ಪೂರ್ಣಿಮಾ
ಪೂರ್ಣಿಮಾ ಮಾಳಗಿಮನಿ ಬಹುಮುಖಿ ಸಾಧಕಿ, ಜನಪ್ರಿಯ ಬರಹಗಾರ್ತಿ ಮತ್ತುಉತ್ಸಾಹಪೂರ್ಣ ಸಾಹಿತ್ಯಾಸಕ್ತಿ ಉಳ್ಳ ಆತ್ಮೀಯರು. ಡಿಸೆಂಬರ್ 25 ಅವರ ಹುಟ್ಟುಹಬ್ಬ.
ಪೂರ್ಣಿಮಾ ಮಾಳಗಿಮನಿ ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ತಮಗೆಬಡತನವಿದ್ದರೂ ಮಗಳಿಗೆ ವಿದ್ಯಾಭ್ಯಾಸ ದೊರಕಬೇಕೆಂಬ ಆಶಯವುಳ್ಳ ಪೋಷಕರಪ್ರೋತ್ಸಾಹದಿಂದ ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವಿ ಗಳಿಸಿದರು.
ಪದವಿ ಪಡೆದ ಪೂರ್ಣಿಮಾ ಮಾಳಗಿಮನಿ ಮಿಲಿಟರಿ ಸೇರುತ್ತೇನೆಂದಾಗ ಅಪ್ಪ - ಅಮ್ಮ ಲೋಕದಕೊಂಕಿಗೆ ತಲೆ ಕೆಡಿಸಿಕೊಳ್ಳದೆ ಮಿಲಿಟರಿ ಸೇರಲು ಒಪ್ಪಿದರು. ಬೆಂಗಳೂರು ಕೂಡ ನೋಡಿರದಪೂರ್ಣಿಮಾ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿ ಸೇರಿ, ದೇಶದ ಉದ್ದಗಲಕ್ಕೂಧೈರ್ಯವಾಗಿ ಓಡಾಡುತ್ತಾ ಆರು ವರ್ಷಗಳು ಸೇವೆ ಸಲ್ಲಿಸಿದರು. ಭಾಷೆ, ಊಟದ ಪದ್ಧತಿ, ಜೀವನಶೈಲಿ, ಭದ್ರತೆ ಎಲ್ಲಾ ವಿಷಯಗಳಲ್ಲಿ ತಮ್ಮ ಇತಿಮಿತಿಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದರು.
ಮುಂದೆ ಪೂರ್ಣಿಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಕೇಂದ್ರ ಸರ್ಕಾರದ ಸೇವೆಯಲ್ಲಿಅಧಿಕಾರಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಜೊತೆ ಜೊತೆಗೆ ತಮ್ಮ ಅನುಭವಗಳಿಗೆ ಕಲ್ಪನೆಯಆಳದ ವಿಸ್ತಾರ ನೀಡಿ, ಕನ್ನಡ ಮತ್ತು ಇಂಗ್ಲಿಷ್ ಬರಹಗಳಲ್ಲಿ ಸಾಧನೆ ಮಾಡುತ್ತಲೂ ಬಂದಿದ್ದಾರೆ.
ಬದುಕಿನಲ್ಲಿ ವೃತ್ತಿ ಪರ ಸಾಧನೆ ಮತ್ತು ಬಯಸಿದ ರೀತಿಯ ಕೌಟುಂಬಿಕ ಜೀವನ ಎಲ್ಲಾ ಇದ್ದಾಗ್ಯೂ, ಏಕತಾನತೆಯ ದೈನಂದಿನ ಕಾರ್ಯಬಾಹುಳ್ಯಗಳು ಮತ್ತು ಬದುಕೆಂದರೆ ಇಷ್ಟೇನೇ ಎಂಬಪ್ರಶ್ನೆಗಳಿಗೆ ಉತ್ತರ ಅರಸ ತೊಡಗಿದ ಪೂರ್ಣಿಮಾ ಒಂದು ಹಂತದಲ್ಲಿ "ಎಲ್ಲರನ್ನೂಮೆಚ್ಚಿಸಬೇಕೆಂಬ ಹಠ ಆತಂಕಕಾರಿ ಮತ್ತು ಅನಗತ್ಯ" ಎಂಬುದನ್ಬು ಕಂಡುಕೊಂಡರಲ್ಲದೆ, ತಮ್ಮಮನದ ತುಮುಲಗಳನ್ನು ಬ್ಲಾಗಿನಲ್ಲಿ ಅಭಿವ್ಯಕ್ತಿಸತೊಡಗಿದರು. ಅದೇ ಸಮಯದಲ್ಲಿ ಹಲವಾರುಕಥೆ, ಕವಿತೆಗಳನ್ನೂ ಬರೆದರು.
ಪೂರ್ಣಿಮಾ ಮಾಳಗಿಮನೆ ಅವರ ಕಥೆ, ಕವಿತೆ, ವಿಚಾರ, ಪ್ರಬಂಧ, ವಿಮರ್ಶೆ, ವೈಜ್ಞಾನಿಕ ಬರಹಮುಂತಾದ ವೈವಿಧ್ಯಗಳು ಇಂಗ್ಲಿಷ್ ಮತ್ತು ಕನ್ನಡದ ಅನೇಕ ನಿಯತಕಾಲಿಕಗಳಲ್ಲಿಮೂಡಿಬಂದವು.
ಪೂರ್ಣಿಮಾ ಮಾಳಗಿಮನೆ ಅವರು 2017ರಲ್ಲಿ 'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ಕಿರುಗತೆಗಳ (2017) ಸಂಕಲನ ಪ್ರಕಟಿಸಿದರು. ಕನ್ನಡದಲ್ಲಿ 'ಇಜಯಾ' ಕಾದಂಬರಿ 2021 ವರ್ಷದಆರಂಭದಲ್ಲಿ ಪ್ರಕಟಗೊಂಡಿದೆ. 2022 ವರ್ಷ 'ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೆಕಾಯಿ', 'ಅಗಮ್ಯ' ಕಾದಂಬರಿಗಳು ಹಾಗೂ ಡೂಡಲ್ ಕಥೆಗಳು ಎಂಬ ಸಂಕಲನ ಹೊರಬಂದಿದೆ. ಎಸ್. ಸಂಧ್ಯಾರಾಣಿ ಮತ್ತು ಬಿ. ವಿ. ಭಾರತಿ ಅವರೊಂದಿಗೆ 'ಲವ್ ಟುಡೆ' ಎಂಬ ಕತೆಗಳ ಪುಸ್ತಕದಲ್ಲಿಭಾಗಿಯಾಗಿದ್ದಾರೆ. ಈ ಎಲ್ಲ ಕೃತಿಗಳೂ ಓದುಗ ವಲಯ ಮತ್ತು ವಿದ್ವತ್ ವಲಯಗಳಲ್ಲಿ ಅಪಾರಮೆಚ್ಚುಗೆ ಗಳಿಸಿವೆ. ಹಲವು ಕಥಾಸಂಕಲನಗಳಲ್ಲೂ ಇವರ ಕಥೆಗಳಿವೆ.
ತಳ್ಳುವ ಗಾಡಿ ತರಕಾರಿಯವನು
ಹಸಿ ಮೆಣಸಿನ ಕಾಯಿ
ತುರುಕಿ ಕೊಟ್ಟ
ಪುರವಣಿಯ ಪುಟದಲ್ಲಿ
ಸಿಕ್ಕ
ಕವಿತೆಯಂತೆ ನೀನು
ಸಿಗದೇ ಹೋಗಿದ್ದರೆ
ಕವಿತೆಯೇ ಹುಡುಕಿಕೊಳ್ಳುವುದು
ಓದುಗನನ್ನು
ಎನ್ನುವುದ ನಂಬುತ್ತಿರಲಿಲ್ಲ ನಾನೂ!!
ಎಂಬಂತಹ ಅನೇಕ ವಿಸ್ಮಯ ತುಂಬಿದ ಪೂರ್ಣಿಮಾ ಮಾಳಗಿಮನೆ ಅವರ ಲವಲವಿಕೆಯಕವನಗಳು ಆಗ್ಗಿಂದಾಗ್ಗೆ ನಮ್ಮನ್ನ ಸೋಷಿಯಲ್ ಮೀಡಿಯಾದಲ್ಲಿ ಸೆಳೆಯುತ್ತಾ ಬಂದಿವೆ. ವ್ಯಾಪಕಓದುಗರಾದ ಅವರು ಆಗಾಗ ಅಭಿಪ್ರಾಯ-ವಿಮರ್ಶೆ ಬರೆಯುತ್ತಾರೆ, ಕಥೆ-ಕವಿತೆ ವಾಚಿಸುತ್ತಾರೆ, ಅನೇಕ ಗೋಷ್ಠಿಗಳಲ್ಲಿ ಆಹ್ವಾನಿತರಾಗಿ ಅಭಿಪ್ರಾಯ ವಿನಿಮಯ ಮಾಡುತ್ತಾರೆ, ತಮ್ಮಉತ್ಸಾಹಪೂರ್ಣ ಲೋಕದೆಡೆಗಿನ ನೋಟ ಮತ್ತು ಬದುಕಿನೆಡೆಗಿನ ವಿಸ್ಮಯನೋಟಗಳಿಂದ ತಮ್ಮಓದುಗರಲ್ಲೂ ಉತ್ಸಾಹ ಬಿತ್ತುತ್ತಾರೆ.
ಪೂರ್ಣಿಮಾ ಅವರಗೆ ವೀರಲೋಕ ಪ್ರಶಸ್ತಿ ಬಹುಮಾನ, ಬುಕ್‍ಬ್ರಹ್ಮ ಕಥಾ ಸ್ಪರ್ಧೆ ಬಹುಮಾನ, ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಬಹುಮಾನ, ನಾವಿಕ ಬಹುಮಾನ, ಛಂದ ಪ್ರಶಸ್ತಿಯ ಕೊನೆಯಸುತ್ತಿಗೆ ಪ್ರವೇಶಿಸಿದ ಕೀರ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಇಜಯಾ ಕಾದಂಬರಿಯ ಬೆನ್ನುಡಿಯಲ್ಲಿ ನರೇಂದ್ರ ಪೈ ಅವರು "ಒಂದು ಸುಂದರ ಕಥನದಓಘದಲ್ಲಿ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿನಲ್ಲಿ “ಹುಳ” ಬಿಟ್ಟಂತೆ ಬಿಡುವಲ್ಲಿಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ” ಎನ್ನುವ ಮಾತುನೆನಪಾಗುತ್ತದೆ. ಅವರು ನಾಲ್ಕು ಸಾಲಿನ ಕವಿತೆಯೇ ಬರೆಯಲಿ ಕಾದಂಬರಿಯನ್ನೇ ಬರೆಯಲಿಅವರ ಭಾಷಾ ಲಹರಿಯಲ್ಲಿ ಇಂಥ ಒಂದು ಸೊಗಡಿದೆ. ಆ ಸೊಗಡು ಬಹಳಷ್ಟು ಪಸರಿಸುತ್ತಾ, ಸಾಧಿಸುತ್ರಾ, ಅಭಿವ್ಯಕ್ತಿಸುತ್ತಾ ಸಾಗುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಆತ್ಮೀಯರೂ, ಉತ್ತಮ ಬರಹಗಾರರೂ ಆದ ಪೂರ್ಣಿಮಾ ಮಾಳಗಿಮನಿ ಅವರಿಗೆ ಹುಟ್ಟುಹಬ್ಬದಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್‌ಗಳು