ಭಾರತದ ರಾಷ್ಟ್ರಗೀತೆ
ಭಾರತದ ರಾಷ್ಟ್ರಗೀತೆ
ಭಾರತದ ರಾಷ್ಟ್ರಗೀತೆಯಾದ 'ಜನಗಣಮನ ಅಧಿನಾಯಕ ಜಯಹೇ' ಗೀತೆಯನ್ನು ಮೊಟ್ಟಮೊದಲು 27 ಡಿಸೆಂಬರ್ 1911ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಯಿತು.
ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಠಾಕೂರ್ ಅವರು ಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ; ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ. ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು.
ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು. ರಾಷ್ಟ್ರಗೀತೆಯ ಪೂರ್ಣಪಾಠ ಹೀಗಿದೆ:
ಜನಗಣಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿತರಂಗ
ತವ ಶುಭ ನಾಮೇ ಜಾಗೇ
ತವ ಶುಭ ಆಶಿಸ ಮಾಗೇ
ಗಾಹೇ ತವ ಜಯಗಾಥಾ
ಜನಗಣ ಮಂಗಲದಾಯಕ ಜಯ ಹೇ
ಭಾರತ ಭಾಗ್ಯವಿಧಾತಾ
ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ
ಸಂವಿಧಾನದಲ್ಲಿ ರಾಷ್ಟ್ರಗೀತೆಯ ಸಮಾನ ಸ್ಧಾನಮಾನ ಪಡೆದಿರುವ, ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ 'ವಂದೇಮಾತರಂ' ರಾಷ್ಟ್ರಸ್ತವ ಎನಿಸಿದೆ. ರಾಷ್ಟ್ರೀಯ ಸಭೆ ಸಮಾರಂಭಗಳಲ್ಲಿ 'ವಂದೇಮಾತರಂ' ಅನ್ನು ಪ್ರಾರ್ಥನಾ ಗೀತೆಯಾಗಿಯೂ ಜನಗಣಮನವನ್ನು ಮಂಗಳಗೀತೆಯಾಗಿಯೂ ಹಾಡಲಾಗುತ್ತದೆ.
ಕಾಮೆಂಟ್‌ಗಳು