ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ.ವಿ. ನಾರಾಯಣ


 ಪಿ.ವಿ. ನಾರಾಯಣ


ಡಾ. ಪಿ. ವಿ. ನಾರಾಯಣ  ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡು ಬಂದಿರುವ ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡಪರ ಹೋರಾಟಗಾರರು.

ಪಿ.ವಿ. ನಾರಾಯಣ 1942ರ ಡಿಸೆಂಬರ್ 18ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಿ. ವೆಂಕಪ್ಪಯ್ಯ.  ತಾಯಿ ನರಸಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಸಿದ ಅವರು, ತುಮಕೂರಿನ ಸರಕಾರಿ ಕಾಲೇಜಿನಿಂದ ಬಿ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಪದವಿ ಪಡೆದರು.  "ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು. 

ಪಿ.ವಿ. ನಾರಾಯಣ ರೂರಲ್ ಇನ್‌ಸ್ಟಿಟ್ಯೂಟ್ ಹನುಮನಮಟ್ಟಿ, ವಿದ್ಯೋದಯ ಹೈಸ್ಕೂಲ್ ಟಿ. ನರಸೀಪುರ, ಅದೋನಿಯ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಮುಂತಾದುವುಗಳಲ್ಲಿ ಬೋಧನಾನುಭವ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. (ಸಂಜೆ) ತರಗತಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂ.ಎ. ತರಗತಿಗಳಿಗೆ ಬೋಧನೆ ಮಾಡಿದರು. ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. 

ಡಾ. ಪಿ. ವಿ. ನಾರಾಯಣ ಅವರು ಕನ್ನಡ ಪರ ಚಳವಳಿ ಮತ್ತು ಚಟುವಟಿಕೆಗಳಿಗೆ ಸದಾ ಮುಂದು.‍ ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಸಂಚಾಲಕರಾಗಿ, ಸಾಹಿತಿ ಕಲಾವಿದರ ಬಳಗದ ಸಂಚಾಲಕರಾಗಿ, ಕನ್ನಡ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದವರು.  ಸಾಹಿತ್ಯ ಸಂಬಂಧಿತ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧ ಮಂಡನೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಬಿ.ಎಂ.ಶ್ರೀ ಪ್ರತಿಷ್ಠಾನ ಮತ್ತು ಉದಯಭಾನು ಕಲಾ ಸಂಘ ಮುಂತಾದ ಸಂಸ್ಥೆಗಳೊಂದಿಗೂ ಅವರ ಸಕ್ರಿಯ ಒಡನಾಟವಿದೆ.

ಡಾ. ಪಿ. ವಿ. ನಾರಾಯಣ ಅವರ ವಿಮರ್ಶೆ ಮತ್ತು ಸಂಶೋಧನೆ ಕೃತಿಗಳಲ್ಲಿ ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ, ಪಂಪ ಕಾವ್ಯಸಾರ, ಪಂಪನ ನುಡಿಗಣಿ, ಕುಮಾರವ್ಯಾಸ ಭಾರತ ಎಂಬ ಕೃಷ್ಣಕಥೆ, ಹಳಗನ್ನಡ ಪದಸಂಪದ, ಸಾಹಿತ್ಯ ಸಡಗರ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ, ಕನ್ನಡತನ ಮತ್ತು ಭಾರತೀಯತೆ, ನುಡಿಗಳ ಅಳಿವು ಮೊದಲಾದ 15ಕ್ಕೂ ಹೆಚ್ಚು  ಕೃತಿಗಳಿವೆ. ಅವರ ಸಂಪಾದನೆಗಳಲ್ಲಿ ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ, ಅಲ್ಲಮನ ವಚನಗಳು, ಅಕ್ಕನ ವಚನಗಳು,  ಮೊದಲಾದ ಅನೇಕ ಕೃತಿಗಳಿವೆ. ಅನುವಾದಗಳಲ್ಲಿ ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ ಹತ್ತಾರು ಕೃತಿಗಳಿವೆ.  ಅವರ ಕಾದಂಬರಿಗಳಲ್ಲಿ ಸಾಮಾನ್ಯ, ಅಂತರ, ವಿಕಾಸ, ಶೋಧನೆ ನಿರ್ಧಾರ, ಧರ್ಮಕಾರಣ ಮುಂತಾದವು ಸೇರಿವೆ. 

ಡಾ. ಪಿ. ವಿ. ನಾರಾಯಣ ಅವರ ವಚನ ವ್ಯಾಸಂಗ ಕೃತಿಗೆ ಇಳಕಲ್ಲಿನ ಶ್ರೀವಿಜಯ ಮಹಂತೇಶ ಮಠ ಪುರಸ್ಕಾರ, ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಶೋಧನೆ’ಗೆ ಸುಧಾ ವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

On the birthday of writer,Kannada activist and scholar Dr. P. V. Narayana Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ