ಮೇಧಾ ಪಾಟ್ಕರ್
ಮೇಧಾ ಪಾಟ್ಕರ್
ಸಾವಿರಾರು ಮಂದಿಯ ನಡುವೆ ಪುಟು ಪುಟು ನಡೆಯುವ ದೇಹ, ಗೌರವರ್ಣ, ಉಟ್ಟಿರುವುದು ಸರಳವಾದ ಕೈಮಗ್ಗದ ಸೀರೆ. ಮೈಮೇಲೆ ಯಾವುದೇ ಆಭರಣವಿಲ್ಲ. ತಲೆಯ ಮೇಲೆ ಬಿಗಿ ತಪ್ಪಿಸಿ ಹಾರಾಡುವ ಹತ್ತೆಂಟು ಬಿಳಿ ಕೂದಲು. ಯಾವುದೋ ವಿಷಾದದಿಂದ ಬಾಡಿರುವಂತೆ ಕಾಣುವ ಕಣ್ಣು. ಲಾಠಿ ಎತ್ತುವ ಪೋಲೀಸರನ್ನು ಕಂಡರೆ ಬೆಂಕಿಯುಗುಳುವ ಕಣ್ಣು. ಯಾರೀಕೆ? ಸ್ವತಂತ್ರ ಭಾರತ ಕಂಡ ಅಪರೂಪದ ಹೋರಾಟಗಾರ್ತಿ ಮೇಧಾ ಪಾಟ್ಕರ್.
ಈ ಹೆಸರು ಕೇಳಿದರೇ ಸಾಕು, ಮಾನವ ಹಕ್ಕುಗಳಿಗೆ ಹೋರಾಡುವ ಜಗತ್ತಿನ ಹೋರಾಟಗಾರರ ಮೈ ನವಿರೇಳುತ್ತದೆ. ಗುಜರಾತು, ರಾಜಾಸ್ಥಾನ ರಾಜ್ಯಗಳ ಸಾವಿರಾರು ಮಂದಿಯ ಮೈಯಲ್ಲಿ ಹೋರಾಟದ ಕಸುವು ಪುಟಿದೇಳುತ್ತದೆ. ಅವರು ತಮ್ಮ ತಮ್ಮ ಮನೆ, ಹೊಲ, ಊರು ತೊರೆದು ಈಕೆಯನ್ನು ಹಿಂಬಾಲಿಸಲು ಸಜ್ಜಾಗುತ್ತಾರೆ. ಈಕೆ ಹೋದಲ್ಲಿ ಚಳವಳಿಗಳ ಹಾಡು ಮೊಳಗುತ್ತದೆ; ಅಣೆಕಟ್ಟುಗಳು ಅಕ್ಷರಶಃ ತಲೆ ತಗ್ಗಿಸುತ್ತವೆ. ಆದಿವಾಸಿಗಳ ಪರವಾಗಿ, ಬಡವರ ಪರವಾಗಿ ಹೋರಾಡುವುದನ್ನೇ ಉಸಿರಾಗಿಸಿಕೊಂಡ ಅಪೂರ್ವ ಮಹಿಳೆ ಈಕೆ. ಭಾರತದಲ್ಲಿ ‘ಉಕ್ಕಿನ ಮಹಿಳೆ’ ಎಂಬ ಬಿರುದನ್ನು ಯಾರಿಗಾದರೂ ಕೊಡಬಹುದಾದರೆ ಅದನ್ನು ಈಕೆಗೇ ನೀಡಬೇಕು. ಹಲವು ದಶಕಗಳಿಂದ ನಾನಾ ರಾಜ್ಯ ಸರಕಾರಗಳನ್ನು ಎದುರುಹಾಕಿಕೊಂಡು, ಅವುಗಳ, ಬಡಕೃಷಿಕರಿಗೆ ಸಂಕಟ ತರುವ ಆದರೆ ಅಭಿವೃದ್ಧಿ ಎಂದು ಹೇಳಿಕೊಳ್ಳುವ ಕಾರ್ಯಕ್ರಮಗಳಿಗೆ ಅಡ್ಡಗಾಲು ಹಾಕುತ್ತಿರುವವರು ಈಕೆ. ಸಾವಿರಾರು ಮಂದಿಯನ್ನು ನಿರ್ಗತಿಕರನ್ನಾಗಿ ಮಾಡುವ, ನೂರಾರು ಹಳ್ಳಿಗಳನ್ನು ಮುಳುಗಿಸಿಬಿಡುವ ದೊಡ್ಡ ದೊಡ್ಡ ಆಣೆಕಟ್ಟು ಯೋಜನೆಗಳ ಪಾಲಿಗೆ ಮಗ್ಗಲು ಮುಳ್ಳು ಈಕೆ. ಆದ್ದರಿಂದಲೇ ಈ ಮಹಿಳೆಯನ್ನು ಕಂಡರೆ ಭಯ. ಆದರೆ ಅದೇ ಹಳ್ಳಿಗರ ಪಾಲಿಗೆ ಈಕೆಯೊಬ್ಬ ದೇವತೆ. ಅವರನ್ನು ಸಂಕಷ್ಟದಿಂದ ಪಾರು ಮಾಡಲೆಂದು ಅವತರಿಸಿದ ದೇವತೆ.
ಮೇಧಾ ಅವರು ಸ್ಥಾಪಿಸಿದ ಸಂಸ್ಥೆಗಳು ಎರಡು: ಒಂದು ನರ್ಮದಾ ಬಚಾವೋ ಅಂದೋಲನ. ಇನ್ನೊಂದು ಜನತಾ ಚಳವಳಿಗಳ ರಾಷ್ಟ್ರೀಯ ಒಕ್ಕೂಟ (ನ್ಯಾಷನಲ ಅಲಯನ್ಸ್ ಆಫ್ ಪೀಪಲ್ಸ್ ಮೂವ್ ಮೆಂಟ್ಸ್) ಇವೆರಡೂ ಇಂದು ಜನತೆಯ ಹೋರಾಟಕ್ಕೆ ಪರ್ಯಾಯ ಹೆಸರುಗಳಾಗಿವೆ. ಅಲ್ಲದೆ ಈ ಸಂಸ್ಥೆಗಳೊಂದಿಗೆ ಇವರು ಪ್ರೇರೇಪಿಸಿದ ಮನಸ್ಸುಗಳು ಲಕ್ಷಾಂತರ.
ಭಾರತದ ಕೆಲವೇ ಕೆಲವು ಶ್ರೇಷ್ಠ ಚಳವಳಿಗಾರರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಮೇಧಾ ಪಾಟ್ಕರ್. ಅಥವಾ ಆಕೆ ಕಾರ್ಯಾಚರಿಸುವ ಪ್ರದೇಶದ ಶಾಲಾ ಮಕ್ಕಳ ಅಥವಾ ಪೋಲೀಸರ ಭಾಷೆಯಲ್ಲಿ ಹೇಳುವುದಾದರೆ – ಮೇಧಾ ತಾಯಿ, ಮೇಧಾ ದೀದಿ. ನರ್ಮದಾ ನದಿ ಕಣಿವೆ ಈಕೆಗೆ ಅಂಗೈಯ ಇಂಚಿಂಚೂ ಗೊತ್ತು. ಯಾಕೆಂದರೆ ಇದೇ ಈಕೆಯ ಕಾಯಕದ ಕ್ಷೇತ್ರ.
ಇಲ್ಲಿ ಈಕೆ ಲೆಕ್ಕವಿಲ್ಲದಷ್ಟು ಸಲ ತಿರುಗಾಡಿರಬಹುದು. ನೀರು ಸಹ ಸಿಗದ ಬೆಂಗಾಡಿನಲ್ಲಿ ಮುಳ್ಳು ಕಲ್ಲುಗಳ ಹಾದಿಯಲ್ಲಿ, ಇಕ್ಕಟ್ಟು ಪ್ರಪಾತಗಳ ಅಂಚಿನಲ್ಲಿ ಹಾದುಹೋಗುವ ಕಿರು ದಾರಿಗಳಲ್ಲಿ, ಹಗಲು ಇಲ್ಲವೇ ರಾತ್ರಿ – ಚಂದ್ರನ ಮತ್ತು ತಾರೆಗಳ ಮಿಣುಕು ಬೆಳಕಿನಲ್ಲಿ, ಕೈಯಲ್ಲೊಂದು ಟಾರ್ಚು ಹಾಗೂ ಬಗಲ ಚೀಲ, ಅದರಲ್ಲೊಂದಿಷ್ಟು ಹಳೆಯ ದಾಖಲೆಗಳು – ಇಷ್ಟು ಬಿಟ್ಟರೆ ಆಕೆಯ ಬಳಿ ಆಯುಧಗಳೇನೂ ಇಲ್ಲ. ಇರುವುದೆಲ್ಲ ಆಕೆಯ ಅದಮ್ಯ ಧೈರ್ಯವೊಂದೇ. ಸಾಮಾನ್ಯವಾಗಿ ಆಕೆಯ ಹಿಂದೆ ಸ್ಥಳೀಯರು ಇದ್ದೇ ಇರುತ್ತಾರೆ. ಅವರೆಲ್ಲಾ ನಾನಾ ರೀತಿಯಲ್ಲಿ ಶೋಷಿತರಾದವರು. ಇಲ್ಲಾ ಜತೆಯ ಚಳವಳಿಗಾರರು. ಯಾರೂ ಇಲ್ಲದಿದ್ದರೂ ಈಕೆ ನೂರಾರು ಮೈಲಿ ಒಂಟಿಯಾಗಿ ತಿರುಗಾಡಿ ಸ್ಥಳೀಯರನ್ನು ಭೇಟಿಯಾಗಬಲ್ಲರು.
ಇಲ್ಲಿ ಸರಿದಾಡುವ ಟ್ರೈನುಗಳ ಟಿಕೆಟ್ ಕಲೆಕ್ಟರುಗಳಿಗೆಲ್ಲ ಈಕೆ ಪರಿಚಯ. ಯಾಕೆಂದರೆ ಈಕೆ ಸದಾ ಸಾಮಾನ್ಯ ದರ್ಜೆಯಲ್ಲಿ ತಿರುಗಾಡುವವರು. ಇಲ್ಲಿನ ಪೊಲೀಸರಿಗೂ ಚಿರಪರಿಚಿತ. ಯಾಕೆಂದರೆ ಇಲ್ಲಿ ಎಲ್ಲೇ ಜನಪರ ಹೋರಾಟ, ಪ್ರತಿಭಟನೆ ನಡೆದರೂ ಅಲ್ಲಿ ಮುಂದುಗಡೆ ಕಾಣಿಸುವ ಮುಖ ಈಕೆಯದೇ. ಈಕೆ ಇದ್ದಾರೆ ಎಂದು ಗೊತ್ತಾದರೆ ಪೋಲೀಸರಿಗೂ ಒಂದು ಬಗೆಯ ನಿರಾಳ – ಯಾಕೆಂದರೆ ಆ ಪ್ರತಿಭಟನೆ ಹಿಂಸೆಗೆ ತಿರುಗುವುದಿಲ್ಲ ಎಂಬುದು ಅವರಿಗೆ ಗೊತ್ತು. ಮಹಾತ್ಮ ಗಾಂಧಿ ಪ್ರತಿಪಾದಿಸಿದ ಅಹಿಂಸಾತ್ಮಕ ಚಳವಳಿಯೇ ಈಕೆಯ ಮಾರ್ಗ. ಮತ್ತೆ ಈಕೆ ಪೋಲೀಸರ ದೌರ್ಜನ್ಯಕ್ಕೆ ಮಣಿಯುವುದೂ ಇಲ್ಲ. ಈಕೆಯ ಮೇಲೆ ಕೈ ಎತ್ತ ಹೋದ ಪೋಲೀಸರು ಮರುದಿನ ದೇಶದಾದ್ಯಂತ, ಅಷ್ಟೇ ಯಾಕೆ, ಅಂತರಾಷ್ಟ್ರೀಯ ಸಮುದಾಯದಿಂದಲೂ ಪ್ರತಿಭಟನೆಯ ದನಿ ಎದುರಿಸಬೇಕಾಗುತ್ತದೆ ಎಂದು ಅವರಿಗೆ ಚೆನ್ನಾಗಿ ಗೊತ್ತು.
ಮೇಧಾ ಪಾಟ್ಕರ್ ಜನಿಸಿದ್ದು 1954ರ ಡಿಸೆಂಬರ್ 1ರಂದು. ಮುಂಬಯಿಯ ಚೆಂಬೂರು ಹುಟ್ಟೂರು. ಮೇಧಾ ಜನನ ಸಾಮಾನ್ಯ ಕುಟುಂಬದಲ್ಲಿ ಆದದ್ದಲ್ಲ. ಈಕೆಯ ತಂದೆ ವಸಂತ ಖಾನೋಲ್ಕರ್ ಕೂಡಾ ಚಳವಳಿಗಳ ಸಖನೇ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಅವರು ತಮ್ಮನ್ನು ಕಾರ್ಮಿಕ ಚಳವಳಿಗಳಲ್ಲಿ ತೊಡಗಿಸಿಕೊಂಡರು. ತಾಯಿ ಮಹಿಳಾ ಸಂಘಟನೆಗಳಲ್ಲಿ ದುಡಿದವರು. ಮಹಿಳೆಯರ ಹಕ್ಕುಗಳ ಬಗ್ಗೆ ದನಿ ಎತ್ತಿದವರು. ‘ಸ್ವಧಾರ್’ ಎಂಬ ಸ್ತ್ರೀ ಸಂಘಟನೆಯಲ್ಲಿ ದುಡಿಯುತ್ತಿದ್ದರು. ಇದು ದುರ್ಬಲ ಮಹಿಳೆಯರ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಇಂಥ ಕುಟುಂಬದಲ್ಲಿ ಜನಿಸಿದವಳು ಅಂದ ಮೇಲೆ ಹೋರಾಟದ ಗಂಧ ಮೂಗಿಗೆ ಅಡರಲೇಬೇಕಲ್ಲ. ಮೇಧಾ ವಿಷಯದಲ್ಲೂ ಹಾಗೇ ಆಯ್ತು. ಚಿಕ್ಕಂದಿನಿಂದಲೂ ಆಕೆ ತಾನು, ತನ್ನಲ್ಲೇ, ತನ್ನಿಂದ ಎಂಬ ಭಾವನೆಗಳನ್ನು ಹೊಂದಿದ್ದ ವ್ಯಕ್ತಿಯಾಗಿರಲೇ ಇಲ್ಲ. ಸುತ್ತಮುತ್ತಲಿನವರ ಬಗೆಗೇ ಆಕೆಯ ಯೋಚನೆ, ಚಿಂತನೆ ಎಲ್ಲವೂ. ಇದು ಆಕೆಯ ವಿದ್ಯಾಭ್ಯಾಸದ ವಿಷಯದಲ್ಲೂ ಪ್ರತಿಫಲಿಸಿತ್ತು. ಆಕೆ ಶಿಕ್ಷಣಕ್ಕೆ ಸಮಾಜಸೇವೆಯನ್ನೇ ಆಯ್ದುಕೊಂಡಳು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಿನಲ್ಲಿ ಸಾಮಾಜಿಕ ಸೇವಾಕಾರ್ಯಗಳ ಬಗ್ಗೆ ಸ್ನಾತಕೋತ್ತರ ಪದವಿ ಮಾಡಿದಳು.
ಶಿಕ್ಷಣ ಮುಗಿಸಿದ ಬಳಿಕ ಅವರು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಜತೆ ಸೇರಿಕೊಂಡು ಮುಂಬಯಿಯ ಕೊಳಗೇರಿಗಳಲ್ಲಿ ದುಡಿದರು. ಅಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಅಲ್ಲಿನ ಮಹಿಳೆಯರಿಗೆ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪಾಠ ಮಾಡುವುದು, ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಮೂಲಭೂತ ಸೌಕರ್ಯಗಳಿಗಾಗಿ ಅವರು ದನಿಯೆತ್ತುವಂತೆ ಮಾಡುವುದು ಮುಂತಾದ ಕೆಲಸಗಳನ್ನು ಹಮ್ಮಿಕೊಂಡರು. ಅದಾದ ಬಳಿಕ ಈಶಾನ್ಯ ಗುಜರಾತಿನತ್ತ ಅವರ ದೃಷ್ಟಿ ಹರಿಯಿತು. ಈಶಾನ್ಯ ಗುಜರಾತ್ ಎಂದರೆ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದ ಜಿಲ್ಲೆಗಳೇ ಆಗಿದ್ದವು. ಅಲ್ಲಿನ ಜನತೆಗೆ ತಮ್ಮ ಹಕ್ಕುಗಳ ಬಗ್ಗೆ ಯಾವ ಅರಿವೂ ಇರಲಿಲ್ಲ. ಆಧುನಿಕ ಶಿಕ್ಷಣವಂತೂ ಅವರನ್ನು ಇನ್ನೂ ಮುಟ್ಟಿರಲೇ ಇಲ್ಲ. ಶಿಶುಮರಣ, ಅಪೌಷ್ಟಿಕತೆ ಸಾಮಾನ್ಯವಾಗಿದ್ದವು. ಅವರ ದಯನೀಯ ಸ್ಥಿತಿಯನ್ನು ಕಂಡು ಮೇಧಾ ಮರುಗಿದರು.
ಆಗಷ್ಟೇ ಅವರು ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಪಿ ಎಚ್ ಡಿ ಮಾಡುತ್ತ, ಬೋಧನೆಯ ಕೆಲಸವನ್ನೂ ಶುರು ಹಚ್ಚಿಕೊಂಡಿದ್ದರು. ಆದರೆ ಈ ವೈಯಕ್ತಿಕ ಸಾಧನೆಗಿಂತಲೂ, ಸಮುದಾಯದ ಹಿತಕ್ಕಾಗಿ ದುಡಿಯುವುದೇ ಮೇಲೆಂದು ಅವರಿಗೆ ಅನಿಸಿತು. ಅವರ ಕಣ್ಣಲ್ಲಿ ಬುಡಕಟ್ಟುಗಳ ಮುಗ್ಧ ಮಂದಿಯ ಅಸಹಾಯ ಸ್ಥಿತಿ ಕುಣಿಯುತ್ತಿತ್ತು. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತುಗಳ ಈ ಜನರ ಸ್ಥಿತಿ, ಪ್ರಭುತ್ವದ ಬೇಜವಾಬ್ದಾರಿ ನಿಲುವಿನಿಂದ ಇನ್ನಷ್ಟು ಶೋಚನೀಯವಾಗಿತ್ತು.
ಮೇಧಾರ ವಿಷಯ ಬಂದರೆ ಅವರೊಂದಿಗೆ ನರ್ಮದಾ ಯೋಜನೆಯ ಸಂಗತಿ ಕೂಡಾ ಬರಲೇ ಬೇಕು. ಮೇಧಾರ ಬದುಕು ನರ್ಮದಾ ಕಣಿವೆಯ ಹೋರಾಟದೊಂದಿಗೆ ಅಷ್ಟೊಂದು ತಳುಕು ಹಾಕಿಕೊಂಡಿದೆ. ಇದು ನಿರಂತರ ಎರಡೂವರೆ ದಶಕಗಳ ಹೋರಾಟ. ಆದಿವಾಸಿಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ನರ್ಮದಾ ಕಣಿವೆಗೆ ತೆರಳಿದ ಮೇಧಾ, ಅಲ್ಲಿ ನಡೆಯುತ್ತಿದ್ದ ಚಳವಳಿಯ ಅನಿವಾರ್ಯ ಅಂಗವೇ ಆಗಿ ಹೋದದ್ದೊಂದು ರೋಚಕ ಕಥೆ.
ನರ್ಮದಾ ಅಂದೋಲನವೊಂದೇ ಈಕೆಯ ಚಟುವಟಿಕೆಯ ನೆಲವಲ್ಲ. ಭಾರತದ ಅನೇಕ ಬುಡಕಟ್ಟುಗಳ, ದಲಿತರ, ಮಹಿಳೆಯರ, ಕಾರ್ಮಿಕ ಹೋರಾಟಗಳ ಸಖಿ ಈಕೆ. ಈಕೆ ಸಂಚಾಲಕಿಯಾಗಿರುವ ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ - ಅದೊಂದು ಸ್ವತಂತ್ರ, ಜನತೆಯಿಂದಲೇ ನಡೆಸಲ್ಪಡುವ, ಜಾತ್ಯತೀತ ಸಂಘಟನೆ. ಜಾಗತೀಕರಣ – ಉದಾರೀಕರಣವನ್ನೇ ಪ್ರಧಾನವಾಗಿಟ್ಟುಕೊಂಡ ಸರ್ಕಾರದ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸುವ, ಪರ್ಯಾಯ ಅಭಿವೃದ್ಧಿಗಳಿಗೆ ಮಾದರಿಗಳಾಗಿ ನಿರಂತರ ಒತ್ತಾಯಿಸುತ್ತಿರುವ ಸಂಘಟನೆ. ವಿಶ್ವ ಅಣೆಕಟ್ಟುಗಳ ಆಯೋಗದ ಆಯುಕ್ತೆಯಾಗಿಯೂ ಈಕೆ ಕೆಲಸ ಮಾಡಿದ್ದಾರೆ. ಇದು ವಿಶ್ವದೆಲ್ಲೆಡೆಯ ನೀರು, ವಿದ್ಯುತ್, ಪರ್ಯಾಯ ಶಕ್ತಿಮೂಲಗಳು ಹಾಗೂ ಅಣೆಕಟ್ಟುಗಳ ಸಮಸ್ಯೆಯನ್ನು ಪರಿಶೀಲಿಸಲು ಸ್ಥಾಪಿಸಲಾದ ಮೊತ್ತ ಮೊದಲ ಜಾಗತಿಕ ಆಯೋಗ.
ಪ್ರತಿಭಟನೆಯೊಂದೇ ಈಕೆಯ ಕೆಲಸ ಎಂದು ತಿಳಿಯಬೇಡಿ. ಇವರ ಕೆಲಸ ಬಹುಮುಖಿಯಾದದ್ದು. ಇವುಗಳನ್ನು ‘ಸಂಘರ್ಷ’ ಹಾಗೂ ‘ನಿರ್ಮಾಣ’ ಎಂದು ಹೆಸರಿಸಬಹುದು. ಅಣೆಕಟ್ಟುಗಳ ಅಮಾನವೀಯತೆಯನ್ನು ಪ್ರತಿಭಟಿಸುವ ಸಂಘರ್ಷ ಇದ್ದಂತೆಯೇ, ಸ್ಥಳೀಯರನ್ನು ಶಿಕ್ಷಿತರನ್ನಾಗಿಸುವ ‘ನಿರ್ಮಾಣ’ವೂ ಇವರಲ್ಲಿದೆ. ಸ್ಥಳೀಯ ಸಮುದಾಯಗಳು ತಮ್ಮಲ್ಲೇ ಪರ್ಯಾಯ ಶಕ್ತಿಮೂಲಗಳನ್ನು ಸೃಷ್ಟಿಸಿಕೊಳ್ಳುವ, ಜಲ ಕೊಯ್ಲು ಮಾಡಿಕೊಳ್ಳುವ ವಿಧಾನವನ್ನು ಮೇಧಾ ಹೇಳಿಕೊಡುತ್ತಿದ್ದಾರೆ. ಬುಡಕಟ್ಟು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ‘ರೇವಾ ಜೀವನಶಾಲಾ’ ನಡೆಸುತ್ತಿದ್ದಾರೆ. ಈ ಪ್ರಾಯೋಗಿಕ ಶಾಲೆಗಳಲ್ಲಿ ರಾಜ್ಯ ಸರಕಾರ ಹಾಗೂ ಸ್ಥಳೀಯ ಪಠ್ಯಕ್ರಮಗಳೆರಡೂ ಇವೇ. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಇಂಥ 9 ವಸತಿ ಶಾಲೆಗಳು ಹಾಗೂ 4 ಹಗಲು ಶಾಲೆಗಳೂ ನಡೆಯುತ್ತಿವೆ. ಇಲ್ಲಿ ಶಿಕ್ಷಿತರಾದ ಮಕ್ಕಳು ಈ ಸಮುದಾಯಗಳ ಹೊಸ ಭರವಸೆಯಾಗಿ ರೂಪುಗೊಳ್ಳುತ್ತಿದ್ದಾರೆ.
(ಇದು ‘ವಿಖ್ಯಾತರ ವ್ಯಕ್ತಿಚಿತ್ರ ಮಾಲೆ’ಯಲ್ಲಿ ಮೇಧಾ ಪಾಟ್ಕರ್ ಅವರ ಕುರಿತು ಹರೀಶ್ ಕೇರ ಅವರ ಕನ್ನಡದ ಪುಸ್ತಕದ ಮೊದಲ ಅಧ್ಯಾಯ).
Medha Patkar
ಕಾಮೆಂಟ್‌ಗಳು