ಗುರು ಗೋವಿಂದ ಸಿಂಗ್
ಗುರು ಗೋವಿಂದ ಸಿಂಗ್
ಗುರು ಗೋವಿಂದ ಸಿಂಗರು ಸಿಕ್ ಪಂಥದ ಗುರುಪಂಕ್ತಿಯಲ್ಲಿ ಹತ್ತನೆಯವರು; ಹಾಗೆಯೇ ಕಡೆಯ ಗುರು. ಸಿಕ್ ಪಂಥದ ನಂಬಿಕೆಯಂತೆ, ಪಂಥದ ಸ್ಥಾಪಕರಾದ ಮೊದಲ ಗುರು ನಾನಕ್, ತಮ್ಮ ಅನಂತರ ಪಂಥದ ಗುರುವಾಗಿ ಇರಲು ಎರಡನೆಯ ಗುರು ಅಂಗದರನ್ನು ನೇಮಿಸುವಾಗ, ಅವರಲ್ಲಿ ತಮ್ಮ ಆತ್ಮವನ್ನಿರಿಸಿದರು. ಹೀಗೆಯೇ ಈ ಗುರುತ್ವ ಗುರುವಿನಿಂದ ಗುರುವಿಗೆ ಸಾಗಿತು. ಗುರು ಗೋವಿಂದ ಸಿಂಗರು, ತಾವು ದೇಹವನ್ನು ಬಿಡುವ ಮುನ್ನ, ‘ತಮ್ಮ ಅನಂತರ ಯಾವನೇ ಒಬ್ಬ ವ್ಯಕ್ತಿ ಗುರುವಾಗಿ ಇರುವುದಿಲ್ಲ, ಗುರುತ್ವ ಗುರುವಾಣಿಯಾದ ಆದಿಗ್ರಂಥದಲ್ಲಿರುತ್ತದೆ’ ಎಂದೂ, ಮುಂದೆ ಪಂಥದ ಜನ ಈ ಪೂಜ್ಯಗ್ರಂಥವನ್ನು (ಗ್ರಂಥ್ ಸಾಹೇಬ್) ಗುರುವೆಂದು ಕಾಣಬೇಕು’ ಎಂದೂ ನಿಯಮಿಸಿದರು. ಇದೇ ಗುರು. ಆ ಮೊದಲೇ (1705) ಈ ಗ್ರಂಥಕ್ಕೆ ಒಂದು ಸ್ಪಷ್ಟ ಆಕಾರವನ್ನು ಕೊಟ್ಟಿದ್ದರು.
ಗುರು ಗೋವಿಂದ ಸಿಂಗರು ಸಿಕ್ ಪಂಥದ ಒಂಭತ್ತನೆಯ ಗುರುವಾದ ತೇಗ್ ಬಹದ್ದೂರರ ಕುಮಾರ. ಶಿಷ್ಯರ ಸಲುವಾಗಿ ದೇಶಾಟನ ಮಾಡುತ್ತ ತೇಗ್ ಬಹದ್ದೂರ್ ಬಿಹಾರದಲ್ಲಿನ ಪಾಟ್ನಾ ನಗರದಲ್ಲಿದ್ದರು. ಇವರು ಕಾರ್ಯಾಂತರಕ್ಕಾಗಿ ಕಾಮರೂಪಕ್ಕೆ ಹೋಗಿದ್ದಾಗ 1666ರ ಡಿಸೆಂಬರ್ 22ರಂದು ಈ ಕುಮಾರ ಹುಟ್ಟಿದ. ತಾವು ಹೊರಡುವ ವೇಳೆ ಪ್ರಸವದ ನಿರೀಕ್ಷೆಯಲ್ಲಿದ್ದ ಪತ್ನಿಗೆ ತೇಗ್ ಬಹದ್ದೂರ್, ಹುಟ್ಟುವ ಮಗನಿಗೆ ಗೋವಿಂದರಾಯ್ ಎಂದು ಹೆಸರಿಡಲು ಹೇಳಿ ಹೋದರು. ಗೋವಿಂದ ತೇಜಸ್ವಿಯಾದ ಬಾಲಕ. ವ್ಯಾಯಾಮಪ್ರೇಮಿಯಾಗಿ ಬೆಳೆದ. ಔರಂಗಜೇಬ್ ಹಿಂದೂಗಳನ್ನು ಜಾತಿ ಕೆಡಿಸುತ್ತಿದ್ದಾನೆಂದು ಕಾಶ್ಮೀರದ ಬ್ರಾಹ್ಮಣರು ತೇಗ್ ಬಹದ್ದೂರರ ರಕ್ಷಣೆಯನ್ನು ಬೇಡಿ ಬಂದರು. ಗುರು ಈ ಸಂದರ್ಭದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತ ಇದ್ದರಂತೆ. ಮಗ ‘ಚಿಂತೆಯೇನು?’ ಎಂದು ಕೇಳಿದ. ತಂದೆ, ‘ಕೆಲಸಕ್ಕೆ ಧೀರ, ಸತ್ಯವಂತ ಆದ ಸತ್ಪುರುಷ ಬೇಕು’ ಎಂದರಂತೆ. ಕುಮಾರ ಗೋವಿಂದ, ‘ನಿಮ್ಮಂತಹ ಧೀರ ಸತ್ಯವಂತ ಸತ್ಪುರುಷ ಬೇರೆ ಯಾರಪ್ಪ?’ ಎಂದನಂತೆ. ತೇಗ್ ಬಹದ್ದೂರ್, ‘ಇದು ದೈವದ ವಾಣಿ’ ಎಂದು ನೆನೆದರು; ದೆಹಲಿಗೆ ಹೋಗಿ ಔರಂಗಜೇಬನಿಗೆ ಅವನು ಮಾಡುತ್ತಿದ್ದ ಅಕೃತ್ಯಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದರು. ಔರಂಗಜೇಬ್ ಅವರನ್ನು ಕೊಲ್ಲಿಸಿದ. ಹದಿನೈದು ವಯಸ್ಸಿನ ಬಾಲಕ ಗೋವಿಂದ ಗುರುವಾಗಬೇಕಾಯಿತು.
ಹಗೆಯೊಂದಿಗೆ ಹೋರಾಡದೆ ಬದುಕುವಂತಿಲ್ಲ ಎಂದು ನಿಶ್ಚಯಿಸಿಕೊಂಡ ಗುರು ಗೋವಿಂದ ಸಿಂಗ್ ಸಿಕ್ಖ್ ಜನರನ್ನು ಒಂದು ಕ್ಷತ್ರಿಯ ಸಮುದಾಯವಾಗಿ ರೂಪಿಸಲು ನಿರ್ಣಯಿಸಿದರು. ತಮ್ಮ ಶಿಷ್ಯರು ಖಾಲ್ಸಾ ಎಂಬ ಹೆಸರಿಂದ ಒಂದು ಯೋಧಸಮಾಜವಾಗಿ ಬಾಳಬೇಕು ಎಂದು 1669ರ ಯುಗಾದಿಯ ದಿನ ಆಜ್ಞೆ ಮಾಡಿ ಮೊದಲು ಐದು ಫನರಿಗೆ ಅಂದೇ ದೀಕ್ಷೆ ಕೊಟ್ಟರು. ಖಾಲ್ಸಾ ಎಂದರೆ ಶುದ್ಧ. ಖಾಲ್ಸಾ ಮಂದಿ ಶುದ್ಧಜೀವನ ನಡೆಸಬೇಕು ಎಂದೂ; ಸಿಕ್ ಆದವನಿಗೆ ಕೇಶ, ಕಂಘ, ಕಚ್ಛ, ಕರ, ಕೃಪಾಣ ಎಂಬ ಪಂಚ ‘ಕ’ಕಾರಗಳ ರಕ್ಷಣ ಇರಬೇಕು ಎಂದೂ ನಿಯಮ ಹಾಕಿಕೊಟ್ಟರು. ಶಿಷ್ಯರು ಸಿಂಗ್ ಎಂದು ಕರೆದುಕೊಳ್ಳಬೇಕು ಎಂದೂ ನಿಯಮಿಸಿದರು. ಮೊದಲು ಐವರು ಶಿಷ್ಯರಿಂದ ತಾವೂ ದೀಕ್ಷೆ ತೆಗೆದುಕೊಂಡು ಅಂದಿನಿಂದ ಗೋವಿಂದ ಸಿಂಗ್ ಆದರು.
ಪಂಜಾಬನ ಅನಂದಪುರ ಜಿಲ್ಲೆಯ ಗುರುದ್ವಾರದಲ್ಲಿ ಸೇರಿದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಯಾರು ತಮ್ಮ ಶಿರವನ್ನು ಅರ್ಪಣೆ ಮಾಡಲು ಭಯಸುತ್ತಿರಿ ಎಂದು ಕೇಳಿದರು. ಆಗ ಒಬ್ಬ ವ್ಯಕ್ತಿ ಮುಂದೆ ಬಂದ. ಆತನನ್ನು ಗುರು ಗೋವಿಂದ ಸಿಂಗ್ ಪಕ್ಕದ ಒಂದು ಗುಡಿಸಲಿಗೆ ಕರೆದುಕೊಂಡು ಹೋದರು. ನಂತರ ಗುರು ಗೋವಿಂದ ಸಿಂಗ್ ಮಾತ್ರ ರಕ್ತ ಗತವಾದ ಖಡ್ಗ ದೊಂದಿಗೆ ಗುಡಿಸಲಿನಿಂದ ಹೊರಗಿನ ಬೆಂಬಲಿಗರ ಮುಂದೆ ಮರಳಿ ಬಂದರು, ಮತ್ತೆ ಯಾರು ಶಿರ ಅರ್ಪಣೆ ಮಾಡಲು ಬಯಸುತ್ತೀರಿ ಎಂದು ಕೇಳಿದಾಗ ಮತ್ತೆ ಒಬ್ಬ ವ್ಯಕ್ತಿ ಬಂದ ಮತ್ತೆ ಗೋವಿಂದ ಸಿಂಗ್ ಜೀ ಆ ವ್ಯಕ್ತಿಯನ್ನು ಗುಡಿಸಲಿಗೆ ಕರೆದುಕೊಂಡು ಹೋಗಿ ಮರಳಿ ರಕ್ತ ಗತವಾದ ಖಡ್ಗ ದೊಂದಿಗೆ ಮರಳಿ ಬಂದರು, ಹೀಗೆ ನಾಲ್ಕು ಬಾರಿ ಮಾಡಿದರು , ಕೊನೆಗೆ ಐದನೇ ವ್ಯಕ್ತಿ ಮುಂದೆ ಬಂದಾಗ ಗುಡಿಸಲಿಗೆ ಕರೆದುಕೊಂಡು ಹೋಗಿ, ಮರಳಿ ಗುರು ಗೋವಿಂದ ಸಿಂಗ್ ಐದು ಜನರ ಜೊತೆಗೆ ಗುಡಿಸಲು ಹೊರಗೆ ಸೇರಿದ ಜನರ ಮುಂದೆ ಬಂದರು. ಇವರೇ ಖಾಲ್ಸಾದ ಮೊದಲ ಸದಸ್ಯರು ಎಂದು ಘೋಷಿಸಿದರು, ಈ ಐದು ಸದಸ್ಯರನ್ನು ಪಂಜ್ ಪಾರೆ (ಐದು ಪ್ರಿಯರು) ಎಂದು ಕರೆದರು .
ಚಕ್ರವರ್ತಿ ಔರಂಗಜೇಬನಿಗೆ ಅವನ ಮತದ್ವೇಷವನ್ನು ಖಂಡಿಸಿ ಗೋವಿಂದ ಸಿಂಗ್ ಒಂದು ಪತ್ರ ಬರೆದರು. ಇದು ಜಫರ್ ನಾಮಾ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಆಯುಷ್ಯವೆಲ್ಲ ಧರ್ಮರಕ್ಷಣೆಗಾಗಿ ಕಾದಾಡಿ ಗೋವಿಂದ ಸಿಂಗ್ 1708ರ ಅಕ್ಟೋಬರ್ 7ರಂದು ಇಹಲೋಕವನ್ನು ತೊರೆದರು. ಕಾದಾಟದಲ್ಲಿ ಇವರ ಮಕ್ಕಳಲ್ಲಿ ಇಬ್ಬರು ಯುದ್ಧದಲ್ಲಿ ಮಡಿದರು, ಇಬ್ಬರು ಹಗೆಯ ಕೈಗೆ ಸಿಕ್ಕಿ ಬಲಿಯಾದರು. ತಮ್ಮ ನಾಲ್ಕು ಮಕ್ಕಳನ್ನು ದೇಶ ಹಾಗೂ ಧರ್ಮದ ರಕ್ಷಣೆ ಅರ್ಪಿಸಿದ ಗುರು ಗೋವಿಂದ ಸಿಂಗ್ ಇಷ್ಟಾದರೂ ಧೈರ್ಯಗೆಡಲಿಲ್ಲ; ಬಂದ ದುಃಖಕ್ಕೆ ತಲೆಕೊಟ್ಟು ಶಿಷ್ಯರಿಗೆ ಮೇಲ್ಪಂಕ್ತಿಯಾಗಿ ಬಾಳಿದರು.
ಹಿಂದಿನ ಗುರುಗಳ ಕೃತಿಗಳನ್ನೆಲ್ಲ ಸಂಗ್ರಹಿಸಿ ಪರಿಷ್ಕರಿಸಿ ಅವಕ್ಕೆ ಒಂದು ಸ್ಥಿರವಾದ ರೂಪವನ್ನು ಕೊಟ್ಟದ್ದು ಗುರು ಗೋವಿಂದ ಸಿಂಗರು ಮಾಡಿದ ಮಹತ್ಕಾರ್ಯಗಳಲ್ಲಿ ಒಂದು. ಗೋವಿಂದ ಸಿಂಗ್ ತಾವೂ ಕೃತಿಗಳನ್ನು ರಚಿಸಿದರು. ಆದರೆ ಅದನ್ನು ಗ್ರಂಥ್ ಸಾಹೇಬ್ ನಲ್ಲಿ ಸೇರಿಸಲಿಲ್ಲ. ಇವರು ತೀರಿದ ಅನಂತರ ಶಿಷ್ಯನೊಬ್ಬ ಆ ಕೃತಿಗಳನ್ನು ಸಂಗ್ರಹಿಸಿದ. ಅದು ದಶಮಗ್ರಂಥ ಎಂದರೆ ಹತ್ತನೆಯ ಗುರುವಿನ ಗ್ರಂಥ ಎಂಬ ಹೆಸರಿನಿಂದ ಬಳಕೆಗೆ ಬಂತು. ಇದರಲ್ಲಿ ಗೋವಿಂದ ಸಿಂಗರ ಸುಮಾರು ಎರಡು ಸಾವಿರದಷ್ಟು ರಚನೆಗಳಿವೆ. ಗುರು ನಾನಕ್ ಆರಂಭಿಸಿದ ಪಂಥ ಕೆಲವು ಕಾಲದಲ್ಲಿ ಒಂದು ಪ್ರತ್ಯೇಕ ಪಂಥ ಎಂದಾಗಿ, ಗುರು ಗೋವಿಂದ ಸಿಂಗರ ಕಾರ್ಯದಿಂದ ಒಂದು ನಿಖರ ರೂಪವನ್ನು ತಳೆಯಿತು; ತನ್ನದೇ ಧರ್ಮಗ್ರಂಥವನ್ನು ಪಡೆಯಿತು; ಧರ್ಮರಕ್ಷಣೆಯ ದೀಕ್ಷೆಯನ್ನು ವಹಿಸಿಕೊಂಡಿತು; ಭರತವರ್ಷದ ಇತಿಹಾಸದಲ್ಲಿ ಒಂದು ವಿಶಿಷ್ಟ ಸೇವೆಯನ್ನು ಸಲ್ಲಿಸಲು ಕ್ಷಮವಾದ ಒಂದು ದಕ್ಷ ಧರ್ಮಸಂಘ ಆಯಿತು.
Guru Gobind Singh
ಕಾಮೆಂಟ್‌ಗಳು