ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಸ್ಲೀನ್


 ಜಸ್ಲೀನ್ ರಿತ್ವಿಕ್ ಸಿಂಹ


ಜಸ್ಲಿನ್ - ರಿತ್ವಿಕ್ ಸಿಂಹ ದಂಪತಿಗಳು 'ವೇದಿಕೆ' ರಂಗತಂಡದ ಮೂಲಕ ಸಿ. ಆರ್. ಸಿಂಹ ಅವರು ಆರಂಭಿಸಿದ ರಂಗಕಾಯಕವನ್ನು ಹಲವು ರೀತಿಯಲ್ಲಿ ಮುಂದುವರೆಸುತ್ತಾ ಸಾಗಿದ್ದಾರೆ.  ಇಂದು ಜಸ್ಲೀನ್ ಅವರ ಜನ್ಮದಿನ.  ಜಸ್ಲಿನ್ ಅವರು ಭಾರತದ ಹಲವು ಸಂಸ್ಕೃತಿ ಮತ್ತು ಭಾಷಾ ವಾತಾವರಣಗಳಲ್ಲಿ ಬೆಳೆದು, ಕನ್ನಡ ನಾಡಿನಲ್ಲಿ ವಿದ್ಯಾಭ್ಯಾಸ, ರಂಗಭೂಮಿ ಮತ್ತು ಉದ್ಯಮಗಳಲ್ಲಿ ಮಹತ್ವದ ಸಾಧನೆ ಮಾಡುತ್ತಿರುವ ಬಹುಮುಖಿ ಪ್ರತಿಭೆ.  

ಜಸ್ಲೀನ್ 1974ರ ಡಿಸೆಂಬರ್ 23ರಂದು ನವದೆಹಲಿಯಲ್ಲಿ ಜನಿಸಿದರು. ತಂದೆ ಸರ್ದಾರ್ ದೇವೆಂದರ್ ಪಾಲ್ ಸಿಂಗ್ ಮರ್ವಾಹಾ.  ತಾಯಿ ನೀರಾ.  ಜಸ್ಲೀನ್ ದೆಹಲಿ, ಬಾಂಬೆ, ಗುಜರಾತಿನಲ್ಲಿ ತಮ್ಮ ಕುಟುಂಬ ನೆಲೆಸಿದ್ದೆಡೆ ಶಾಲಾ ವಿದ್ಯಾಭ್ಯಾಸ ಕೈಗೊಂಡವರು. ಅವರ ತಾಯಿಯ ತವರು ಮನೆ ಕೊಲ್ಕತ್ತಾದಲ್ಲಿದ್ದ ಕಾರಣ ಆಗಾಗ ಅಲ್ಲಿಗೂ ಭೇಟಿ ನೀಡುತ್ತಿದ್ದರು. ಈ ಬಹುನಗರ ವಾಸ ಮತ್ತು ಪರ್ಯಟನೆಗಳು ಜಸ್ಲೀನ್ ಅವರನ್ನು ವಿವಿಧ ಭಾಷೆ ಮತ್ತು ಸಂಸ್ಕೃತಿಗಳಿಗೆ ತೆರೆದುಕೊಳ್ಳಲು ಅನುವು ಮಾಡಿಕೊಟ್ಟಿತು.  ಹೀಗೆ ಜಸ್ಲೀನ್ ಎಂಟು ಭಾಷೆಗಳಲ್ಲಿ ಓದು, ಬರಹ ಮತ್ತು ಮಾತನಾಡುವ ಸಾಮರ್ಥ್ಯ‍ ಗಳಿಸಿದ್ದಾರೆ.

ಪದವಿಪೂರ್ವ ಶಿಕ್ಷಣವನ್ನು ಮುಂಬೈನಲ್ಲಿ ಪೂರೈಸಿದ  ಜಸ್ಲೀನ್ ತಮ್ಮ ಕುಟುಂಬದೊಂದಿಗ ಬೆಂಗಳೂರಿಗೆ ಬಂದು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗಕ್ಕೆ ತೊಡಗಿದರು. ಈ ವ್ಯಾಸಂಗದ ಪಯಣ ಅವರ ರಂಗಭೂಮಿಯಲ್ಲಿನ ಸುದೀರ್ಘ ಅವಧಿಯ ಪಯಣಕ್ಕೂ ನಾಂದಿ ಹಾಡಿತು.

ಜಸ್ಲೀನ್ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ  ಪ್ರಸಿದ್ಧ ಅಂತರ ಕಾಲೇಜು ರಂಗಭೂಮಿ ಸ್ಪರ್ಧೆಗಳಲ್ಲಿ ಕಾಸ್ಟ್ಯೂಮ್ ಮತ್ತು  ಪ್ರೊಡಕ್ಷನ್ ಡಿಸೈನರ್ ಆಗಿ ಆಸ್ಥೆಯಿಂದ ಪಾಲ್ಗೊಳ್ಳತೊಡಗಿದರು.  ಹೀಗೆ ಪಾಲ್ಗೊಳ್ಳುತ್ತಾ ಹೋದಂತೆ ಅವರಿಗೆ   ರಂಗಭೂಮಿಯನ್ನೇ ತಮ್ಮ ಒಲವಿನ ಕ್ಷೇತ್ರವಾಗಿಸಿಕೊಳ್ಳಬೇಕೆಂಬ ಆಶಯ ಬಲವಾಗುತ್ತಾ ಬಂತು.

ಓದಿನಲ್ಲೂ ಪ್ರವೀಣೆಯಾದ ಜಸ್ಲೀನ್ ಮನಃಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ ಎ ಪದವಿ ಗಳಿಸಿದರಲ್ಲದೆ, ಸಮಾನಾಂತರವಾಗಿ ಅದೇ ಅವಧಿಯಲ್ಲೇ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯನ್ನೂ ಹಲವು ಚಿನ್ನದ  ಚಿನ್ನದ ಪದಕಗಳ  ಸಾಧನೆಯೊಂದಿಗೆ ಸಾಧಿಸಿದರು.

ವಸ್ತ್ರ ವಿನ್ಯಾಸ ಜಸ್ಲೀನ್ ಅವರ ಆಸಕ್ತಿಯ ಕ್ಷೇತ್ರ.  ಹೀಗಾಗಿ ಅವರು ವಸ್ತ್ರ ಉತ್ಪಾದನಾ  ತಂತ್ರಜ್ಞಾನ(Garment Manufacturing Technology)ದಲ್ಲಿ‌ ಕಲಿಯಲಾಶಿಸಿದರು.  ಈ ಕ್ಷೇತ್ರದಲ್ಲಿ  ಡಿಪ್ಲೋಮಾ ಪದವಿಯನ್ನೂ ಪ್ರಪ್ರಥಮ ಸ್ಥಾನದ ಸಾಧನೆಯೊಂದಿಗೆ ಸಾಧಿಸಿದ ಅವರು, ಪ್ರತಿಷ್ಟಿತ ಗಾರ್ಮೆಂಟ್ ರಫ್ತು ಸಂಸ್ಥೆಯಲ್ಲಿ ಫ್ಯಾಬ್ರಿಕ್ ಮರ್ಚೆಂಡೈಸರ್ ಉದ್ಯೋಗ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ  ಮಾರ್ಕೆಟಿಂಗ್ ಮತ್ತು ಎಂಟರ್ಪ್ರೆನ್ಯೂರ್ಷಿಪ್ ವಿಶೇಷತೆಯಲ್ಲಿ ಉನ್ನತ ಸಾಧನೆಯ ಪದಕಗಳೊಂದಿಗೆ ಎಂಬಿಎ ಪದವಿಯನ್ನೂ ಗಳಿಸಿದರು.

ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಪ್ರಗತಿಯ ಜೊತೆ ಜೊತೆಗೇ, ರಂಗಭೂಮಿಯಲ್ಲಿನ ಅನ್ವೇಷಣೆಯನ್ನೂ ಜಸ್ಲೀನ್ ಮುಂದುವರೆಸಿದರು.  ಬೆಂಗಳೂರಿನ ಪ್ರಮುಖ ರಂಗ ತಂಡವಾದ 'ವೇದಿಕೆ' ಫೌಂಡೇಷನ್ ಸೇರಿದ ಅವರು ರಂಗನಿರ್ಮಾಣದ ವಿವಿಧ ಅಂಶಗಳಲ್ಲಿ ಪಾಲ್ಗೊಳ್ಳತೊಡಗಿದರು. ಸಿ.ಆರ್.ಸಿಂಹ ಅವರ ನಿರ್ದೇಶನದ ರಸಋಷಿ, ತುಘಲಕ್, ಕೋರ್ಟ್ ಮಾರ್ಷಲ್, ಭೈರವಿ ಮತ್ತು ಹಾವು ಏಣಿ ಪ್ರಯೋಗಗಳಲ್ಲಿ ವಸ್ತ್ರವಿನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ಈ ಪಯಣದಲ್ಲಿ ಜಸ್ಲೀನ್  ಅವರು ಸಿ. ಆರ್. ಸಿಂಹರ ಪುತ್ರ ರಂಗಕರ್ಮಿ ನಟ, ನಿರ್ದೇಶಕ, ಬರಹಗಾರ ಋತ್ವಿಕ್ ಸಿಂಹರನ್ನು ಪ್ರೇಮಿಸಿ ವಿವಾಹವಾಗಿ,  ಸಿಂಹ ಕುಟುಂಬದ ಭಾಗವಾಗಿ ಅಲ್ಲದೆ ವೇದಿಕೆ ತಂಡದ ನಿರ್ವಾಹಕ ಟ್ರಸ್ಟಿಯೂ ಆಗಿದ್ದಾರೆ. 

ವೇದಿಕೆ ತಂಡದ ಮಹತ್ವದ ಕೊಡುಗೆಯಾದ 'ವೇದಿಕೆ ರಂಗಮಾಲಿಕೆ' ಜಸ್ಲೀನ್ ಅವರ ಕಲ್ಪನೆಯ ಕೂಸು. ಈ ಮಾಲಿಕೆಯಲ್ಲಿ ವೇದಿಕೆ ತಂಡವು ಪ್ರತೀ ವಾರಂತ್ಯಗಳಲ್ಲಿ 125 ವಾರಗಳಷ್ಟು ನಿರಂತರವಾಗಿ ರಂಗಪ್ರದರ್ಶನಗಳನ್ನು ಆಯೋಜಿಸಿತು. ವೇದಿಕೆಯ ಪ್ರಸ್ತುತ ನಾಟಕಗಳೇ ಅಲ್ಲದೆ ಹೊಸ ಹತ್ತು ರಂಗಪ್ರಯೋಗಗಳನ್ನು ಸಹಾ ಈ ಯೋಜನೆಯಡಿ ಪ್ರದರ್ಶಿಸಲಾಯಿತು.  ಒಂದೇ ನಯಾಪೈಸೆಯನ್ನೂ ಸರ್ಕಾರದಿಂದಾಗಲೀ ಅಥವಾ ಕಾರ್ಪೊರೇಟ್ ವಲಯದಿಂದಾಗಲೀ ಪಡೆಯದೆ, ಸಮಸ್ತ ಸಂಪನ್ಮೂಲಗಳನ್ನೂ ಟಿಕೆಟ್ ಮಾರಾಟದ ಮೂಲಕವೇ ನಿಭಾಯಿಸಲಾದ ಸಮರ್ಥ ಯೋಜನೆಯಿದು. ಮ್ಯಾಕ್‍ಬೆತ್, ಮಿಡ್ಸಮ್ಮರ್ ನೈಟ್ಸ್ ಡ್ರೀಮ್, ಮದುವೆ ಮದುವೆ, ನಿರಾಸೆ.ಕಾಂ, ಶಕಲಕ ಶಕಾರ ಮುಂತಾದ ಜನಪ್ರಿಯ ರಂಗನಿರ್ಮಾಣಗಳು ಈ ಮಾಲಿಕೆಯಲ್ಲಿ ಸೇರಿದ್ದವು 

ಜಸ್ಲೀನ್ 30 ಕ್ಕೂ ಹೆಚ್ಚು ಪ್ರಮುಖ ನಿರ್ಮಾಣಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದು, ಈ ಸೃಜನಶೀಲ ವಿನ್ಯಾಸಗಳು ವಿಮರ್ಶಾಲೋಕದಿಂದ ಮೆಚ್ಚುಗೆ ಗಳಿಸಿವೆ. ಅವರು 20ಕ್ಕೂ ಹೆಚ್ಚು ನಿರ್ಮಾಣಗಳಿಗೆ ಧ್ವನಿ ವಿನ್ಯಾಸ ಕಾರ್ಯವನ್ನೂ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ 30 ಕ್ಕೂ ಹೆಚ್ಚು ಪ್ರಮುಖ ನಾಟಕಗಳನ್ನು ನಿರ್ಮಿಸಿದ್ದಾರೆ.

ನಟಿಯಾಗಿ ಕೂಡ ರಂಗಕ್ಕೆ ಕಾಲಿರಿಸಿದ ಜಸ್ಲೀನ್ ತಮ್ಮ ಸುಸ್ಪಷ್ಟ ಭಾವಪೂರ್ಣ  ಕನ್ನಡ ಉಚ್ಚಾರದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಶಕಲಕ ಶಕಾರ, ಕನಸು, ಮದುವೆ ಮದುವೆ ಸೇರಿದಂತೆ ಸುಮಾರು 8 ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ.

ರಂಗ ನಿರ್ದೇಶಕಿಯಾಗಿ ಜಸ್ಲೀನ್ ಬರುವ ಎರಡು ವರ್ಷಗಳ ಅವಧಿಯಲ್ಲಿ ಕನ್ನಡದ ಪ್ರಸಿದ್ಧ ನಾಟಕಕಾರರ 10 ನಾಟಕಗಳ ನಿರ್ದೇಶನವನ್ನು ಮಾಡುವ ಯೋಜನೆಯನ್ನು ರೂಪಿಸಿ ಕಾರ್ಯೋನ್ಮುಖರಾದರು. ಈ ನಿಟ್ಟಿನಲ್ಲಿ ಮೊದಲನೆಯದಾಗಿ ಪರ್ವತವಾಣಿಯವರ ಕ್ಲಾಸಿಕ್ ಎನಿಸಿರುವ 'ಬಹದ್ದೂರ್ ಗಂಡ' ನಾಟಕವನ್ನು ಕೈಗೆತ್ತಿಕೊಂಡರು. 

2020 ರಲ್ಲಿ ಜಸ್ಲೀನ್ ಸಹ-ಸಂಸ್ಥಾಪಕಿಯಾಗಿ ವಿಶಿಷ್ಟ ಥಿಯೇಟರ್ ಇನ್ಸ್ಟಿಟ್ಯೂಟ್ ಆದ ವೇದಿಕೆ ನಾಟಕ ಶಾಲೆಯನ್ನು ಆರಂಭಿಸಿದ್ದಾರೆ. ಈ 
ನಾಟಕ ಶಾಲೆಯು ಥಿಯೇಟರ್ ಆರ್ಟ್ಸ್‌ನಲ್ಲಿ 2 ವರ್ಷದ ಡಿಪ್ಲೊಮಾವನ್ನು ನೀಡುತ್ತಿದೆ. ಜಸ್ಲೀನ್ ಅವರು ಈ ಶಾಲೆಯಲ್ಲಿ ಬೋಧಕಿಯಾಗಿ ರಂಗಭೂಮಿಯ ವಿವಿಧ ಅಂಶಗಳು ಮತ್ತು ವಿನ್ಯಾಸಗಳನ್ನು ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ವೇದಿಕೆ ತಂಡವು ಈ  ಕಾರ್ಯಕ್ರಮವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದ್ದು ವಿದ್ಯಾರ್ಥಿಗಳಿಂದ ಪೂರ್ರ್ಣಾವಧಿಯವರೆಗಿನ ಶ್ರದ್ಧಾವಂತ ಭಾಗವಹಿಕೆಯನ್ನು  ಮಾತ್ರ ಅಪೇಕ್ಷಿಸುತ್ತಿದೆ.  ಈಗಾಗಲೇ ಮೂರು ತಂಡಗಳು ಇದರ ಲಾಭ ಪಡೆದಿವೆ.

ಜಸ್ಲೀನ್ ಅವರು ಉದ್ಯಮಿಯೂ ಆಗಿದ್ದು ತಮ್ಮ ಸಹೋದರರ ಜೊತೆಗೂಡಿ 'ಇನ್‍ಸೈಟ್ ಕೇರ್' ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು ಈ ಸಂಸ್ಥೆ ಔಷದ ಕ್ಷೇತ್ರ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ವಿವಿಧ ಕೈಗಾರಿಕೆಗಳಿಗೆ ಉಪಯುಕ್ತವಾದ ಪ್ಯಾಕೆಂಜಿಂಗ್ ಉತ್ಪನ್ನಗಳಿಗೆ ಹೆಸರಾಗಿದೆ.

ಜಸ್ಲೀನ್ ಸಿಂಹ ಅವರು ಹಲವಾರು ಕಿರುತೆರೆಯ ಸಾಕ್ಷ್ಯಚಿತ್ರಗಳು ಮತ್ತು ಸರಣಿ ಕಾರ್ಯಕ್ರಮಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ದೇಶನಗಳ ಕೆಲಸವನ್ನೂ ಮಾಡುತ್ತಿದ್ದಾರೆ.  ಕಂಟೆಂಟ್ ಪ್ರೊಡಕ್ಷನ್ ಕಂಪನಿ ಸ್ಥಾಪನೆ ಅವರ ಮುಂದಿನ ಗುರಿಯಾಗಿದೆ.

ಜಸ್ಲೀನ್ ರಿತ್ವಿಕ್ ಸಿಂಹ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Jasleen Ritwik Simha ಜಸ್ಲ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ