ಏಳು ಚಿನ್ನ
ಏಳು ಚಿನ್ನ ಬೆಳಗಾಯ್ತು ಅಣ್ಣ
ಮೂಡಲವು ತೆರೆಯಿತಣ್ಣ
ನಕ್ಷತ್ರ ಜಾರಿ ತಮವೆಲ್ಲ ಸೋರಿ
ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಎದೆಗೆ ಹೂಬಾಣ ಹೂಡಿ
ಜುಮ್ಮೆಂದು ಬಿಟ್ಟ ಬಾಣ
ಗುಡಿ ಗೋಪುರಕ್ಕು ಬಲೆ ಬೀಸಿ ಬಂದ
ಅಗೋ ಬೆಳಕು ಬೇಟೆಗಾರ
ನಿಶೆಯಿಳಿದ ಉಷೆಯ ಎಳನಗೆಯ ಬಗೆಗೆ
ಸೋತಿರಲು ಜಗವು ಸವಿಗೆ
ಕಣ್ಣಿದಿರು ಒಂದು ಕಟ್ಟಿತ್ತು ಕನಸು
ಕೂಗೊಂದು ಬಂತು ಕಿವಿಗೆ
ಮಕ್ಕಳಿರ ಕೇಳಿ ರಸಕುಡಿಯಲೇಳಿ
ಹುಸಿನಿದ್ದೆಗೆತ್ತಿ ಸಾಕು
ಈ ತುಂಬಿ ಬಾಳು ತುಂಬಿರುವ ತನಕ
ತುಂತುಂಬಿ ಕುಣಿಯಬೇಕು
ಯಾವಾಗ ಕೋಳಿ ಕೂಗಿಹುದು ಏಳಿ
ತಡವೇಕೆ ಪಾನ ಕೇಳಿ
ಮೊದಲಾಗಲೀಗ ಅಂಗಡಿಯ ಕದವ
ಈ ಕ್ಷಣಕೆ ತೆರೆಯ ಹೇಳಿ
ಜೀವನದ ನದಿಗೆ ಸೆಳೆವಿಹುದು
ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರುಗಿ ಬಂದಾರೆ
ಅವರು ಬರಲಿಕ್ಕು ಇಲ್ಲ ಮರಳಿ
ಬಾನ್ ಹೊಗರಲುಂಟು ಮರ ಚಿಗುರಲುಂಟು
ಬರಲುಂಟೆ ಸುಗ್ಗಿ ಮತ್ತೆ
ಮುಳುಗಿರಲಿ ಮುಪ್ಪು ಚಿಂತನದಿ ತಾನು
ಹರಯಕ್ಕೆ ಬೇರೆ ಹೊತ್ತೆ
- ಅಂಬಿಕಾತನಯದತ್ತ
Photo: at Abu Dhabi on 18.12.2017
ಕಾಮೆಂಟ್‌ಗಳು