ಹೊನ್ನು ತಾ ಗುಬ್ಬಿ ಹೊನ್ನು ತಾ
ಹೊನ್ನು ತಾ ಗುಬ್ಬಿ ಹೊನ್ನು ತಾ
ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ
ಆಗಮವನು ತಂದು ಜಗಕಿತ್ತ ಕೈಗೆ
ಸಾಗರವನು ಮಥಿಸಿ ಸುಧೆ ತಂದ ಕೈಗೆ
ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
ಸಾಗರಪತಿ ನರಸಿಂಹನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ ||
ಬಲಿಯ ದಾನವ ಬೇಡಿ ಕೊಂಡಂಥ ಕೈಗೆ
ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
ಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
ಬಲು ಬೆಟ್ಟ ಬೆರಳಲ್ಲೆ ಹೊತ್ತಂಥ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ ||
ಪತಿವ್ರತೆಯರ ವ್ರತವ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದ ಕೈಗೆ
ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
ಚತುರ ಹೆಳವನ ಕಟ್ಟೆ ರಂಗನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ ||
ಸಾಹಿತ್ಯ: ಹೆಳವನಕಟ್ಟೆ ಗಿರಿಯಮ್ಮ
ಗಾಯನ: ಪಂಡಿತ್ ಮಾಧವಗುಡಿ
ಕಾಮೆಂಟ್‌ಗಳು