ಮಾವಿನಕೆರೆ ರಂಗನಾಥನ್
ಮಾವಿನಕೆರೆ ರಂಗನಾಥನ್
ಮಾವಿನಕೆರೆ ರಂಗನಾಥನ್ ಸಾಹಿತಿಗಳಾಗಿ, ಪ್ರಕಾಶಕರಾಗಿ ಮತ್ತು ಮಾಸ್ತಿ ಪ್ರತಿಷ್ಠಾನದ ಪ್ರಧಾನ ನಿರ್ವಾಹಕರಾಗಿ ಹೀಗೆ ಅನೇಕ ರೀತಿಯಲ್ಲಿ ಗಣ್ಯರೆನಿಸಿದ್ದಾರೆ.
ರಂಗನಾಥನ್ 1943ರ ಡಿಸೆಂಬರ್ 21ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ತಂದೆ ಎಚ್.ಆರ್. ಶಿಂಗೈಯ್ಯಂಗಾರ್. ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹಾಸನ, ಚಿಕ್ಕಮಗಳೂರುಗಳಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಪದವಿ ಪಡೆದು, ಸೆಂಟ್ರಲ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಓದಿದರು. ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿಗೆ ಓದಿದರಾದರೂ ಎರಡು ಪರೀಕ್ಷೆಗಳಿಗೆ ಹಾಜರಾಗದಂತಹ ಅನಿರೀಕ್ಷಿತ ಸಂದರ್ಭಗಳೆದುರಾದವು.
ಸಾಹಿತ್ಯದ ಕಡೆ ಒಲವು ಮೂಡಿಸಿಕೊಂಡ ರಂಗನಾಥನ್ ಹಲವಾರು ಸಣ್ಣ ಕಥೆಗಳನ್ನು ಬರೆದರು. ಇವರ ಕಥೆಗಳು ಪ್ರಸಿದ್ಧಗೊಂಡು ತಮಿಳು, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಇವರು ಬರೆದ ‘ಉತ್ತರಾಯಣ' ಕಥೆಯು ಕೇಂದ್ರ ಸಾಹಿತ್ಯ ಅಕಾಡಮಿ ಹೊರತಂದಿರುವ ‘ಇಂಡಿಯನ್ ಲಿಟರೇಚರ್’ನಲ್ಲಿ ಸೇರ್ಪಡೆಯಾಗಿದ್ದರೆ, ಮಿಥುನ ಕಥೆಯನ್ನು ಕವಿ ಗೋಪಾಲಕೃಷ್ಣ ಅಡಿಗರು ಇಂಗ್ಲಿಷ್‌ಗೆ ಅನುವಾದಿಸಿದ್ದು, ಮದರಾಸಿನ ಸ್ಕಾಲರ್ ಬುಕ್ ಹೌಸ್ ಅವರಿಂದ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಇವರ ಕಥೆಗಳು ರುಕ್ಮಿಣಿ, ಚಂಕ್ರಬಂಧನ, ಉತ್ತರಾಯಣ, ಪರ್ಜನ್ಯ, ಮಿಥುನ, ಉಳಿದದ್ದು ಆಕಾಶ, ಮಾವಿನ ಕೆರೆ ಆಯ್ದ ಕಥೆಗಳು, ಶಂಭು ಲಿಂಗ ಮತ್ತು ಮೂವತ್ತು ಕಥೆಗಳು ಮೊದಲಾದ ಕಥಾ ಸಂಕಲನಗಳಲ್ಲಿ ಸೇರಿವೆ. ’ಏಳುಸುತ್ತಿನ ಕೋಟೆ’ ಮತ್ತು ‘ಜಲತರಂಗ’ ಎರಡು ಕಾದಂಬರಿಗಳು ಸುಧಾ ಮತ್ತು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನಂತರ ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವರ ವಿಮರ್ಶಾ ಕೃತಿಗಳಲ್ಲಿ ಸಂಕ್ಷಿಪ್ತ, ನಮ್ಮ ಮಾಸ್ತಿ, ಮಾಸ್ತಿ ಕನ್ನಡದ ಆಸ್ತಿ ಮುಂತಾದವು ಸೇರಿವೆ. ದಿಗಂತ, ಶ್ರೀನಿವಾಸ, ಶಿಕ್ಷಣ-ಸಂಸ್ಕೃತಿ, ಕಥಾಸಂಪದ, ಮಾಸ್ತಿ ಸಮಗ್ರ ಕಥೆಗಳು ಭಾಗ ೧ ಮತ್ತು ೨, ಚಿತ್ರಮಯ ಜ್ಞಾನ ಕೋಶ, ನೊಬೆಲ್ ಪ್ರಶಸ್ತಿ ಕಥಾ ಜಗತ್ತು, ನೊಬೆಲ್ ಪ್ರಶಸ್ತಿ ಕಾವ್ಯ ಜಗತ್ತು, ನೊಬೆಲ್ ಪ್ರಶಸ್ತಿ ಕಾದಂಬರಿ ಜಗತ್ತು (ನೊಬೆಲ್ ಮಾಲೆ ಗೋಪಾಲಕೃಷ್ಣ ಅಡಿಗರೊಡನೆ), ಮಾಸ್ತಿ ಪ್ರಶಸ್ತಿ ಮಹನೀಯರು, ಎಲ್.ಎಸ್. ಶೇಷಗಿರಿರಾವ್ ಬದುಕು ಬರೆಹ ಮತ್ತು ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಸಂಪುಟಗಳು ಭಾಗ ೧ ಮತ್ತು ೨ ಸೇರಿ ಮುಂತಾದ 30ಕ್ಕೂ ಹೆಚ್ಚು ಇವರ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಉದಯೋನ್ಮುಖ ಮತ್ತು ಪ್ರಖ್ಯಾತರ ಕೃತಿಗಳ ಪ್ರಕಟಣೆಗಾಗಿ ಇವರು ಸ್ಥಾಪಿಸಿದ ‘ಪುರೋಗಾಮಿ ಸಾಹಿತ್ಯ ಸಂಘ’ದಿಂದ 300ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಮಾವಿನಕೆರೆ ರಂಗನಾಥನ್ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಮಿತಿ ಸದಸ್ಯರಾಗಿ, ಮಾಸ್ತಿ ಪ್ರಶಸ್ತಿ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮತ್ತು ಕನಾಟಕ ಸರಕಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.
ರಂಗನಾಥನ್ ಕರ್ನಾಟಕ ಚಲನ ಚಿತ್ರಮಂಡಲಿಯಲ್ಲಿ ಕೆಲವು ಗೌರವ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರ ಜೊತೆಗೆ ಚಿತ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ ‘ಸಂಘರ್ಷ’ ಮತ್ತು ‘ಮಿಥುನ’ ಚಲನಚಿತ್ರಗಳನ್ನು ಬೆಳ್ಳಿತೆರೆಗೆ ಅರ್ಪಿಸಿದ್ದಾರೆ.
ರಂಗನಾಥನ್ ಅವರ ‘ಪರ್ಜನ್ಯ’ ಮತ್ತು ‘ಉಳಿದದ್ದು ಆಕಾಶ’ ಕಥಾ ಸಂಕಲನಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಉತ್ತರಾಯಣ’ ಕಥಾ ಸಂಕಲನಕ್ಕೆ ಕೇಂದ್ರ ಸರಕಾರದ ಪುರಸ್ಕಾರ, ‘ಜಲತರಂಗ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಅತ್ಯಂತ ಸರಳ ಹೃದಯವಂತರಾದ ಮಾವಿನಕೆರೆ ರಂಗನಾಥನ್ ಅವರನ್ನು ಅವರ ಮಲ್ಲೇಶ್ವರದ ಮನೆಯಲ್ಲಿ ಭೇಟಿ ಮಾಡಿದಾಗಲೆಲ್ಲ ಅಕ್ಕರೆ ಹರಿಸಿ ಹಲವಾರು ಪುಸ್ತಕಗಳನ್ನು ನೀಡಿದ್ದು ಇನ್ನೂ ನೆನಪಲ್ಲಿದೆ. ನಮ್ಮ ಎಚ್ಎಮ್‍ಟಿ ಕನ್ನಡ ಸಂಪದದ ಕಾರ್ಯಕ್ರಮಕ್ಕೆ ಆಗಮಿಸಿ ಇವರು ಮಾಸ್ತಿ ಕುರಿತು ನಡೆಸಿಕೊಟ್ಟ ಕಾರ್ಯಕ್ರಮ ಮರೆಯಲಾಗದ್ದು.
Writer, publisher, film producer, Chairman of Masti Trust Sri Mavinakere Ranganathan Sir
ಕಾಮೆಂಟ್‌ಗಳು