ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎ. ವಿವೇಕ ರೈ


 ಬಿ. ಎ. ವಿವೇಕ ರೈ


ಡಾ. ವಿವೇಕ ರೈ  ಕನ್ನಡ ಮತ್ತು ತುಳು ಭಾಷೆಗಳ ಮಹತ್ವದ ಸಂಸ್ಕೃತಿ ಚಿಂತಕರು, ಸಂಶೋಧಕರು, ವಿಮರ್ಶಕರು, ಜಾನಪದ ವಿದ್ವಾಂಸರು ಮತ್ತು ಕನ್ನಡ ಪ್ರಾಧ್ಯಾಪಕರು. 

ವಿವೇಕ ರೈ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದಲ್ಲಿ 1946ರ ಡಿಸೆಂಬರ್ 8ರಂದು ಜನಿಸಿದರು. ತಂದೆ ಅಗ್ರಾಳ ಪುರಂದರ ರೈ ಸಾಹಿತಿ ಮತ್ತು ಪತ್ರಕರ್ತರಾಗಿದ್ದು ಡಾ.ಶಿವರಾಮ ಕಾರಂತರಿಗೆ ಆಪ್ತರಾಗಿದ್ದರು. ವಿವೇಕ ರೈ ಅವರಿಗೆ ಚಿಕ್ಕ ವಯಸ್ಸಿನಲ್ಲೇ ತಂದೆಯವರ ಮೂಲಕ ಶಿವರಾಮ ಕಾರಂತರ ಪರಿಚಯವಾಯಿತು. ಈ ಪರಿಚಯ ಅವರನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪೇರಿಸಿತು. 

ವಿವೇಕ ರೈ  ಪುಣಚಾದ ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಒಂದರಿಂದ ಎಂಟನೆಯ ತರಗತಿವರೆಗೆ ಅಭ್ಯಾಸ ಮಾಡಿದರು. ಪುತ್ತೂರಿನ ‌ಬೋರ್ಡ್ ಹೈಸ್ಕೂಲಿನಲ್ಲಿ ‌ಹತ್ತನೆಯ ತರಗತಿವರೆಗೆ ಕಲಿತರು. ‌ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಿ.ಎಸ್ಸಿ. ಪದವಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ 1970 ವರ್ಷದಲ್ಲಿ ಕನ್ನಡ ಎಂ.ಎ. ಪದವಿ ಪಡೆದರು.  ಮೈಸೂರು ವಿಶ್ವವಿದ್ಯಾನಿಲಯದಿಂದ 1981ರಲ್ಲಿ ಡಾ. ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಗಳಿಸಿದರು. 

ಡಾ. ವಿವೇಕ ರೈ  ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ 1970ರಿಂದ 2004ವರೆಗೆ 34 ವರ್ಷಗಳ ಕಾಲ ಅಧ್ಯಾಪನ, ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದರು.
2004-2007 ಅವಧಿಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. 2007-2009 ಅವಧಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿಗಳಾಗಿದ್ದರು.  ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು.

ವಿವೇಕ ರೈ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ 1994-1998 ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ಇದಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಯ ಸದಸ್ಯರಾಗಿ, 
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, 
ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸದಸ್ಯರಾಗಿ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್‌ನ ಸದಸ್ಯರಾಗಿ, ಮಂಗಳೂರು ದರ್ಶನ ಸಂಪುಟದ ಪ್ರಧಾನ ಸಂಪಾದಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಂಗದ ಸ್ಥಾಪಕ ನಿರ್ದೇಶಕರಾಗಿ, ಎಸ್ ಡಿ ಎಂ ತುಳುಪೀಠದ ಸ್ಥಾಪಕ ಸಂಯೋಜಕರಾಗಿ, ಡಾ.ಶಿವರಾಮ ಕಾರಂತ ಪೀಠದ ಸ್ಥಾಪಕ ನಿರ್ದೇಶಕರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿ ಹೆಸರಾಗಿದ್ದಾರೆ.

ವಿವೇಕ ರೈ ಅವರ ಕೃತಿಗಳಲ್ಲಿ ತುಳು ಗಾದೆಗಳು,  ತುಳು ಒಗಟುಗಳು, ತೌಳವ ಸಂಸ್ಕೃತಿ, ತುಳುವ ಅಧ್ಯಯನ: ಕೆಲವು ವಿಚಾರಗಳು, ತುಳು ಜನಪದ ಸಾಹಿತ್ಯ, 
ಆನ್ವಯಿಕ ಜಾನಪದ,  ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಗಿಳಿಸೂವೆ, ಇರುಳಕಣ್ಣು, ಹಿಂದಣ ಹೆಜ್ಜೆ, 
ರಂಗದೊಳಗಣ ಬಹಿರಂಗ, ಬ್ಲಾಗಿಲನು ತೆರೆದು, ಜರ್ಮನಿಯ ಒಳಗಿನಿಂದ, 
ಕನ್ನಡ ನುಡಿನಡೆಯ ಬರಹಗಳು, ಅರಿವು ಸಾಮಾನ್ಯವೆ, ನೆತ್ತರ ಮದುವೆ, ಚಿಲಿಯಲ್ಲಿ ಭೂಕಂಪ, ಮೊದಲ ಮೆಟ್ಟಿಲು, ಕನ್ನಡ ದೇಸಿ ಸಮ್ಮಿಲನದ ನುಡಿಗಳು, 80 ದಿನಗಳಲ್ಲಿ ವಿಶ್ವ ಪರ್ಯಟನ, ಅಕ್ಕರ ಮನೆ, ಕಲಿತದ್ದು ಕಲಿಸಿದ್ದು, ಸ್ಲಾವೊಮೀರ್ ಮ್ರೋಜೆಕ್ ಕತೆಗಳು ಮುಂತಾದ ವೈವಿಧ್ಯಮಯ ಕೃತಿಗಳು ಸೇರಿವೆ.

ವಿವೇಕ್ ರೈ ಅವರ ಇಂಗ್ಲಿಷ್ ಗ್ರಂಥಗಳಲ್ಲಿ
Siri Epic as Performed by Gopala Naika ( Ed.with Lauri Honko ,Anneli Honko and Chinnappa Gowda; The Tubingen Tulu Manuscript: Two South Indian Oral Epics collected in the 19th Century: (Edited with Heidrun Bruckner); Oral Traditions in South India : Essays on Tulu Oral Epics 😞 Edited with Heidrun Bruckner.); Classical Kannada Poetry and Prose : A Reader ( with Prof.C N.‍Ramachandran) ಮುಂತಾದವು ಸೇರಿವೆ.

ವಿವೇಕ್ ರೈ ಅವರು ಪೂರ್ಣಚಂದ್ರ ತೇಜಸ್ವಿ ಅವರ ಕರ್ವಲೋ ಕೃತಿಯನ್ನು ಜರ್ಮನ್ ಭಾಷೆಯಲ್ಲಿ ಕತ್ರಿನ್ ಬೈಂಡರ ಅವರೊಂದಿಗೆ Die fligende Eidechse  ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
�ವಿವೇಕ ರೈ ಅವರ ಸಂಪಾದನೆಯ ಗ್ರಂಥಗಳಲ್ಲಿ  ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಾಹಿತ್ಯ- 19 ಸಂಪುಟಗಳು, 
ಮಂಗಳೂರು ದರ್ಶನ: 3 ಸಂಪುಟಗಳು, 
ವಚನ(ಶಿವಶರಣರ 2500 ವಚನಗಳ ತುಳು ಅನುವಾದ), ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು, ಕಡೆಂಗೋಡ್ಲು ಸಾಹಿತ್ಯ. ಶಾಂಭವಿ, ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯ, ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು, ಜನಪದ ಆಟಗಳು, ತುಳು ಕಬಿತಗಳು,  ಮಲೆಕುಡಿಯರು, ಯಕ್ಷಗಾನ ಪ್ರಸಂಗ ಸಂಪುಟ, ಪೊನ್ನ ಕಂಠಿ, ಭೂತಾರಾಧನೆಯ ಬಣ್ಣಗಾರಿಕೆ, ಅಗ್ರಾಳ ಪುರಂದರ ರೈ ಸಮಗ್ರಸಾಹಿತ್ಯ, ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ, ಪುಟ್ಡುಬಳಕೆಯ ಪಾಡ್ದನಗಳು, ರಾಘವಾಂಕನ ಸಮಗ್ರ ಕಾವ್ಯ, ರೂಪಾಂತರ ಮುಂತಾದವು ಸೇರಿವೆ. 

ಡಾ. ವಿವೇಕ ರೈ ಅವರು ಜರ್ಮನಿ, ಫಿನ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಜಪಾನ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರಿಯ, ಫ್ರಾನ್ಸ್, ಪೋಲಂಡ್, ಯುಎಇ, ಕುವೈಟ್‌, ಕತಾರ್ ಮುಂತಾದ ದೇಶಗಳಿಗೆ ಸಂಶೋಧನೆ, ಅಧ್ಯಯನ, ಅಧ್ಯಾಪನ ಮತ್ತು ಉಪನ್ಯಾಸಗಳ ಉದ್ದೇಶಗಳಿಗಾಗಿ ಪ್ರವಾಸ ಮಾಡಿದ್ದಾರೆ. ಇದಲ್ಲದೆ ವೈಯಕ್ತಿಕ ಸಾಂಸ್ಕೃತಿಕ ಆಸಕ್ತಿಗಳಿಗಾಗಿ ವಿಶ್ವದೆಲ್ಲೆಡೆ ಸಂಚರಿಸಿದ್ದಾರೆ.

ಡಾ ವಿವೇಕ ರೈ ಅವರ ಅಂತರಜಾಲದಲ್ಲಿನ ಬ್ಲಾಗ್ 
https://bavivekrai.wordpress.com/

ಮಹಾನ್ ಸಾಧಕರಾದ ಡಾ. ವಿವೇಕ ರೈ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, 
ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಡಾ.ಹಾ ಮಾ ನಾಯಕ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ದೇಸಿ ಸಮ್ಮೇಳನದ ಅಧ್ಯಕ್ಷತೆ, ವಿಶ್ವ ನುಡಿಸಿರಿ ವಿರಾಸತ್‍ ಸಮ್ಮೇಳದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ.

Great scholar, writer and educationist Prof. B. A. Vivek Rai

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ