿಯಲ್ಲಿ'. ರೇಡಿಯೋ ನಾಟಕಗಳ ಸಂಕಲನ 'ನಾದಸೇತು ಮತ್ತು ಇತರ ನಾಟಕಗಳು'. ಭಾವಗೀತೆಗಳಿಗೆ ಸ್ವರ ಸಂಯೋಜಿಸಿ ರಾಗ-ತಾಳ-ಸ್ವರ ಲಿಪಿ ಹಾಕಿ ಪ್ರಕಟಿಸಿದ ಕೃತಿ ‘ಹಾಡೋಣ ಬಾ’; ರಂಗಭೂಮಿ ಮಹಾನ್ ಕಲಾವಿದ  ಕೊಟ್ಟೂರಪ್ಪನವರ  ಆತ್ಮಕಥೆ  'ರಂಗ-ಅಂತರಂಗ'; ಕೇಂದ್ರ ಸಾಹಿತ್ಯ ಅಕಾಡೆಮಿಯ ಮೇಕರ್ಸ್‌ ಆಫ್ ಇಂಡಿಯನ್ ಲಿಟರೇಚರ್ ಸರಣಿಗಾಗಿ 'ಸರ್ವಜ್ಞ'  ಕೃತಿ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ; ಭಾರತ-ಭಾರತಿ ಪುಸ್ತಕ ಸಂಪದಕ್ಕಾಗಿ ರಾಣಿ ದುರ್ಗಾವತಿ, ವಿಷ್ಣುವರ್ಧನ, ಶಿರಡಿ ಸಾಯಿಬಾಬಾ; ನಾ. ಕಸ್ತೂರಿಯವರ LOVING GOD ಅನುವಾದ ೨ ಸಂಪುಟಗಳಲ್ಲಿ ‘ದೇವನೊಲಿದ ಜೀವ’; ಎಚ್.ಎಲ್. ಕೇಶವಮೂರ್ತಿಯವರೊಡನೆ ಸಂಪಾದಿತ ಹಾಸ್ಯ ಕಸ್ತೂರಿ (ನಾ. ಕಸ್ತೂರಿಯವರ ಆಯ್ದ ಲೇಖನಗಳು; ಮುಂತಾದವು  ಸೇರಿವೆ. 

ಪ್ರಭುಪ್ರಸಾದ್ ಅವರ 'ದೇಗುಲಗಳ' ದಾರಿಯಲ್ಲಿ ಪ್ರವಾಸಕಥನಕ್ಕೆ 1962ರ ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ, ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆಯಿಂದ ಸನ್ಮಾನ, ಹಂಸಜ್ಯೋತಿ ಸಂಸ್ಥೆಯಿಂದ ಹಂಸ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.  

ಮೈಸೂರಿನಲ್ಲಿ ನೆಲೆಸಿದ್ದ ಪ್ರಭುಪ್ರಸಾದ್ ಅವರು 2024ರ ಡಿಸೆಂಬರ್ 15ರಂದು ಈ ಲೋಕವನ್ನಗಲಿದರು. 

On the birth anniversary of scholar, writer and singer Prof. K. B. Prabhuprasad 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ